Chaithra Kundapura: ಚೈತ್ರಾ ಕುಂದಾಪುರಗೆ ಬಿಗ್ ರಿಲೀಫ್! 9 ವರ್ಷಗಳ ಬಳಿಕ ನಿರ್ದೋಷಿ ಅಂತ ಕೋರ್ಟ್ ತೀರ್ಪು! ಏನಿದು ಕೇಸ್? | | ACTPnews

ಚೈತ್ರಾ ಕುಂದಾಪುರ


Last Updated:

ನ್ಯಾಯಾಲಯದ ತೀರ್ಪಿನ ಬಳಿಕ ಚೈತ್ರಾ ಕುಂದಾಪುರ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಕಳೆದ ಒಂಬತ್ತು ವರ್ಷಗಳ ಹೋರಾಟದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ
ಚೈತ್ರಾ ಕುಂದಾಪುರ

ಬಿಗ್ ಬಾಸ್ ಫೈರ್‌ಬ್ರ್ಯಾಂಡ್ ಚೈತ್ರಾ ಕುಂದಾಪುರ (Chaithra Kundapura) ಈಗ ಮತ್ತೊಂದು ಪ್ರಮುಖ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಈಗಾಗಲೇ ಫೈರ್‌ಬ್ರ್ಯಾಂಡ್‌ ಭಾಷಣಕಾರ್ತಿಯಾಗಿ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ ವಿರುದ್ಧ ಹಲವು ವರ್ಷಗಳ ಹಿಂದೆ ದಾಖಲಾಗಿದ್ದ ಪ್ರಕರಣಗಳ ವಿಚಾರಣೆ ಅಂತಿಮ ಹಂತ ತಲುಪಿದ್ದು, ನ್ಯಾಯಾಲಯವು ಅವರಿಗೆ ನಿರ್ದೋಷಿ ಎಂಬ ತೀರ್ಪು ನೀಡಿದೆ.

ನ್ಯಾಯಾಲಯದ ತೀರ್ಪಿನ ಬಳಿಕ ಚೈತ್ರಾ ಕುಂದಾಪುರ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಕಳೆದ ಒಂಬತ್ತು ವರ್ಷಗಳ ಹೋರಾಟದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಚೈತ್ರಾ ಕುಂದಾಪುರ ಪೋಸ್ಟ್‌ನಲ್ಲಿ ಏನಿದೆ?

9 ವರ್ಷಗಳ ಹೋರಾಟದ ಬಳಿಕ ನಿರ್ದೋಷಿ ಎಂಬ ಜಯ ಸಿಕ್ಕಿದೆ. ಏ ಆ ಹೆಣ್ಣುಮಗಳಿಗಿರುವ ಧೈರ್ಯ ನಮ್ಮೂರಲ್ಲಿ ಯಾವ ಗಂಡಸರಿಗೂ ಇಲ್ಲಾ ಬಿಡ್ ಲೇ ಅಂತಾ ಪ್ರಾರಂಭವಾದ ಹೋರಾಟವೊಂದು ಸುದೀರ್ಘ 9 ವರ್ಷಗಳ ಕಾನೂನು ಹೋರಾಟದೊಂದಿಗೆ ಇಂದು ತಾರ್ಕಿಕ ಅಂತ್ಯ ಕಂಡಿದೆ. ನನ್ನ ಸಾಮಾಜಿಕ ಬದುಕಿಗೆ ಶಕ್ತಿ ತುಂಬಿದ ಹನುಮ ಹುಟ್ಟಿದ ನಾಡು ಗಂಗಾವತಿಯ ಜೊತೆಗೆ ನನಗಿದ್ದ ಕೊನೆಯ ಬಂಧವೊಂದು ಖುಷಿ ಕೊಡುತ್ತಾ ಕಳಚಿಕೊಂಡಿದೆ.

9 ವರ್ಷಗಳು ಬರೋಬ್ಬರಿ 5 ಕೇಸುಗಳು.. ಹಾ ಇವೆಲ್ಲವೂ ಒಂದು ಚಿಂತನೆಗಾಗಿ, ಪಕ್ಷಕ್ಕಾಗಿ ಹಾಕಿಸಿಕೊಂಡದ್ದು.. ಕುಂದಾಪುರದಿಂದ ಕೊಪ್ಪಳಕ್ಕೆ ನಿರಂತರ ಓಡಾಟ… ರಾಜಕೀಯ ಪಿತೂರಿಗಳ ನಡುವೆ ಬದುಕು ಕಲಿಸಿದ ಸಂಗತಿಗಳು ಇವು.. ಲಕ್ಷಾಂತರ ಜನರ ಪ್ರೀತಿ ಅಭಿಮಾನ ಕೊಟ್ಟ ಹೋರಾಟವಿದು.

ನಂಬಿದ್ದವರೇ ನಮ್ಮನ್ನು ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಲಿಸಿದ ಹೋರಾಟವಿದು. ಈ ಸಂಚಿನಲ್ಲಿ ಭಾಗವಾದವರು ತಮ್ಮ ರಾಜಕೀಯ ಭವಿಷ್ಯವನ್ನೇ ಕಳೆದುಕೊಂಡು ಮೂಲೆ ಗುಂಪಾಗಿದ್ದು ನ್ಯಾಯಕ್ಕೆ ದೇವರು ಕೊಟ್ಟ ತೀರ್ಮಾನವಷ್ಟೇ. ಆದರೆ ಲಕ್ಷಾಂತರ ಜನರಿಂದ ವಯಸ್ಸಿನ ಹಂಗಿಲ್ಲ ನಾನು ಇಂದು “ಅಕ್ಕಾ ” ಎಂದು ಕರೆಸಿಕೊಳ್ಳುತ್ತಿದ್ದೇನೆ ಎಂದು ಚೈತ್ರಾ ಕುಂದಾಪುರ ಬರೆದುಕೊಂಡಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಈ ಪ್ರಕರಣದ ಮೂಲ 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದೆ. ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಮತ್ತು ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ನಡುವಿನ ಸ್ಪರ್ಧೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಚೈತ್ರಾ ಕುಂದಾಪುರ ಗಂಗಾವತಿಗೆ ತೆರಳಿದ್ದರು.

ಚುನಾವಣಾ ಪ್ರಚಾರದ ವೇಳೆ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ, ದ್ವೇಷ ಭಾಷಣ ಮಾಡಿದ್ದಾರೆ ಹಾಗೂ ಪ್ರತಿಸ್ಪರ್ಧಿಗಳ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು.

ನ್ಯಾಯಾಲಯದ ಮಹತ್ವದ ತೀರ್ಪು

ಈ ಪ್ರಕರಣಗಳ ವಿಚಾರಣೆಯನ್ನು ಗಂಗಾವತಿಯ ಜೆಎಂಎಫ್‌ಸಿ ನ್ಯಾಯಾಲಯ ನಡೆಸಿತ್ತು. ಸುದೀರ್ಘ ವಿಚಾರಣೆ ಬಳಿಕ ಆರೋಪಿಗಳ ವಿರುದ್ಧ ದಾಖಲಾಗಿದ್ದ ಆರೋಪಗಳನ್ನು ಸಾಬೀತುಪಡಿಸಲು ಸಮರ್ಪಕ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂಬ ನಿರ್ಣಯಕ್ಕೆ ನ್ಯಾಯಾಲಯ ಬಂದಿದೆ.

ಇದರ ಪರಿಣಾಮವಾಗಿ ಚೈತ್ರಾ ಕುಂದಾಪುರ ಸೇರಿದಂತೆ ಮೂವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ನ್ಯಾಯಾಲಯದ ಆದೇಶದ ಪ್ರಕಾರ, ಆರೋಪಿಗಳ ವಿರುದ್ಧ ಉಲ್ಲೇಖಿಸಲಾಗಿದ್ದ ಅಪರಾಧಗಳು ಸಾಬೀತಾಗಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಎಲ್ಲ ಆರೋಪಗಳಿಂದ ಅವರನ್ನು ಮುಕ್ತಗೊಳಿಸಿ ಬಿಡುಗಡೆ ಮಾಡುವಂತೆ ಆದೇಶ ನೀಡಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports