Last Updated:
ಕರ್ನಾಟಕದ 116 ವರ್ಷದ ಲಕ್ಷ್ಮವ್ವ ತಿರುಮಲ ಅಲಿಪಿರಿ ಮಾರ್ಗದ 3,550 ಮೆಟ್ಟಿಲುಗಳನ್ನು ಏರಿ, ಗೋವಿಂದ ನಾಮಸ್ಮರಣೆ ಮಾಡುತ್ತಾ ಕ್ಷೇತ್ರ ತಲುಪಿದ್ದಾರೆ. ಅವರ ಸಂಕಲ್ಪ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಕರ್ನಾಟಕ ಮೂಲದ ಲಕ್ಷ್ಮವ್ವ (Karnataka) ಎಂಬ ಶತಾಯುಷಿ ವೃದ್ಧೆ, ಕುಟುಂಬ (Family) ಸದಸ್ಯರೊಂದಿಗೆ ತಿರುಮಲ ಕ್ಷೇತ್ರವನ್ನು ಮೆಟ್ಟಿಲೇರಿದ್ದಾರೆ. ತಿರುಮಲ ಅಲಿಪಿರಿ ಮಾರ್ಗದ (Tirumala Alipiri Steps) ಮೂಲಕ ಸುಮಾರು 3,550 ಮೆಟ್ಟಿಲೇರಿ, ಗೋವಿಂದ ನಾಮಸ್ಮರಣೆ ಮಾಡಿ ಯಾರ ನೆರವು ಇಲ್ಲದೆ ಕ್ಷೇತ್ರ ತಲುಪಿದ್ದಾರೆ.
ವಯಸ್ಸು ಹೆಚ್ಚಾಗುತ್ತಿದ್ದಂತೆ ನಡೆಯಲು ಕಷ್ಟ ಆಗುವ ದಿನಗಳು ಎದುರಾಗುತ್ತದೆ. 60-70 ವರ್ಷ ದಾಟಿದರೆ ಸಾಕು ಹಲವರಿಗೆ ಮೊಣಕಾಲು ನೋವು, ಆಯಾಸ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಶತಾಯುಷಿ ವೃದ್ಧೆಯೊಬ್ಬರ ಸಂಕಲ್ಪ ಈಗ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದೆ.
ಕರ್ನಾಟಕ ಮೂಲದ ಲಕ್ಷ್ಮವ್ವ ಸ್ಥಳೀಯವಾಗಿ ಇವರನ್ನು ಭೀಮವ್ವ ಅಂತ ಕರೆಯುವ ಈಕೆಗೆ ಕುಟುಂಬಸ್ಥರು ತಿಳಿಸಿರುವಂತೆ 116 ವರ್ಷ ವಯಸ್ಸಾಗಿದೆ. ಆದರೆ ಅಧಿಕೃತವಾಗಿ ಇವರ ವಯಸ್ಸು ಎಷ್ಟು ಎಂದು ತಿಳಿದು ಬರಬೇಕಿದೆ. ಆದರೆ ವಿಡಿಯೋದಲ್ಲಿ ವೃದ್ಧೆಯನ್ನು ಗಮನಿಸಿದರೆ ಅವರು ಶತಾಯುಷಿ ಎಂದು ಅಂದಾಜು ಮಾಡಬಹುದಾಗಿದೆ. ಇಳಿ ವಯಸ್ಸಿನಲ್ಲಿ ಯಾರ ನೆರವು ಇಲ್ಲದೆಯೇ ತಿರುಮಲ ಅಲಿಪಿರಿ ಮಾರ್ಗದ ಮೂಲಕ ಬೆಟ್ಟದ ಮೇಲೆ ತೆರಳಲು ನಿರ್ಧಾರ ಮಾಡಿದ್ದರು. ಇದರಂತೆ ಸುಮಾರು 3,550 ಮೆಟ್ಟಿಲೇರುತ್ತಿರುವ ಸಮಯದಲ್ಲಿ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ಕನ್ನಡದಲ್ಲಿಯೇ ಕುಟುಂಬಸ್ಥರು ಮಾತನಾಡಿ, ಮಾಹಿತಿ ನೀಡಿರೋದು ತಿಳಿಯುತ್ತದೆ. ಅವರಿಗೆ ಕಣ್ಣಿನ ದೃಷ್ಟಿಯಲ್ಲಿ ದೋಷ ಇದ್ದು, ಆದರೂ ಮೆಟ್ಟಲಿನ ಮಾರ್ಗದಲ್ಲಿನ ಗೋಡೆಯನ್ನೇ ಮಾರ್ಗದರ್ಶಿಯಾಗಿ ಹಿಡಿದು ಮೆಟ್ಟಿಲೇರಿದ್ದಾರೆ. ಕುಟುಂಬಸ್ಥರು ವೃದ್ಧೆಯ ಸಂಕಲ್ಪಕ್ಕೆ ಬೆಂಬಲ ನೀಡಿ ತಿರುಮಲಕ್ಕೆ ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ.
116 ఏళ్ల వయసు… అయినా తిరుమల మెట్లు కాలినడకనే! 🙏🔥
ఎవరైనా “ఈ వయసులో ఎలా సాధ్యం?” అని ఆశ్చర్యపోవచ్చు. కానీ భక్తి ముందు వయసు కూడా తలవంచుతుందని కర్ణాటకకు చెందిన 116 ఏళ్ల వృద్ధురాలు నిరూపించింది.కుటుంబ సభ్యుల అండతో ఒక్కో మెట్టు ఎక్కుతూ శ్రీవారి దర్శనం కోసం ఆమె చేసిన ప్రయాణం… pic.twitter.com/rayko5d27y
— Arjun ( యథ్భావం తద్భవతి ) (@arjunjyothi) July 4, 2026
ಗೋವಿಂದ ಗೋವಿಂದ ಎಂಬ ನಾಮ ಸ್ಮರಣೆಯೊಂದಿಗೆ ತಿರುಮಲ ಕ್ಷೇತ್ರಕ್ಕೆ ತೆರಳುತ್ತಿರುವುದು ನಾವು ಸ್ಪಷ್ಟವಾಗಿ ವಿಡಿಯೋದಲ್ಲಿ ಕಾಣಬಹುದಾಗಿದೆ. ವೃದ್ಧೆಯ ಆತ್ಮವಿಶ್ವಾಸ, ಭಕ್ತಿಯನ್ನು ನೋಡಿದ ಇತರ ಯಾತ್ರಿಕರು ಅಚ್ಚರಿಗೆ ಒಳಗಾಗಿದ್ದಾರೆ. ವಯಸ್ಸಿಗೆ ಮತ್ತು ಶರೀರಕ್ಕೆ ಮಿತಿಗಳು ಇದ್ದರೂ, ಮನಸ್ಸು ಬಲವಾಗಿದ್ದರೆ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ ಎಂದು ಲಕ್ಷ್ಮವ್ವ ತೋರಿಸಿಕೊಟ್ಟಿದ್ದಾರೆ. ವೃದ್ಧಾಪ್ಯದಲ್ಲೂ ಅವರ ದೈಹಿಕ, ಮಾನಸಿಕ ಶಕ್ತಿ ಶ್ರೀ ವೆಂಕಟೇಶ್ವರ ಸ್ವಾಮಿ ಅನುಗ್ರಹವೇ ಕಾರಣ ಎಂದು ವೃದ್ಧೆ ಭಾವಿಸುತ್ತಿದ್ದಾರೆ. ಆದರೆ ಕೆಲವರು ಆಕೆಯ ಸಂಕಲ್ಪ, ಜೀವನ ಶೈಲಿ, ಮಾನಸಿಕ ದೃಢತೆಯೇ ಈ ಪ್ರಯಾಣ ಯಶಸ್ವಿಯಾಗಲು ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಏನೇ ಆದರೂ, 116 ವಯಸ್ಸಿನಲ್ಲಿ ಅಲಿಪಿರಿ ಮೆಟ್ಟಿಲು ಮಾರ್ಗದ ಮೂಲಕ ತಿರುಮಲ ತಲುಪಿದ ಲಕ್ಷ್ಮವ್ವ ಪ್ರಯಾಣ ಈಗ ಹಲವರಿಗೆ ಸ್ಫೂರ್ತಿದಾಯಕವಾಗಿದೆ. ವಯಸ್ಸು ಅನ್ನೋದು ಕೇವಲ ಸಂಖ್ಯೆ ಮಾತ್ರ, ದೃಢವಾದ ಸಂಕಲ್ಪವಿದ್ದರೆ ಎಷ್ಟೋ ಅದ್ಭುತಗಳನ್ನು ಸೃಷ್ಟಿಸಲು ಸಾಧ್ಯ ಎಂದು ಇವರು ತೋರಿಸಿಕೊಟ್ಟಿದ್ದಾರೆ. ಈ ಕುರಿತಂತೆ ಈಟಿವಿ ಭಾರತ್ ವಿಡಿಯೋ ಹಂಚಿಕೊಂಡು ವರದಿ ಮಾಡಿದೆ.













