Last Updated:
ಅಕ್ಟೋಬರ್ 1ರಂದು ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು 124 ರನ್‌ಗಳಿಂದ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟರೆ, ಪಾಕಿಸ್ತಾನ ಕೂಡ ಮತ್ತೊಂದು ಸೆಮಿಫೈನಲ್ ಗೆದ್ದು ಚಿನ್ನದ ಪದಕಕ್ಕಾಗಿ ಭಾರತದೊಂದಿಗೆ ಮಹಾ ಹಣಾಹಣಿಗೆ ಸಜ್ಜಾಗಿದೆ.
ಜಪಾನ್‌ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ (Asian Games 2026) ಪುರುಷರ ಕ್ರಿಕೆಟ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಭರ್ಜರಿಯಾಗಿ ಫೈನಲ್ ತಲುಪಿವೆ. ಅಕ್ಟೋಬರ್ 1ರಂದು ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡ ಶ್ರೀಲಂಕಾವನ್ನು 124 ರನ್‌ಗಳಿಂದ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟರೆ, ಪಾಕಿಸ್ತಾನ ಕೂಡ ಮತ್ತೊಂದು ಸೆಮಿಫೈನಲ್ ಗೆದ್ದು ಚಿನ್ನದ ಪದಕಕ್ಕಾಗಿ ಭಾರತದೊಂದಿಗೆ ಮಹಾ ಹಣಾಹಣಿಗೆ ಸಜ್ಜಾಗಿದೆ. ಆದರೆ, ಕ್ರೀಡಾಭಿಮಾನಿಗಳಲ್ಲಿ ಈಗ ದೊಡ್ಡದೊಂದು ಪ್ರಶ್ನೆ ಮೂಡಿದೆ. ಒಂದು ವೇಳೆ ಅಕ್ಟೋಬರ್ 3 ರಂದು (ಶನಿವಾರ) ನಡೆಯಲಿರುವ ಈ ಹೈ-ವೋಲ್ಟೇಜ್ ಮಹಾ ಫೈನಲ್ ಪಂದ್ಯಕ್ಕೆ ಮಳೆ ಬಂದು, ಪಂದ್ಯ ಸಂಪೂರ್ಣವಾಗಿ ರದ್ದಾದರೆ ಚಿನ್ನದ ಪದಕವನ್ನು ಯಾರಿಗೆ ನೀಡಲಾಗುತ್ತದೆ? ರನ್ನರ್ ಅಪ್ ಆಗುವ ತಂಡಕ್ಕೆ ಸಿಲ್ವರ್ ಮೆಡಲ್ ಸಿಗುತ್ತಾ? ಈ ಬಾರಿ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿ ಮಾಡಿರುವ ಹೊಸ ನಿಯಮಗಳು ಏನು ಹೇಳುತ್ತವೆ? ಎಂಬ ಸಂಪೂರ್ಣ ವಿವರ ಇಲ್ಲಿದೆ.
ಏಷ್ಯನ್ ಗೇಮ್ಸ್ ಆಯೋಜನಾ ಸಮಿತಿಯು ಅಧಿಕೃತವಾಗಿ ಸ್ಪಷ್ಟಪಡಿಸಿರುವ ಪ್ರಕಾರ, ಒಂದು ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತ ಕಾಣದೆ ಅಥವಾ ಕನಿಷ್ಠ ಓವರ್‌ಗಳ ಆಟ ನಡೆಯದೆ ರದ್ದಾದರೆ, ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಿ, ಎರಡೂ ತಂಡಗಳಿಗೂ ಚಿನ್ನದ ಪದಕ ನೀಡಲಾಗುತ್ತದೆ. ಇದರರ್ಥ ಈ ಬಾರಿ ಕ್ರಿಕೆಟ್‌ನಲ್ಲಿ ಯಾರೂ ಕೂಡ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಿಲ್ಲ.
ಸಾಮಾನ್ಯವಾಗಿ ಐಸಿಸಿ (ICC) ನಡೆಸುವ ವಿಶ್ವಕಪ್‌ನಂತಹ ಟೂರ್ನಿಗಳ ಫೈನಲ್ ಪಂದ್ಯಕ್ಕೆ ಮಳೆಯ ಮುನ್ಸೂಚನೆ ಇದ್ದರೆ ‘ರಿಸರ್ವ್ ಡೇ’ ಇಡಲಾಗುತ್ತದೆ. ಆದರೆ ಏಷ್ಯನ್ ಗೇಮ್ಸ್‌ನ ಬಿಡುವಿಲ್ಲದ ಕ್ರೀಡಾ ವೇಳಾಪಟ್ಟಿಯಿಂದಾಗಿ ಪುರುಷರ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಯಾವುದೇ ರಿಸರ್ವ್ ಡೇ ಇಟ್ಟಿರುವುದಿಲ್ಲ ಎಂದು ಸಂಘಟನಾ ಸಮಿತಿ ತಿಳಿಸಿದೆ. ಹೀಗಾಗಿ ನಿಗದಿತ ದಿನದಂದೇ ಫಲಿತಾಂಶ ಬಾರದಿದ್ದರೆ ಪಂದ್ಯ ರದ್ದಾಗಲಿದೆ.
ಕಳೆದ 2023ರ ಚೀನಾದ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಫೈನಲ್ ಪಂದ್ಯವು ಮಳೆಯಿಂದ ರದ್ದಾಗಿತ್ತು. ಆಗ ಜಾರಿಯಲ್ಲಿದ್ದ ನಿಯಮದ ಪ್ರಕಾರ, ಐಸಿಸಿ ಟಿ20 ಶ್ರೇಯಾಂಕದಲ್ಲಿ (ICC Seeding) ಉತ್ತಮ ಸ್ಥಾನದಲ್ಲಿದ್ದ ಕಾರಣಕ್ಕಾಗಿ ಭಾರತಕ್ಕೆ ನೇರವಾಗಿ ಗೋಲ್ಡ್ ಮೆಡಲ್ ನೀಡಿ, ಅಫ್ಘಾನಿಸ್ತಾನಕ್ಕೆ ಸಿಲ್ವರ್ ಮೆಡಲ್ ನೀಡಲಾಗಿತ್ತು. ಆದರೆ ಈ ಬಾರಿ ಆ ನಿಯಮವನ್ನು ಸಂಪೂರ್ಣವಾಗಿ ಕೈಬಿಡಲಾಗಿದ್ದು, ರ್ಯಾಂಕಿಂಗ್ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸುವುದಿಲ್ಲ ಎಂದು ಸಮಿತಿ ಹೇಳಿದೆ. ಆ ರೀತಿ ಮಾಡಿದರೆ, ಮತ್ತೊಂದು ಫೈನಲಿಸ್ಟ್ ತಂಡಕ್ಕೆ ಅನ್ಯಾಯವಾಗುತ್ತದೆ ಎಂದು ಸಮಿತಿ ನಂಬಿದೆ.
ಪಂದ್ಯ ಒಂದು ಎಸೆತ ಕಾಣದೆ ರದ್ದಾದರೆ ಯಾವುದೇ ಸೂಪರ್ ಓವರ್ (Super Over) ಇರುವುದಿಲ್ಲ. ಸೂಪರ್ ಓವರ್ ನಡೆಯಬೇಕಾದರೆ ಕನಿಷ್ಠ ತಲಾ 5 ಓವರ್‌ಗಳ ಮುಖ್ಯ ಪಂದ್ಯ ನಡೆದು ಸ್ಕೋರ್ ಸಮಬಲ (Tie) ಆಗಿರಬೇಕು. ಮಳೆಯಿಂದಾಗಿ ಪಂದ್ಯವೇ ಆರಂಭವಾಗದಿದ್ದರೆ ಅಥವಾ ಫಲಿತಾಂಶ ಸಿಗದಿದ್ದರೆ ಸೂಪರ್ ಓವರ್ ನಡೆಸುವುದಿಲ್ಲ.
ಪಂದ್ಯದ ಫಲಿತಾಂಶ ಅಧಿಕೃತಗೊಳ್ಳಬೇಕಾದರೆ ಎರಡೂ ತಂಡಗಳು ಕನಿಷ್ಠ ತಲಾ 5 ಓವರ್‌ಗಳನ್ನಾದರೂ ಆಡಿರಬೇಕು. ಉದಾಹರಣೆಗೆ ಭಾರತ ಮೊದಲು ಬ್ಯಾಟಿಂಗ್ ಮಾಡಿ ಮುಗಿಸಿದ ನಂತರ, ಪಾಕಿಸ್ತಾನ ತಂಡದ ಚೇಸಿಂಗ್ ವೇಳೆ ಕನಿಷ್ಠ 5 ಓವರ್ ಬೌಲಿಂಗ್ ಆಗುವ ಮುನ್ನವೇ ಮಳೆ ಬಂದು ಪಂದ್ಯ ನಿಂತರೆ ಅದು ‘ನೋ ರಿಸಲ್ಟ್’ ಆಗಿ ಜಂಟಿ ಗೋಲ್ಡ್ ಸಿಗಲಿದೆ. ಒಂದು ವೇಳೆ ಪಾಕಿಸ್ತಾನ 5 ಓವರ್ ಆಡಿದ ನಂತರ ಮಳೆ ಬಂದರೆ, ಆಗ ಡಿಎಲ್‌ಎಸ್ (DLS) ಪಾರ್ ಸ್ಕೋರ್ ಆಧಾರದ ಮೇಲೆ ಮುನ್ನಡೆ ಕಾಯ್ದುಕೊಂಡ ತಂಡಕ್ಕೆ ಚಿನ್ನದ ಪದಕ ಸಿಗಲಿದೆ.
ಕೇವಲ ಫೈನಲ್ ಮಾತ್ರವಲ್ಲದೆ, ಮೂರನೇ ಸ್ಥಾನಕ್ಕಾಗಿ ನಡೆಯುವ ಕಂಚಿನ ಪದಕ ಪಂದ್ಯವೂ ಮಳೆಯಿಂದ ರದ್ದಾದರೆ, ಸ್ಪರ್ಧಿಸುವ ಎರಡೂ ತಂಡಗಳಿಗೂ ಜಂಟಿ ಬ್ರಾಂಜ್ ಮೆಡಲ್ ನೀಡಲಾಗುತ್ತದೆ ಎಂದು ಸಂಘಟನಾ ಸಮಿತಿ ತಿಳಿಸಿದೆ.
ಹೀಗಾಗಿ, ಅಕ್ಟೋಬರ್ 3ರ ಶನಿವಾರದ ಮಹಾ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೂ ಭಾರತೀಯ ಕ್ರೀಡಾ ಪ್ರೇಮಿಗಳು ಆತಂಕಪಡುವ ಅಗತ್ಯವಿಲ್ಲ. ಪಂದ್ಯ ನಡೆದರೆ ಭಾರತ ಗೆದ್ದು ಚಿನ್ನದ ಪದಕ ಪಡೆಯುವ ಅವಕಾಶವಿದ್ದರೆ, ಪಂದ್ಯ ರದ್ದಾದರೂ ಭಾರತದ ಕೊರಳಿಗೆ ಗೋಲ್ಡ್ ಮೆಡಲ್ ಬೀಳುವುದು ಗ್ಯಾರಂಟಿಯಾಗಿದೆ.














