Burkha Ban: ಶಾಲೆಗಳಲ್ಲಿ ಬುರ್ಖಾ ಬ್ಯಾನ್, ನಿಯಮ ಮೀರಿದ್ರೆ ಕಠಿಣ ಶಿಕ್ಷೆ! ಇಟಲಿಯಲ್ಲಿ ಶೀಘ್ರವೇ ಸ್ಟ್ರಿಕ್ಟ್ ರೂಲ್ಸ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಇಟಲಿ ಶಾಲೆಗಳಲ್ಲಿ ಬುರ್ಖಾ ಬ್ಯಾನ್


Last Updated:

Burkha Ban: ಇಟಲಿ ಸರ್ಕಾರ ಶಾಲೆ, ಕಾಲೇಜುಗಳಲ್ಲಿ ಬುರ್ಖಾ, ನಿಕಾಬ್ ನಿಷೇಧಿಸಲು ಮುಂದಾಗಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರ ಕರಡು ಮಸೂದೆ ಸಿದ್ಧಪಡಿಸಿದೆ. ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೂ ಮಿತಿ ಹೇರಲು ಪ್ರಸ್ತಾಪಿಸಿದೆ.

ಇಟಲಿ ಶಾಲೆಗಳಲ್ಲಿ ಬುರ್ಖಾ ಬ್ಯಾನ್
ಇಟಲಿ ಶಾಲೆಗಳಲ್ಲಿ ಬುರ್ಖಾ ಬ್ಯಾನ್

ಇಟಲಿ: ಶಾಲೆ, ಕಾಲೇಜ್‌ಗಳಲ್ಲಿ ಸಮವಸ್ತ್ರದ ಜೊತೆ ಬುರ್ಖಾ, ನಿಕಾಬ್‌ಗಳನ್ನು ಧರಿಸೋದಕ್ಕೆ ನಿಷೇಧ ಹೇರಲು ಇಟಲಿ ಸರ್ಕಾರ (Italian government) ಮುಂದಾಗಿದೆ. ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ನೇತೃತ್ವದ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದ್ದು, ತರಗತಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಹೇರುವುದು ಮತ್ತು ಮುಖ ಮುಚ್ಚುವ ಬುರ್ಖಾ (burkha), ನಿಕಾಬ್‌ಗಳನ್ನು (niqabs) ಸಂಪೂರ್ಣವಾಗಿ ನಿಷೇಧಿಸುವ ಕರಡು ಮಸೂದೆಯನ್ನು ಸಿದ್ಧಪಡಿಸಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲಿರುವ ಈ ಹೊಸ ಪ್ರಸ್ತಾವಿತ ನಿಯಮಗಳು ಇದೀಗ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ಶಾಲೆಗಳಲ್ಲಿ ಬುರ್ಖಾ, ನಿಕಾಬ್ ನಿಷೇಧ

ಇಟಲಿಯ ಆಡಳಿತಾರೂಢ ಬಲಪಂಥೀಯ ‘ಬ್ರದರ್ಸ್ ಆಫ್ ಇಟಲಿ’ ಪಕ್ಷವು ರೂಪಿಸುತ್ತಿರುವ ಈ ನೂತನ ಮಸೂದೆಯ ಪ್ರಕಾರ, ಶಾಲಾ ಆವರಣದಲ್ಲಿ ಮತ್ತು ತರಗತಿಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಮುಖವನ್ನು ಸಂಪೂರ್ಣವಾಗಿ ಮುಚ್ಚುವಂತಹ ಬುರ್ಖಾ ಹಾಗೂ ನಿಕಾಬ್ ಧರಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲು ಯೋಜಿಸಲಾಗಿದೆ. ಸಾರ್ವಜನಿಕ ಭದ್ರತೆ, ವಿದ್ಯಾರ್ಥಿಗಳ ಸುರಕ್ಷತೆ, ಗುರುತು ಪತ್ತೆ ಹಚ್ಚುವಿಕೆ ಮತ್ತು ತರಗತಿಗಳಲ್ಲಿ ಪಾರದರ್ಶಕ ಹಾಗೂ ಮುಕ್ತ ಸಂವಹನವನ್ನು ಕಾಯ್ದುಕೊಳ್ಳಲು ಈ ಕಠಿಣ ಕ್ರಮ ಅತ್ಯಂತ ಅಗತ್ಯ ಎಂದು ಮೆಲೋನಿ ಸರ್ಕಾರ ಬಲವಾಗಿ ಪ್ರತಿಪಾದಿಸುತ್ತಿದೆ.

ನಿಯಮ ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ

ಶಾಲಾ ಪರಿಸರದಲ್ಲಿ ಎಲ್ಲರೂ ಸಮಾನರು ಎಂಬ ಭಾವನೆ ಮೂಡಬೇಕು, ಧಾರ್ಮಿಕ ಉಡುಪುಗಳು ತಾರತಮ್ಯಕ್ಕೆ ಎಡೆಮಾಡಿಕೊಡಬಾರದು ಎಂಬುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಒಂದು ವೇಳೆ ಈ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡು ಕಾನೂನಾಗಿ ಜಾರಿಗೆ ಬಂದರೆ, ಉಲ್ಲಂಘಿಸಿದವರಿಗೆ ಕಠಿಣ ದಂಡ ವಿಧಿಸುವ ಸಾಧ್ಯತೆಗಳೂ ಇವೆ ಎಂದು ವರದಿಗಳು ತಿಳಿಸಿವೆ.

ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಿತಿ

ಧಾರ್ಮಿಕ ಉಡುಪುಗಳ ನಿಷೇಧದ ಜೊತೆಗೆ ಈ ಮಸೂದೆಯಲ್ಲಿರುವ ಮತ್ತೊಂದು ಅತ್ಯಂತ ಮಹತ್ವದ ಹಾಗೂ ವಿವಾದಾತ್ಮಕ ನಿಯಮವೆಂದರೆ, ಶಾಲೆಯ ತರಗತಿಗಳಲ್ಲಿ ವಿದೇಶಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಮಿತಿ (Cap) ಹೇರುವುದು. ಹೊಸ ನಿಯಮದ ಪ್ರಕಾರ, ಯಾವುದೇ ಒಂದು ತರಗತಿಯಲ್ಲಿ ಗರಿಷ್ಠ ಶೇಕಡಾ 20 ರಷ್ಟು ಮಾತ್ರ ವಿದೇಶಿ ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಪ್ರಸ್ತಾಪಿಸಲಾಗಿದೆ. ಅಂದರೆ ಒಂದು ತರಗತಿಯಲ್ಲಿ ಅತಿ ಹೆಚ್ಚು ವಿದೇಶಿ ಮೂಲದ ವಿದ್ಯಾರ್ಥಿಗಳಿದ್ದರೆ, ಅವರು ಇಟಾಲಿಯನ್ ಭಾಷೆ, ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಯಲು ಮತ್ತು ಸ್ಥಳೀಯ ಸಮಾಜದೊಂದಿಗೆ ಬೆರೆಯಲು ಕಷ್ಟವಾಗುತ್ತದೆ ಎಂಬ ಕಾರಣವನ್ನು ಸರ್ಕಾರ ನೀಡಿದೆ.

ಭಾರತೀಯರಿಗೂ ಇದ್ಯಾ ಆತಂಕ?

ವಿದೇಶಿ ಮಕ್ಕಳು ಸ್ಥಳೀಯ ಇಟಾಲಿಯನ್ ಸಂಸ್ಕೃತಿಗೆ ಬೇಗನೆ ಹೊಂದಿಕೊಳ್ಳಬೇಕು (Integration) ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವಾಲಯ ಸಮರ್ಥಿಸಿಕೊಂಡಿದೆ. ಆದರೆ, ಈ ನಿರ್ಧಾರದಿಂದಾಗಿ ಉನ್ನತ ಶಿಕ್ಷಣಕ್ಕಾಗಿ ಇಟಲಿಯತ್ತ ಮುಖ ಮಾಡುವ ಭಾರತೀಯರು ಸೇರಿದಂತೆ ವಿಶ್ವದ ನಾನಾ ದೇಶಗಳ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುವುದು ಮುಂದಿನ ದಿನಗಳಲ್ಲಿ ದುಸ್ತರವಾಗಲಿದೆ.

ಹಲವು ರಾಷ್ಟ್ರಗಳಲ್ಲಿ ಬುರ್ಖಾ ನಿಷೇಧ

ಬುರ್ಖಾ, ನಿಕಾಹ್ ನಿಷೇಧ ವಿಚಾರ ವಾಸ್ತವದಲ್ಲಿ ಯುರೋಪ್‌ಗೆ ಇದು ಹೊಸದೇನಲ್ಲ; ಫ್ರಾನ್ಸ್, ಬೆಲ್ಜಿಯಂ, ನೆದರ್ಲ್ಯಾಂಡ್ಸ್ ಮತ್ತು ಸ್ವಿಟ್ಜರ್ಲೆಂಡ್‌ನಂತಹ ದೇಶಗಳಲ್ಲಿ ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಶಾಲೆಗಳಲ್ಲಿ ಮುಖ ಮುಚ್ಚುವ ಉಡುಪುಗಳ ಮೇಲೆ ಭಾಗಶಃ ಅಥವಾ ಸಂಪೂರ್ಣ ನಿಷೇಧ ಜಾರಿಯಲ್ಲಿದೆ.

(ವರದಿ: ಚೈತ್ರಾ ಹರೀಶ್, ನ್ಯೂಸ್ 18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed