AUS vs BAN: ವಿಶ್ವಚಾಂಪಿಯನ್​ ಆಸ್ಟ್ರೇಲಿಯಾಗೆ ಭಾರೀ ಮುಖಭಂಗ! ಬಾಂಗ್ಲಾದೇಶಕ್ಕೆ ಕಾಂಗರೂಗಳ ವಿರುದ್ಧ ಐತಿಹಾಸಿಕ ಜಯ | ಕ್ರೀಡಾ ಸುದ್ದಿ | ACTPnews

AUS vs BAN: ವಿಶ್ವಚಾಂಪಿಯನ್​ ಆಸ್ಟ್ರೇಲಿಯಾಗೆ ಭಾರೀ ಮುಖಭಂಗ! ಬಾಂಗ್ಲಾದೇಶಕ್ಕೆ ಕಾಂಗರೂಗಳ ವಿರುದ್ಧ ಐತಿಹಾಸಿಕ ಜಯ | ಕ್ರೀಡಾ ಸುದ್ದಿ


ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡ ಮಳೆಯ ಕಾರಣ ಸಂಪೂರ್ಣ ಇನ್ನಿಂಗ್ಸ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. 42 ಓವರ್​​​ಗಳ ಕಾಲ ಬ್ಯಾಟಿಂಗ್ ಮಾಡಿದ 8 ವಿಕೆಟ್ ಕಳೆದುಕೊಂಡು 187 ರನ್​ಗಳಿಸಿತ್ತು. ಡೆಕ್ವರ್ತ್​ ಲೂಯಿಸ್ ನಿಯಮದನ್ವಯ ಬಾಂಗ್ಲಾದೇಶಕ್ಕೆ 41 ಓವರ್​​ಗಳಲ್ಲಿ 191 ರನ್​​ಗಳ ಗುರಿ ನಿಗದಿ ಮಾಡಲಾಗಿತ್ತು.

ಬಾಂಗ್ಲಾದೇಶ ಕಳಪೆ ಆರಂಭ

191 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ತಂಜಿದ್ ಹಸನ್ ತಮೀಮ್ ಖಾತೆ ತೆರೆಯದೆಯೇ ಝೇವಿಯರ್ ಬಾರ್ಟ್ಲೆಟ್‌ಗೆ ವಿಕೆಟ್​ ಒಪ್ಪಿಸಿದರು. ನಂತರ ಸೌಮ್ಯ ಸರ್ಕಾರ್ ಮತ್ತು ನಜ್ಮುಲ್ ಹೊಸೈನ್ ಶಾಂಟೋ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ಇನ್ನಿಂಗ್ಸ್ ಮುಂದಕ್ಕೆ ಕೊಂಡೊಯ್ದರು. ಸೌಮ್ಯ ಸರ್ಕಾರ್ 47 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ 42 ರನ್ ಗಳಿಸಿ ಚುರುಕಾದ ಇನ್ನಿಂಗ್ಸ್ ಆಡಿದರು. ಶಾಂಟೋ ಕೂಡ ಅವರಿಗೆ ಉತ್ತಮ ಬೆಂಬಲ ನೀಡಿದರು. 53 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 41 ರನ್ ಗಳಿಸಿದರು.

ಗೇಮ್ ಫಿನಿಷ್ ಮಾಡಿದ ಹೃದೋಯ್-ಮೆಹದಿ

ಮಧ್ಯಮ ಕ್ರಮಾಂಕದಲ್ಲಿ, ವಿಕೆಟ್ ಕೀಪರ್ ಲಿಟನ್ ದಾಸ್ 18 ಎಸೆತಗಳಲ್ಲಿ 3 ಬೌಂಡರಿಗಳೊಂದಿಗೆ 21 ರನ್ ಗಳಿಸಿ ಔಟ್ ಆದರು. ತೌಹೀದ್ ಹೃದೋಯ್ ಬಹಳ ಬುದ್ಧಿವಂತಿಕೆಯಿಂದ ಬ್ಯಾಟಿಂಗ್ ಮಾಡಿ 55 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್‌ಗಳೊಂದಿಗೆ ಅಜೇಯ 40 ರನ್ ಹಾಗೂ ನಾಯಕ ಮೆಹದಿ ಹಸನ್ ಮಿರಾಜ್ ತೌಹೀದ್ ಅವರೊಂದಿಗೆ 22 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್​ ಸಹಿತ 22 ರನ್ ಗಳಿಸಿ ತಂಡವನ್ನು ಐತಿಹಾಸಿಕ ಗೆಲುವಿನ ಗಡಿ ದಾಟಿಸಿದರು. ಮೊಸದ್ದೇಕ್ ಹೊಸೇನ್ ಕೂಡ 14 ಎಸೆತಗಳಲ್ಲಿ 15 ರನ್ ಗಳಿಸಿದರು.

ಆಸ್ಟ್ರೇಲಿಯಾ ತಂಡದಿಂದ, ಝೇವಿಯರ್ ಬಾರ್ಟ್ಲೆಟ್, ರೈಲಿ ಮೆರೆಡಿತ್, ಆಡಮ್ ಜಂಪಾ, ಮ್ಯಾಟ್ ರೆನ್‌ಶಾ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದು ವಿಕೆಟ್ ಪಡೆದರು, ಆದರೆ ಬಾಂಗ್ಲಾದೇಶ ಲಯನ್ಸ್ ಇತಿಹಾಸ ಸೃಷ್ಟಿಸುವುದನ್ನು ತಡೆಯಲು ಅವರಿಗೆ ಸಾಧ್ಯವಾಗಲಿಲ್ಲ.

ಸೊನ್ನೆಗೆ 3 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ

ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶ ಬೌಲರ್‌ಗಳ ತೀಕ್ಷ್ಣ ದಾಳಿಯ ಮುಂದೆ ತರಗೆಲೆಯಂತೆ ಉದುರಿತು. ಆಸ್ಟ್ರೇಲಿಯಾದ ಆರಂಭವು ದುಃಸ್ವಪ್ನದಂತೆ ಇತ್ತು. ಇನ್ನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ, ಮ್ಯಾಥ್ಯೂ ಶಾರ್ಟ್ ಅವರನ್ನು ತಸ್ಕಿನ್ ಅಹ್ಮದ್ ಖಾತೆ ತೆರೆಯುವ ಮುನ್ನವೇ ಬೌಲ್ಡ್ ಮಾಡಿದರು. 2ನೇ ಓವರ್​​ನಲ್ಲಿ ಕೂಪರ್ ಕೊನೊಲಿ ಕೂಡ ಖಾತೆ ತೆರೆಯದೆಯೇ ಮುಸ್ತಾಫಿಜುರ್ ರೆಹಮಾನ್‌ಗೆ ಬಲಿಯಾದರು. ನಂತರ ಬಂದ ಮ್ಯಾಟ್ ರೆನ್‌ಶಾ ಕೂಡ 2ನೇ ಓವರ್​ನ ಕೊನೆಯ ಎಸೆತದಲ್ಲಿ ಖಾತೆ ತೆರೆಯದೇ ಲಿಟನ್​​​ ದಾಸ್​​ಗೆ ನೀಡಿ ನಿರ್ಗಮಿಸಿದರು. ಆಸೀಸ್​ ಖಾತೆ ತೆರೆಯುವ ಮುನ್ನವೇ ಆರಂಭಿಕ ಮೂವರನ್ನು ಕಳೆದುಕೊಂಡಿತು. ನಂತರ ಬಂದ ಅಲೆಕ್ಸ್ ಕ್ಯಾರಿ ಕೇವಲ 13 ರನ್ ಗಳಿಸಲು ಸಾಧ್ಯವಾಯಿತು.

ಈ ಹಂತದಲ್ಲಿ ನಾಯಕ ಜೋಶ್ ಇಂಗ್ಲಿಸ್ 38 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 34 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಅನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಿದರು, ಆದರೆ ತನ್ವೀರ್ ಇಸ್ಲಾಂ ಅವರಿಗೆ ಪೆವಿಲಿಯನ್‌ಗೆ ದಾರಿ ತೋರಿಸಿದರು. ಕ್ಯಾಮರೂನ್ ಗ್ರೀನ್ 50 ಎಸೆತಗಳಲ್ಲಿ 25 ರನ್ ಗಳಿಸಿ ಔಟ್ ಆದರು. ಒಂದು ಹಂತದಲ್ಲಿ ಆಸ್ಟ್ರೇಲಿಯಾ 81ಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡಿತು.

ಲಾಬುಶೇನ್​​- ಬಾಟ್ಲೆಟ್​​ ಶತಕದ ಜೊತೆಯಾಟ

ಆಸ್ಟ್ರೇಲಿಯಾ ತಂಡ ತೀವ್ರ ಸಂಕಷ್ಟದಲ್ಲಿದ್ದಾಗ, ಮಾರ್ನಸ್ ಲಾಬುಶೇನ್ ಮತ್ತು ಝೇವಿಯರ್ ಬಾರ್ಟ್ಲೆಟ್ ಜವಾಬ್ದಾರಿ ವಹಿಸಿಕೊಂಡರು. ಲಾಬುಶೇನ್ ಒಂದು ಬದಿ ಕ್ರೀಸ್​​ನಲ್ಲಿ ಭದ್ರವಾಗಿ ನೆಲೆನಿಂತು 85 ಎಸೆತಗಳಲ್ಲಿ 3 ಬೌಂಡರಿಗಳ ಸಹಾಯದಿಂದ ಅಜೇಯ 55 ರನ್ ಗಳಿಸಿದರು. ಕೆಳ ಕ್ರಮಾಂಕದಲ್ಲಿ, ಬಾರ್ಟ್ಲೆಟ್ ಆಕ್ರಮಣಕಾರಿ ವಿಧಾನವನ್ನು ಅಳವಡಿಸಿಕೊಂಡು ಕೇವಲ 48 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 52 ರನ್ ಗಳಿಸಿ ಅದ್ಭುತ ಅರ್ಧಶತಕ ಗಳಿಸಿದರು. ಈ ಇಬ್ಬರ ನೆರವಿನಿಂದ, ಆಸ್ಟ್ರೇಲಿಯಾ ನಿಗದಿತ 42 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 187 ರನ್‌ಗಳ ಗೌರವಾನ್ವಿತ ಮೊತ್ತ ದಾಖಲಿಸಿತ್ತು.

ಬಾಂಗ್ಲಾದೇಶ ಪರ, ತಸ್ಕಿನ್ ಅಹ್ಮದ್ 33 ರನ್‌ಗಳಿಗೆ 3 ವಿಕೆಟ್‌ ಪಡೆದರೆ, ಮುಸ್ತಾಫಿಜುರ್ ರೆಹಮಾನ್ 27 ರನ್‌ಗಳಿಗೆ 3 ವಿಕೆಟ್‌ ಮತ್ತು ತನ್ವೀರ್ ಇಸ್ಲಾಂ 2 ವಿಕೆಟ್‌ ಪಡೆದರು.

ಮೊದಲ ಸರಣಿ ಗೆದ್ದ ಬಾಂಗ್ಲಾದೇಶ

ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡಗಳು ಈ ಸರಣಿಗೂ ಮುನ್ನ 4 ಸರಣಿಗಳನ್ನಾಡಿದ್ದವು. ಇದರಲ್ಲಿ ಆಸ್ಟ್ರೇಲಿಯಾ ಎಲ್ಲಾ 4 ಸರಣಿಗಳಲ್ಲೂ ಜಯ ಸಾಧಿಸಿತ್ತು. ಅಚ್ಚರಿ ಎಂದರೆ ಆಸೀಸ್ ಈ ನಾಲ್ಕು ಸರಣಿಯ ಎಲ್ಲಾ ಪಂದ್ಯಗಳಲ್ಲೂ ಜಯ ಸಾಧಿಸಿ ಕ್ಲೀನ್ ಸ್ವೀಪ್ ಸಾಧಿಸಿತ್ತು. ಇದೀಗ ಮೊದಲ ಬಾರಿಗೆ ಆಸೀಸ್ ವಿರುದ್ಧ ಬ್ಯಾಕ್​ ಟು ಬ್ಯಾಕ್ ಪಂದ್ಯ ಗೆದ್ದಿದ್ದಲ್ಲದೆ, ಏಕದಿನ ಸರಣಿಯನ್ನೂ ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆ ವಶಪಡಿಸಿಕೊಂಡಿದೆ.

ಆಸ್ಟ್ರೇಲಿಯಾ ಈ ಸರಣಿ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡವನ್ನು ಹೊರತುಪಡಿಸಿ ಟೆಸ್ಟ್ ಆಡುವ ಎಲ್ಲಾ ರಾಷ್ಟ್ರಗಳ ವಿರುದ್ಧವೂ ಏಕದಿನ ಸರಣಿ ಗೆದ್ದಂತಾಗಿದೆ. ಬಾಂಗ್ಲಾದೇಶಕ್ಕೆ ಆಸ್ಟ್ರೇಲಿಯಾ ವಿರುದ್ಧ ಇದು ಕೇವಲ 3ನೇ ಜಯವಾಗಿದೆ. 2005ರ ನಾಟ್​ ವೆಸ್ಟ್ ಸರಣಿಯಲ್ಲಿ ಮೊದಲ ಜಯ ಕಂಡಿತ್ತು. ಅದಾದ 21 ವರ್ಷಗಳ ಬಳಿಕ ಬಾಂಗ್ಲಾದೇಶ ತನ್ನ 2ನೇ ಜಯ ಸಾಧಿಸಿತ್ತು. ಇದೀಗ 3ನೇ ಜಯದ ಜೊತೆಗೆ ಮೊದಲ ಏಕದಿನ ಸರಣಿಯನ್ನೂ ತನ್ನದಾಗಿಸಿಕೊಂಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports