ತಮ್ಮ ಕನಸಿನ ಕೂಸು ವಂತಾರದ ಹೊಸ ಯೋಜನೆಯಾದ ‘ಚಾಂಪಿಯನ್ಸ್ ಆಫ್ ಕೇರ್’ ಅನ್ನು ವಿಶ್ವ ಪ್ರಾಣಿ ದಿನದಂದು ಅನಂತ್ ಅಂಬಾನಿ ಅವರು ಘೋಷಿಸಿದರು. ಪ್ರಾಣಿಗಳ ಸಮುದಾಯದ ಕಲ್ಯಾಣವನ್ನು ಪ್ರಾಯೋಗಿಕ ಮತ್ತು ಶಾಶ್ವತ ಪರಿಹಾರಗಳ ಮೂಲಕ ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿದು ಬಂದಿದೆ.
ಈ ನೂತನ ‘ಚಾಂಪಿಯನ್ಸ್ ಆಫ್ ಕೇರ್’ ಯೋಜನೆಯಲ್ಲಿ ದೇಶಾದ್ಯಂತ 50ಕ್ಕೂ ಹೆಚ್ಚು ಪ್ರಾಣಿ ಕಲ್ಯಾಣ ಸಂಸ್ಥೆಗಳು ಭಾಗವಹಿಸಿವೆ. ಇವು ನಾಯಿ, ಬೆಕ್ಕು ಮತ್ತು ದೊಡ್ಡ ಪ್ರಾಣಿಗಳ ಆರೈಕೆ ಮಾಡುತ್ತವೆ. ಪಶು ಆಸ್ಪತ್ರೆ ಸೇವೆ, ಮೊಬೈಲ್ ರಕ್ಷಣೆ ಹಾಗೂ ಪಶುವೈದ್ಯಕೀಯ ಸೇವೆ, ಮತ್ತು ದೀರ್ಘಾವಧಿ ಆರೈಕೆಯನ್ನೂ ಒದಗಿಸುತ್ತವೆ.
ಬೀದಿಯಲ್ಲಿ ವಾಸಿಸುವ ನಾಯಿ-ಬೆಕ್ಕುಗಳು, ಬೀಡಾಡಿ ದನಗಳು, ಕತ್ತೆ, ಕುದುರೆಗಳು, ಗಾಯ, ದಾರಿಯಲ್ಲಿ ಬಿಟ್ಟ ಅಥವಾ ನಿರ್ಲಕ್ಷ್ಯದ ನಂತರ ರಕ್ಷಿಸಲಾದ ಪ್ರಾಣಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಇವುಗಳಿಗೆ ಚಿಕಿತ್ಸೆ, ಆಶ್ರಯ, ಆಹಾರ ಮತ್ತು ದೀರ್ಘಾವಧಿ ಬೆಂಬಲ ಬೇಕಾಗುತ್ತದೆ. ಸಮುದಾಯದ ನಾಯಿ-ಬೆಕ್ಕುಗಳಿಗೆ ಜನನ ನಿಯಂತ್ರಣ ಕಾರ್ಯಕ್ರಮ ಸೇರಿದಂತೆ ಜವಾಬ್ದಾರಿಯುತ ಸಂಖ್ಯೆ ನಿರ್ವಹಣೆಯೂ ಅಗತ್ಯ ಎಂದು ಯೋಜನೆಯ ಉದ್ದೇಶವಾಗಿದೆ.
ದೇಶದಲ್ಲಿ ಪ್ರಾಣಿ ಕಲ್ಯಾಣವನ್ನು ಉತ್ತೇಜಿಸುವ ಶಾಸನಬದ್ಧ ಸಲಹಾ ಸಂಸ್ಥೆಯಾದ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ (AWBI)ಯ ಎಂಟು ಸದಸ್ಯರು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಹೊಸ ಯೋಜನೆಯ ಮೂಲಕ ಪಶು ವೈದ್ಯಕೀಯ ಆರೈಕೆ, ರಕ್ಷಣೆ, ಆಶ್ರಯ, ಆಹಾರ ಮತ್ತು ದೀರ್ಘಾವಧಿ ಆರೈಕೆಯ ಮೂಲಕ ಪ್ರತಿ ವರ್ಷ ದೇಶಾದ್ಯಂತ ಸುಮಾರು 20 ಲಕ್ಷ ಪ್ರಾಣಿಗಳಿಗೆ ತಲುಪಿ ಬೆಂಬಲ ನೀಡಬಹುದು ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಅನಂತ್ ಎಂ. ಅಂಬಾನಿ ಅವರು, ‘ಪ್ರತಿದಿನ ಸೀಮಿತ ಸಂಪನ್ಮೂಲ ಮತ್ತು ಕಡಿಮೆ ಮನ್ನಣೆಯ ನಡುವೆಯೂ ಅಗತ್ಯವಿರುವ ಪ್ರಾಣಿಗಳನ್ನು ಮೌನವಾಗಿ ನೋಡಿಕೊಳ್ಳುವವರು ಅಸಂಖ್ಯಾತರಿದ್ದಾರೆ. ಅವರ ಕೆಲಸ ನಮಗೆ ಕರುಣೆಗೆ ಎಲ್ಲೆ ಇಲ್ಲ ಎಂದು ನೆನಪಿಸುತ್ತದೆ. ಚಾಂಪಿಯನ್ಸ್ ಆಫ್ ಕೇರ್ ಮೂಲಕ ಈ ಕೆಲಸದ ಜೊತೆ ನಿಲ್ಲಲು, ಸಮುದಾಯ ಪ್ರಾಣಿಗಳಿಗೆ ಲಭ್ಯವಿರುವ ಆರೈಕೆಯನ್ನು ಬಲಪಡಿಸಲು ಮತ್ತು ಹೆಚ್ಚು ಕರುಣಾಮಯ ಭಾರತವನ್ನು ಕಟ್ಟಲು ಸಹಾಯ ಮಾಡಲು ನಾವು ಉದ್ದೇಶಿಸಿದ್ದೇವೆ, ನಮಗೆ ‘ಪ್ರತಿ ಜೀವವೂ ಮುಖ್ಯ’ ಎಂದು ಹೇಳಿದ್ದಾರೆ.
AWBIಯ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ಸದಸ್ಯ ಎಸ್. ಪಿ. ಗುಪ್ತಾ ಅವರು, ‘ಚಾಂಪಿಯನ್ಸ್ ಆಫ್ ಕೇರ್ ಅನ್ನು ಜೀವಂತಗೊಳಿಸಿದ ಅನಂತ್ ಅಂಬಾನಿ ಅವರ ದೂರದೃಷ್ಟಿ ಮತ್ತು ನಾಯಕತ್ವವನ್ನು ನಾನು ಮೆಚ್ಚುತ್ತೇನೆ. ಜಗತ್ತಿನಾದ್ಯಂತ ಪ್ರಯಾಣಿಸಿದ್ದೇನೆ, ಆದರೆ ಪ್ರಾಣಿಗಳಿಗೆ ಇಂತಹ ಮುಂದುವರಿದ ಸೌಲಭ್ಯ ಮತ್ತು ತಂತ್ರಜ್ಞಾನ ಲಭ್ಯವಿರುವ ಆರೈಕೆ ಕೇಂದ್ರವನ್ನು ವಿರಳವಾಗಿ ನೋಡಿದ್ದೇನೆ. ಸಂಸ್ಥೆಗಳ ಮಾತು ಕೇಳಿ, ತಳಮಟ್ಟದ ಸವಾಲುಗಳನ್ನು ಅರ್ಥಮಾಡಿಕೊಂಡು ಪ್ರಾಯೋಗಿಕ ಪರಿಹಾರ ನೀಡಲು ಅವರು ವೈಯಕ್ತಿಕವಾಗಿ ಪ್ರಯತ್ನಿಸಿದ್ದು ನನ್ನನ್ನು ಹೆಚ್ಚು ಮುಟ್ಟಿತು. ಈ ಸಂಸ್ಥೆಗಳನ್ನು ಒಟ್ಟುಗೂಡಿಸುವ ಮೂಲಕ ಅವರ ಸಮರ್ಪಣೆಯನ್ನು ಗುರುತಿಸುವುದರ ಜೊತೆಗೆ, ಪ್ರಾಣಿಗಳನ್ನು ನೋಡಿಕೊಳ್ಳುವ ಅವರ ಸಾಮೂಹಿಕ ಸಾಮರ್ಥ್ಯವನ್ನೂ ಬಲಪಡಿಸುತ್ತಿದ್ದಾರೆ’ ಎಂದು ಹೇಳಿದರು.
ವಂತಾರದಲ್ಲಿ ನಡೆದ ಎರಡು ದಿನಗಳ ಸಭೆ ಕೇವಲ ಔಪಚಾರಿಕ ಸಭೆಗಿಂತ ಮಿಗಿಲಾಗಿತ್ತು. ಮೊದಲ ದಿನ ಪ್ರತಿನಿಧಿಗಳು ವಂತಾರವನ್ನು ನೇರವಾಗಿ ವೀಕ್ಷಿಸಿದರು. ರಕ್ಷಿಸಲ್ಪಟ್ಟ ಆನೆಗಳು ಹಾಗೂ ಸಿಂಹ, ಹುಲಿ, ಚಿರತೆ ಸೇರಿದಂತೆ ದೊಡ್ಡ ಪ್ರಾಣಿಗಳ ಆರೈಕೆ ಸೌಲಭ್ಯಗಳನ್ನು, ಮತ್ತು ಕಾಡೆಮ್ಮೆ, ಜೀಬ್ರಾ ಹಾಗೂ ವಿವಿಧ ಜಿಂಕೆ ಪ್ರಭೇದಗಳು ಮುಕ್ತವಾಗಿ ಅಲೆಯುವ ನೈಸರ್ಗಿಕ ವಾತಾವರಣವನ್ನು ಅವರು ವೀಕ್ಷಿಸಿದರು. ಪೋಷಣೆ, ಚಿಕಿತ್ಸೆ, ವಸತಿ, ಚಟುವಟಿಕೆ ಮತ್ತು ಜೀವಮಾನದ ಆರೈಕೆ ಹೇಗೆ ಒಟ್ಟಾಗಿ ಪ್ರಾಣಿ ಯೋಗಕ್ಷೇಮಕ್ಕೆ ಕೆಲಸ ಮಾಡುತ್ತವೆ ಎಂಬುದನ್ನು ನೋಡುವ ಅವಕಾಶ ಸಿಕ್ಕಿತು. ಇದೇ ತತ್ವಗಳಲ್ಲಿ ಹಲವು ಸಂಸ್ಥೆಗಳು ಪ್ರಾಣಿಗಳ ಆರೈಕೆಗೂ ಅನ್ವಯಿಸುತ್ತವೆ.
ಈ ಸಭೆಯ ಪ್ರಮುಖ ಹೆಜ್ಜೆ ಎಂದರೆ ವಂತಾರ ಮತ್ತು ಭಾಗವಹಿಸಿದ ಎಲ್ಲ ಪ್ರಾಣಿ ಕಲ್ಯಾಣ ಸಂಸ್ಥೆಗಳ ನಡುವೆ ತಿಳಿವಳಿಕೆ ಪತ್ರಕ್ಕೆ (Letter of Understanding) ಸಹಿ ಹಾಕಿದ್ದು. ಸಮುದಾಯ ಪ್ರಾಣಿ ಕಲ್ಯಾಣವನ್ನು ಬಲಪಡಿಸಲು ಜೊತೆಯಾಗಿ ಕೆಲಸ ಮಾಡುವ ಬದ್ಧತೆಯನ್ನು ಇದು ಔಪಚಾರಿಕಗೊಳಿಸಿದೆ. ಜ್ಞಾನ ಹಂಚಿಕೆ, ಸಾಮರ್ಥ್ಯ ನಿರ್ಮಾಣ ಮತ್ತು ಪ್ರಾಯೋಗಿಕ ಬೆಂಬಲಕ್ಕೆ ಚೌಕಟ್ಟನ್ನು ಒದಗಿಸುತ್ತದೆ. ನೆಲಮಟ್ಟದ ಅಗತ್ಯಗಳಿಗೆ ತಕ್ಕಂತೆ ಪರಿಹಾರಗಳ ಮೇಲೆ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಲು ಇದು ಅವಕಾಶ ಮಾಡಿಕೊಡುತ್ತದೆ.













