Last Updated:
ಕೇವಲ 19ನೇ ವಯಸ್ಸಿನಲ್ಲಿ 2009ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ಆರಂಭದಲ್ಲಿ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದ ಇವರು, ನಂತರದ ದಿನಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಬಲಗೈ ಆಫ್ ಸ್ಪಿನ್ ಬೌಲಿಂಗ್ ಮೂಲಕ ತಂಡದ ಪ್ರಮುಖ ಆಲ್ ರೌಂಡರ್ ಆಗಿ ಗುರುತಿಸಿಕೊಂಡರು.
ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಪದ್ಮಶ್ರೀ’ (Padma Shri) ಪುರಸ್ಕಾರಕ್ಕೆ ಪಾತ್ರರಾಗುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಸೋಮವಾರ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುರ್ಮು( ಅವರಿಂದ ವಿಶ್ವಕಪ್ ವಿಜೇತೆ ಹರ್ಮನ್‌ಪ್ರೀತ್ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಈ ವರ್ಷದ ಪದ್ಮ ಪ್ರಶಸ್ತಿಗಳನ್ನ ಸ್ವೀಕರಿಸಿದ 2ನೇ ಕ್ರಿಕೆಟರ್ ಕೌರ್. ಇದಕ್ಕೂ ಮುನ್ನ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಪದ್ಮಶ್ರೀ ಸ್ವೀಕರಿಸಿದ್ದರು.
ಭಾರತೀಯ ಕ್ರೀಡೆಗಳಿಗೆ, ವಿಶೇಷವಾಗಿ ಮಹಿಳಾ ಕ್ರಿಕೆಟ್‌ಗೆ ಹರ್ಮನ್‌ಪ್ರೀತ್ ಕೌರ್ ನೀಡಿದ ಅಸಾಧಾರಣ ಸೇವೆಗಳನ್ನು ಗುರುತಿಸಿ ಕೇಂದ್ರ ಸರ್ಕಾರ 2026ರ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿತ್ತು. ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುವಾಗ, ಹರ್ಮನ್‌ಪ್ರೀತ್ ಅವರ ಮುಖದಲ್ಲಿ ದೇಶಭಕ್ತಿ ಮತ್ತು ಹೆಮ್ಮೆ ತುಂಬಿ ತುಳುಕುತಿತ್ತು. ಮೈದಾನದಲ್ಲಿ ಅನೇಕ ಕಠಿಣ ಸವಾಲುಗಳನ್ನು ಎದುರಿಸಿ ತಂಡವನ್ನು ಮುನ್ನಡೆಸಿದ ಸರಳ ಪಂಜಾಬಿ ಹುಡುಗಿ ಇಂದು ಅನೇಕ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ಸಮಾರಂಭದಲ್ಲಿ ಕ್ರೀಡಾ ವ್ಯಕ್ತಿಗಳು ಹಾಗೂ ಅನೇಕ ರಾಜಕೀಯ ವಿಶ್ಲೇಷಕರು ಭಾಗವಹಿಸಿದ್ದರು.
ಹರ್ಮನ್‌ಪ್ರೀತ್ ಕೌರ್ 8 ಮಾರ್ಚ್ 1989 ರಂದು ಪಂಜಾಬ್‌ನ ‘ಮೊಗಾ’ ಎಂಬಲ್ಲಿ ಜನಿಸಿದರು. ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದ ಕೌರ್ ಆರಂಭದಲ್ಲಿ ಕ್ರಿಕೆಟ್ ಆಡಲು ಸರಿಯಾದ ಸೌಲಭ್ಯಗಳಿಲ್ಲದ ಕಾರಣ, ಹರ್ಮನ್‌ಪ್ರೀತ್ ಹಳ್ಳಿಯ ಹುಡುಗರೊಂದಿಗೆ ಸೇರಿ ಕ್ರಿಕೆಟ್ ಆಡುತ್ತಾ ತಮ್ಮ ಬ್ಯಾಟಿಂಗ್ ಶಕ್ತಿಯನ್ನು ಹೆಚ್ಚಿಸಿಕೊಂಡರು. ಇವರ ತಂದೆ ಹರ್ಮಂದರ್ ಸಿಂಗ್ ಭುಲ್ಲರ್ ಅವರು ಮಗಳ ಕ್ರಿಕೆಟ್ ಆಸಕ್ತಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಇವರ ಆಟದ ವೇಗ ಮತ್ತು ಉತ್ಸಾಹವನ್ನು ಗಮನಿಸಿದ ತರಬೇತುದಾರ ಕಮಲೇಶ್ ಸಿಂಗ್ ಸೋಧಿ ಅವರು ಇವರಿಗೆ ವೃತ್ತಿಪರ ತರಬೇತಿ ಹಾಗೂ ಶಾಲಾ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡಿ ಪ್ರೋತ್ಸಾಹಿಸಿದರು.
ಕೇವಲ 19ನೇ ವಯಸ್ಸಿನಲ್ಲಿ 2009ರ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟರು. ಆರಂಭದಲ್ಲಿ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದ ಇವರು, ನಂತರದ ದಿನಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಬಲಗೈ ಆಫ್ ಸ್ಪಿನ್ ಬೌಲಿಂಗ್ ಮೂಲಕ ತಂಡದ ಪ್ರಮುಖ ಆಲ್ ರೌಂಡರ್ ಆಗಿ ಗುರುತಿಸಿಕೊಂಡರು.
ಹರ್ಮನ್‌ಪ್ರೀತ್ ಕೌರ್ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಎಂದರೆ 2017 ರ ಮಹಿಳಾ ಏಕದಿನ ವಿಶ್ವಕಪ್. ಆಸ್ಟ್ರೇಲಿಯಾ ವಿರುದ್ಧದ ಅವರ ಅಜೇಯ 171 ರನ್‌ಗಳ ಇನ್ನಿಂಗ್ಸ್ ಭಾರತೀಯ ಮಹಿಳಾ ಕ್ರಿಕೆಟ್‌ನ ದಿಕ್ಕನ್ನು ಬದಲಾಯಿಸಿತು. ಆ ಒಂದೇ ಇನ್ನಿಂಗ್ಸ್ ಇಡೀ ದೇಶದಲ್ಲಿ ಮಹಿಳಾ ಕ್ರಿಕೆಟ್‌ಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು. ಸಣ್ಣ ಹಳ್ಳಿಗಳಲ್ಲೂ ತಮ್ಮ ಹೆಣ್ಣುಮಕ್ಕಳನ್ನ ಕ್ರೀಡೆಯಲ್ಲಿ ತೊಡಗಿಸಲು ಆ ಕೆಚ್ಚೆದೆಯ ಆಟ ಸಾಕ್ಷಿಯಾಯಿತು ಎಂದರೆ ತಪ್ಪಾಗಲಾರದು.
2017ರ ವಿಶ್ವಕಪ್ ಬಳಿಕ ಕೌರ್ ಭಾರತ ತಂಡದ ನಾಯಕಿಯಾಗಿ ಬಡ್ತಿ ಪಡೆದರು. ಪ್ರಸ್ತುತ ಮೂರು ಸ್ವರೂಪಗಳಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿರುವ ಹರ್ಮನ್‌ಪ್ರೀತ್, ತಮ್ಮ ಆಕ್ರಮಣಕಾರಿ ಸ್ವಭಾವದಿಂದ ತಂಡವನ್ನು ಅನೇಕ ಐತಿಹಾಸಿಕ ವಿಜಯಗಳತ್ತ ಕೊಂಡೊಯ್ದಿದ್ದಾರೆ. ಏಷ್ಯಾ ಕಪ್ ಗೆಲ್ಲುವಲ್ಲಿ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವಲ್ಲಿ ಅವರ ಪಾತ್ರ ಅಪಾರ. ಕೌರ್ ಕೇವಲ ಬ್ಯಾಟ್ಸ್‌ಮನ್ ಮಾತ್ರವಲ್ಲ, ಮೈದಾನದಲ್ಲಿ ಒತ್ತಡವನ್ನು ನಿಭಾಯಿಸುವ ಮತ್ತು ತಂಡವನ್ನು ಮುನ್ನಡೆಸಬಲ್ಲ ತಂತ್ರಜ್ಞರಾಗಿ ವಿಶ್ವ ಕ್ರಿಕೆಟ್‌ನ ಅತ್ಯುತ್ತಮ ನಾಯಕಿಯರಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ಈಗ ಅವರು ಪಡೆದಿರುವ ಪದ್ಮಶ್ರೀ ಅವರ ಕಠಿಣ ಪರಿಶ್ರಮಕ್ಕೆ ನಿಜವಾದ ಪ್ರತಿಫಲವಾಗಿದೆ.
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹರ್ಮನ್‌ಪ್ರೀತ್ ಕೌರ್ ಅವರನ್ನು ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಭಾರತೀಯ ಪುರುಷ ಕ್ರಿಕೆಟ್ ತಂಡದ ಸದಸ್ಯರು, ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಅಭಿನಂದಿಸುತ್ತಿದ್ದಾರೆ. ಮಹಿಳಾ ಸಬಲೀಕರಣ ಮತ್ತು ದೇಶದಲ್ಲಿ ಕ್ರೀಡೆಯಲ್ಲಿ ಮಹಿಳೆಯರ ಏರಿಕೆಗೆ ಹರ್ಮನ್‌ಪ್ರೀತ್ ಮಾದರಿ ಎಂದು ಹಲವರು ಹೊಗಳಿದ್ದಾರೆ. ಈ ಪ್ರಶಸ್ತಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಅದ್ಭುತಗಳನ್ನು ಮಾಡಲು ಅವರಿಗೆ ಸ್ಫೂರ್ತಿ ನೀಡುತ್ತದೆ ಎಂದು ಆಶಿಸಲಾಗಿದೆ.
ಬ್ಯಾಟ್ ಹಿಡಿದು ಮೈದಾನದಲ್ಲಿ ಬೌಲರ್‌ಗಳ ಮೇಲೆ ದಾಳಿ ಮಾಡುವ ಹರ್ಮನ್‌ಪ್ರೀತ್ ಕೌರ್, ಇಂದು ಪದ್ಮಶ್ರೀ ಪ್ರಶಸ್ತಿಯೊಂದಿಗೆ ದೇಶದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಹಲವು ಅಡೆತಡೆಗಳನ್ನು ನಿವಾರಿಸಿ ಈ ಮಟ್ಟವನ್ನು ತಲುಪಿದ ಅವರ ಪ್ರಯಾಣವು ದೇಶದ ಪ್ರತಿಯೊಬ್ಬ ಹುಡುಗಿಗೂ ಸ್ಪೂರ್ತಿಯಾಗಿದ್ದಾರೆ. ಭವಿಷ್ಯದಲ್ಲಿ ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತೀಯ ಮಹಿಳಾ ತಂಡವು ಹೆಚ್ಚಿನ ವಿಶ್ವಕಪ್‌ಗಳನ್ನು ಗೆಲ್ಲಲಿ ಎಂದು ದೇಶದ ಕ್ರಿಕೆಟ್ ಅಭಿಮಾನಿಗಳು ಹಾರೈಸುತ್ತಿದ್ದಾರೆ.













