Last Updated:
Maharashtra: ಮಹಿಳಾ ಸಬಲೀಕರಣದ ಹೆಸರಲ್ಲಿ ಜಾರಿಯಾದ ಬಿಜೆಪಿ ಸರ್ಕಾರದ ‘ಮಾಝಿ ಲಡ್ಕಿ ಬಹಿನ್ ಯೋಜನೆ’ಯಲ್ಲಿ ಬೃಹತ್ ವಂಚನೆ ಬೆಳಕಿಗೆ ಬಂದಿದೆ. CAG ಆಡಿಟ್ ವರದಿ ಪ್ರಕಾರ 14,000ಕ್ಕೂ ಹೆಚ್ಚು ಪುರುಷರು ಮಹಿಳೆಯರ ಹೆಸರಲ್ಲಿ ಅರ್ಜಿ ಹಾಕಿ ತಿಂಗಳ ಹಣ ಲೂಟಿ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ…
ಮುಂಬೈ (ಮಹಾರಾಷ್ಟ್ರ): ಮಹಿಳಾ ಸಬಲೀಕರಣದ (Women Empowerment) ಹೆಸರಲ್ಲಿ ಜಾರಿಯಾದ ಬಿಜೆಪಿ ಸರ್ಕಾರದ (BJP Government) ‘ಮಾಝಿ ಲಡ್ಕಿ ಬಹಿನ್ ಯೋಜನೆ’ಯಲ್ಲಿ (Former Ladki Bahin Scheme) ಬೃಹತ್ ವಂಚನೆ ಬೆಳಕಿಗೆ ಬಂದಿದೆ. CAG ಆಡಿಟ್ ವರದಿ ಪ್ರಕಾರ 14,000ಕ್ಕೂ ಹೆಚ್ಚು ಪುರುಷರು ಮಹಿಳೆಯರ ಹೆಸರಲ್ಲಿ ಅರ್ಜಿ ಹಾಕಿ ತಿಂಗಳ ಹಣ ಲೂಟಿ ಮಾಡಿದ್ದಾರೆ. ಜೊತೆಗೆ ಹೆಚ್ಚಿನ ಆದಾಯ ಮತ್ತು ಸರ್ಕಾರಿ ಉದ್ಯೋಗ ಇರೋ ಲಕ್ಷಾಂತರ ಮಹಿಳೆಯರು ಕೂಡ ಅನರ್ಹವಾಗಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಹಾಗಾಗಿ, ರಾಜ್ಯ ಸರ್ಕಾರ (State Government) ಆ ಹಣವನ್ನ ಅವರಿಂದಲೇ ವಾಪಸ್ ಪಡೆಯೋಕೆ ಪ್ಲಾನ್ ಮಾಡಿದೆ! ಆ ಕುರಿತ ವರದಿ ಇಲ್ಲಿದೆ.
ಮಹಾರಾಷ್ಟ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಮತ್ತು ಬಡ ಕುಟುಂಬಗಳ ಮಹಿಳೆಯರಿಗೆ ನೆರವಾಗಲು ಪ್ರತಿ ತಿಂಗಳು 1,500 ರೂಪಾಯಿ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿತ್ತು. ಆದರೆ, ಇತ್ತೀಚೆಗೆ ನಡೆದ ಇ-ಕೆವೈಸಿ (e-KYC) ಕಡ್ಡಾಯ ಪ್ರಕ್ರಿಯೆ ಮತ್ತು ಆಡಿಟ್ ಪರಿಶೀಲನೆಯ ವೇಳೆ ತಂತ್ರಜ್ಞಾನದ ಲೋಪದೋಷಗಳನ್ನು ಬಳಸಿಕೊಂಡು ಭಾರಿ ವಂಚನೆ ನಡೆಸಿರುವುದು ಪತ್ತೆಯಾಗಿದೆ. ಆನ್ಲೈನ್ ನೋಂದಣಿ ವ್ಯವಸ್ಥೆಯನ್ನು ತಿರುಚಿ, ಸುಮಾರು 14,298 ಪುರುಷರು ಮಹಿಳೆಯರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 21.44 ಕೋಟಿ ರೂಪಾಯಿಗಳನ್ನು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ.
ಕೇವಲ ಪುರುಷರು ಮಾತ್ರವಲ್ಲದೆ, ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ ಸೌಲಭ್ಯ ಪಡೆಯುತ್ತಿದ್ದ 80 ಲಕ್ಷಕ್ಕೂ ಹೆಚ್ಚು ಅನರ್ಹ ಫಲಾನುಭವಿಗಳನ್ನು ಈ ತನಿಖೆಯ ಮೂಲಕ ಪತ್ತೆಹಚ್ಚಿ ಯೋಜನೆಯಿಂದ ಕೈಬಿಡಲಾಗಿದೆ.
- ಹೆಚ್ಚಿನ ಆದಾಯ ಹೊಂದಿರುವವರು: ವಾರ್ಷಿಕ 2.5 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವ ಹಾಗೂ ಆದಾಯ ತೆರಿಗೆ ಪಾವತಿಸುವ ಸುಮಾರು 12 ಲಕ್ಷ ಮಹಿಳೆಯರು ಈ ಪಟ್ಟಿಯಲ್ಲಿದ್ದರು.
- ಸರ್ಕಾರಿ ನೌಕರರು: ಐದು ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗ ಹೊಂದಿರುವ ಮಹಿಳೆಯರು ಕಾನೂನುಬಾಹಿರವಾಗಿ ಯೋಜನೆಯ ಲಾಭ ಪಡೆಯುತ್ತಿದ್ದರು.
- ಇತರ ಅನರ್ಹತೆಗಳು: ಸ್ವಂತ ಕಾರು (ನಾಲ್ಕು ಚಕ್ರದ ವಾಹನ) ಹೊಂದಿರುವ ಲಕ್ಷಾಂತರ ಶ್ರೀಮಂತ ಮಹಿಳೆಯರು ಮತ್ತು ವಯೋಮಿತಿ ಮೀರಿದವರನ್ನು ತನಿಖೆಯ ನಂತರ ಅನರ್ಹಗೊಳಿಸಲಾಗಿದೆ.
- ಈ ಮಹಾ ಪರಿಶೀಲನೆಯಿಂದಾಗಿ ಫಲಾನುಭವಿಗಳ ಸಂಖ್ಯೆ 2.4 ಕೋಟಿಯಿಂದ 1.7 ಕೋಟಿಗೆ ಇಳಿಕೆಯಾಗಿದೆ.
ಮುಂದುವರೆದು, ಈ ಬೃಹತ್ ವಂಚನೆ ಬೆಳಕಿಗೆ ಬಂದ ತಕ್ಷಣವೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕಟ್ಟುನಿಟ್ಟಿನ ಆದೇಶಗಳನ್ನು ಹೊರಡಿಸಿದ್ದಾರೆ. “ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಈ ಎಲ್ಲಾ 14,000ಕ್ಕೂ ಹೆಚ್ಚು ಪುರುಷರಿಂದ ಹಣದ ಪ್ರತಿ ಪೈಸೆಯನ್ನೂ ವಸೂಲಿ ಮಾಡಲಾಗುವುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಅಥವಾ ಅರಿವಿಲ್ಲದೆ ಹಣ ಪಡೆದ ಅನರ್ಹ ಮಹಿಳಾ ಫಲಾನುಭವಿಗಳಿಗೆ ಒಂದು ಬಾರಿಗೆ ವಿನಾಯಿತಿ ನೀಡಲಾಗುವುದು ಮತ್ತು ಅವರಿಂದ ಯಾವುದೇ ಹಣ ವಸೂಲಿ ಮಾಡುವುದಿಲ್ಲ ಎಂದು ಸರ್ಕಾರ ಅಭಯ ನೀಡಿದೆ.
ಏತನ್ಮಧ್ಯೆ, ಯೋಜನೆಯ ನಿಯಮಾವಳಿಗಳನ್ನು ಬಿಗಿಗೊಳಿಸುವ ಪ್ರಕ್ರಿಯೆಯಲ್ಲಿ ಹಾಗೂ ಕಟ್ಟುನಿಟ್ಟಿನ ಇ-ಕೆವೈಸಿ (e-KYC) ನಿಯಮಗಳಿಂದಾಗಿ ರಾಜ್ಯದ ಹಲವು ಅರ್ಹ ಮತ್ತು ನೈಜ ಬಡ ಮಹಿಳೆಯರು ಯೋಜನೆಯಿಂದ ಹೊರಗುಳಿದಿದ್ದಾರೆ. ಈ ಗೊಂದಲ ನಿವಾರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತಾಂತ್ರಿಕ ತೊಂದರೆಗಳಿಂದ ವಂಚಿತರಾದ ನಿಜವಾದ ಫಲಾನುಭವಿಗಳಿಗೆ ನ್ಯಾಯ ಒದಗಿಸಲು ಸರ್ಕಾರ ಶೀಘ್ರದಲ್ಲೇ ಇ-ಕೆವೈಸಿ ವಿಂಡೋವನ್ನು (e-KYC Window) ಮತ್ತೆ ತೆರೆಯಲಿದೆ. ಈ ಮೂಲಕ ಅರ್ಹ ಮಹಿಳೆಯರು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು ಯೋಜನೆಯ ಸೌಲಭ್ಯವನ್ನು ಸುಲಭವಾಗಿ ಪಡೆಯಬಹುದಾಗಿದೆ.
Mumbai,Maharashtra
Jun 04, 2026 10:21 PM IST













