Last Updated:
181 ರನ್ಗಳ ಸವಾಲಿನ ಗುರಿಯನ್ನ ಬೆನ್ನಟ್ಟಿದ ಹೈದರಾಬಾದ್ 19 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ರೋಚಕ ಗೆಲುವು ಸಾಧಿಸಿತು. ಇಶಾನ್ ಕಿಶನ್ 70 ಹಾಗೂ ಹೆನ್ರಿಕ್ ಕ್ಲಾಸೆನ್ 47 ರನ್ಗಳಿಸಿ ಗೆಲುವಿನ ರೂವಾರಿಯಾದರು. ಈ ಗೆಲುವಿನ ಮೂಲಕ ಹೈದರಾಬಾದ್ ತಂಡ ಗುಜರಾತ್ ಟೈಟನ್ಸ್ ತಂಡದ ಜೊತೆಗೆ ಪ್ಲೇಆಫ್ ಪ್ರವೇಶಿಸಿತು. ಸೋತ ಸಿಎಸ್ಕೆ ಬಹುತೇಕ ಟೂರ್ನಿಯಿಂದ ಹೊರಬಿದ್ದಿತು.
ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ನ 63ನೇ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ (CSK vs SRH) 5 ವಿಕೆಟ್ಗಳ ರೋಚಕ ಗೆಲುವು ಸಾಧಿಸಿ ಪ್ಲೇಆಫ್ ಪ್ರವೇಶವನ್ನ ಖಚಿತಪಡಿಸಿಕೊಂಡಿದೆ. ಪ್ಲೇಆಫ್ ರೇಸ್ನಲ್ಲಿ (Playoff) ಉಳಿಯಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಏಳು ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಡೆವಾಲ್ಡ್ ಬ್ರೆವಿಸ್ 27 ಎಸೆತಗಳಲ್ಲಿ 44 ರನ್ ಗಳಿಸಿ ಟಾಪ್ ಸ್ಕೋರರ್ ಆಗಿದ್ದರು. ಯುವ ಆಟಗಾರ ಕಾರ್ತಿಕ್ ಶರ್ಮಾ 19 ಎಸೆತಗಳಲ್ಲಿ 32 ರನ್ ಗಳಿಸಿದ್ದರು. 181 ರನ್ಗಳ ಸವಾಲಿನ ಗುರಿಯನ್ನ ಬೆನ್ನಟ್ಟಿದ ಹೈದರಾಬಾದ್ 19 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ರೋಚಕ ಗೆಲುವು ಸಾಧಿಸಿತು. ಇಶಾನ್ ಕಿಶನ್ 70 ಹಾಗೂ ಹೆನ್ರಿಕ್ ಕ್ಲಾಸೆನ್ 47 ರನ್ಗಳಿಸಿ ಗೆಲುವಿನ ರೂವಾರಿಯಾದರು. ಈ ಗೆಲುವಿನ ಮೂಲಕ ಹೈದರಾಬಾದ್ ತಂಡ ಗುಜರಾತ್ ಟೈಟನ್ಸ್ ತಂಡದ ಜೊತೆಗೆ ಪ್ಲೇಆಫ್ ಪ್ರವೇಶಿಸಿತು. ಸೋತ ಸಿಎಸ್ಕೆ ಬಹುತೇಕ ಟೂರ್ನಿಯಿಂದ ಹೊರಬಿದ್ದಿತು.
181 ರನ್ಗಳ ಗುರಿಯನ್ನ ಬೆನ್ನಟ್ಟಿದ ಹೈದರಾಬಾದ್ ಕೂಡ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಟ್ರಾವಿಸ್ ಹೆಡ್ 6 ಎಸೆತಗಳಲ್ಲಿ 6 ರನ್ಗಳಿಸಿ ಮುಕೇಶ್ ಚೌಧರಿಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಒಂದಾದ ಅಭಿಷೇಕ್ ಶರ್ಮಾ ಹಾಗೂ ಇಶಾನ್ ಕಿಶನ್ 38 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಅಭಿಷೇಕ್ ಶರ್ಮಾ ತಮ್ಮ ಸಾಮರ್ಥ್ಯಕ್ಕೆ ಆಟ ಆಡುವಲ್ಲಿ ವಿಫಲರಾದರು. 21 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 26 ರನ್ಗಳಿಸಿ ಅಕೀಲ್ ಹುಸೇನ್ ಬೌಲಿಂಗ್ನಲ್ಲಿ ಸ್ಪೆನ್ಸರ್ಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ ಒಂದಾದ ಟೂರ್ನಮೆಂಟ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಕ್ಲಾಸೆನ್ ಇಶಾನ್ ಕಿಸನ್ ಜೊತೆ ಸೇರಿ 75 ರನ್ಗಳ ಅದ್ಭುತ ಜೊತೆಯಾಟ ನೀಡಿದರು. ಕ್ಲಾಸೆನ್ 26 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳ ಸಹಿತ 47 ರನ್ಗಳಿಸಿ 15ನೇ ಓವರ್ನಲ್ಲಿ ನೂರ್ ಅಹ್ಮದ್ ಬೌಲಿಂಗ್ನಲ್ಲಿ ಸ್ಟಂಪ್ ಆದರು. ನಂತರ ಬಂದ ನಿತೀಶ್ ಕುಮಾರ್ 7 ಎಸೆತಗಳಲ್ಲಿ 11 ರನ್ಗಳಿಸಿ ಚೌಧರಿ ಬೌಲಿಂಗ್ನಲ್ಲಿ ಪಟೇಲ್ಗೆ ಕ್ಯಾಚ್ ನೀಡಿ ಔಟ್ ಆದರು.
ಇಶಾನ್ ಕಿಶನ್ 47 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 70 ರನ್ಗಳಿಸಿ ಗೆಲುವಿಗೆ 6 ರನ್ಗಳ ಅಗತ್ಯವಿದ್ದಾಗ ಅನ್ಶುಲ್ ಕಾಂಬೋಜ್ ಬೌಲಿಂಗ್ನಲ್ಲಿ ಉರ್ವಿಲ್ ಪಟೇಲ್ಗೆ ಕ್ಯಾಚ್ ನೀಡಿ ಔಟ್ ಆದರು. ಸಲೀಲ್ ಅರೋರ 5 ಎಸೆತಗಳಲ್ಲಿ ಅಜೇಯ 10, ಸ್ಮರಣ್ ರವಿಚಂದ್ರನ್ 2 ಎಸೆತಗಳಲ್ಲಿ ಅಜೇಯ 5 ರನ್ಗಳಿಸಿ ಎಸ್ಆರ್ಹೆಚ್ಗೆ 5 ವಿಕೆಟ್ಗಳ ಜಯ ತಂದುಕೊಟ್ಟರು.
ಸಿಎಸ್ಕೆ ಪರ ಮುಕೇಶ್ ಚೌಧರಿ 36ಕ್ಕೆ2, ಅನ್ಶುಲ್ ಕಾಂಬೋಜ್ 46ಕ್ಕೆ1, ನೂರ್ ಅಹ್ಮದ್ 40ಕ್ಕೆ2, ಅಕೀಲ್ ಹುಸೇನ್ 21ಕ್ಕೆ1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಸಿಎಸ್ಕೆ ತಂಡ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 180 ರನ್ಗಳಿಸಿತ್ತು. ಸಂಜು ಸ್ಯಾಮ್ಸನ್ 13 ಎಸೆತಗಳಲ್ಲಿ 26, ಕಾರ್ತಿಕ್ ಶರ್ಮಾ 19 ಎಸೆತಗಳಲ್ಲಿ 32, ಡೆವಾಲ್ಡ್ ಬ್ರೆವಿಸ್ 27 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 44 ರನ್, ಶಿವಂ ದುಬೆ 23 ಎಸೆತಗಳಲ್ಲಿ 26 ರನ್ಗಳಿಸಿದರು. ನಾಯಕ ರುತುರಾಜ್ ಗಾಯಕ್ವಾಡ್ 21 ಎಸೆತಗಳಲ್ಲಿ ಕೇವಲ 15 ರನ್ಗಳಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಲ್ಲದೆ ತಂಡದ 200 ರನ್ಗಳ ಸವಾಲಿನ ಮೊತ್ತದ ದಾಖಲಾಗದಿರಲು ಪ್ರಮುಖ ಕಾರಣವಾದರು. ಗಾಯಕ್ವಾಡ್ 10ರಿಂದ 15 ರನ್ ಹೆಚ್ಚು ರನ್ಗಳಿಸಿದ್ದರೆ, ಈ ಪಂದ್ಯದ ಫಲಿತಾಂಶವೇ ಬೇರೆ ಆಗಿರುತ್ತಿತ್ತು.
ಹೈದರಾಬಾದ್ ಪರ ಅದ್ಭುತ ಬೌಲಿಂಗ್ ಮಾಡಿದ ನಾಯಕ ಪ್ಯಾಟ್ ಕಮಿನ್ಸ್ 28ಕ್ಕೆ3, ಸಕಿಬ್ ಹುಸೇನ್ 34ಕ್ಕೆ2, ಇಶಾನ್ ಮಾಲಿಂಗ 26ಕ್ಕೆ1, ಪ್ರಫುಲ್ ಹಿಂಗೆ 37ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಸಿಎಸ್ಕೆ ವಿರುದ್ಧ 5 ವಿಕೆಟ್ಗಳ ಗೆಲುವು ಸಾಧಿಸಿದ ಹೈದರಾಬಾದ್ ತಂಡ 2026ರ ಆವೃತ್ತಿಯಲ್ಲಿ ತನ್ನ ಪ್ಲೇಆಫ್ ಪ್ರವೇಶವನ್ನ ಖಚಿತಪಡಿಸಿಕೊಂಡಿತು. ಆರ್ಸಿಬಿ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಲಿದ್ದು, ಅಗ್ರ 2 ಸ್ಥಾನಕ್ಕಾಗಿ ಪೈಪೋಟಿ ನಡೆಸಲಿದೆ. ಆರ್ಸಿಬಿ 18 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಈ ಸೋಲಿನೊಂದಿಗೆ ಸಿಎಸ್ಕೆ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಸಿಎಸ್ಕೆ ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರೆ, ರಾಜಸ್ಥಾನ್ ಹಾಗೂ ಕೆಕೆಆರ್ ತಂಡಗಳು ತಮ್ಮ 2 ಪಂದ್ಯಗಳನ್ನೂ ಹಾಗೂ ಪಂಜಾಬ್ ಮತ್ತು ಡೆಲ್ಲಿ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಸೋತರೆ ಮಾತ್ರ ಸಿಎಸ್ಕೆ ಪ್ಲೇಆಫ್ ಪ್ರವೇಶಿಸಲಿದೆ.
May 18, 2026 11:42 PM IST














