Last Updated:
ಬೆಂಗಳೂರಿನ ಭಾರತ್ ನಗರದಲ್ಲಿ ಚಿರತೆ ಕಾಣಿಸಿಕೊಂಡು 2 ವಾರ ಕಳೆದರೂ ಸೆರೆ ಸಿಕ್ಕಿಲ್ಲ. ಸ್ಥಳೀಯರು ‘ಎಚ್ಚರಿಕೆ: ಇಲ್ಲಿ ಚಿರತೆ ಇದೆ’ ಪೋಸ್ಟರ್ ಹಾಕಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಸಾಮಾನ್ಯವಾಗಿ ನಾವು ಮನೆ ಮುಂದೆ ನಾಯಿ ಇದೆ ಎಚ್ಚರಿಕೆ (Beware Of Dog Sign) ಎಂಬ ಬೋರ್ಡ್ ಹಾಕೋದನ್ನು ನೋಡಿರುತ್ತೇವೆ. ಆದರೆ ರಾಜಧಾನಿ ಬೆಂಗಳೂರಿನ (Bengaluru) ಭಾರತ್ ನಗರದಲ್ಲಿ (Bharat Nagara) ಚಿರತೆ ಕಾಣಿಸಿಕೊಂಡು ಎರಡು ವಾರ ಕಳೆದರೂ, ಅರಣ್ಯ ಇಲಾಖೆಯಿಂದ (Forest Department) ತಪ್ಪಿಸಿಕೊಂಡು ಓಡಾಡುತ್ತಿದೆ. ಚಿರತೆ (Leopard) ಓಡಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯಶವಂತಪುರದ ಭಾರತ್ ನಗರ ಭಾಗದಲ್ಲಿ ಚಿರತೆ ಪದೇ ಪದೇ ಪ್ರತ್ಯಕ್ಷವಾಗುತ್ತಿದ್ದು, ಇದರಿಂದ ಆತಂಕಕ್ಕೆ ಒಳಗಾಗಿರುವ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ವಿಭಿನ್ನವಾಗಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಹೌದು, ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೂ ಅದನ್ನು ಸೆರೆ ಹಿಡಿಯುವ ಕೆಲಸ ಆಗುತ್ತಿಲ್ಲ. ಚಿರತೆ ಬಂದ ಬಳಿಕ ಬಂದು ನೋಡ್ಕೊಂಡು ಹೋಗ್ತಾರೆ ಅದು ಬಿಟ್ಟರೆ ಬೇರೆ ಏನು ಮಾಡೋದಿಲ್ಲ. ಚಿರತೆ ಬಂದಿದೆ ಅಂತ ಹೇಳಿದರೆ, ಸೈರನ್ ಹಾಕಿಕೊಂಡು ಸ್ಥಳಕ್ಕೆ ಬರ್ತಾರೆ. ಅಧಿಕಾರಿಗಳು ಗಂಭೀರವಾಗಿ ಈ ಘಟನೆಯನ್ನು ತೆಗೆದುಕೊಂಡು ಚಿರತೆ ಸೆರೆ ಹಿಡಿಯುವ ಕೆಲಸ ಮಾಡುತ್ತಿಲ್ಲ ಎಂದು ಭರತ್ ನಗರ ಪ್ರಮುಖ ರಸ್ತೆಗಳಲ್ಲಿ ಹಾಗೂ ಮನೆಗಳ ಎದುರು, ಎಚ್ಚರಿಕೆ ಇಲ್ಲಿ ಚಿರತೆ ಇದೆ ಎಂಬ ಪೋಸ್ಟರ್ ಅಂಟಿಸಿ ವಿಡಂಬನಾತ್ಮಕವಾಗಿ ಬೇಸರ ಹೊರ ಹಾಕಿದ್ದಾರೆ.
ಮೊದಲ ಬಾರಿ ಜುಲೈ 10ರಂದು ಬ್ಯಾಡರಹಳ್ಳಿ ಪ್ರದೇಶದ ಭಾರತ್ ನಗರದಲ್ಲಿ ಚಿರತೆ ಓಡಾಡ ಕಂಡು ಬಂದಿತ್ತು. ಆದರೆ ಆ ಬಳಿಕ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಚಿರತೆ ಓಡಾಡುತ್ತಿರುವುದು ಹಲವರಿಗೆ ಆತಂಕ ಮೂಡಿಸಿತ್ತು. ಈ ಬಗ್ಗೆ ಮಾತನಾಡಿದ್ದ ಬೆಂಗಳೂರು ಉತ್ತರ ವಲಯ ಅರಣ್ಯ ಅಧಿಕಾರಿ ಶಿವಪ್ಪ ಹೊಸಮನಿ, ಇಲಾಖೆಯು ಚಿರತೆ ಕಂಡು ಬಂದ ಸ್ಥಳಗಳಲ್ಲಿ ಎರಡು ಬೋನ್ ಗಳನ್ನು ಅಳವಡಿಸಿದೆ ಎಂದು ಹೇಳಿದ್ದರು.
ಚಿರತೆ ಇದೆ ಎಚ್ಚರಿಕೆ!
ಅಲ್ಲದೇ, ಅರಣ್ಯ ಅಧಿಕಾರಿಗಳು ಈ ಪ್ರದೇಶದಲ್ಲಿದ್ದ ಖಾಲಿ ನಿವೇಶನಗಳಲ್ಲಿ ಇದ್ದ ಪೊದೆಗಳು, ಗಿಡಗಂಟೆಗಳನ್ನು ತೆರವು ಮಾಡುವ ಕೆಲಸ ಮಾಡಿದ್ದರು. ಆದರೆ ಸ್ಥಳೀಯರ ಆತಂಕ ಮಾತ್ರ ದೂರ ಆಗಿರಲಿಲ್ಲ. ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಆಗುತ್ತಿಲ್ಲ. ಆದಷ್ಟು ಬೇಗ ಚಿರತೆ ಸೆರೆ ಹಿಡಿಯಬೇಕು. ಸಿಸಿಟಿವಿ ಕಣ್ಗಾವಲು ಹೆಚ್ಚು ಮಾಡಬೇಕು ಎಂದು ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದಾರೆ.
ಚಿರತೆ ಸೆರೆಹಿಡಿಯುವುದು ವಿಳಂಬ ಆದರೆ ಗಂಭೀರ ಅಪಾಯ ಎದುರಿಸಬೇಕು. ಏಕೆಂದರೆ ಮಕ್ಕಳು ಸೇರಿದಂತೆ ಇಲ್ಲಿ ಓಡಾಡುವ ಜನರ ಮೇಲೆ ಚಿರತೆ ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ದುರಂತ ಸಂಭವಿಸುವ ಮುನ್ನವೇ ಎಚ್ಚರಿಕೆ ವಹಿಸಿ, ಚಿರತೆಯನ್ನು ಸೆರೆ ಹಿಡಿದು ಸುರಕ್ಷಿತವಾಗಿ ಕಾಡಿಗೆ ಸ್ಥಳಾಂತರ ಮಾಡುವ ಕೆಲಸ ಆಗಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿ ಹೇಳಿದ್ದಾರೆ. (ವರದಿ: ಪ್ರಗತಿ ಶೆಟ್ಟಿ, ನ್ಯೂಸ್18, ಬೆಂಗಳೂರು)
Bangalore [Bangalore],Bangalore,Karnataka














