Last Updated:
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ನಟಿ ರಂಭಾ ನಿಧಾನವಾಗಿ ನಡೆಯುತ್ತಿರುವುದು ಹಾಗೂ ಹೆಜ್ಜೆ ಇಡುವುದಕ್ಕೂ ಕಷ್ಟಪಡುತ್ತಿರುವಂತೆ ಕಾಣಿಸುತ್ತಿದೆ.
ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ರಂಭಾ (Rambha) ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಏನಪ್ಪಾ ವಿಚಾರ ಅಂದ್ರೆ, ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೋದಿಂದ ಅವರು ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ವಿಡಿಯೋದಲ್ಲಿ ನಟಿ ರಂಭಾ ನಡೆದಾಡಲು ಪರದಾಡುತ್ತಿರುವಂತೆ ಕಾಣಿಸಿಕೊಂಡಿದ್ದು, ಅದನ್ನು ನೋಡಿದ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನಟಿ ರಂಭಾಗೆ ಏನಾಯಿತು? ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ನಟಿ ರಂಭಾ ನಿಧಾನವಾಗಿ ನಡೆಯುತ್ತಿರುವುದು ಹಾಗೂ ಹೆಜ್ಜೆ ಇಡುವುದಕ್ಕೂ ಕಷ್ಟಪಡುತ್ತಿರುವಂತೆ ಕಾಣಿಸುತ್ತಿದೆ. ಈ ದೃಶ್ಯವನ್ನು ಕಂಡ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದು, ಹಲವು ಮಂದಿ ಅವರ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ವಿಡಿಯೋ ವೈರಲ್ ಆದ ನಂತರ ಅದರ ಹಿಂದಿನ ಕಾರಣವೇನು ಎಂಬ ಬಗ್ಗೆ ವಿವಿಧ ರೀತಿಯ ಊಹಾಪೋಹಗಳು ಹರಿದಾಡುತ್ತಿವೆ.
ಮಾಹಿತಿಯ ಪ್ರಕಾರ, ಕೆಲವು ವರ್ಷಗಳ ಹಿಂದೆ ಸಂಭವಿಸಿದ್ದ ಕಾರು ಅಪಘಾತದ ಪರಿಣಾಮವಾಗಿ ನಟಿ ರಂಭಾ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಇದೇ ಕಾರಣದಿಂದ ಅವರು ನಡೆದಾಡಲು ತೊಂದರೆ ಅನುಭವಿಸುತ್ತಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಈ ಕುರಿತು ನಟಿ ರಂಭಾ ಅಥವಾ ಅವರ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲ.
1990ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ರಂಭಾ ಅತ್ಯಂತ ಬೇಡಿಕೆಯ ನಟಿಯಾಗಿದ್ದರು. ತಮ್ಮ ಅದ್ಭುತ ಸೌಂದರ್ಯ, ನಟನೆ ಹಾಗೂ ಮನಮೋಹಕ ನೃತ್ಯದ ಮೂಲಕ ಅವರು ಕೋಟ್ಯಂತರ ಸಿನಿಪ್ರಿಯರ ಮನ ಗೆದ್ದಿದ್ದರು. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿ ವೃತ್ತಿಜೀವನ ಕಟ್ಟಿಕೊಂಡಿದ್ದರು. ಆ ಕಾಲದ ಬಹುತೇಕ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ಅವರು ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಒಬ್ಬರಾಗಿದ್ದರು.
ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದ ಸಂದರ್ಭದಲ್ಲಿ 2010ರಲ್ಲಿ ಉದ್ಯಮಿ ಇಂದ್ರಕುಮಾರ್ ಅವರನ್ನು ರಂಭಾ ವಿವಾಹವಾದರು. ವಿವಾಹದ ಬಳಿಕ ಅವರು ಕುಟುಂಬ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಿದರು. ಪ್ರಸ್ತುತ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿರುವ ರಂಭಾ ಅಪರೂಪಕ್ಕೆ ಮಾತ್ರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಾರೆ.
ರಂಭಾ ಕನ್ನಡ ಚಿತ್ರರಂಗದಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸರ್ವರ್ ಸೋಮಣ್ಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು ನಂತರ ಹಲವು ಯಶಸ್ವಿ ಸಿನಿಮಾಗಳಲ್ಲಿ ಅಭಿನಯಿಸಿದರು. ಓ ಪ್ರೇಮವೇ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದ ಅವರು ಭಾವ ಭಾಮೈದ, ಸಾಹುಕಾರ, ಪಾಂಡುರಂಗ ವಿಠ್ಠಲ ಹಾಗೂ ಗಂಡುಗಲಿ ಕುಮಾರರಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಸಿನಿಪ್ರಿಯರ ಮೆಚ್ಚುಗೆ ಗಳಿಸಿದರು.
ರಂಭಾ ತಮ್ಮ ಸಿನಿ ಬದುಕಿನಲ್ಲಿ ಎಂಟುಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1993ರಿಂದಲೇ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ ಅವರು ನಂತರ ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲೂ ಯಶಸ್ಸು ಗಳಿಸಿದರು. ಜೊತೆಗೆ ಕೆಲ ಬೆಂಗಾಲಿ ಹಾಗೂ ಭೋಜ್ಪುರಿ ಸಿನಿಮಾಗಳಲ್ಲಿಯೂ ಅಭಿನಯಿಸಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
Bangalore [Bangalore],Bangalore,Karnataka













