Last Updated:
Supreme Court: ಸರ್ಕಾರಿ ಉದ್ಯೋಗಿ ಮೃತಪಟ್ಟರೆ ಕುಟುಂಬಕ್ಕೆ ಸಿಗೋ ಅನುಕಂಪದ ನೇಮಕಾತಿ ವಿಚಾರದಲ್ಲಿ ಮಹತ್ವದ ತೀರ್ಪು ಬಂದಿದೆ. “ವಿವಾಹಿತ ಮಗಳಿಗೆ ಅವಕಾಶ ಇಲ್ಲ” ಅಂತ ಅಲಹಾಬಾದ್ ಹೈಕೋರ್ಟ್ ಹೇಳಿದ್ದ ದೃಷ್ಟಿಕೋನವನ್ನ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಮದುವೆ ಆದ್ರೂ ಮಗಳು ಮಗಳೇ, ಅವಳ ಹಕ್ಕನ್ನ ಕಸಿಯುವಂತಿಲ್ಲ ಅಂತ ಸುಪ್ರೀಂ ಸ್ಪಷ್ಟಪಡಿಸಿದೆ. ಈ ತೀರ್ಪಿನಿಂದ ಸಾವಿರಾರು ವಿವಾಹಿತ ಹೆಣ್ಣುಮಕ್ಕಳಿಗೆ ಅನುಕಂಪದ ನೌಕರಿ ಬಾಗಿಲು ತೆರೆದಂತಾಗಿದೆ. ಲಿಂಗ ತಾರತಮ್ಯಕ್ಕೆ ಇಲ್ಲಿಂದ ಕೊನೆ ಅನ್ನೋ ಸಂದೇಶವೂ ಇದರಲ್ಲಿದೆ.
ನವದೆಹಲಿ: ಸರ್ಕಾರಿ ನೌಕರರೊಬ್ಬರು (Government Employee) ಸೇವೆಯಲ್ಲಿದ್ದಾಗ ಮರಣ ಹೊಂದಿದರೆ, ಅವರ ಕುಟುಂಬವು ಆರ್ಥಿಕವಾಗಿ ಬೀದಿಗೆ ಬೀಳಬಾರದು ಎಂಬ ಉದಾತ್ತ ಉದ್ದೇಶದಿಂದ ಭಾರತೀಯ ಕಾನೂನಿನಲ್ಲಿ (Indian Law) ‘ಅನುಕಂಪದ ಆಧಾರದ ನೇಮಕಾತಿ’ (Compassionate Appointment) ವ್ಯವಸ್ಥೆಯನ್ನು ತರಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ನೇಮಕಾತಿಗೆ (Appointment) ಸಂಬಂಧಿಸಿದಂತೆ ಹಲವಾರು ಗೊಂದಲಗಳು ಸೃಷ್ಟಿಯಾಗಿದ್ದವು. ಇಂತಹ ಗೊಂದಲಗಳಿಗೆ ತೆರೆ ಎಳೆದಿರುವ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court), ಅನುಕಂಪದ ಆಧಾರದ ನೇಮಕಾತಿಯ ವಿಚಾರದಲ್ಲಿ ಹೆಣ್ಮಕಳಿಗೆ ಗುಡ್ನ್ಯೂಸ್ ನೀಡಿದೆ. ಆ ಕುರಿತ ವರದಿ ಇಲ್ಲಿದೆ.
ಉತ್ತರ ಪ್ರದೇಶದ ಒಂದು ಹಳ್ಳಿಯ ವಿವಾಹಿತ ಮಹಿಳೆಯ ತಾಯಿ ನಡೆಸುತ್ತಿದ್ದ ನ್ಯಾಯಬೆಲೆ ಅಂಗಡಿಯ ಪರವಾನಗಿದಾರರಾಗಿದ್ದರು. ತಾಯಿಯ ನಿಧನದ ನಂತರ, ಅನುಕಂಪದ ಆಧಾರದ ಮೇಲೆ ಆ ರೇಷನ್ ಅಂಗಡಿಯ ಲೈಸೆನ್ಸ್ ಅನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಡಬೇಕು ಎಂದು ಆಕೆ ಸ್ಥಳೀಯ ಜಿಲ್ಲಾಡಳಿತ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದರು.
ಆದರೆ, ಉತ್ತರ ಪ್ರದೇಶ ಸರ್ಕಾರದ 2019ರ ನಿಯಮಗಳ ಪ್ರಕಾರ, ಸರ್ಕಾರಿ ನೌಕರರೊಬ್ಬರು ಸೇವೆಯಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬದ “ಅವಿವಾಹಿತ ಮಗಳು, ವಿಚ್ಛೇದಿತ ಮಗಳು ಅಥವಾ ವಿಧವೆ ಮಗಳಿಗೆ” ಮಾತ್ರ ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವ ಅವಕಾಶವಿತ್ತು. ಅದರಂತೆ, ಮದುವೆಯಾದ ಹೆಣ್ಣುಮಗಳನ್ನು ಕುಟುಂಬದ ಸದಸ್ಯೆ ಎಂದು ಪರಿಗಣಿಸುತ್ತಿರಲಿಲ್ಲ.

ಹಾಗಾಗಿ, ಆಕೆ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದರು. ಆದರೆ ಹೈಕೋರ್ಟ್ನ ಏಕಸದಸ್ಯ ಪೀಠವು ಈ ಹಿಂದಿನ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿ ಆಕೆಗೆ ನ್ಯಾಯ ನೀಡಲು ನಿರಾಕರಿಸಿತು. ಕೊನೆಗೆ ಆಕೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದರು. ಅದರಂತೆ, ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರನ್ನೊಳಗೊಂಡ ಪೀಠವು, ಮದುವೆಯಾದ ಕಾರಣಕ್ಕೆ ಮಗಳಿಗೆ ಕಲ್ಯಾಣ ಕ್ರಮಗಳನ್ನು ನಿರಾಕರಿಸುವುದು ಸಂವಿಧಾನ ವಿರೋಧಿ ಎಂದು ಸ್ಪಷ್ಟಪಡಿಸಿದೆ. ಈ ಆದೇಶದೊಂದಿಗೆ ದೇಶಾದ್ಯಂತ ಸರ್ಕಾರಿ ನೌಕರಿ ಮತ್ತು ನ್ಯಾಯಬೆಲೆ ಅಂಗಡಿ ಪರವಾನಗಿಗಳಲ್ಲಿ ವಿವಾಹಿತ ಹೆಣ್ಣುಮಕ್ಕಳ ಹಕ್ಕಿಗೆ ಕಾನೂನಾತ್ಮಕ ಮಾನ್ಯತೆ ಸಿಕ್ಕಿದೆ.
ಲೈವ್ ಲಾ ವರದಿ ಮಾಡಿರುವಂತೆ, ತೀರ್ಪು ಬರೆಯುವಾಗ ನ್ಯಾಯಮೂರ್ತಿ ಆರಾಧೆ ಅವರು, ಅನುಕಂಪದ ಹಂಚಿಕೆಯ ಮೂಲ ಉದ್ದೇಶ ಆರ್ಥಿಕ ಸಂಕಷ್ಟದಲ್ಲಿರುವ ಮೃತ ವ್ಯಕ್ತಿಯ ಕುಟುಂಬಕ್ಕೆ ತಕ್ಷಣದ ನೆರವು ನೀಡುವುದು ಎಂದು ವಿವರಿಸಿದ್ದಾರೆ. ಇದಕ್ಕೆ ಪರಿಗಣಿಸಬೇಕಾದ ಅಂಶಗಳು ಅವಲಂಬನೆ, ಆರ್ಥಿಕ ಅಗತ್ಯ, ನಿವಾಸ ಮತ್ತು ಜವಾಬ್ದಾರಿ ನಿರ್ವಹಿಸುವ ಸಾಮರ್ಥ್ಯ. ವೈವಾಹಿಕ ಸ್ಥಿತಿಗೆ ಇವುಗಳೊಂದಿಗೆ ಯಾವುದೇ ತಾರ್ಕಿಕ ಸಂಬಂಧವಿಲ್ಲ ಎಂದು ಹೇಳಿದ ಪೀಠ, “ಮದುವೆಯು ಮಗಳು ಮತ್ತು ಪೋಷಕರ ನಡುವಿನ ಬಾಂಧವ್ಯವನ್ನು ಅಳಿಸುವುದಿಲ್ಲ ಅಥವಾ ಅವಲಂಬನೆ ಇಲ್ಲ ಎಂದು ಊಹಿಸಲು ಅವಕಾಶ ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.
ಏತನ್ಮಧ್ಯೆ, ಈ ತೀರ್ಪಿನಿಂದ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಸೇವಾ ನಿಯಮಗಳು ಬದಲಾಗಬೇಕಾಗುತ್ತದೆ. ಇಲ್ಲಿಯವರೆಗೆ ವಿವಾಹಿತರು ಎಂಬ ಕಾರಣಕ್ಕೆ ತಿರಸ್ಕೃತಗೊಂಡ ಸಾವಿರಾರು ಅರ್ಜಿಗಳು ಮತ್ತೆ ಜೀವ ಪಡೆಯಲಿವೆ. ಸರ್ಕಾರಿ ಇಲಾಖೆಗಳು ಮೂರು ತಿಂಗಳೊಳಗೆ ತಮ್ಮ ಅನುಕಂಪದ ನೇಮಕಾತಿ ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡಿ ಹೊಸ ಆದೇಶ ಹೊರಡಿಸಬೇಕಾಗುತ್ತದೆ. ಇದರಿಂದ ಮಹಿಳಾ ಸಬಲೀಕರಣಕ್ಕೆ ಕಾನೂನಾತ್ಮಕ ಬಲ ಸಿಕ್ಕಂತಾಗಿದೆ.
Bangalore,Karnataka













