Last Updated:
ಮಾಲೀಕನ ಅಂತ್ಯಕ್ರಿಯೆ ಯಾತ್ರೆಯಲ್ಲೇ ಕುಸಿದುಬಿದ್ದು ಸಾಕುನಾಯಿ ಸಾವು. ಮಧ್ಯಪ್ರದೇಶದ ಬೈತುಲ್ನಲ್ಲಿ ಘಟನೆ. ಪ್ರದೀಪ್ ಜೈನ್ ಮತ್ತು ಡುಗ್ಗು ನಡುವಿನ ಬಾಂಧವ್ಯಕ್ಕೆ ಕುಟುಂಬಸ್ಥರ ಕಂಬನಿ.
ಮನುಷ್ಯರ ನಡುವೆ ಮಾತ್ರ ಅಲ್ಲ, ಸಾಕುಪ್ರಾಣಿಗಳು (Pets) ಹಾಗೂ ಅವುಗಳ ಆಪ್ತರ ನಡುವೆಯೂ ನಿಸ್ವಾರ್ಥ ಪ್ರೀತಿ ಇರುತ್ತದೆ ಎಂಬುದಕ್ಕೆ ಮಧ್ಯ ಪ್ರದೇಶದಲ್ಲಿ ನಡೆದ ಘಟನೆ ತಾಜಾ ಉದಾಹರಣೆಯಾಗಿ ನಿಂತಿದೆ. ನನ್ನನ್ನು ಪ್ರೀತಿಯಿಂದ (Loyalty) ಸಾಕಿದ್ದ ಮಾಲೀಕನ ಸಾವನ್ನು ಕಂಡ ಸಾಕುನಾಯಿ, ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. ಮಧ್ಯಪ್ರದೇಶದ ಬೈತುಲ್ನಲ್ಲಿ ಘಟನೆ ನಡೆದಿದ್ದು, 67 ವರ್ಷದ ಪ್ರದೀಪ್ ಜೈನ್ ಎಂಬಾತ ಭೋಪಾಲ್ನ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ (AIMS Hospital) ಪಡೆಯುತ್ತಿದ್ದ. ಆಸ್ಪತ್ರೆಗೆ ದಾಖಲಿಸಿದ 8 ದಿನಗಳ ಬಳಿಕ ಪ್ರದೀಪ್ ಜೈನ್ ಸಾವನ್ನಪ್ಪಿದ್ದರು. ಆದರೆ ಮನೆಯಲ್ಲಿದ್ದ ಸಾಕುನಾಯಿ (Dog) ‘ಡುಗ್ಗು’ ಮಾತ್ರ ಮಾಲೀಕ ಯಾವಾಗ ವಾಪಸ್ ಬರ್ತಾರೆ ಅಂತ ಕಾಯುತ್ತಿತ್ತು.
ಭಾನುವಾರ ಸಂಜೆ ಮಾಲೀಕ ಪ್ರದೀಪ್ ಅವರ ಮೃತದೇಹವನ್ನು ಕುಟುಂಬಸ್ಥರು ಮನೆಗೆ ತಂದಿದ್ದರು. ಇದನ್ನು ಕಂಡ ಡುಗ್ಗು ಅವರ ಮೃತದೇಹದ ಪಕ್ಕದಲ್ಲೇ ಕುಳಿತುಕೊಂಡಿತ್ತು. ಇತ್ತ ಕುಟುಂಬಸ್ಥ ಸದಸ್ಯರು ಅಂತ್ಯಕ್ರಿಯೆ ಸಿದ್ಧತೆಗಳನ್ನು ಮಾಡುತ್ತಿದ್ದರು. ಆದರೆ ಡುಗ್ಗು ಮೃತದೇಹವನ್ನು ಯಾರು ಮುಟ್ಟಿಕೊಳ್ಳಲು ಬಿಡದೆ ಇದ್ದ ಕಾರಣ ಅದನ್ನು ರೂಮ್ಗೆ ಶಿಫ್ಟ್ ಮಾಡಿ ಲಾಕ್ ಮಾಡಿದ್ದರು. ಬೆಳಗ್ಗೆ ಮೃತದೇಹದ ಅಂತ್ಯಕ್ರಿಯೆ ನಡೆಸುವ ಮುನ್ನ ನಾಯಿಯನ್ನು ರೂಮ್ನಿಂದ ಬಿಟ್ಟಿದ್ದರು. ಈ ವೇಳೆ ಮೌನವಾಗಿಯೇ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಡುಗ್ಗು ಏಕಾಏಕಿ ಕುಸಿದು ಬಿದ್ದಿತ್ತು.
ಪ್ರೀತಿಯ ಶ್ವಾನವನ್ನು ಉಳಿಸಿಕೊಳ್ಳಲು ಕುಟುಂಬಸ್ಥರು ಮಾಡಿದ ಪ್ರಯತ್ನ ಫಲ ನೀಡಿರಲಿಲ್ಲ. ಸುಮಾರು 15 ವರ್ಷ ಮಾಲೀಕರೊಂದಿಗೆ ಇದ್ದ ಶ್ವಾನ, ಅವರ ಅಂತ್ಯಕ್ರಿಯೆಗೂ ಮುನ್ನವೇ ಕೊನೆಯುಸಿರೆಳೆದಿತ್ತು. ಹಿಂದೂ ಸಂಪ್ರದಾಯದ ಪ್ರಕಾರ ಗಂಜ್ ಮೋಕ್ಷಧಾಮದಲ್ಲಿ ಪ್ರದೀಪ್ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. ಅದೇ ಆವರಣದಲ್ಲಿ ಕುಟುಂಬಸ್ಥರು ಸಾಕುನಾಯಿಯ ಅಂತ್ಯಕ್ರಿಯೆಯನ್ನು ನಡೆಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಪ್ರದೀಪ್ ಜೈನ್ ಮತ್ತು ಡುಗ್ಗು ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿರುವ ಆತನ ಸಹೋದರನ ಪುತ್ರ ಯೋಗೇಶ್, ಅದು ನಮಗೆ ಒಂದು ಸಾಕುನಾಯಿ ಮಾತ್ರ ಆಗಿರಲಿಲ್ಲ. ನಮ್ಮ ಕುಟುಂಬದ ಸದಸ್ಯನಂತೆಯೇ ಇತ್ತು. ನಮ್ಮ ಚಿಕ್ಕಪ್ಪ ಅದನ್ನು ಚಿಕ್ಕ ವಯಸ್ಸಿನಲ್ಲಿಯೇ ಮನೆಗೆ ತಂದು ಪ್ರೀತಿಯಿಂದ ಬೆಳೆಸಿದ್ದರು. ಅವರು ಪ್ರತಿದಿನ ಕೆಲಸ ಮುಗಿಸಿ ಮನೆಗೆ ವಾಪಸ್ ಬರುವುದನ್ನೇ ಡುಗ್ಗು ಕಾಯುತ್ತಿತ್ತು. ಅವರು ಇಲ್ಲ ಎಂದರೇ ಇದು ಕೂಡ ಊಟ ಮಾಡುತ್ತಿರಲಿಲ್ಲ. ಕೊನೆಗೆ ಸಾವಿನಲ್ಲೂ ಅವರೊಂದಿಗೆ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.














