ಸಂಗೀತ ಸಂಯೋಜಿಸುವ ಕೈಗಳು, ಸರಿಗಮ ಕೇಳುವ ಕಿವಿಗಳು, ನಾದಸ್ವರದ ಆಲಾಪ ಹಾಡುವ ನಾಲಿಗೆ, ರಿದಮ್ ಅನ್ನೇ ತುಂಬಿಕೊಂಡಿರುವ ತಲೆ. ಬರೀ ಸಂಗೀತದೊಂದಿಗೇ ಚಿತ್ರ ಗೆಲ್ಲಿಸಿದ ಖ್ಯಾತಿ. ಇಂಥ ಖ್ಯಾತನಾಮ ಸಂಗೀತ ನಿರ್ದೇಶಕರ ಸಾಲಿಗೆ ಸೇರುವಂಥವರು ಅರ್ಜುನ್ ಜನ್ಯ.
ಸಾಮಾನ್ಯವಾಗಿ ಕರ್ನಾಟಕ, ಭಾರತ ಬಿಡಿ ಇಡೀ ವಿಶ್ವದಲ್ಲಿಯೇ ಸಂಗೀತ ನಿರ್ದೇಶಕರು, ಚಲನ ಚಿತ್ರ ನಿರ್ದೇಶಕರಾಗಿ ಛಾಪು ಮೂಡಿಸಿರೋ ಉದಾಹರಣೆಗಳು ಬೆರೆಳಿಣಿಕೆಷ್ಟೇ.! ಆದ್ರೆ, ಚೊಚ್ಚಲ ಚಿತ್ರದಲ್ಲಿಯೇ ವಿಭಿನ್ನ ಆಲೋಚನೆಯ, ನವೀನ ಕಥಾ ಹಂದರದ ಚಿತ್ರವನ್ನು ನಿರ್ದೇಶಿಸುತ್ತೀನಿ ಅಂತ ನಿರ್ಧಾರ ಮಾಡೋಕೂ ಗುಂಡಿಗೆ ಗಟ್ಟಿ ಬೇಕು. ಕಥೆ ಸರಳ ಅಂತೂ ಇಲ್ಲ. ಜಟಿಲ ಕಥೆಯನ್ನ ತೆಗೆದುಕೊಂಡು, ಎಲ್ಲಿಯೂ ಬೋರ್ ಆಗದಂತೆ, ಎಲ್ಲ ವರ್ಗದ, ಎಲ್ಲ ವಯೋಮಾನದವರಿಗೂ ಜೀರ್ಣವಾಗುವಂತೆ, ಮಾಸ್ ಎಲಿಮೆಂಟ್ಸ್‌ಗಳ ಒಗ್ಗರಣೆ ಹಾಕಿ, ಅತಿರೇಕವಲ್ಲದ, ಡಬಲ್ ಮೀನಿಂಗ್ ಇಲ್ಲದ, ಅಸಹ್ಯ ಎನಿಸದ, ಅಪಹಾಸಕ್ಕೆ ಈಡು ಮಾಡದ ಹಾಸ್ಯವನ್ನ ಹೆಣೆದು ಅರ್ಜುನ್ ಜನ್ಯ 45 ಸಿನಿಮಾವನ್ನು ಕಟ್ಟಿ ಕೊಟ್ಟಿರುವ ರೀತಿ ಶ್ಲಾಘನೀಯವೇ ಸರಿ.
ಖ್ಯಾತಿ, ಅಪಖ್ಯಾತಿ, ನೋವು, ಸೋಲು, ಸಾವು, ಅಸಡ್ಡೆ, ನಿರ್ಲಕ್ಷ್ಯ, ಜಟಿಲತೆ, ದೈವ, ಬದುಕು, ಸಾವಿನಾಚೆಯ ಕುತೂಹಲ ಒಂದಾ ಎರಡಾ? ಎಲ್ಲವನ್ನೂ ಸಮಪ್ರಮಾಣದಲ್ಲಿ ಬೆರೆಸಿ ಪಕ್ವಾನ್ನವನ್ನೇ ಮಾಡಿದ ಪಕ್ವ ಬಾಣಸಿಗನಂತೆ ಅರ್ಜುನ್ ಜನ್ಯ ಇಲ್ಲಿ ಕೆಲಸ ಮಾಡಿದ್ದಾರೆ.
ಈ ಸಿನಿಮಾ ನೋಡಿದ ಮೇಲೆ ಶಿವಣ್ಣ ನಿಮಗೊಂದು ಪ್ರಶ್ನೆಯನ್ನ ಕೇಳಲೇಬೇಕು ಅನಿಸುತ್ತೆ. ಡಾ.ರಾಜ್‌ಕುಮಾರ್ ಮಗ, ಕನ್ನಡಕ್ಕೆ ಅತಿ ಹೆಚ್ಚು ಹಿಟ್ ಕೊಟ್ಟ ಅಗ್ರಗಣ್ಯ ಹೀರೋಗಳಲ್ಲಿ ಒಬ್ಬ, 41 ವರ್ಷಗಳ ಸಿನಿ ಪಯಣದಲ್ಲಿ ಅಸಖ್ಯೆ ಲೆಜೆಂಡ್‌ಗಳ ಜೊತೆ ಕೆಲಸ ಮಾಡುತ್ತ ತಾವೇ ಲೆಜೆಂಡ್ ಆದ ನಟ.. ಹೇಳುತ್ತಾ ಹೋದರೆ ಬ್ರೇಕೇ ಹಾಕೋಕೆ ಆಸ್ಪದ ಇಲ್ಲದಂಥ ಅನುಭವ.
45 ಚಿತ್ರದಿಂದ ಶಿವಣ್ಣ ಏನು ಅನ್ನೋದು ಗೊತ್ತಾಗುತ್ತದೆ; ಉಪೇಂದ್ರ ಹೀಗೆ ಹೇಳಿದ್ಯಾಕೆ?
ಇವೆಲ್ಲವನ್ನೂ ಮರೆತೂ ಹೇಗೆ ಹೀಗೆ ಇದ್ದೀರಿ? 45 ಸಿನಿಮಾದಲ್ಲಿ ಶಿವಪ್ಪನಾಗಿ ಪರಕಾಯ ಪ್ರವೇಶ ಹೇಗೆ ಮಾಡೋಕೆ ಸಾಧ್ಯ? ಇಲ್ಲಿ ನಿಮಗೆ ಯಾವುದೇ ಒಣ ಬ್ಯುಲ್ಡ್ ಅಪ್ ಇಲ್ಲ. ಹತ್ತು ಹಿಂಬಾಲಕರು ಬಂದು ನಮ್ಮಣ್ಣ ಹಂಗೆ ಹಿಂಗೆ ಅಂತ ಹೊಗಳಲ್ಲ. ಇನ್ ಫ್ಯಾಕ್ಟ್ ರಾಜ್ ಬಿ ಶೆಟ್ಟಿ ಪಾತ್ರ ಎಷ್ಟು ಲೀಲಾಜಾಲವಾಗಿ ನಿಮ್ಮ ಕಾಲು ಎಳೆಯುತ್ತೆ, ನೀವೂ ಹಂಗೇ ಎಂಜಾಯ್ ಮಾಡಿಕೊಂಡು ಕಾಲೆಳಿತೀರಿ. 45 ಸಿನಿಮಾದಲ್ಲಿ ನಿಮ್ಮ ಪಾತ್ರ ಪರಿಚಯದ ರೀತಿಯಿಂದ ಹಿಡಿದು, ಲುಕ್, ನಟನೆ ಎಲ್ಲವೂ ವಿಭಿನ್ನವೇ. ಹೀಗಿದ್ದೂ ಯಾವುದೇ ಹಮ್ಮು-ಬಿಮ್ಮು ಇಲ್ಲದೇ, ಇಮೇಜ್‌ನ ಭಾರ ಕಳಚಿದ್ದೀರಿ.
ಓರಿಜಿನಲ್ ಸ್ಕ್ಟ್ರಿಪ್ಟ್ ಅನ್ನ ತನ್ನ ಮುಂದಿರೋರಿಗೆ ಎಲ್ಲಿ ಕ್ರೆಡಿಟ್ ಬರುತ್ತೋ ಅಂತ ಎಡಿಟ್ ಮಾಡಿಸಿ ಸಿನಿಮಾವನ್ನೇ ಸೋಲುವಂತೆ ಮಾಡೋ ನಟರು ಇರೋ ಈ ಸಿನಿ ಜಗತ್ತಿನಲ್ಲಿ ನಿಮ್ಮಂತೆ ಇರೋರು ಹೇಗೆ ಸಾಧ್ಯ? ಈ ಸಿನಿಮಾದ ಗೆಲುವಿನಲ್ಲಿ ನಿಮ್ಮ ಈ ಅಂತಃಕರಣ ಪಾತ್ರ ದೊಡ್ದದು.
ಈ ವಿಷಯದಲ್ಲಿ ಉಪೇಂದ್ರ ಪಕ್ವತೆ ಕೂಡ ಶ್ಲಾಘನೆಗೆ ಅರ್ಹವೇ. ಅವರು ನಿರ್ವಹಸಿದ ಪಾತ್ರವನ್ನ ಸಾಮಾನ್ಯವಾಗಿ ಮೇನ್ ಸ್ಟ್ರೀಮ್ ಸ್ಟಾರ್‌ಗಳು ಅಷ್ಟು ಸುಲಭವಾಗಿ ಒಪ್ಪಲ್ಲ. ಇದು ರೆಗ್ಯುಲರ್ ಕ್ಯಾರೆಕ್ಟರ್ ಅಲ್ಲ. ಬಹುಶಃ ಅಂಥದ್ದೇ ಯೋಚನಾ ಲಹರಿ ಇರೋ ಉಪ್ರೇಂದ್ರರಿಗೂ ಇದೇ ಇಷ್ಟ ಆಯ್ತು ಅನಿಸುತ್ತೆ. ಹೀಗಾಗಿ, ರಾಯಪ್ಪ ಯಾರಪ್ಪ ಅಂದ್ರೆ ಅದು ಉಪ್ಪಿಯೇ ಎನ್ನದೇ ವಿಧಿಯಿಲ್ಲ.
ರಾಜ್ ಬಿ ಶೆಟ್ಟಿ ಬಗ್ಗೆ ಏನು ಹೇಳೋದು. ಅವರಿಗೆ ಕಾಡಿನಲ್ಲಿ ಒಂದು ಸೊಪ್ಪು ಸಿಕ್ಕಂತೆ ಇದೆ. ಈ ಸೊಪ್ಪು ಕೂದಲಿನಿದ್ದಲ್ಲ ಬದಲಿಗೆ, ಹಿಟ್ ಸಿನಿಮಾಗಳ ಫಾರ್ಮುಲಾದ್ದು ಅನಿಸುತ್ತೆ. ಇಷ್ಟು ದಿನಗಳ ಕಾಲ ಹಿಟ್ ಸಿನಿಮಾದ ಫಾರ್ಮುಲಾ ಅಂದ್ರೆ ಇದಮಿತ್ಥಂ ಅಂತ ನಿರ್ಧರಿಸಿ ಸೋಲಿನ ರುಚಿ ಉಂಡ ನಿರ್ಮಾಪಕ-ನಿರ್ದೇಶಕರಿಗೆ ಕೊರತೆ ಇಲ್ಲ. ಆದ್ರೆ ರಾಜ್ ಬಿ ಶೆಟ್ಟಿ ಫಾರ್ಮುಲಾ ರೆಗ್ಯುಲರ್ ಅಲ್ಲ, ಆದ್ರೆ ಗೆಲುವಿನ ಕೆಂಪು ಹಾಸು ಅದು.
500 ರ ಎರಡು ನೋಟು ಕೊಟ್ಟ ರಾಜ್ ಬಿ ಶೆಟ್ಟಿ
ಶಿವಣ್ಣ-ಉಪೇಂದ್ರರಂಥ ದಿಗ್ಗಜರ ನಡುವೆ ರಾಜ್ ಬಿ ಶೆಟ್ಟಿ ಲೆಕ್ಕಾಚಾರದಲ್ಲಿ ಚಿಕ್ಕ ತಪ್ಪಾಗಿದ್ದರೂ, ಕಣ್ಮರೆಯಾಗುವ ಸಾಧ್ಯತೆ ದಟ್ಟವಾಗಿತ್ತು. ಉಪೇಂದ್ರರ ಆರ್ಭಟ, ಶಿವಣ್ಣರ ಸಟಲ್ ಅಭಿನಯ ಎಂತಿಂಥವರನ್ನೂ ಅನಾಮತ್ತಾಗಿ ನುಂಗವಂತಿದೆ. ಆದ್ರೆ, ರಾಜ್ ಬಿ ಶೆಟ್ಟಿ ಇಲ್ಲಿ ವಿನಯನಾಗಿ, ತಮ್ಮ ಪ್ರಬಲ ಇರುವಿಕೆಯನ್ನ ತೋರಿಸಿರೋದು ಮಾತ್ರವಲ್ಲ, ಕೆಲವೊಮ್ಮೆ ತಕ್ಕಡಿಯ ನಡುವಿನ ಮುಳ್ಳಿನಂತೆ, ಇಬ್ಬರೂ ದಿಗ್ಗಜರ ಅಭಿನಯಕ್ಕೂ ಮೆರಗು ಮೂಡಿಸಿಬಿಡುತ್ತಾರೆ.
ಆ ಅಸಹಾಯಕತೆ, ಹೋರಾಟದಲ್ಲಿ ಅದೆಂಥದ್ದೋ ಧಾವಂತ, ಪ್ರೀತಿ-ಪ್ರೇಮ-ವಿರಸ, ತಾಯಿಯ ಮಡಲಿನ ಆಸರೆಯ ಬಯಕೆಯ ಬಹುತೇಕ ಹತಾಶತೆಯನ್ನೇ ಉಸಿರಾಡುವ ಈ ಪಾತ್ರವನ್ನ ಹಾಗೆಯೇ ಬಿಟ್ಟಿದ್ದರೆ ಅದೇ ಈ ಚಿತ್ರಕ್ಕೆ ದೊಡ್ಡ ನೆಗೆಟಿವ್ ಪಾಯಿಂಟ್ ಆಗುವ ಸಾಧ್ಯತೆ ಇತ್ತು. ಆದ್ರೆ, ತನ್ನ ನೋವನ್ನೂ ಸಂಭ್ರಮಿಸುವಿಕೆ, ತನ್ನ ಇರುವಿಕೆಗಾಗಿ ಹೋರಾಟದ ನಡುವೆಯೂ ಕಳೆದು ಹೋಗದ ಹಾಸ್ಯ ಪ್ರಜ್ಞೇ ಈ ಪಾತ್ರವನ್ನು ಜೀವಂತವಾಗಿಸುವುದರ ಜೊತೆಗೆ, ಮತ್ತಷ್ಟು ಗಟ್ಟಿಯಾಗುವಂತೆ ಮಾಡುತ್ತೆ. ಅದಕ್ಕೇ ಸದ್ಯಕ್ಕಂತೂ ರಾಜ್ ಬಿ ನಡೆದಿದ್ದೇ ದಾರಿ, ಅವರು ಕಾಣಿಸಿಕೊಂಡಿದ್ದೇ ಗೆಲುವಿನ ಮಂತ್ರ ಅನ್ನೋ ಅನ್ವರ್ಥಕಾಗುವಂತೆ ಆಗಿದೆ. ಇನ್ನುಳಿದಂತೆ ಕಾಂತರದ ನಂತರ ಮತ್ತೊಮ್ಮೆ ಮಾನಸಿ ಸುಧೀರ್ ನೆನಪಿನಲ್ಲಿ ಉಳಿಯುವಂತಿದ್ದಾರೆ. ನಾಯಕಿ ಕೌಸ್ತುಭ ಮಣಿ ಮನಸ್ಸು ಗೆಲ್ಲುತ್ತಾರೆ. ಪಳಗುವುದು ಇದ್ದೇ ಇದೆ.
ಅರ್ಜುನ್ ಜನ್ಯ ಈ ಸಿನಿಮಾದಲ್ಲಿ ನಿರ್ದೇಶಕನಾಗಿ ಮಾತ್ರ ಎಂಟ್ರಿಕೊಟ್ಟಿಲ್ಲ. ಬದಲಿಗೆ ತನ್ನೊಂದಿಗೆ ದುಡಿದ ವ್ಯಕ್ತಿಗೂ ಪರದೇ ಮೇಲೆ ಸಿಂಗಲ್ ಹೆಸರು ಬರುವಂತೆ ನೋಡಿಕೊಂಡಿದ್ದು ಅವರ ದೊಡ್ಡತನ.
ಮಂಜುನಾಥ್ ಜಂಬೆ, ಈ ಹೆಸರು ಬೆಂಗಳೂರಿನ ನಾಟಕ ವಲಯದಲ್ಲಿ, ಸಿನಿಮಾ ವಲಯದಲ್ಲಿ ಚಿರ ಪರಿಚಿತ. ಪಾಂಡುರಂಗ ವಿಠಲ ಧಾರವಾಹಿ ಮೂಲಕ ಮನೆ ಮನೆ ತಲುಪಿದ್ದ ಜಂಬೆ, ಪಯಣ ಕಲ್ಲಿನದ್ದೇ. ಎಷ್ಟೇ ಹಾರ್ಡ್ ವರ್ಕ್ ಮಾಡಿದ್ರೂ ಯಶಸ್ಸು ಮುಗಿಲ ಕುಸುಮವೇ ಆಗಿತ್ತು. ಆದ್ರೆ, ಈ ಸಿನಿಮಾ ಕಷ್ಟ ಜೀವಿ ಜಂಬೆ ಬದುಕಿಗೂ ಒಂದು ಟರ್ನಿಂಗ್ ಪಾಯಿಂಟ್ ಆಗಬೇಕು ಅನ್ನೋದು ಆ ವ್ಯಕ್ತಿಯ ಪ್ರತಿಭೆಯ ಪರಿಚಯ ಇರೋರ ಆಶಯ. ಅದರಂತೆ ಸಹ ನಿರ್ದೇಶಕನ ಸ್ಥಾನವನ್ನ ಟೈಟಲ್ ಕಾರ್ಡ್‌ನಲ್ಲಿಯೇ ಅರ್ಜುನ್ ಜನ್ಯ, ಜಂಬೆಗೆ ನೀಡಿರೋದು ವಿಶೇಷ.
ನಿರ್ದೇಶಕ ಎಂಥದ್ದೇ ಕಥೆ ತಂದಿರಲಿ, ಏನೇ ಕಲ್ಪನೆ ಮಾಡಿಕೊಂಡಿರಲಿ, ಎಷ್ಟೇ ಅದ್ಭುತ ಪ್ರಯತ್ನ ಮಾಡಲಿ. ಎಂಥದ್ದೇ ಹೀರೋಗಳ ಕಾಲ್‌ಶೀಟ್ ತಂದಿರಲಿ, ಆದ್ರೆ ನಿರ್ದೇಶಕನ ಆ ವಿಷನ್ ಅರ್ಥ ಮಾಡಿಕೊಳ್ಳುವ ನಿರ್ಮಾಪಕ ದೊರಕದಿದ್ದರೆ ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳದಂತೆಯೇ. ಆದ್ರೆ ಅರ್ಜುನ್ ಜನ್ಯ ಅದೃಷ್ಟಕ್ಕೆ, ಅಷ್ಟೇ ಧೈರ್ಯ ಶಾಲಿ ಮತ್ತು ನಿರ್ದೇಶಕನ ಮೇಲೆ ಗಟ್ಟಿ ನಂಬಿಕೆಯನ್ನ ಇಟ್ಟು, ಅವರನ್ನು ಅರ್ಥಮಾಡಿಕೊಳ್ಳುವಂಥ ನಿರ್ಮಾಪಕ ರಮೇಶ್ ರೆಡ್ಡಿ ಉಲ್ಲೇಖನೀಯ. ಅಂಥ ನಿರ್ಮಾಪಕರು ಕನ್ನಡಕ್ಕೆ ಬೇಕು. ಕನ್ನಡ ಚಲನಚಿತ್ರಗಳು ಮತ್ತಷ್ಟು ಬೆಳಗಬೇಕು.
ಹಾಗಂತ 45 ಸಿನಿಮಾದಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿದೆಯಾ? ಏನೂ ದೋಷಗಳು ಇಲ್ಲವೇ ಇಲ್ಲವ? ಅನ್ನೋ ಪ್ರಶ್ನೆ ಸಹಜ. ಹುಡುಕಿದರೆ ಹಾಲಿನಲ್ಲೂ ನೀರು ಸಿಗುತ್ತೆ, ಸಕ್ಕರೆಯಲ್ಲಿ ಬ್ಲಡ್ ಶುಗರ್ ಮೂಲ ಸಿಗುತ್ತೆ. ಹಾಗಂತ ಆ ತಪ್ಪುಗಳು ದೊಡ್ಡದಾಗಿ ಇವೆಯಾ? ಚಿತ್ರದ ಓಘಕ್ಕೆ ಸಮಸ್ಯೆ ತರುವಂತೆ ಇವೆಯಾ? ಅಂದ್ರೆ ಖಂಡಿತ ಇಲ್ಲ.
ರಾಜಮೌಳಿ, ಜೇಮ್ಸ್ ಕ್ಯಮರೂನ್, ಯಶ್ ಇಂಥವರ ಡೊಡ್ಡ ದೊಡ್ಡ ಸಿನಿಮಾಗಳಿಗೆ ಹೋಲಿಸಿದಾಗ, ಕಡಿಮೆ ಬಜೆಟ್ ಅನಿಸುವಂಥ ಬಜೆಟ್‌ನಲ್ಲಿ ಇಷ್ಟು ದೊಡ್ಡ ರಿಸ್ಕ್ ತೆಗೆದುಕೊಂಡು, ಬಹುತೇಕ ಶೇ.80ರಷ್ಟು ಪರ್ಫೆಕ್ಟ್ ವಿಎಫ್ ಎಕ್ಸ್ ಅಳವಡಿಸಿರೋದು ದೊಡ್ಡ ಸಾಧನೆಯೇ ಸರಿ. ಹೀಗಾಗಿ, ಮೊಸರಿನಲ್ಲಿ ಕಲ್ಲು ಹುಡುಕದೇ, ಕುಟುಂಬ ಸಮೇತರಾಗಿ ಈ ಸಿನಿಮಾವನ್ನ ನಮ್ಮ ಕನ್ನಡಿಗರು ನೋಡಿದರೆ, ಮತ್ತಷ್ಟು ವಿಭಿನ್ನತೆಯ ಕಥೆಗಳಿಗೆ ಬಾಗಿಲು ತೆರೆಯುತ್ತೆ. ಇಲ್ಲದಿದ್ದರೇ ಅದೇ ಒಣ ಜಂಭದ ಸ್ಟಾರ್ ವಾರ್‌ಗಳ ನಡುವೆ ಕನ್ನಡ ಚಿತ್ರರಂಗ ಮತ್ತಷ್ಟು ಸೊರಗುತ್ತೆ.












