ಬಿಡದಿ ಟೌನ್ ಶಿಪ್ ಯೋಜನೆ ವಿಚಾರವಾಗಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎರಡು ಪ್ರತ್ಯೇಕ ಎಫ್ ಐ ಆರ್ ಗಳು ದಾಖಲಾಗಿದ್ದು, ಕಾರು ಚಾಲಕ ಮೊಹಮದ್ ಸಮೀರ್ ಹಾಗೂ ರಾಮನಗರ ಗ್ರಾಮಾಂತರ ಠಾಣೆಯ ಇನ್ಸ್ ಪೆಕ್ಟರ್ ನೀಡಿದ ದೂರಿನ ಅನ್ವಯ ಎರಡು ಎಫ್ಐಆರ್ಗಳು ದಾಖಲಾಗಿದೆ. ಕಾರು ಚಾಲಕ ನೀಡಿದ ದೂರಿನ ಮೇರೆಗೆ ರೈತರಾದ ಪ್ರಕಾಶ್, ನಾಗರಾಜ್, ಕೃಷ್ಣ, ಯಶವಂತ್, ರೇವಣ್ಣ, ಜಯಮ್ಮ, ಭಾಗ್ಯ, ಮೋಹನ್, ವರಲಕ್ಷ್ಮಿ, ಹರೀಶ್ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. BNS 189(2), 126(2), 352, 351(2), 109(1), 115(2), 118(1), 132, 133, 74, 190 ಅಡಿ ಪ್ರಕರಣ ದಾಖಲಿಸಲಾಗಿದೆ. ಮತ್ತೊಂದೆಡೆ ಇನ್ಸ್ ಪೆಕ್ಟರ್ ಮುರುಳಿ ನೀಡಿದ ದೂರಿನ ಅನ್ವಯ ಪ್ರಕರಣ, ಅಪರಿಚಿತ ರೈತರ ವಿರುದ್ಧ BNS 189(2), 126(2), 352, 351(2), 109(1), 115(2), 118(1) 132, 133, 74, 190 ಅಡಿ ಪ್ರಕರಣ ದಾಖಲಿಸಲಾಗಿದೆ.
ಇತ್ತ ಟೌನ್ಶಿಪ್ ಯೋಜನೆ ವಿರೋಧಿಸಿ ಬೈರಮಂಗಲ ಸರ್ಕಲ್ನಲ್ಲಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ. JMC ಸರ್ವೇ ವಿರೋಧಿಸಿ ಪ್ರತಿಭಟನೆ ಮಾಡಲಾಗ್ತಿದೆ. ಟೌನ್ ಶಿಪ್ ಸಂಬಂಧ ಅವ್ರವ್ರೇ ನಿರ್ಧಾರ ಮಾಡ್ತಿದ್ದಾರೆಂದು ಆಕ್ರೋಶ ವ್ಯಕ್ತವಾಗಿದೆ. ಮತ್ತೊಂದು ಕಡೆ ಟೌನ್ಶಿಪ್ಗೆ ಬೆಂಬಲ ವ್ಯಕ್ತಪಡಿಸಿ ರೈತರು ಸಭೆ ಮಾಡಿದ್ದಾರೆ. ಅಲ್ಲದೇ ಬೈರಮಂಗಲ ಸರ್ಕಲ್ ಬಳಿಯೇ ರೈತರು ಪ್ರೊಟೆಸ್ಟ್ ಮಾಡಿದ್ದಾರೆ.
ಇಂದು ಸರ್ವೆಯನ್ನು ಅಧಿಕಾರಿಗಳು ಪೊಲೀಸರ ರಕ್ಷಣೆಯೊಂದಿಗೆ ಮುಂದುವರಿಸುತ್ತಾರೆ ಎನ್ನಲಾಗಿತ್ತು. ಆದರೆ ಟೌನ್ ಶಿಪ್ ವಿರೋಧಿಸಿ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆ ಜೆಎಂಸಿ ಸರ್ವೇ ತಾತ್ಕಾಲಿಕ ಸ್ಥಗಿತ ಮಾಡುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ರೈತರ ಜೊತೆ ಮಾತುಕತೆ ನಡೆಸಿ, ಭೂ ಸ್ವಾಧೀನದ ಸರ್ವೇ ಆರಂಭಿಸಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಬಿಡದಿ ಟೌನ್ ಶಿಪ್ ವಿರೋಧಿಸಿದ ರೈತರ ಮೇಲೆ ಕೇಸ್ ದಾಖಲಿಸಿರೋದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿ, ರೈತರ ಮೇಲೆ ಕೇಸ್ ದಾಖಲಿಸಿ, ಬೆದರಿಸಿ, ಹೆದರಿಸಿ, ಬೀದಿಗೆ ತಂದು ಜಮೀನು ಕಸಿದುಕೊಳ್ಳುವ ಭ್ರಮೆಯಲ್ಲಿ ಸಿಎಂ ಇದ್ದಾರೆ. ಇದು ಅಸಾಧ್ಯ, ಸಿಎಂ ತಮ್ಮ ಈ ಭ್ರಮೆಯಿಂದ ಹೊರಗಡೆ ಬರಬೇಕು. ಬಿಡದಿ ಟೌನ್ ಶಿಪ್ ಬಗ್ಗೆ ಸಿಎಂ ಅವರು, ತಲೆ ಕೆಡಿಸಿಕೊಳ್ಳದೇ ಉತ್ತರ ಕರ್ನಾಟಕ ಅಭಿವೃದ್ಧಿಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕು. ಗುಂಡಾಗಿರಿ ಮಾಡಿ ಟೌನ್ ಶಿಪ್ ಮಾಡ್ತಿನಿ ಅಂದರೆ ಮಾಡೋದಕ್ಕೆ ಸಾಧ್ಯವಿಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ. (ವರದಿ: ಎಟಿ ವೆಂಕಟೇಶ್ ಪ್ರಭು, ನ್ಯೂಸ್18 ಕನ್ನಡ, ಬೆಂಗಳೂರು ದಕ್ಷಿಣ)













