Last Updated:
ಶಾಲೆಯಲ್ಲಿ 10 ನೇ ತರಗತಿ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಯ ಕಪಾಳಕ್ಕೆ ಬಲವಾಗಿ ಹೊಡೆದಿದ್ದರಿಂದ ಕಿವಿ ತಮಟೆ ಒಡೆದುಹೋಗಿದೆ. ಸದ್ಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬನ (School Student) ಮೇಲೆ ಶಿಕ್ಷಕರು ಮನಬಂದಂತೆ ಹಲ್ಲೆ ಮಾಡಿದ್ದು, ವಿದ್ಯಾರ್ಥಿಯ ಕಿವಿಗೆ (Eardum) ಡ್ಯಾಮೇಜ್ ಆಗಿದೆ. ಅಹಮದಾಬಾದ್ನ ಖಾಸಗಿ ಶಾಲೆಯಲ್ಲಿ ಶಿಕ್ಷಕರೊಬ್ಬರು 10ನೇ ತರಗತಿಯ ವಿದ್ಯಾರ್ಥಿಗೆ ಬಲವಾಗಿ ಕಪಾಳಮೋಕ್ಷ ಮಾಡಿದ್ದು, ಇದೀಗ ಈ ಘಟನೆ ದೊಡ್ಡ ಸುದ್ದಿಯಾಗಿದೆ. ಈ ಹಲ್ಲೆಯಿಂದ ವಿದ್ಯಾರ್ಥಿಯ ಎಡ ಕಿವಿ ತಮಟೆ ಛಿದ್ರಗೊಂಡಿದ್ದು, ಶಸ್ತ್ರಚಿಕಿತ್ಸೆ (Operation) ಅಗತ್ಯವಾಗಬಹುದು ಎಂದು ವೈದ್ಯರು ಹೇಳಿದ್ದಾರೆ.
ಈ ಘಟನೆಯು ಅಹಮದಾಬಾದ್ನ ನಿಕೋಲ್ ಪ್ರದೇಶದ ಚಾಣಕ್ಯ ಶಾಲೆಯಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದಾನೆ, ಇದರಿಂದ ಇಯರ್ಡಮ್(ಕಿವಿಗೆ) ಡ್ಯಾಮೇಜ್ ಆಗಿದೆ.
10ನೇ ತರಗತಿಯ ಗುಜರಾತಿ ಮಾಧ್ಯಮ ವಿಭಾಗದ ವಿದ್ಯಾರ್ಥಿ ದೈಹಿಕ ತರಬೇತಿ (ಪಿಟಿ) ಅವಧಿಗೆ ಹಾಜರಾಗಿದ್ದ. ಆ ಸಮಯದಲ್ಲಿ ಅವನು ಸ್ನೇಹಿತರೊಂದಿಗೆ ಮೈದಾನದಲ್ಲಿ ಕುಳಿತು ಮಾತನಾಡುತ್ತಿದ್ದ. ಅಲ್ಲಿಗೆ ಲಕ್ಷ್ಮಣ್ ಎಂಬ ಇಂಗ್ಲಿಷ್ ಶಿಕ್ಷಕ ಬಂದು ವಿದ್ಯಾರ್ಥಿಯ ಮುಖಕ್ಕೆ ಬಲವಾಗಿ ಕಪಾಳಮೋಕ್ಷ ಮಾಡಿದ್ದಾನೆ ಎಂದು ಆರೋಪವಿದೆ. ಕಪಾಳಮೋಕ್ಷದ ಪರಿಣಾಮ ತುಂಬಾ ತೀವ್ರವಾಗಿತ್ತು. ಶಿಕ್ಷಕ ಹೊಡೆದ ತಕ್ಷಣ ವಿದ್ಯಾರ್ಥಿಯ ಎಡ ಕಿವಿ ಊದಿಕೊಂಡು ರಕ್ತಸ್ರಾವವಾಗಲು ಪ್ರಾರಂಭವಾಗಿದೆ. ಅವನಿಗೆ ಕಿವಿ ಕೇಳದಂತಾಗಿದೆ.
ಇದಾದ ನಂತರ ಶಾಲಾ ಅಧಿಕಾರಿಗಳು ತಕ್ಷಣವೇ ವಿದ್ಯಾರ್ಥಿಯ ತಂದೆಗೆ ಮಾಹಿತಿ ನೀಡಿದ್ದಾರೆ. ತಂದೆ ಶಾಲೆಗೆ ಬಂದು ಮಗನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಎಡ ಕಿವಿ ತಮಟೆ ಛಿದ್ರಗೊಂಡಿರುವುದು ಕಂಡುಬಂದಿದೆ. ಮುಂದಿನ ವಾರದೊಳಗೆ ಊತ ಕಡಿಮೆಯಾಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಆರೋಪಿ ಶಿಕ್ಷಕ ಲಕ್ಷ್ಮಣ್ ಶಾಲಾ ಟ್ರಸ್ಟ್ ಮತ್ತು ವಿದ್ಯಾರ್ಥಿಯ ಕುಟುಂಬದ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆದರೆ ಗಾಯದ ಗಂಭೀರತೆಯನ್ನು ಉಲ್ಲೇಖಿಸಿ ವಿದ್ಯಾರ್ಥಿಯ ತಂದೆ ಶಿಕ್ಷಕನನ್ನು ಕ್ಷಮಿಸಲು ನಿರಾಕರಿಸಿದ್ದಾರೆ. ‘ನನ್ನ ಮಗನಿಗೆ ಶಾಶ್ವತ ಕಿವುಡುತನ ಸಮಸ್ಯೆ ಉಂಟಾದರೆ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಾದರೆ ಜವಾಬ್ದಾರಿ ಶಾಲಾ ಟ್ರಸ್ಟ್ ಮತ್ತು ಶಿಕ್ಷಕರ ಮೇಲಿರುತ್ತದೆ’ ಎಂದು ಹೇಳಿದ್ದಾರೆ. ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ಕೃಷ್ಣನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಶಿಕ್ಷಕನನ್ನು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ‘ವಿದ್ಯಾರ್ಥಿಗೆ ಸರಿಯಾಗಿ ಕಿವಿ ಕೇಳಿಸುತ್ತಿಲ್ಲ ಎಂಬ ಮಾಹಿತಿ ಬಂದಿದೆ. ನಾವು ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಅಹಮದಾಬಾದ್ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ) ರೋಹಿತ್ ಚೌಧರಿ ಅವರು ಘಟನೆ ಬೆಳಕಿಗೆ ಬಂದ ತಕ್ಷಣ ತನಿಖೆಗೆ ಆದೇಶಿಸಿದ್ದಾರೆ. ‘ಮಕ್ಕಳು ಆಟದ ಮೈದಾನದಲ್ಲಿದ್ದಾಗ ಶಿಕ್ಷಕರು ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದಾರೆ. ಶಿಕ್ಷಕರನ್ನು ತಕ್ಷಣ ಅಮಾನತುಗೊಳಿಸಲು ಆದೇಶ ಹೊರಡಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಶಾಲೆಯು ತನಿಖೆ ಪೂರ್ಣಗೊಳ್ಳುವವರೆಗೆ ಶಿಕ್ಷಕನನ್ನು ಅಮಾನತುಗೊಳಿಸಿದೆ. ಈ ಘಟನೆಯು ಶಾಲೆಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಹಲ್ಲೆಯ ಸಮಸ್ಯೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪೋಷಕರು ಮತ್ತು ಸಮಾಜದಲ್ಲಿ ತೀವ್ರ ಆಕ್ರೋಶವನ್ನು ಉಂಟುಮಾಡಿದೆ. ವಿದ್ಯಾರ್ಥಿಯ ತಂದೆ ‘ನನ್ನ ಮಗನ ಭವಿಷ್ಯಕ್ಕೆ ಧಕ್ಕೆ ಬಂದಿದೆ. ನ್ಯಾಯ ಸಿಗಬೇಕು’ ಎಂದು ಆಗ್ರಹಿಸಿದ್ದಾರೆ. ಪೊಲೀಸರು ತನಿಖೆಯನ್ನು ವೇಗವಾಗಿ ಮುಂದುವರಿಸುತ್ತಿದ್ದಾರೆ. ಈ ಘಟನೆ ಶಾಲೆಗಳಲ್ಲಿ ಶಿಕ್ಷಕರ ವರ್ತನೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ. ವಿದ್ಯಾರ್ಥಿಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ರಕ್ಷಿಸುವುದು ಅತ್ಯಗತ್ಯ ಎಂಬ ಸಂದೇಶವನ್ನು ಈ ಘಟನೆ ನೀಡುತ್ತಿದೆ.
Ahmedabad,Gujarat
Jun 30, 2026 12:11 PM IST













