378 ರನ್ಗಳ ಗುರಿ ಬೆನ್ನಟ್ಟಿದ ಶ್ರೀಲಂಕಾ ನಿರೀಕ್ಷಿತ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇನ್ಫಾರ್ಮ್ ಬ್ಯಾಟರ್ಗಳಾದ ಆವಿಷ್ಕಾ ಫರ್ನಾಂಡೊ ಕೇವಲ 3 ರನ್ಗಳಿಸಿ ಯಶ್ ಠಾಕೂರ್ ಬೌಲಿಂಗ್ನಲ್ಲಿ ಗಾಯಕ್ವಾಡ್ಗೆ ಕ್ಯಾಚ್ ನೀಡಿ ಔಟ್ ಆದರು. ಮತ್ತೊಬ್ಬ ಓಪನರ್ ನಿರೋಷನ್ ಡಿಕ್ವೆಲ್ಲಾ 17 ಎಸೆತಗಳಲ್ಲಿ 21 ರನ್ಗಳಿಸಿ ಠಾಕೂರ್ಗೆ 2ನೇ ಬಲಿಯಾದರು. 3ನೇ ಕ್ರಮಾಂಕದಲ್ಲಿ ಬಂದ ನುವಾನಿಡು ಫರ್ನಾಂಡೊ 21 ಎಸೆತಗಳಲ್ಲಿ 21 ರನ್ಗಳಿಸಿ ಪವರ್ ಪ್ಲೇ ಮುಗಿಯುವುದರೊಳಗೆ ಪೆವಿಲಿಯನ್ ಸೇರಿಕೊಂಡರು.
ಈ ಹಂತದಲ್ಲಿ ಒಂದಾದ ಸದೀರ ಸಮರವಿಕ್ರಮ ಹಾಗೂ ನಾಯಕ ಸಹನ್ ಅಚಾನಗೆ 4ನೇ ವಿಕೆಟ್ಗೆ 53 ರನ್ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದರು. ಸಮರವಿಕ್ರಮ 44 ಎಸೆತಗಳಲ್ಲಿ 9 ಬೌಂಡರಿ 52 ರನ್ಗಳಿಸಿ ಅಶೋಕ್ ಶರ್ಮಾಗೆ ವಿಕೆಟ್ ಒಪ್ಪಿಸಿದರೆ, ಅಚಾನಗೆ 40 ಎಸೆತಗಳಲ್ಲಿ 38 ರನ್ಗಳಿಸಿ ತಿಲಕ್ ವರ್ಮಾ ಬೌಲಿಂಗ್ನಲ್ಲಿ ಔಟ್ ಆದರು. ರವಿಂದು ಫರ್ನಾಂಡೊ 19 ರನ್ಗಳಿಸಿ ವಿಪ್ರಜ್ಗೆ 2ನೇ ಬಲಿಯಾದರು.
ಶ್ರೀಲಂಕಾ ತಂಡ 177ಕ್ಕೆ 6 ವಿಕೆಟ್ ಕಳೆದುಕೊಂಡು ಹೀನಾಯವಾಗಿ ಸೋಲಬಹುದು ಎನ್ನುವ ಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ವನುಜಾ ಸಹನ್ ಹಾಗೂ ವಿಜಯಕಾಂತ್ 7ನೇ ವಿಕೆಟ್ಗೆ 77 ರನ್ ಸೇರಿಸಿ ತಂಡದ ಮೊತ್ತವನ್ನ 250ರ ಗಡಿ ದಾಟಿಸಿದರು. ಈ ಜೋಡಿಯನ್ನ ವಿಪ್ರಜ್ ಮುರಿದರು. ವನುಜಾ ಸಹನ್ 69 ಎಸೆತಗಳಲ್ಲಿ 66 ರನ್ಗಳಿಸಿ ಔಟ್ ಆದರು. ನಂತರ ಬಂದವರು ಹೆಚ್ಚು ಸಮಯ ನಿಲ್ಲಲಿಲ್ಲ. ವಿಜಯ್ ಕಾಂತ್ 39ಕ್ಕೆ ಔಟ್ ಆದರೆ, ಶಿರಾಜ್ 21, ದುಲಜ್ ಸಮುದಿತಾ 15 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
ಭಾರತದ ಪರ ಯಶ್ ಠಾಕೂರ್ 3, ವಿಪ್ರಜ್ ನಿಗಮ್ 3, ಅನುಕುಲ್ ರಾಯ್ 2, ಅಶೋಕ್ ಶರ್ಮಾ ಹಾಗೂ ತಿಲಕ್ ವರ್ಮಾ ತಲಾ 1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತದ ಪರ ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ ಆರ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ ಮೊದಲ ವಿಕೆಟ್ಗೆ 132 ರನ್ ಸೇರಿಸಿತು. ಟಿ20ಯಂತೆ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸಿ ಕೇವಲ 6 ರನ್ಗಳಿಂದ ಶತಕ ಮಿಸ್ ಮಾಡಿಕೊಂಡರು. ಅವರ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್ಗಳಿದ್ದವು. ವೈಭವ್ ಮೊಹಮ್ಮದ್ ಶಿರಾಜ್ ಎಸೆದ 3ನೇ ಓವರ್ನಲ್ಲೇ 26 ರನ್ ಗಳಿಸಿ ಕೇವಲ 11 ಎಸೆತಗಳಲ್ಲಿ ಅರ್ಧಶತಕ ತಲುಪುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು.
ಇವರಿಗೆ ಸಾಥ್ ಕೊಟ್ಟ ಪ್ರಿಯಾಂಶ್ 29 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 39 ರನ್ಗಳಿಸಿ ಔಟ್ ಆದರು. ಇವರಿಬ್ಬರ ವಿಕೆಟ್ ಪತನದ ನಂತರ ಭಾರತದ ರನ್ಗತಿಗೆ ಕಡಿವಾಣ ಬಿದ್ದಿತು. ಉಪನಾಯಕ ರುತುರಾಜ್ ಗಾಯಕ್ವಾಡ್ ಹಾಗೂ ತಿಲಕ್ ವರ್ಮಾ 3ನೇ ವಿಕೆಟ್ ಜೊತೆಯಾಟದಲ್ಲಿ 106 ಎಸೆತಗಳನ್ನಾಡಿ 84 ರನ್ ಸೇರಿಸಿದರು. ಗಾಯಕ್ವಾಡ್ 51 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 40 ರನ್ಗಳಿಸಿ ಔಟ್ ಆದರು. ನಂತರ ತಿಲಕ್ ವರ್ಮಾ ಹಾಗೂ ಕುಮಾರ್ ಕುಶಾಗ್ರ 4ನೇ ವಿಕೆಟ್ಗೆ 63 ರನ್ ಸೇರಿಸಿದರು. ಕುಶಾಗ್ರ 39 ಎಸೆತಗಳಲ್ಲಿ 36 ರನ್ಗಳಿಸಿ ಔಟ್ ಆದರು.
ತಿಲಕ್ ವರ್ಮಾ 90 ಎಸೆತಗಳನ್ನಾಡಿ 4 ಬೌಂಡರಿ, 1 ಸಿಕ್ಸರ್ ಸಹಿತ 67 ರನ್ಗಳಿಸಿ ಕುಶಾಗ್ರ ಔಟ್ ಆದ ಮುಂದಿನ ಓವರ್ನಲ್ಲೇ ಔಟ್ ಆದರು. ಆ ನಂತರ ಭಾರತ ತಂಡದಿಂದ ದೊಡ್ಡ ಜೊತೆಯಾಟ ಬರಲಿಲ್ಲ. ಬಂದ ಬ್ಯಾಟರ್ಗಳೆಲ್ಲಾ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಸೂರ್ಯಾಂಶ್ ಶೆಡ್ಗೆ 2, ನಿಶಾಂತ್ ಸಿಂಧು 16, ವಿಪ್ರಜ್ ನಿಗಮ್ 27, ಅನುಕುಲ್ ರಾಯ್ ಹಾಗೂ ಯಶ್ ಠಾಕೂರ್ ರನ್ಗಳಿಸಿದರು.
ಶ್ರೀಲಂಕಾ ಎ ಪರ ರವಿಂದು ಫರ್ನಾಂಡೊ 72ಕ್ಕೆ 2, ವನುಜಾ ಸಹಾನ್ 39ಕ್ಕೆ 2, ಕುಗುದಾಸ್ ಮಾತುಲನ್ 58ಕ್ಕೆ 1, ದುಲಜ್ ಸಮುದಿತಾ 41ಕ್ಕೆ 1, ಸಹಾನ್ ಅರಾಚಿಗೆ 35ಕ್ಕೆ 1, ಮೊಹಮ್ಮದ್ ಶಿರಾಜ್ 56ಕ್ಕೆ 1 ವಿಕೆಟ್ ಪಡೆದರು.












