Last Updated:
Japan ಪ್ರವಾಸದ ಕನಸುಕಂಡವರಿಗೆ ಬಿಗ್ ಶಾಕ್! ಟೂರ್ ಪ್ಲಾನ್ ಮಾಡಿದವರು ಓದಲೇಬೇಕಾದ ಸುದ್ದಿ; ವೀಸಾ ಬೆಲೆ 5 ಪಟ್ಟು ಹೆಚ್ಚಿಸಿದ ಭಾರತೀಯ ಪ್ರವಾಸಿಗರ ನೆಚ್ಚಿನ ಟೂರಿಂಗ್ ನೇಷನ್
ಟೋಕಿಯೊ (ಜಪಾನ್): ಚೆರ್ರಿ ಬ್ಲಾಸಮ್, ಬುಲೆಟ್ ಟ್ರೈನ್, ಸುಶಿ, ಟೋಕಿಯೋ ಟವರ್ (Tokyo Tower) ನೋಡೋ ಕನಸು (Dream) ಕಾಣ್ತಿದ್ದೀರಾ? ಹಾಗಾದ್ರೆ ನಿಮ್ಮ ಜಪಾನ್ ಟ್ರಿಪ್ (Japan Trip) ಬಜೆಟ್ಗೆ ಈಗಲೇ ಸ್ವಲ್ಪ ಹೆಚ್ಚು ಹಣ ಸೇರಿಸಿಕೊಳ್ಳಿ. ಯಾಕಂದ್ರೆ, ಮುಂದಿನ ತಿಂಗಳಿನಿಂದ ಜಪಾನ್ಗೆ (Japan) ಹೋಗೋದು ದುಬಾರಿ ಆಗಲಿದೆ.! ಆ ಕುರಿತ ವರದಿ ಇಲ್ಲಿದೆ.
ಹೌದು, ಜಪಾನ್ ದೇಶಕ್ಕೆ ಭೇಟಿ ನೀಡಲು ಬಯಸುವ ಅಂತರರಾಷ್ಟ್ರೀಯ ಪ್ರಯಾಣಿಕರು ಮತ್ತು ಪ್ರವಾಸೋದ್ಯಮ ಪ್ರಿಯರು ಇನ್ಮುಂದೆ ತಮ್ಮ ಪ್ರಯಾಣದ ಬಜೆಟ್ ಅನ್ನು ತುಸು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಯಾಕಂದ್ರೆ, ಜಪಾನ್ ಸರ್ಕಾರವು ವಿದೇಶಿ ಪ್ರಜೆಗಳಿಗೆ ನೀಡುವ ಪ್ರವೇಶ ವೀಸಾ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ನಿರ್ಧರಿಸಿದೆ.
ಸರಿಸುಮಾರು 48 ವರ್ಷಗಳ ಸುದೀರ್ಘ ಅವಧಿಯ ನಂತರ ಜಪಾನ್ ತನ್ನ ವೀಸಾ ನೀತಿ ಮತ್ತು ದರಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬದಲಾವಣೆಯನ್ನು ತರುತ್ತಿದೆ. ಹೊಸದಾಗಿ ಪರಿಷ್ಕರಿಸಲಾದ ಈ ವೀಸಾ ನಿಯಮಗಳು ಜುಲೈ 1, 2026 ರಿಂದ ಅಧಿಕೃತವಾಗಿ ಜಾರಿಗೆ ಬರಲಿವೆ ಎಂದು ಜಪಾನ್ ವಿದೇಶಾಂಗ ಸಚಿವಾಲಯ ತಿಳಿಸಿದೆ ಎಂದು ವರದಿಯಾಗಿದೆ.
ಹೊಸ ಬದಲಾವಣೆಗಳ ನಂತರ, ಜಪಾನ್ನ ಏಕ ಪ್ರವೇಶ ವೀಸಾ ಮತ್ತು ಮಲ್ಟಿಪಲ್ ಎಂಟ್ರಿ ವೀಸಾ ಎರಡೂ ಮೊದಲಿಗಿಂತ ಐದು ಪಟ್ಟು ಹೆಚ್ಚು ದುಬಾರಿಯಾಗಲಿವೆ. ಅದರಂತೆ, ಪ್ರಸ್ತುತ ಜಪಾನ್ನ ಏಕ ಪ್ರವೇಶ ವೀಸಾ ಶುಲ್ಕ 3,000 ಜಪಾನೀಸ್ ಯೆನ್ ಆಗಿದೆ.
ಹೊಸ ನಿಯಮದ ಪ್ರಕಾರ ಇದು ನೇರವಾಗಿ 15,000 ಯೆನ್ಗೆ ಏರಿಕೆಯಾಗಲಿದೆ. ಅಂದರೆ, ಭಾರತೀಯ ರೂಪಾಯಿಯಲ್ಲಿ ಇದರ ಮೌಲ್ಯ ಸುಮಾರು 8,700 ರಿಂದ 9,000 ರೂಪಾಯಿಗಳಷ್ಟಾಗಬಹುದು. ಇದರೊಂದಿಗೆ, ಉದ್ಯೋಗ, ವ್ಯಾಪಾರ ಅಥವಾ ಆಗಾಗಾ ಪ್ರಯಾಣಿಸುವವರಿಗಾಗಿ ನೀಡಲಾಗುವ ಮಲ್ಟಿಪಲ್ ಎಂಟ್ರಿ ವೀಸಾ ಶುಲ್ಕವು ಪ್ರಸ್ತುತ ಇರುವ 6,000 ಯೆನ್ಗಳಿಂದ ಸರಿಸುಮಾರು 30,000 ಯೆನ್ಗಳಿಗೆ ಹೆಚ್ಚಾಗಲಿದೆ. ಅಂದರೆ, ಇದು ಭಾರತೀಯ ರೂಪಾಯಿಗಳಲ್ಲಿ ಅಂದಾಜು 17,500 ರೂಪಾಯಿಗಳಿಗಿಂತಲೂ ಅಧಿಕವಾಗಲಿದೆ.
ಜಪಾನ್ ಸರ್ಕಾರವು 1978 ರ ನಂತರ ವೀಸಾ ಶುಲ್ಕದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಿರಲಿಲ್ಲ. ಆದರೆ, ಇತ್ತೀಚಿನ ಜಾಗತಿಕ ಹಣದುಬ್ಬರ, ಜಪಾನೀಸ್ ಯೆನ್ ಕರೆನ್ಸಿಯ ಮೌಲ್ಯದಲ್ಲಾಗಿರುವ ಕುಸಿತ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಸರಿದೂಗಿಸಲು ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ, ಜಪಾನ್ ತನ್ನ ವೀಸಾ ಮತ್ತು ವಾಸ್ತವ್ಯದ ದರಗಳನ್ನು ಅಮೆರಿಕ, ಬ್ರಿಟನ್ ಹಾಗೂ ಯುರೋಪ್ನಂತಹ ಇತರ ಮುಂದುವರಿದ G7 ದೇಶಗಳ ಶುಲ್ಕಕ್ಕೆ ಸಮನಾಗಿ ತರಲು ಬಯಸಿದೆ ಎನ್ನಲಾಗಿದೆ.
ಜಪಾನ್ ಕೇವಲ ಪ್ರವಾಸಿ ತಾಣಕ್ಕಿಂತಲೂ ಹೆಚ್ಚಿನದನ್ನು ನೀಡುತ್ತದೆ. ಅದರಂತೆ, ಟೋಕಿಯೊದ ರೋಮಾಂಚಕ ಬೀದಿಗಳಿಂದ ಹಿಡಿದು ಕ್ಯೋಟೋದ ಪ್ರಾಚೀನ ಕಾಲುದಾರಿಗಳವರೆಗೆ, ಪ್ರತಿಯೊಂದು ರೀತಿಯ ಪ್ರಯಾಣಿಕರಿಗೂ ವಿಶೇಷವಾದದ್ದೇನಾದರೂ ಇರುತ್ತದೆ. ಅದರೊಂದಿಗೆ, ಜಪಾನಿನ ಆಹಾರ, ತಂತ್ರಜ್ಞಾನ, ಸ್ವಚ್ಛತೆ ಮತ್ತು ನೈಸರ್ಗಿಕ ಸೌಂದರ್ಯವು ಅದನ್ನು ಇತರ ದೇಶಗಳಿಂದ ಪ್ರತ್ಯೇಕಿಸುತ್ತದೆ.













