Last Updated:
Congress MLA Video: 70 ವರ್ಷ ವಯಸ್ಸಿನ, ಕಾಂಗ್ರೆಸ್ ಹಿರಿಯ ಶಾಸಕರೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಅದನ್ನು ನೋಡಿದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರೆ, ಶಾಸಕರು ಮಾತ್ರ ಇದು ವಿರೋಧಿಗಳ ಷಡ್ಯಂತ್ರ ಅಂತ ಸಮಜಾಯಿಷಿ ನೀಡಿದ್ದಾರೆ.
ಹೈದರಾಬಾದ್: ತೆಲಂಗಾಣದ (Telangana) 70 ವರ್ಷ ವಯಸ್ಸಿನ, ಕಾಂಗ್ರೆಸ್ ಹಿರಿಯ ಶಾಸಕರೊಬ್ಬರ (senior Congress MLA) ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ (Viral Vedio) ಆಗಿದೆ. ಅದನ್ನು ನೋಡಿದ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರೆ, ಶಾಸಕರು ಮಾತ್ರ ಇದು ವಿರೋಧಿಗಳ ಷಡ್ಯಂತ್ರ ಅಂತ ಸಮಜಾಯಿಷಿ ನೀಡಿದ್ದಾರೆ. ತೆಲಂಗಾಣದ ಇಬ್ರಾಹಿಂಪಟ್ನಂ ಕ್ಷೇತ್ರದ (Ibrahimpatnam) ಕಾಂಗ್ರೆಸ್ ಶಾಸಕ ಮಲ್‌ರೆಡ್ಡಿ ರಂಗಾ ರೆಡ್ಡಿ (Malreddy Ranga Reddy) ಎಂಬುವರು ಚಲಿಸುತ್ತಿರುವ ಆರ್‌ಟಿಸಿ ಬಸ್ಸಿನಲ್ಲಿ (RTS) ವಿದ್ಯಾರ್ಥಿನಿಯ ಕೈ ಹಿಡಿದು ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸದ್ಯ ತೆಲಂಗಾಣ ರಾಜಕೀಯದಲ್ಲಿ (Telangana Politics) ಭಾರೀ ವಿವಾದಕ್ಕೆ ಕಾರಣವಾಗಿದೆ.
ಹೈದ್ರಾಬಾದ್‌ನ ಬೊಂಗುಲೂರು ಔಟರ್ ರಿಂಗ್ ರೋಡ್ ಬಳಿ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸಿಗೆ ಏರಿದ ಶಾಸಕ ಮಲ್ರೆಡ್ಡಿ ರಂಗಾರೆಡ್ಡಿ, ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುವ ಮಹಾಲಕ್ಷ್ಮಿ ಯೋಜನೆಯ ಅನುಷ್ಠಾನವನ್ನು ಪರಿಶೀಲಿಸುವ ಸಲುವಾಗಿ ಪ್ರಯಾಣಿಕರೊಂದಿಗೆ ಮಾತನಾಡುತ್ತಿದ್ದರು ಎಂದು ವರದಿಯಾಗಿದೆ.
ಈ ಸಂದರ್ಭದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಈ ಯೋಜನೆಯಿಂದ ತಮಗೆ ವಾರ್ಷಿಕ ಸುಮಾರು 45 ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಕೊಂಚ ದೂರದಲ್ಲಿದ್ದ ವಿದ್ಯಾರ್ಥಿನಿಯನ್ನು ಶಾಸಕರು ಹತ್ತಿರಕ್ಕೆ ಹಿಡಿದು, ಕೈಹಿಡಿದು ನಿಂತಿದ್ದಾರೆ. ನಡುನಡುವೆ ಸೊಂಟದತ್ತ ಕೈ ಹಾಕಲು ಯತ್ನಿಸುತ್ತಿರೋದು ಕಂಡು ಬಂದಿದೆ.
ವೈರಲ್ ಆಗಿರುವ 27 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಶಾಸಕರು ಸಂಭಾಷಣೆಯ ಉದ್ದಕ್ಕೂ ವಿದ್ಯಾರ್ಥಿನಿಯ ಕೈ ಹಿಡಿದುಕೊಂಡಿರುವ ದೃಶ್ಯ ಕಾಣುತ್ತದೆ. ಇಬ್ರಾಹಿಂಪಟ್ನಂ ಪ್ರದೇಶ ಕಾಲೇಜುಗಳ ಕೇಂದ್ರವಾಗಿರುವುದರಿಂದ ಉಚಿತ ಬಸ್ ಯೋಜನೆಯ ಬಳಕೆ ಹೆಚ್ಚಾಗಿದೆ ಎಂದು ಶಾಸಕರು ಹೇಳಿದ್ದಾರೆ. 70 ವರ್ಷ ವಯಸ್ಸಿನ ಶಾಸಕರ ಈ ನಡವಳಿಕೆ ಅನುಚಿತವೆಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಒಳಗಾಗಿದೆ.
Congress MLA Malreddy Ranga Reddy appears to put his hand around a young woman’s waist even as she visibly pulls away.
And this is the party that lectures the country on “Smash Patriarchy”?The hypocrisy is staggering.
When will Congress apply its slogans to its own leaders? https://t.co/nFIe5iPt8E— Arun Yadav (@BeingArun28) October 7, 2026
ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಆರೋಪಗಳಿಗೆ ಶಾಸಕ ಮಲ್ರೆಡ್ಡಿ ರಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ವಿರೋಧ ಪಕ್ಷವಾದ ಬಿಆರ್‌ಎಸ್ ಈ ವೀಡಿಯೊವನ್ನು ತಯಾರಿಸಿ ವೈರಲ್ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಚಲಿಸುತ್ತಿರುವ ಬಸ್ಸಿನಲ್ಲಿ ನಡೆದ ಘಟನೆಯನ್ನು ಸಂಪೂರ್ಣವಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಮಹಿಳೆಯರ ಬಗ್ಗೆ ತಮಗೆ ಅಪಾರ ಗೌರವವಿದೆ; ಬಸ್ಸಿನಲ್ಲಿದ್ದ ಯುವತಿಯರು ತಮ್ಮ ಮಕ್ಕಳಂತೆ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳು ಸಮೀಪಕ್ಕೆ ಬಂದಾಗ ತಮ್ಮ ಮಕ್ಕಳೊಂದಿಗೆ ಮಾತನಾಡುವಂತೆಯೇ ಪ್ರೀತಿಯಿಂದ ಮಾತನಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಜಂಕ್ಷನ್‌ನಲ್ಲಿ ಬಸ್ಸು ತಿರುಗುವಾಗ ಚಿತ್ರೀಕರಿಸಿದ ದೃಶ್ಯವನ್ನು ಆಧರಿಸಿ ಬಿಆರ್‌ಎಸ್ ನಾಯಕರು ದಾರಿತಪ್ಪಿಸುವ ಪೋಸ್ಟ್‌ಗಳನ್ನು ಹರಡಿದ್ದಾರೆ ಎಂದೂ ಆರೋಪಿಸಿದ್ದಾರೆ. ಕುಟುಂಬದ ಮಹಿಳೆಯರಂತೆಯೇ ಎಲ್ಲ ಮಹಿಳೆಯರನ್ನು ಗೌರವಿಸುತ್ತೇನೆ ಎಂದು ಹೇಳಿದ ಅವರು, ಬಿಆರ್‌ಎಸ್ ನಾಯಕರ ನಡವಳಿಕೆಯನ್ನು ಸಾರ್ವಜನಿಕರು ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನು ಬಿಆರ್‌ಎಸ್ ಪ್ರಧಾನ ಕಾರ್ಯದರ್ಶಿ ಆರ್ ಎಸ್ ಪ್ರವೀಣ್ ಕುಮಾರ್ ಮಾತನಾಡಿ, ರಾಜ್ಯದ ಎಸ್‌ಎಚ್‌ಇ ತಂಡಗಳು ಮತ್ತು ಮಹಿಳಾ ಸುರಕ್ಷಾ ವಿಭಾಗ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಆರ್‌ಟಿಸಿ ಕಂಡಕ್ಟರ್‌ನಿಂದ ದೂರು ಪಡೆದು ಮಹಿಳೆಯ ಸಭ್ಯತೆಗೆ ಧಕ್ಕೆ ತರುವ 354ನೇ ಸೆಕ್ಷನ್ ಅಡಿ ಪ್ರಕರಣ ದಾಖಲಿಸಬೇಕು ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.














