Last Updated:
ಈ ಎಲ್ಲಾ ಬೆಳವಣಿಗೆಗಳ ಹಿಂದೆ ರಾಜಧಾನಿ ದೆಹಲಿಯಲ್ಲಿ ಆಯೋಜಿಸಲಾಗುತ್ತಿರುವ ಹೈ-ಪ್ರೊಫೈಲ್ ಬ್ರಿಕ್ಸ್ (BRICS) ಶೃಂಗಸಭೆ ಕಾರಣವಾಗಿದೆ. ದೆಹಲಿ ಪೊಲೀಸ್ ಟ್ರಾಫಿಕ್ ಡೆಪ್ಯುಟಿ ಕಮಿಷನರ್ (DCP), ಸೆಪ್ಟೆಂಬರ್ 13 ರ ಪಂದ್ಯವನ್ನು ಮುಂದೂಡುವಂತೆ ಡಿಡಿಸಿಎಗೆ ಅಧಿಕೃತ ಪತ್ರ ಬರೆದು ಸಲಹೆ ನೀಡಿದ್ದರಿಂದ ಊಹಾಪೋಹಕ್ಕೆ ಕಾರಣವಾಗಿತ್ತು.
ದೆಹಲಿ ಟ್ರಾಫಿಕ್ ಪೊಲೀಸ್ ಇಲಾಖೆಯು ಸೆಪ್ಟೆಂಬರ್ 13 ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೊದಲ ಟಿ20 ಪಂದ್ಯವನ್ನು ಬೇರೆ ದಿನಾಂಕಕ್ಕೆ ಮುಂದೂಡುವಂತೆ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಗೆ (DDCA) ವಿನಂತಿಸಿತ್ತು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಮೊದಲ ಪಂದ್ಯ ಮೂಂದೂಡಲಾಗುತ್ತದೆ ಎಂಬ ವದಂತಿ ಹೆಚ್ಚಾಗಿತ್ತು ಆದರೆ, ಈ ಪಂದ್ಯವು ನಿಗದಿತ ಸಮಯದಂತೆಯೇ ನಡೆಯಲಿದೆ ಎಂದು ಸ್ವತಃ ಡಿಡಿಸಿಎ ಸ್ಪಷ್ಟಪಡಿಸಿದೆ. ದೆಹಲಿ ಟ್ರಾಫಿಕ್ ಪೊಲೀಸರೊಂದಿಗೆ ನಡೆದ ಸಭೆಯ ಬಳಿಕ, ಡಿಡಿಸಿಎಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳು ಮತ್ತು ಟ್ರಾಫಿಕ್ ಸಹಕಾರದ ಸಂಪೂರ್ಣ ಭರವಸೆ ಸಿಕ್ಕಿದೆ. ಈ ಭರವಸೆಯ ನಂತರ ಪಂದ್ಯ ಮುಂದೂಡಿಕೆಯಾಗುವ ಎಲ್ಲಾ ವದಂತಿಗಳಿಗೆ ತೆರೆ ಬಿದ್ದಿದ್ದು, ಪಂದ್ಯವು ಪೂರ್ವ ನಿಗದಿತ ವೇಳಾಪಟ್ಟಿಯಂತೆಯೇ ಜರುಗಲಿದೆ.














