ಬೆಂಗಳೂರಿನ ಮೆಟ್ರೋ ಯೆಲ್ಲೋ ಲೈನ್ ನಲ್ಲಿ ರೈಲುಗಳ ಸಂಖ್ಯೆ 15ಕ್ಕೆ ಹೆಚ್ಚಳ, ಆಗಸ್ಟ್ ರಿಂದ 8 ನಿಮಿಷಕ್ಕಿಂತ ಕಡಿಮೆ ಅಂತರದಲ್ಲಿ ಸಂಚಾರ, ಪ್ರಯಾಣಿಕರ ಕಾಯುವಿಕೆ ಕಡಿಮೆ ಆಗಲಿದೆ.
ಹಳದಿ ಮಾರ್ಗದ ರೈಲುಗಳು
ಬೆಂಗಳೂರಿನ (Bengaluru) ಟ್ರಾಫಿಕ್ (Traffic) ಕಿರಿಕಿರಿಯಿಂದ ಬೇಸತ್ತಿದ್ದ ನಮ್ಮ ಮೆಟ್ರೋ ಯೆಲ್ಲೋ ಲೈನ್ (Yellow Line) ಪ್ರಯಾಣಿಕರಿಗೆ ಬಿಎಂಆರ್‍ಸಿಎಲ್ ಭರ್ಜರಿ ಸಿಹಿಸುದ್ದಿ (Good News) ನೀಡಿದೆ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಮಂದಿಗೆ ಇನ್ನು ಮುಂದೆ ನಿಮಿಷಗಟ್ಟಲೇ ಕಾಯುವ ಅಗತ್ಯವಿರುವುದಿಲ್ಲ. ಮೆಟ್ರೋ ರೈಲುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಪ್ರಯಾಣಿಕರ ಕಾಯುವ ಸಮಯ ಗಣನೀಯವಾಗಿ ತಗ್ಗಲಿದೆ.
8 ನಿಮಿಷಕ್ಕೊಂದು ರೈಲು
ಯೆಲ್ಲೋ ಲೈನ್ ಆರಂಭದಲ್ಲಿ ಕೇವಲ 3 ರೈಲುಗಳು ಮಾತ್ರ ಇದ್ದವು. ಇದರಿಂದಾಗಿ ಒಂದು ರೈಲಿಗಾಗಿ ಪ್ರಯಾಣಿಕರು ಬರೋಬ್ಬರಿ 25 ನಿಮಿಷಗಳ ಕಾಲ ಕಾಯಬೇಕಾದ ಅನಿವಾರ್ಯತೆ ಇತ್ತು. ಆದರೆ, ಸದ್ಯ ನಿಗಮದ ಬಳಿ 13 ರೈಲುಗಳಿದ್ದು, ಅದರಲ್ಲಿ ಈಗಾಗಲೇ 10 ರೈಲುಗಳು ಹಳಿಗೆ ಇಳಿದಿವೆ. ಇದರ ಪರಿಣಾಮವಾಗಿ, ಪೀಕ್ ಅವರ್‍ನಲ್ಲಿ 8 ನಿಮಿಷಕ್ಕೆ ಹಾಗೂ ನಾನ್ ಪೀಕ್ ಅವರ್‍ನಲ್ಲಿ 10 ನಿಮಿಷಕ್ಕೊಂದರಂತೆ ಮೆಟ್ರೋ ಸೇವೆ ದೊರೆಯುತ್ತಿದೆ ಎಂದು ಟಿವಿ9 ವೆಬ್‍ಸೈಟ್ ವರದಿ ಮಾಡಿದೆ.
ಆಗಸ್ಟ್ ವೇಳೆಗೆ ಫುಲ್ ಆಕ್ಷನ್
BMRCL ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲು ಸಜ್ಜಾಗಿದೆ. ಈ ವಾರದಿಂದಲೇ 11ನೇ ರೈಲಿನ ಟೆಸ್ಟಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಈ ತಿಂಗಳಾಂತ್ಯಕ್ಕೆ 12 ಮತ್ತು 13ನೇ ರೈಲುಗಳ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ವಿಶೇಷವೆಂದರೆ, ಕೋಲ್ಕತ್ತಾದ ಟಿಟಾಗಢ್‍ನಿಂದ ಜೂನ್ ಅಂತ್ಯಕ್ಕೆ 14ನೇ ರೈಲು ಹಾಗೂ ಜುಲೈ ತಿಂಗಳಿನಲ್ಲಿ 15ನೇ ರೈಲು ಬೆಂಗಳೂರಿಗೆ ಆಗಮಿಸಲಿದೆ. ಆಗಸ್ಟ್ ವೇಳೆಗೆ ಎಲ್ಲಾ 15 ರೈಲುಗಳು ಕಾರ್ಯಾರಂಭ ಮಾಡಲಿದ್ದು, ಪ್ರಯಾಣಿಕರ ಪಾಲಿಗೆ ಇದು ಸುಗಮ ಸಂಚಾರದ ಹೊಸ ಭರವಸೆಯಾಗಿದೆ.
ಪರ್ಪಲ್-ಗ್ರೀನ್ ಲೈನ್ ಮಾದರಿಯಲ್ಲೇ ಯೆಲ್ಲೋ ಲೈನ್?
ನಗರದ ಪರ್ಪಲ್ ಮತ್ತು ಗ್ರೀನ್ ಲೈನ್‍ಗಳಲ್ಲಿ ಸದ್ಯ 3 ರಿಂದ 5 ನಿಮಿಷಕ್ಕೊಂದರಂತೆ ಮೆಟ್ರೋ ಸಂಚರಿಸುತ್ತಿದೆ. ಇದೇ ಮಾದರಿಯನ್ನು ಯೆಲ್ಲೋ ಲೈನ್‍ನಲ್ಲೂ ಜಾರಿಗೆ ತರಬೇಕು ಎಂಬುದು ನಾಗರಿಕರ ಬಹುದಿನದ ಒತ್ತಾಸೆಯಾಗಿದೆ. ಆಗಸ್ಟ್‍ನಿಂದ ಹೆಚ್ಚುವರಿ ರೈಲುಗಳು ಪೂರ್ಣ ಪ್ರಮಾಣದಲ್ಲಿ ರಸ್ತೆಗಿಳಿಯುವುದರಿಂದ, ಸಾರ್ವಜನಿಕರ ಈ ಬೇಡಿಕೆ ಈಡೇರಲಿದ್ದು, ನಿಗದಿತ ಸಮಯಕ್ಕೆ ಗಮ್ಯಸ್ಥಾನ ತಲುಪುವುದು ಇನ್ನು ಸುಲಭವಾಗಲಿದೆ.