Last Updated:
ಫಿಂಚ್ ಪ್ರಕಾರ ಮುಂಬರುವ 2027ರ ವಿಶ್ವಕಪ್ನಲ್ಲಿ ಭಾರತ, ಇಂಗ್ಲೆಂಡ್, ಜಂಟಿ ಆತಿಥೇಯ ದೇಶವಾದ ದಕ್ಷಿಣ ಆಫ್ರಿಕಾ ಮತ್ತು ಆರು ಬಾರಿಯ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ತಲುಪಲಿವೆ.
ಆಸ್ಟ್ರೇಲಿಯಾ ತಂಡಕ್ಕೆ (Australia) 2021 ರಲ್ಲಿ ಟಿ-20 ವಿಶ್ವಕಪ್ ಗೆದ್ದುಕೊಟ್ಟ ಮಾಜಿ ನಾಯಕ ಆ್ಯರೋನ್ ಫಿಂಚ್ (Aron Finch), ಮುಂಬರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ (ODI World Cup 2027) ಟೂರ್ನಿಗೆ ತಮ್ಮ ಆರಂಭಿಕ ನಾಲ್ಕು ಸೆಮಿಫೈನಲಿಸ್ಟ್ ತಂಡಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮೆಗಾ ಟೂರ್ನಿ ಆರಂಭಕ್ಕೆ ಇನ್ನು ಸಾಕಷ್ಟು ಸಮಯ ಬಾಕಿ ಇದ್ದರೂ, ಫಿಂಚ್ ತಮ್ಮ ನೆಚ್ಚಿನ ಟಾಪ್-4 ತಂಡಗಳನ್ನು ಈಗಲೇ ಹೆಸರಿಸಿದ್ದಾರೆ.
ಆ್ಯರೋನ್ ಫಿಂಚ್ ಅವರ ಈ ಮುನ್ಸೂಚನೆಯಲ್ಲಿ ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಅವರು ಐಸಿಸಿ ಟೂರ್ನಿಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುವ ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ತಮ್ಮ ಲಿಸ್ಟ್ನಂದ ಕೈಬಿಟ್ಟಿದ್ದಾರೆ. ನ್ಯೂಜಿಲೆಂಡ್ ತಂಡವು 2015 ಮತ್ತು 2019 ರ ಏಕದಿನ ವಿಶ್ವಕಪ್ಗಳಲ್ಲಿ ಸತತವಾಗಿ ಫೈನಲ್ ತಲುಪಿದ್ದಲ್ಲದೆ, 2007, 2011 ಮತ್ತು ಕಳೆದ 2023ರ ವಿಶ್ವಕಪ್ನಲ್ಲೂ ಸೆಮಿಫೈನಲ್ ತಲುಪಿದ ಇತಿಹಾಸ ಹೊಂದಿದೆ. ಆದರೂ ಫಿಂಚ್ ಅವರಿಗೆ ತಮ್ಮ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಕಿವೀಸ್ ಪಡೆಯೊಂದಿಗೆ ಪಾಕಿಸ್ತಾನ ತಂಡವನ್ನೂ ಸಹ ಫಿಂಚ್ ಹೊರಗಿಟ್ಟಿದ್ದಾರೆ.
ಫಿಂಚ್ ಪ್ರಕಾರ ಮುಂಬರುವ 2027ರ ವಿಶ್ವಕಪ್ನಲ್ಲಿ ಭಾರತ, ಇಂಗ್ಲೆಂಡ್, ಜಂಟಿ ಆತಿಥೇಯ ದೇಶವಾದ ದಕ್ಷಿಣ ಆಫ್ರಿಕಾ ಮತ್ತು ಆರು ಬಾರಿಯ ಚಾಂಪಿಯನ್ಸ್ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ತಲುಪಲಿವೆ. ಈ ಟೂರ್ನಿಯು 2027ರ ಅಕ್ಟೋಬರ್ 2 ರಿಂದ ಅಧಿಕೃತವಾಗಿ ಆರಂಭಗೊಳ್ಳಲಿದ್ದು, ಫಿಂಚ್ ಹೆಸರಿಸಿರುವ ನಾಲ್ಕು ತಂಡಗಳ ಪೈಕಿ ಮೂರು ತಂಡಗಳು (ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ) 2023ರ ವಿಶ್ವಕಪ್ನಲ್ಲೂ ಕೊನೆಯ ನಾಲ್ಕರ ಘಟ್ಟ ತಲುಪಿದ್ದವು ಎಂಬುದು ಗಮನಾರ್ಹ.
ಇಂಗ್ಲೆಂಡ್ ತಂಡವನ್ನು ಆಯ್ಕೆ ಮಾಡಲು ಕಾರಣ ನೀಡಿರುವ ಫಿಂಚ್, “ಪ್ರಸ್ತುತ ಹ್ಯಾರಿ ಬ್ರೂಕ್ ನಾಯಕತ್ವದಲ್ಲಿ ಇಂಗ್ಲೆಂಡ್ ಆಡುತ್ತಿರುವ ಶೈಲಿ ಅದ್ಭುತವಾಗಿದೆ. ಮಧ್ಯಮ ಓವರ್ಗಳಲ್ಲಿ ಸ್ಪಿನ್ ಬೌಲಿಂಗ್ ಅನ್ನು ಅತ್ಯುತ್ತಮವಾಗಿ ಎದುರಿಸುವ ಸಾಮರ್ಥ್ಯ ಅವರ ಬ್ಯಾಟಿಂಗ್ ವಿಭಾಗಕ್ಕಿದೆ. ಜೊತೆಗೆ ಅವರು ಅತ್ಯಂತ ಆಕ್ರಮಣಕಾರಿ ಹಾಗೂ ಬೌಲರ್ಗಳನ್ನು ಧ್ವಂಸಗೊಳಿಸುವ ಆಟವಾಡುತ್ತಾರೆ. ಸದ್ಯದ ಕ್ರಿಕೆಟ್ ಜಗತ್ತಿನಲ್ಲಿ ಹ್ಯಾರಿ ಬ್ರೂಕ್ ಈ ಮಾದರಿಯ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು” ಎಂದು ಶ್ಲಾಘಿಸಿದ್ದಾರೆ.
ಮತ್ತೊಂದು ಸೆಮಿಫೈನಲಿಸ್ಟ್ ತಂಡವಾಗಿ ದಕ್ಷಿಣ ಆಫ್ರಿಕಾವನ್ನು ಆರಿಸಿರುವ ಅವರು, “ದಕ್ಷಿಣ ಆಫ್ರಿಕಾ ತಂಡಕ್ಕೆ ಅವರದ್ದೇ ತವರಿನ ಪರಿಸ್ಥಿತಿಗಳು (Home Conditions) ದೊಡ್ಡ ಪ್ಲಸ್ ಪಾಯಿಂಟ್ ಆಗಲಿವೆ. ಅವರ ತಂಡದ ಬೌಲಿಂಗ್ ವಿಭಾಗದಲ್ಲಿ ಅತ್ಯುತ್ತಮ ವೇಗಿಗಳು ಮತ್ತು ಗುಣಮಟ್ಟದ ಸ್ಪಿನ್ನರ್ಗಳಿದ್ದಾರೆ. ಇನ್ನು ಬ್ಯಾಟಿಂಗ್ನಲ್ಲಿ ಯುವ ಮತ್ತು ಅನುಭವಿ ಆಟಗಾರರ ಅದ್ಭುತ ಮಿಶ್ರಣವಿದ್ದು, ಮುಕ್ತವಾಗಿ ಬ್ಯಾಟ್ ಬೀಸುವ ಸ್ವಾತಂತ್ರ್ಯ ಅವರಿಗಿದೆ. ಹೀಗಾಗಿ ಅವರು ತವರಿನಲ್ಲಿ ಅತ್ಯಂತ ಅಪಾಯಕಾರಿ ತಂಡವಾಗಲಿದ್ದಾರೆ” ಎಂದಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಈ ವಿಶ್ವಕಪ್ನ ಮೊದಲ ಸುತ್ತಿನಲ್ಲಿ, ಅಕ್ಟೋಬರ್ 7 ರಂದು ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಇನ್ನು ಇಡೀ ವಿಶ್ವವೇ ಕಾತರದಿಂದ ಕಾಯುವ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಪಂದ್ಯವು ಅಕ್ಟೋಬರ್ 10 ರಂದು ಜೋಹಾನ್ಸ್ಬರ್ಗ್ನ ‘ದಿ ವಾಂಡರರ್ಸ್’ ಮೈದಾನದಲ್ಲಿ ನಿಗದಿಯಾಗಿದೆ. ವಿಶೇಷವೆಂದರೆ, ಇದೇ ವಾಂಡರರ್ಸ್ ಕ್ರೀಡಾಂಗಣವು ನವೆಂಬರ್ 21 ರಂದು ನಡೆಯಲಿರುವ ಈ ಮಹಾ ಟೂರ್ನಿಯ ಫೈನಲ್ ಪಂದ್ಯಕ್ಕೂ ಆತಿಥ್ಯ ವಹಿಸಲಿದೆ.














