Last Updated:
ಬೆಂಗಳೂರು ಉಪನಗರ ರೈಲು ಮತ್ತು ನಮ್ಮ ಮೆಟ್ರೋ ಡಬಲ್ ಡೆಕ್ಕರ್ ಸೇತುವೆ, 160 ಕೋಟಿ ಉಳಿತಾಯ, 600ಕ್ಕೂ ಹೆಚ್ಚು ನಿವಾಸಿಗಳಿಗೆ ನೆಮ್ಮದಿ, ದೇಶಕ್ಕೆ ಮಾದರಿ ಯೋಜನೆ.
ಬೆಂಗಳೂರು ಎಂದಾಕ್ಷಣ ಹಲವರಿಗೆ ನೆನಪಿಗೆ ಬರುವುದು ಇಲ್ಲಿನ ಟ್ರಾಫಿಕ್ ಸಮಸ್ಯೆ (Bengaluru Traffic). ಇಂದಿಗೂ ಪ್ರತಿದಿನ ಸಾಮಾಜಿಕ ಜಾಲತಾಣ ತೆರೆದರೆ ಸಾಕು ಬೆಂಗಳೂರು ಟ್ರಾಫಿಕ್ ಬಗ್ಗೆ ಗೇಲಿ ಮಾಡುವಂತಹ ಒಂದು ಪೋಸ್ಟ್ ನಮಗೆ ಕಾಣುತ್ತದೆ. ಇಂತಹ ಕುಖ್ಯಾತಿಯನ್ನು ತಪ್ಪಿಸಲು ಸರ್ಕಾರಗಳು ನಿರಂತರವಾಗಿ ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿಯೇ ಮೆಟ್ರೋ ನಿರ್ಮಾಣವನ್ನು (Namma Metro) ವೇಗಗೊಳಿಸಲು ಹಾಗೂ ಸಬ್ ಅರ್ಬನ್ ರೈಲು ಯೋಜನೆಯನ್ನು (Bengaluru Suburban Railway Project) ವೇಗವಾಗಿ ಮುಕ್ತಾಯ ಮಾಡಲು ಶ್ರಮ ವಹಿಸಲಾಗುತ್ತಿದೆ. ಆದರೆ ಭೂ ಶೇಖರಣೆ ಸೇರಿದಂತೆ ಹಣಕಾಸಿನ ತೊಂದರೆಯಿಂದ ಈ ಎರಡು ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಇದರ ನಡುವೆಯೇ ಭೂಮಿ ಕೊರತೆಯ (Land) ಸಮಸ್ಯೆಗೆ ಚೆಕ್ ಇಡುವಂತೆ ಬೆಂಗಳೂರು ಉಪನಗರ ರೈಲು (ಕೆ-ರೈಡ್) ಮತ್ತು ನಮ್ಮ ಮೆಟ್ರೋ ಸಂಸ್ಥೆಗಳ ಮಹತ್ವದ ನಿರ್ಧಾರ ಕೈಗೊಂಡಿದ್ದು, ಇದು 160 ಕೋಟಿ ರೂಪಾಯಿ ಸೇವ್ ಮಾಡುವುದು ಮಾತ್ರವಲ್ಲದೆ ಸುಮಾರು 600ಕ್ಕೂ ಹೆಚ್ಚು ಜನರಿಗೆ ಬಿಗ್ ರಿಲೀಫ್ ನೀಡಿದೆ.
ಬೆಂಗಳೂರಿನ ಈ ಪ್ರದೇಶದಲ್ಲಿ ಭೂಮಿಯ ಬೆಲೆ ದುಬಾರಿ ಆಗಿರುವುದರಿಂದ ಎರಡು ಪ್ರತ್ಯೇಕ ಟ್ರ್ಯಾಕ್ ಗಳನ್ನು ನಿರ್ಮಾಣ ಮಾಡಿದರೆ ಹೆಚ್ಚು ವೆಚ್ಚ ಆಗುತ್ತಿತ್ತು. ಆದರೆ ಈಗ ಒಂದೇ ಪಿಲ್ಲರ್ನಲ್ಲಿ ಡಬಲ್ ಡೆಕ್ಕರ್ ಸೇತುವೆ ನಿರ್ಮಾಣ ಮಾಡುವ ಮೂಲಕ ಸುಮಾರು 160 ಕೋಟಿ ರೂಪಾಯಿ ಉಳಿತಾಯ ಆಗುವಂತೆ ಮಾಡಿದೆ. ಅಲ್ಲದೆ ಯೋಜನೆಗೆ ಅಗತ್ಯವಿರುವ ಭೂಮಿಯ ಪ್ರಮಾಣವೂ ಇಳಿಕೆ ಆಗಿದ್ದು, ಸುಮಾರು 600ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದ ನಿವಾಸಿಗಳು ತಮ್ಮ ಮನೆಗಳನ್ನು ತೆರವು ಮಾಡಬೇಕಿತ್ತು. ಆದರೆ ಈಗ ಈ ಸಮಸ್ಯೆ ದೂರವಾಗಿದ್ದು, ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಇಂತಹ ಯೋಜನೆಯನ್ನು ನಿರ್ಮಾಣ ಮಾಡಲಾಗುತ್ತಿದ್ದು, ಭೂಮಿ ಕಡಿಮೆ ಇರುವ ಇತರ ಪ್ರಮುಖ ನಗರಗಳಿಗೆ ಇದು ಮಾದರಿಯಾಗಿ ನಿಲ್ಲಲಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ, ಕನಕ ಲೈನ್ ಹೀಲಳಿಗೆಯಿಂದ ರಾಜಾನುಕುಂಟೆಯನ್ನು ಸಂಪರ್ಕ ಮಾಡುತ್ತಿದೆ. ಸುಮಾರು 46 ಕಿಲೋ ಮೀಟರ್ ಹೊಂದಿರಲಿದೆ. ಇದೇ ರೀತಿ ನಮ್ಮ ಮೆಟ್ರೋದ ಬ್ಲೂ ಲೈನ್ ಕೆಆರ್ ಪುರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕ ಮಾಡಲಿದೆ. ಆದರೆ ಅತ್ಯಾಧುನಿಕ ಕಲ್ಪನೆಯಿಂದ ಯೋಜನೆ ವೆಚ್ಚದಲ್ಲಿ ಸುಮಾರು 150 ಕೋಟಿಯಿಂದ 169 ಕೋಟಿ ರೂಪಾಯಿ ವರೆಗೂ ಹಣ ಉಳಿತಾಯ ಆಗಿದೆ. ವಿಶೇಷ ಎಂದರೇ, ಮೆಟ್ರೋ ರೈಲು ಡೈರೆಕ್ಟ್ ಕರೆಂಟ್ (ಡಿಸಿ) ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ. ಉಪನಗರ ರೈಲು ಆಲ್ಟರ್ನೇಟಿಂಗ್ ಕರೆಂಟ್ (ಎಸಿ) ತಂತ್ರಜ್ಞಾನದಲ್ಲಿ ಚಲಿಸುತ್ತದೆ. ಈ ಎರಡು ಮಾರ್ಗಗಳಿಗೆ ವಿದ್ಯುತ್ ಶಕ್ತಿಯನ್ನು ಸಂಯೋಜಿಸುವುದು ಸವಾಲಿನ ಕೆಲಸ ಆಗಿತ್ತು. ಆದರೆ ಇದರ ತಾಂತ್ರಿಕ ಸುರಕ್ಷತೆಯ ಬಗ್ಗೆ ಭಾರತೀಯ ವಿಜ್ಞಾನ ಸಂಸ್ಥೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ಯೋಜನೆಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ತಿಳಿಸಿದೆ.
ಎರಡು ಸಾರಿಗೆ ಸಂಸ್ಥೆಗಳು ಒಟ್ಟಾಗಿ ಯೋಜನೆ ರೂಪಿಸಿದ ಪರಿಣಾಮ ಜನರ ತೆರಿಗೆ ದುಡ್ಡು ಕೋಟಿ ಕೋಟಿ ರೂಪಾಯಿ ಉಳಿಕೆ ಆಗಿದೆ. ಇದರಂತೆ ಕಾರಿಡಾರ್-4 ಕಾಮಗಾರಿಗೆ ಹೊಸ ಟೆಂಡರ್ ಕರೆದು ಯೋಜನೆ ಆರಂಭಿಸಲು ಸಿದ್ಧತೆ ನಡೆಸಲಿದೆ. ಈ ಜೋಡಣೆಯು ಭವಿಷ್ಯದ ಯೋಜನೆಗಳಿಗೆ ಮಾದರಿಯಾಗಲಿದೆ ಎಂದು ಕೆ-ರೈಡ್ ಹೇಳಿದೆ.
ಉಳಿದಂತೆ ಬೆಂಗಳೂರು ಉಪನಗರ ರೈಲು ಯೋಜನೆಯು ಒಟ್ಟು ಸುಮಾರು 148 ಕಿಲೋ ಮೀಟರ್ ದೂರ ಹೊಂದಿದ್ದು, ನಾಲ್ಕು ಕಾರಿಡಾರ್ ಮೂಲಕ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಯೋಜನೆಯನ್ನು 2030ರ ಮಾರ್ಚ್ ವೇಳೆಗೆ ಮುಕ್ತಾಯಗೊಳಿಸಲು ಡೆಡ್ ಲೈನ್ ಹಾಕಿಕೊಳ್ಳಲಾಗಿದ್ದು, ಇದರಲ್ಲಿ 69-72 ರೈಲ್ವೆ ನಿಲ್ದಾಣಗಳು ಇರಲಿದೆ. ಪ್ರಮುಖವಾಗಿ ಮೊದಲ ಕಾರಿಡಾರ್ ಅಂದರೆ ಸಂಪಿಗೆ ಲೈನ್-ಕೆಂಪೇಗೌಡ ರೈಲು ನಿಲ್ದಾಣದಿಂದ ದೇವನಹಳ್ಳಿಗೆ ಸಂಪರ್ಕ ಕಲ್ಪಿಸಲಿದ್ದು, ಸುಮಾರು 41 ಕಿಮೀ ಉದ್ದವನ್ನು ಹೊಂದಿದೆ. ಎರಡನೇ ಕಾರಿಡಾರ್ ಅಂದರೆ ಮಲ್ಲಿಗೆ ಕಾರಿಡಾರ್ ಬೆನ್ನಿಗಾನಹಳ್ಳಿಯಿಂದ ಚಿಕ್ಕಬಾಣಾವರವನ್ನು ಸಂಪರ್ಕಿಸಲಿದ್ದು, 25ಕಿಮೀ ಉದ್ದವನ್ನು ಹೊಂದಿದೆ. ಮೂರನೇ ಕಾರಿಡಾರ್ ಪಾರಿಜಾತ ಲೈನ್ ಕ್ರಾಸ್ಸಿಟಿ ಕನೆಕ್ಷನ್ ಆಗಿದ್ದು, ನಾಲ್ಕನೇ ಕಾರಿಡಾರ್ ಹೀಲಳಿಗೆಯಿಂದ ರಾಜನುಕುಂಟೆ ಸುಮಾರು 46.24 ಕಿಲೋ ಮೀಟರ್ ದೂರವನ್ನು ಹೊಂದಿದೆ.
Bangalore [Bangalore],Bangalore,Karnataka













