ಸ್ಫಟಿಕದಂತೆ ಶುದ್ಧ ಈ ನದಿಯ ನೀರು; ದೇಶದ ಅತ್ಯಂತ ಸ್ವಚ್ಛವಾದ ನದಿ ಇದೇ ನೋಡಿ! | cleanest rivers in India with pristine water | ಟ್ರೆಂಡಿಂಗ್ ಸುದ್ದಿ | ACTPnews

ಸ್ಫಟಿಕದಂತೆ ಶುದ್ಧ ಈ ನದಿಯ ನೀರು; ದೇಶದ ಅತ್ಯಂತ ಸ್ವಚ್ಛವಾದ ನದಿ ಇದೇ ನೋಡಿ! | cleanest rivers in India with pristine water | ಟ್ರೆಂಡಿಂಗ್ ಸುದ್ದಿ


ನದಿಗಳನ್ನು (River) ಕೇವಲ ಜಲಮೂಲಗಳಾಗಿ ನೋಡೋದಿಲ್ಲ, ಬದಲಿಗೆ ನದಿಗಳನ್ನು ದೇವರ ರೂಪದಲ್ಲಿ ನೋಡಲಾಗುತ್ತದೆ. ಇಲ್ಲಿರುವ ಪ್ರತಿ ನದಿಗಳೂ ಸಾಂಸ್ಕೃತಿಕ, ಪರಿಸರ ಮತ್ತು ಪ್ರಾಕೃತಿಕ ಪ್ರಾಮುಖ್ಯತೆಯನ್ನು ಹೊಂದಿವೆ. ಇದೇ ಕಾರಣಕ್ಕೆ ಅವುಗಳು ತುಂಬಿ ಹರಿಯುವಾಗ ಬಾಗಿನ ಬಿಟ್ಟು, ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಒಟ್ಟಿನಲ್ಲಿ ಹೀಗೆ ನದಿಗಳನ್ನು ದೈವಿಕ ರೂಪದಲ್ಲಿ ಕಾಣಲಾಗುತ್ತದೆ. ನಿಂತ ನೀರಿಗಿಂತ ನದಿ ನೀರು ಶುದ್ಧವಾಗಿರುತ್ತದೆ. ನದಿ ನೀರು (River Water) ಯಾವಾಗಲೂ ಹರಿದುಕೊಂಡು ಹೋಗುವುದರಿಂದ ಶುದ್ಧವಾದ ನೀರನ್ನು ಒದಗಿಸುತ್ತದೆ. ಆದರೆ ನಾವುಗಳೇ ಪ್ರವಾಸದ ಹೆಸರಲ್ಲಿ ಅಲ್ಲಿಗೆ ಹೋಗಿ ನದಿ ಬದಿಗಳನ್ನು, ಅದರ ನೀರನ್ನು ಹಾಳು ಮಾಡಿ ಬರುತ್ತವೆ.

ಆದರೂ, ಕೆಲವು ನದಿಗಳು ತಮ್ಮ ಅಸಾಧಾರಣ ಸೌಂದರ್ಯ ಮತ್ತು ಶುದ್ಧತೆಗಾಗಿ ಹೆಸರಾಗಿವೆ. ಇವು ಪ್ರವಾಸಿಗರನ್ನು ಆಕರ್ಷಿಸುತ್ತವೆ ಮತ್ತು ಸುಸ್ಥಿರ ಅಭ್ಯಾಸಗಳಿಗೆ ಉತ್ತಮ ಉದಾಹರಣೆಗಳಾಗಿವೆ. ಅದರಲ್ಲೂ ನಮ್ಮ ದೇಶದಲ್ಲಿರುವ ಒಂದು ನದಿಯು ಸ್ವಚ್ಛತೆಗೆ ಗುರುತಿಸಲ್ಪಟ್ಟಿದ್ದು, ದೇಶದಲ್ಲಿಯೇ ಅತ್ಯಂತ ಸ್ವಚ್ಛ ನದಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಸಾಂದರ್ಭಿಕ ಚಿತ್ರ
ಜನಜೀವನದಲ್ಲಿ ನದಿಗಳ ಪಾತ್ರ

ಭಾರತವು ತನ್ನ ಕೃಷಿ, ಆರ್ಥಿಕತೆ ಮತ್ತು ಸಂಸ್ಕೃತಿಗೆ ಪ್ರಮುಖವಾದ ನದಿಗಳ ವಿಶಾಲ ಜಾಲಕ್ಕೆ ನೆಲೆಯಾಗಿದೆ. ಗಂಗಾ, ಯಮುನಾ, ಬ್ರಹ್ಮಪುತ್ರ ಮತ್ತು ಗೋದಾವರಿ ಮುಂತಾದ ಪ್ರಮುಖ ನದಿಗಳು ಜನ ಜೀವನವನ್ನು ಬೆಂಬಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.

ಈ ನದಿಗಳು ನೀರಾವರಿ, ಕುಡಿಯಲು ಮತ್ತು ಕೈಗಾರಿಕೆಗಳಿಗೆ ನೀರನ್ನು ಒದಗಿಸುತ್ತವೆ ಮತ್ತು ಧಾರ್ಮಿಕ ಮಹತ್ವವನ್ನು ಕೂಡ ಹೊಂದಿವೆ. ಆದಾಗ್ಯೂ, ಮಾಲಿನ್ಯ ಮತ್ತು ಮಿತಿಮೀರಿದ ಬಳಕೆಯು ನದಿಗಳ ಚಿತ್ರಣವನ್ನೇ ಬದಲು ಮಾಡುತ್ತಿವೆ. ಹೀಗಾಗಿ ಭಾರತದ ಜೀವನಾಡಿಯಾಗಿರುವ ಈ ನದಿಗಳನ್ನು ಉಳಿಸಿಕೊಳ್ಳಲು ಸಂರಕ್ಷಣಾ ಪ್ರಯತ್ನಗಳನ್ನು ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ.

ಭಾರತದ ಸ್ವಚ್ಛ ನದಿ ಯಾವುದು?

ಡವ್ಕಿ ನದಿ ಎಂದೂ ಕರೆಯಲ್ಪಡುವ ಉಮ್ಗೋಟ್ ನದಿಯು ಭಾರತದ ಸ್ವಚ್ಛ ನದಿ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ. ಭಾರತದ ಮೇಘಾಲಯದಲ್ಲಿರುವ ಈ ಒಂದು ನದಿ ಸ್ಫಟಿಕ-ಶುದ್ಧ ನೀರಿಗೆ ಹೆಸರುವಾಸಿಯಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ. ಇದರ ನೈಸರ್ಗಿಕ ಸೌಂದರ್ಯ, ಪ್ರಶಾಂತ ಪರಿಸರ ಮತ್ತು ಪ್ರಾಚೀನ ಸ್ಥಿತಿಯು ಇದನ್ನು ವಿಶ್ವದ ಅತ್ಯಂತ ಸ್ವಚ್ಛ ನದಿಗಳಲ್ಲಿ ಒಂದಾಗಿಸಿದೆ.

ಸಾಂದರ್ಭಿಕ ಚಿತ್ರ
ಉಮ್ಗೋಟ್ ನದಿಯ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳು

ಉಮ್ಗೋಟ್ ನದಿಯು ಭಾರತ-ಬಾಂಗ್ಲಾದೇಶದ ಗಡಿಯ ಸಮೀಪವಿರುವ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ದಾಕಿ ಎಂಬ ಸಣ್ಣ ಪಟ್ಟಣದಲ್ಲಿ ಹರಿಯುತ್ತದೆ. ಇದು ಮೇಘಾಲಯದ ಖಾಸಿ ಬೆಟ್ಟಗಳು ಮತ್ತು ಜೈನ್ತಿಯಾ ಬೆಟ್ಟಗಳ ನಡುವೆ ನೈಸರ್ಗಿಕ ವಿಭಜಕವಾಗಿ ಕಾರ್ಯನಿರ್ವಹಿಸುತ್ತದೆ.

ನದಿಯ ಸುತ್ತಮುತ್ತಲಿನ ಪ್ರವಾಸಿಗರ ತಾಣಗಳು

ಉಮ್ಗೋಟ್ ನದಿಯು ಮೂರು ಪ್ರಮುಖ ಪ್ರವಾಸಿ ತಾಣಗಳ ಮೂಲಕ ಹರಿಯುತ್ತದೆ. ಹೀಗಾಗಿ ಇದರ ಸುತ್ತಮುತ್ತಲು ಪ್ರವಾಸಿಗರು ನೋಡಬಹುದಾದ ಪ್ರವಾಸಿ ತಾಣಗಳು ಕೂಡ ಇವೆ.

ದಾಕಿ: ಉಮ್ಗೋಟ್ ನದಿಯು ಹರಿದು ಹೋಗುವ ಹಾದಿಯಲ್ಲಿ ಈ ನಗರ ನಿಮಗೆ ಸಿಗುತ್ತದೆ. ಈ ತಾಣವು ತನ್ನ ಸಾಂಪ್ರದಾಯಿಕ ತೂಗು ಸೇತುವೆಗೆ ಹೆಸರುವಾಸಿಯಾಗಿದೆ ಮತ್ತು ನೆರೆಯ ದೇಶವಾದ ಬಾಂಗ್ಲಾದೇಶದ ವೀಕ್ಷಣೆಗಳನ್ನು ನೀಡುತ್ತದೆ.

ಶ್ನೋಂಗ್‌ಪ್‌ಡೆಂಗ್: ಈ ಒಂದು ಗ್ರಾಮವು ನೋಡಲು ಅದ್ಭುತವಾಗಿದ್ದು, ಪ್ರವಾಸಿಗರು ವಿಶ್ರಾಂತಿ ಮತ್ತು ರಮಣೀಯ ಸೌಂದರ್ಯವನ್ನು ಇಲ್ಲಿ ಆನಂದಿಸಬಹುದು.

ದರ್ರಾಂಗ್: ಈ ಗ್ರಾಮ ಕೂಡ ಪ್ರವಾಸಿಗರಿಗೆ ಇಲ್ಲಿನ ಪ್ರವಾಸದ ಅನುಭವನನ್ನು ಹೆಚ್ಚು ಮಾಡುತ್ತದೆ.

ಉಮ್ಗೋಟ್ ನದಿ ಹೇಗಿಷ್ಟು ಸ್ವಚ್ಛವಾಗಿದೆ?

ಇದು ತುಂಬಾ ಪ್ರಾಚೀನ ನದಿ, ಯಾವುದೇ ಮಾನವ ತ್ಯಾಜ್ಯ ಅಥವಾ ವಸಾಹತುಗಳ ಕಸವು ಅದನ್ನು ಕಲುಷಿತಗೊಳಿಸುವುದಿಲ್ಲ. ಗಣಿಗಾರಿಕೆ ಚಟುವಟಿಕೆಗಳಿಂದ ಬರುವ ಯಾವುದೇ ಹಾನಿಕಾರಕ ರಾಸಾಯನಿಕಗಳು ನದಿಗೆ ಹರಿದು ಬರುವುದಿಲ್ಲ. ಸ್ಥಳೀಯ ಗ್ರಾಮಸ್ಥರು ಕೂಡ ನದಿಯನ್ನು ಸ್ವಚ್ಛವಾಗಿಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಏಕೆಂದರೆ ಇದು ಕುಡಿಯುವ ನೀರನ್ನು ಒದಗಿಸುತ್ತದೆ ಮತ್ತು ಮೂರು ಗ್ರಾಮಗಳಿಗೆ ಪ್ರಮುಖ ಜಲ ಸಂಪನ್ಮೂಲವೇ ಈ ನದಿಯಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed