Last Updated:
ಬೆಂಗಳೂರು ಬಾಡಿಗೆದಾರರು ಸಮಯಕ್ಕೆ ಪಾವತಿ, 40 ಸಾವಿರ ಸೆಕ್ಯೂರಿಟಿ ಇದ್ದರೂ ಮಾಲೀಕರ ಕಿರುಕುಳ, ಮನೆ ಖಾಲಿ ಮಾಡುವಂತೆ ಒತ್ತಾಯ, ಸೆಕ್ಯೂರಿಟಿ ಹಿಂತಿರುಗಿಸಿಕೊಳ್ಳಲು ಲೀಗಲ್ ನೋಟಿಸ್ ಬಗ್ಗೆ ಏನು ಮಾಡ್ಬೇಕು?
ಐಟಿ ಹಬ್ ಬೆಂಗಳೂರಿನಲ್ಲಿ (Bengaluru) ಮನೆಗಳ ಬಾಡಿಗೆ ಮೊತ್ತ ಆಕಾಶವನ್ನು ಮುಟ್ಟುತ್ತಿದೆ. ಭಾರೀ ಪ್ರಮಾಣದಲ್ಲಿ ಬಾಡಿಗೆ ಜಾಸ್ತಿ ಆಗುತ್ತಿರುವುದು ಮಾತ್ರವಲ್ಲದೆ, ಲಕ್ಷಗಳಲ್ಲಿ ಸೆಕ್ಯೂರಿಟಿ ಡೆಪಾಸಿಟ್ ವಸೂಲಿ (Security Deposit) ಮಾಡುವುದು ಬಹುತೇಕ ಮಾಲೀಕರಿಗೆ ಸಾಮಾನ್ಯವಾಗಿದೆ. ಆದರೆ ಸಮಯಕ್ಕೆ ಸರಿಯಾಗಿ ಬಾಡಿಗೆ ಹಣ ಪಾವತಿ ಮಾಡುತ್ತಿದ್ದರೂ ಕೆಲ ಮಾಲೀಕರು ಬೇಕು (Owner and Tenant) ಅಂತಲೇ ಬಾಡಿಗೆದಾರರಿಗೆ ಕಿರಿಕಿರಿ ಮಾಡುವಂತಹ ಪ್ರಕರಣಗಳು ಸಾಕಷ್ಟು ವರದಿಯಾಗುತ್ತವೆ. ಇಂತಹದ್ದೇ ಘಟನೆಯೊಂದರ ಬಗ್ಗೆ ಬಾಡಿಗೆದಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದು, ಮಾಲೀಕರು ಬೇಕು ಅಂತಲೇ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಿರುಕುಳಕ್ಕೆ ಒಳಗಾದ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ವಿವರಗಳ ಅನ್ವಯ, ಆತ ಕಳೆದ 9 ತಿಂಗಳಿನಿಂದ 14 ಸಾವಿರ ರೂಪಾಯಿ ಬಾಡಿಗೆ ಪಾವತಿ ಮಾಡುತ್ತಿದ್ದಾರೆ. 40 ಸಾವಿರ ರೂಪಾಯಿ ಸೆಕ್ಯೂರಿಟಿ ಡೆಪಾಸಿಟ್ ಮಾಡಿದ್ದಾರೆ. ಒಂಬತ್ತು ತಿಂಗಳಿನಲ್ಲಿ ಒಂದು ಬಾರಿಗೂ ಬಾಡಿಗೆ ಪಾವತಿ ಮಾಡೋದು ಕಡಿಮೆಯಾಗಿಲ್ಲವಂತೆ. ಆದರೆ ಕಳೆದ ಕೆಲ ದಿನಗಳಿಂದ ಮನೆಯ ಮಾಲೀಕ ಕಿರಿಕಿರಿ ಶುರು ಮಾಡಿದ್ದರಂತೆ. ಇದರಿಂದ ಬೇಸತ್ತ ಆತ ಬೇರೆ ಮನೆ ಹುಡುಕಾಟ ಮಾಡಲು ಶುರು ಮಾಡಿದ್ದರಂತೆ, ಇದರ ನಡುವೆ ಜಗಳ ನಡೆದು ಮನೆ ಖಾಲಿ ಮಾಡುವಂತೆ ಮಾಲೀಕ ಮೆಸೇಜ್ ಮಾಡಿದ್ದನಂತೆ.
ಆದ್ದರಿಂದ ಕಾನೂನು ಸಲಹೆ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಈ ಬೆಂಗಳೂರು ನಿವಾಸಿ, ಮಾಲೀಕರೇ ಮನೆ ಖಾಲಿ ಮಾಡುವಂತೆ ಮೆಸೇಜ್ ಮಾಡಿರುವುದರಿಂದ ಸೆಕ್ಯೂರಿಟಿ ಹಣದಲ್ಲಿ ಒಂದು ತಿಂಗಳ ಬಾಡಿಗೆ ಕಟ್ ಮಾಡಿಕೊಳ್ಳುವ ಹಕ್ಕು ಇದೆಯಾ? ಏಕೆಂದರೆ ನಾನು ಸ್ವಯಂ ಆಗಿ ಮನೆ ಖಾಲಿ ಮಾಡುತ್ತಿಲ್ಲ. ಮಾಲೀಕರ ಒತ್ತಾಯದ ಮೇರೆಗೆ ಖಾಲಿ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿ ಮಾಡಿರುವ ದಾಖಲೆ, ಮಾಲೀಕರು ಗಲಾಟೆ ಮಾಡಿದ ಬಗ್ಗೆಯೂ ಸಾಕ್ಷಿ ಇದೆ. ಈಗ ನಾನು ಪಾವತಿ ಮಾಡಿರುವ ಸೆಕ್ಯೂರಿಟಿ ಹಣವನ್ನು ಸಂಪೂರ್ಣವಾಗಿ ಪಡೆದುಕೊಳ್ಳಲು ಲೀಗಲ್ ನೋಟಿಸ್ ನೀಡಬಹುದಾ ಎಂದು ಸಲಹೆ ಕೇಳಿದ್ದಾರೆ.
ಈ ಪೋಸ್ಟ್ ಪ್ರತಿಕ್ರಿಯೆ ನೀಡಿರುವ ಹಲವರು, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮನೆ ಖಾಲಿ ಮಾಡುವ ಸಂದರ್ಭದಲ್ಲಿ ಒಂದು ತಿಂಗಳು ಬಾಡಿಗೆ ಹಣ, ವಿದ್ಯುತ್ ಬಿಲ್ ಚಾರ್ಜ್‌ಗಳ ಹೆಸರಿನಲ್ಲಿ 14 ಸಾವಿರ ರೂಪಾಯಿ ಕಟ್ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿ. ನೀವು ಅಗ್ರಿಮೆಂಟ್ ಮಾಡಿಕೊಳ್ಳುವಾಗ ಈ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
Bangalore [Bangalore],Bangalore,Karnataka
May 18, 2026 11:54 AM IST













