Last Updated:
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ವಿಚಾರಣೆ ಮುಂದುವರಿದಿರುವ ನಡುವೆಯೇ ನಟ ದರ್ಶನ್ (Darshan) ಮತ್ತು ಪ್ರಕರಣದ ಇತರ ಆರೋಪಿಗಳಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಕಾನೂನು ಬೆಳವಣಿಗೆ ನಡೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ವಿಚಾರಣೆ ಮುಂದುವರಿದಿರುವ ನಡುವೆಯೇ ನಟ ದರ್ಶನ್ (Darshan) ಮತ್ತು ಪ್ರಕರಣದ ಇತರ ಆರೋಪಿಗಳಿಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಕಾನೂನು ಬೆಳವಣಿಗೆ ನಡೆದಿದೆ. ಪ್ರಕರಣದ ಆರೋಪಿ ಪ್ರದೋಷ್ ಎಸ್. ರಾವ್ ಮಾಫಿ ಸಾಕ್ಷಿಯಾಗಿ ವಿಚಾರಣೆಗೆ ಸಹಕರಿಸಲು ಮುಂದಾಗಿರುವುದು ಈಗಾಗಲೇ ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ದಿನಾಂಕ ನಿಗದಿಯಾಗಿರುವುದು ಪ್ರಕರಣದ ಮುಂದಿನ ಹಂತದ ಬಗ್ಗೆ ಗಮನ ಸೆಳೆದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸಂಖ್ಯೆ 14 ಆಗಿರುವ ಪ್ರದೋಷ್ ಎಸ್. ರಾವ್ ಮಾಫಿ ಸಾಕ್ಷಿಯಾಗಿ ಪರಿಗಣಿಸುವ ವಿಚಾರ ಈಗಾಗಲೇ ನ್ಯಾಯಾಲಯದ ಹಂತ ತಲುಪಿದೆ. ಸೆಷನ್ಸ್ ಕೋರ್ಟ್ ಪ್ರದೋಷ್ ನ ಮಾಫಿ ಅರ್ಜಿಯನ್ನು ಅಂಗೀಕರಿಸಿ ಅಭಿಯೋಜನೆಯ ಸಾಕ್ಷಿಯಾಗಿ ಪರಿಗಣಿಸಿದೆ. ಇದೀಗ ಹೇಳಿಕೆ ದಾಖಲಿಸುವ ಪ್ರಕ್ರಿಯೆಗೆ ಸೆಪ್ಟೆಂಬರ್ 28ರಂದು ದಿನಾಂಕ ನಿಗದಿಯಾಗಿರುವುದು ಪ್ರಕರಣದ ಪ್ರಮುಖ ಬೆಳವಣಿಗೆಯಾಗಿದೆ.
ಪ್ರದೋಷ್ ನ ಮಾಫಿ ಸಾಕ್ಷಿಯಾಗಿ ಪರಿಗಣಿಸುವ ವಿಚಾರವನ್ನು ಪ್ರಶ್ನಿಸಿ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 23ರಂದು ವಜಾಗೊಳಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಕಾನೂನುಬಾಹಿರತೆ ಕಂಡುಬಂದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಇದೀಗ ಸೆಪ್ಟೆಂಬರ್ 28ರಂದು ಪ್ರದೋಷ್ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯಲಿದೆ ಎಂಬ ಬೆಳವಣಿಗೆ ಪ್ರಕರಣದಲ್ಲಿ ಕುತೂಹಲ ಮೂಡಿಸಿದೆ. ಪ್ರದೋಷ್ ನ್ಯಾಯಾಲಯದ ಮುಂದೆ ಯಾವ ರೀತಿಯ ಹೇಳಿಕೆ ನೀಡುತ್ತಾರೆ, ಅದನ್ನು ವಿಚಾರಣೆಯಲ್ಲಿ ಹೇಗೆ ಪರಿಗಣಿಸಲಾಗುತ್ತದೆ ಮತ್ತು ನಂತರ ದರ್ಶನ್ ಪರ ವಕೀಲರು ಯಾವ ರೀತಿಯ ಪ್ರತಿಪ್ರಶ್ನೆ ನಡೆಸುತ್ತಾರೆ ಎಂಬುದು ಮುಂದಿನ ಹಂತದಲ್ಲಿ ತಿಳಿಯಬೇಕಿದೆ.
ವರದಿ- ಮಂಜುನಾಥ್ , ಪ್ರತಿನಿಧಿ, ನ್ಯೂಸ್ 18 ಕನ್ನಡ ಬೆಂಗಳೂರು














