Last Updated:
ಪ್ರತಿಭಟನೆಯು ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕು ಎಂದು ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿರುವ ಅಣ್ಣಾಮಲೈ ಅವರು ಸರ್ಕಾರವು ಈ ಪ್ರತಿಭಟನೆಯನ್ನ ನಿರ್ವಹಿಸುತ್ತಿರುವ ರೀತಿಯನ್ನ ಅಣ್ಣಾಮಲೈ ಪ್ರಶ್ನಿಸಿದ್ದಾರೆ.
ಮಾಜಿ ಬಿಜೆಪಿ ತಮಿಳುನಾಡು ಅಧ್ಯಕ್ಷ ಕೆ. ಅಣ್ಣಾಮಲೈ ನೀಟ್ ಪೇಪರ್ ಲೀಕ್ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ್ದಾರೆ. ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸುತ್ತಿರುವ ಪ್ರತಿಭಟನಾಕಾರರೊಂದಿಗೆ ಕೇಂದ್ರ ಸರ್ಕಾರ ತ್ವರಿತವಾಗಿ ಸಂವಾದ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ತಡವಾಗಿ ಪ್ರತಿಕ್ರಿಯಿಸಿದ ಮತ್ತು ಸಾಂಸ್ಥಿಕ ಹೊಣೆಗಾರಿಕೆಯ ಕೊರತೆ ಪ್ರದರ್ಶಿಸಿದ ಕೇಂದ್ರ ಸರ್ಕಾರವನ್ನು ಅಣ್ಣಾಮಲೈ ಬಹಿರಂಗವಾಗಿ ಟೀಕಿಸಿದ್ದಾರೆ.
ಎಕ್ಸ್ನಲ್ಲಿ ದೀರ್ಘ ಪೋಸ್ಟ್ ಬರೆದ ಅನ್ನಾಮಲೈ ಅವರು ಎನ್ಇಇಟಿ ಪರೀಕ್ಷೆಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ. “ಎನ್ಇಇಟಿ ಪರೀಕ್ಷೆಯು ದೇಶಾದ್ಯಂತ ವಿದ್ಯಾರ್ಥಿ ಆಯ್ಕೆಯಲ್ಲಿ ಏಕರೂಪತೆ ತಂದಿದೆ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣಕ್ಕೆ ಅವಕಾಶ ನೀಡಿದೆ” ಎಂದು ಹೇಳಿದ್ದಾರೆ.
ಆದರೆ ಕಳೆದ 5 ವರ್ಷಗಳಲ್ಲಿ ಎನ್ಇಇಟಿ ಯುಜಿ ಪ್ರಶ್ನೆಪತ್ರಿಕೆ ಮೂರು ಬಾರಿ ಲೀಕ್ ಆಗಿದೆ. ಇಂತಹ ಘಟನೆಗಳಿಂದ ವಿದ್ಯಾರ್ಥಿಗಳ ಮೇಲೆ ಎಷ್ಟು ಒತ್ತಡ ಬೀಳುತ್ತದೆ ಎಂಬುದನ್ನು ಊಹಿಸಿ. ಏಕರೂಪತೆ ತರಬೇಕಾದ ವ್ಯವಸ್ಥೆಯೇ ಈ ರೀತಿ ವಿಫಲವಾಗಿದೆ. ಆದರೆ ಈ ಪ್ರಮಾದಕ್ಕೆ ಯಾರೂ ಜವಾಬ್ದಾರರಾಗುತ್ತಿಲ್ಲ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ರಸ್ತೆಗೆ ಬಂದು ತಮ್ಮ ನೋವು ತೋಡಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ಪ್ರತಿಭಟನೆಯು ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕು ಎಂದು ತಮ್ಮ ಟ್ವೀಟ್ನಲ್ಲಿ ಉಲ್ಲೇಖಿಸಿರುವ ಅಣ್ಣಾಮಲೈ ಅವರು ಸರ್ಕಾರವು ಈ ಪ್ರತಿಭಟನೆಯನ್ನ ನಿರ್ವಹಿಸುತ್ತಿರುವ ರೀತಿಯನ್ನ ಪ್ರಶ್ನಿಸಿದ್ದಾರೆ. “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿಭಟನಾಕಾರರೊಂದಿಗೆ ಸಂವಾದ ಆರಂಭಿಸಲು ಏಕೆ ಇಷ್ಟು ದಿನ ಕಾಯಿತು? ಪ್ರತಿಭಟನೆ ಉದ್ವೇಗಕ್ಕೆ ತಲುಪುವವರೆಗೆ ಏಕೆ ಅರ್ಥಪೂರ್ಣ ಮಾತುಕತೆಯನ್ನ ಶುರುಮಾಡಲಿಲ್ಲ?” ಎಂದು ಪ್ರಶ್ನಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತಿಭಟನಾ ನಾಯಕರನ್ನು ಅಣ್ಣಾಮಲೈ ಎಚ್ಚರಿಸಿದ್ದಾರೆ. “ಪ್ರತಿಭಟನೆ ತನ್ನ ಮೂಲ ಉದ್ದೇಶದಿಂದ ವಿಚಲನಗೊಳಿಸಬಾರದು. ದೀರ್ಘಕಾಲದ ಪ್ರತಿಭಟನೆಗಳಲ್ಲಿ ಕೆಲವರು ವ್ಯಕ್ತಿಗತ ಆಸಕ್ತಿ ಹೊಂದಿದವರು ಬರುತ್ತಾರೆ ಮತ್ತು ಚಳವಳಿಯನ್ನು ಹೈಜಾಕ್ ಮಾಡುತ್ತಾರೆ. ಅವರು ತಮ್ಮ ಆಸಕ್ತಿಯನ್ನು ಮುಂದುವರಿಸಲು ಅನುಮತಿಸಿದರೆ ನಿಮ್ಮ ಮೂಲ ಉದ್ದೇಶದಿಂದ ಹೊರಹೋಗುತ್ತೀರಿ, ಇದಕ್ಕೆ ನೀವು ಯಾವುದೇ ಕಾರಣಕ್ಕೂ ಅನುಮತಿಸಬೇಡಿ” ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣ ಸಂವಾದ ನಡೆಸಿ, ಪಾರದರ್ಶಕತೆ ಕಾಯ್ದುಕೊಂಡು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಅಣ್ಣಾಮಲೈ ಒತ್ತಾಯಿಸಿದ್ದಾರೆ. “ದೇಶದ ಭವಿಷ್ಯವು ವಿದ್ಯಾರ್ಥಿಗಳು ಸಾರ್ವಜನಿಕ ಸಂಸ್ಥೆಗಳ ಮೇಲೆ ಇಡುವ ವಿಶ್ವಾಸದ ಮೇಲೆ ಅವಲಂಬಿತವಾಗಿದೆ. ಶಿಕ್ಷಣ ವ್ಯವಸ್ಥೆಯ ನ್ಯಾಯ ಮತ್ತು ವಿಶ್ವಾಸಾರ್ಹತೆಯ ಮೇಲೆ ವಿದ್ಯಾರ್ಥಿಗಳು ವಿಶ್ವಾಸ ಕಳೆದುಕೊಂಡರೆ ದೇಶದ ಭವಿಷ್ಯಕ್ಕೆ ಅಪಾಯವಾಗುತ್ತದೆ” ಎಂದು ಮಾಜಿ ಐಪಿಎಸ್ ಅಧಿಕಾರಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
Jul 22, 2026 10:04 PM IST
K Annamalai: ನೀಟ್ ಪೇಪರ್ ಲೀಕ್ ವಿರುದ್ಧ ಹೋರಾಡುತ್ತಿರುವ ವಿದ್ಯಾರ್ಥಿಗಳ ಪರ ಧ್ವನಿ ಎತ್ತಿದ ಅಣ್ಣಾಮಲೈ! ಕೇಂದ್ರ ಸರ್ಕಾರದ ನಡೆ ಟೀಕಿಸಿದ ಮಾಜಿ ಸಿಂಗಂ














