ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ 2 ಅಕ್ಟೋಬರ್ ತಿಂಗಳಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಪ್ರಮುಖವಾದದ್ದು. ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಜನಿಕಾಂತ್ ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸನ್ ಪಿಕ್ಚರ್ಸ್ ಅಧಿಕೃತವಾಗಿ ಅಕ್ಟೋಬರ್ 15, 2026ರಂದು ಸಿನಿಮಾ ಚಿತ್ರಮಂದಿರಗಳಿಗೆ ಬರಲಿದೆ ಎಂದು ಖಚಿತಪಡಿಸಿದೆ.
ಜೈಲರ್ 2 ಸಿನಿಮಾದಲ್ಲಿ ದೊಡ್ಡ ತಾರಾಗಣವಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಮೊದಲ ಭಾಗದ ಯಶಸ್ಸಿನ ಹಿನ್ನೆಲೆಯಲ್ಲಿ ಎರಡನೇ ಭಾಗದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ಬೇಲ್ ಸಿನಿಮಾ ಕೂಡ ಅಕ್ಟೋಬರ್ ಆರಂಭದಲ್ಲೇ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಪವನ್ ಒಡೆಯರ್ ನಿರ್ದೇಶನದ ಈ ಆಕ್ಷನ್ ಡ್ರಾಮಾದಲ್ಲಿ ಶಿವರಾಜ್ಕುಮಾರ್ ಜೊತೆಗೆ ಸಂಜನಾ ಆನಂದ್, ದೀಕ್ಷಿತ್ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಸಾಯಿಕುಮಾರ್ ಮತ್ತು ಜಯರಾಮ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬೃಂದಾವಿಹಾರಿ ಕೂಡ ಅಕ್ಟೋಬರ್ನ ಪ್ರಮುಖ ಕನ್ನಡ ಸಿನಿಮಾಗಳಲ್ಲಿ ಒಂದಾಗಿದೆ. ಕೃಷ್ಣಂ ಪ್ರಣಯ ಸಖಿ ಸಿನಿಮಾದ ಯಶಸ್ಸಿನ ಬಳಿಕ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಮತ್ತೊಂದು ಚಿತ್ರ ಇದಾಗಿದೆ.
ಚಿತ್ರದಲ್ಲಿ ಗಣೇಶ್, ದೇವಿಕಾ ಭಟ್ ಮತ್ತು ಮಾಳವಿಕಾ ಶರ್ಮಾ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 16ರಂದು ಈ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ.
ಮಲಯಾಳಂ ನಟ ಫಹಾದ್ ಫಾಸಿಲ್ ಅಭಿನಯದ ಡೋಂಟ್ ಟ್ರಬಲ್ ದಿ ಟ್ರಬಲ್ ಕೂಡ ಅಕ್ಟೋಬರ್ ಆರಂಭದಲ್ಲೇ ತೆರೆಗೆ ಬರಲಿದೆ. ಶಶಾಂಕ್ ಯೆಲೇಟಿ ನಿರ್ದೇಶನದ ಈ ಫ್ಯಾಂಟಸಿ ಚಿತ್ರದಲ್ಲಿ ಫಹಾದ್ ಫಾಸಿಲ್ ಜೊತೆಗೆ ಸ್ಪಾರಾ ಪಲೇಕರ್, ಸೌರಭ್ ಸಚ್ದೇವ್ ಮತ್ತು ಮಹೇಶ್ ಮಂಜೇಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಕ್ಟೋಬರ್ 2ರಂದು ಬಿಡುಗಡೆಯಾಗಲಿರುವ ಈ ಸಿನಿಮಾ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರೇಕ್ಷಕರನ್ನು ತಲುಪಲಿದೆ.
ಸಂದೀಪ್ ಕಿಶನ್ ಅಭಿನಯದ ಸಿಗ್ಮಾ ಕೂಡ ಅಕ್ಟೋಬರ್ 2ರಂದು ಚಿತ್ರಮಂದಿರಕ್ಕೆ ಬರಲಿದೆ. ಜೇಸನ್ ಸಂಜಯ್ ನಿರ್ದೇಶನದ ಈ ಆಕ್ಷನ್ ಅಡ್ವೆಂಚರ್ ಸಿನಿಮಾದಲ್ಲಿ ಫರಿಯಾ ಅಬ್ದುಲ್ಲಾ, ಸಂಪತ್ ರಾಜ್, ಶಿವ ಪಂಡಿತ್, ರಾಜು ಸುಂದರಂ ಮತ್ತು ಯೋಗ್ ಜಾಪೀ ಸೇರಿದಂತೆ ಹಲವರು ನಟಿಸಿದ್ದಾರೆ.
ಸಿಗ್ಮಾ ಸಿನಿಮಾದ ಮೂಲಕ ಜೇಸನ್ ಸಂಜಯ್ ನಿರ್ದೇಶಕರಾಗಿ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಸಿನಿಮಾದ ಮೇಲೆ ತಮಿಳು ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ.
ನಿವಿನ್ ಪೌಲಿ, ಸೂರಿ ಮತ್ತು ಅಂಜಲಿ ಅಭಿನಯದ ಏಳು ಕಡಲ್ ಏಳು ಮಲೈ ಕೂಡ ಅಕ್ಟೋಬರ್ 1ರಂದು ಬಿಡುಗಡೆಯಾಗಲಿದೆ. ರಾಮ್ ನಿರ್ದೇಶನದ ಈ ಸಿನಿಮಾವನ್ನು ರೊಮ್ಯಾಂಟಿಕ್ ಸೈಕಲಾಜಿಕಲ್ ಥ್ರಿಲ್ಲರ್ ಎಂದು ವಿವರಿಸಲಾಗಿದೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಬಹುನಿರೀಕ್ಷಿತ ರಣಬಾಲಿ ಕೂಡ ಅಕ್ಟೋಬರ್ ತಿಂಗಳಿನ ಪ್ರಮುಖ ಸಿನಿಮಾಗಳಲ್ಲಿ ಒಂದಾಗಿದೆ. ರಾಹುಲ್ ಸಾಂಕೃತ್ಯನ್ ನಿರ್ದೇಶನದ ಈ ಎಪಿಕ್ ಪೀರಿಯಡ್ ಆಕ್ಷನ್ ಡ್ರಾಮಾ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಈಗಾಗಲೇ ಖಚಿತಪಡಿಸಿದೆ.
ಈ ಸಿನಿಮಾಗಳ ಹೊರತಾಗಿಯೂ ಅಕ್ಟೋಬರ್ನಲ್ಲಿ ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಹಲವು ಚಿತ್ರಗಳು ಬಿಡುಗಡೆಯಾಗಲು ಸಿದ್ಧವಾಗಿವೆ. ಹೀಗಾಗಿ ದಸರಾ ಹಾಗೂ ಹಬ್ಬದ ಸಮಯದಲ್ಲಿ ಸಿನಿಮಾ ಪ್ರೇಕ್ಷಕರಿಗೆ ಒಂದೇ ವಾರದಲ್ಲಿ ಹಲವು ಆಯ್ಕೆಗಳು ಸಿಗಲಿವೆ.













