Last Updated:
ಇತ್ತೀಚೆಗಷ್ಟೇ ‘ಭಾರತ್ ಭಾಗ್ಯ ವಿಧಾತ್’ ಚಿತ್ರದ ಟ್ರೇಲರ್ ಲಾಂಚ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟಿ ಕಂಗನಾ, ಬೆಳ್ಳಿ ಲೋಟದ ನೀರು ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಬೆಳ್ಳಿ ಲೋಟದ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಅಂತ ನಾವಿಂದು ತಿಳಿಯೋಣ ಬನ್ನಿ.
ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut), ತಾನು ಬೆಳ್ಳಿ ಲೋಟದ ನೀರನ್ನು (Silver Glass Water) ಕುಡಿಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಮುಂಬರುವ ಚಿತ್ರ ‘ಭಾರತ್ ಭಾಗ್ಯ ವಿಧಾತ್’ (Bharat Bhhagya Viddhaata)ನ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಕಂಗನಾ, ಬೆಳ್ಳಿ ಲೋಟದ ನೀರು ಕುಡಿಯುತ್ತಿರುವುದಾಗಿ ಹೇಳಿದ್ದು, ಈ ವಿಚಾರ ಎಲ್ಲರ ಗಮನ ಸೆಳೆದಿದೆ. ಇದೇ ವಿಚಾರವಾಗಿ 2025ರಲ್ಲಿ ಸಂದರ್ಶನವೊಂದರಲ್ಲಿ ತಮ್ಮ ಈ ಅಭ್ಯಾಸದ ಬಗ್ಗೆ ಉಲ್ಲೇಖಿಸಿದ್ದರು. ಆಯುರ್ವೇದದ ಮೂರು ಮೂಲಭೂತ ಶಕ್ತಿಗಳಲ್ಲಿ ಒಂದಾದ ಬೆಳ್ಳಿ ಲೋಟ ತನ್ನ ದೇಹದಲ್ಲಿನ ‘ಪಿತ್ತ ದೋಷ’ವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹೀಗಾಗಿ ಬೆಳ್ಳಿ ಲೋಟದ ನೀರನ್ನು ಕುಡಿಯುತ್ತೇನೆ ಅಂತ ಹೇಳಿದ್ದರು ಎಂದು ಎನ್ಟಿವಿ ವರದಿ ಮಾಡಿದೆ. ಹಾಗಾದ್ರೆ ಭಾರತೀಯ ಸಂಪ್ರದಾಯದಲ್ಲಿ ಪ್ರಾಚೀನ ಕಾಲದಲ್ಲಿ ಅನುಸರಿಸಲಾಗುತ್ತಿದ್ದ ಈ ಅಭ್ಯಾಸದಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಅಂತ ತಿಳಿಯೋಣ ಬನ್ನಿ.
ಆಯುರ್ವೇದದಲ್ಲಿ ಬೆಳ್ಳಿಗೆ ವಿಶೇಷ ಸ್ಥಾನವಿದೆ. ಇದು ನೈಸರ್ಗಿಕವಾಗಿ ದೇಹವನ್ನು ತಂಪಾಗಿಸುವ ಗುಣಗಳನ್ನು ಹೊಂದಿದೆ. ಆದ್ದರಿಂದ, ಬೆಳ್ಳಿ ಪಾತ್ರೆಗಳಲ್ಲಿನ ನೀರು ದೇಹದಲ್ಲಿನ ಹೆಚ್ಚುವರಿ ಶಾಖವನ್ನು ಕಡಿಮೆ ಮಾಡುವಲ್ಲಿ, ಪಿತ್ತರಸದ ಸಮಸ್ಯೆ ಸುಧಾರಿಸುವಲ್ಲಿ ಮತ್ತು ವಾತದ ಸಮಸ್ಯೆಯನ್ನು ಸಮತೋಲನಗೊಳಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಬೆಳ್ಳಿ ನೈಸರ್ಗಿಕ ಸೂಕ್ಷ್ಮಜೀವಿ ವಿರೋಧಿ ಗುಣಗಳನ್ನು ಹೊಂದಿದೆ. ಬೆಳ್ಳಿ ಪಾತ್ರೆಗಳಲ್ಲಿ ಸಂಗ್ರಹಿಸಲಾಗುವ ನೀರು, ಹಾನಿಕಾರಕ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ನಿಧಾನಗೊಳಿಸುತ್ತದೆ.
ಬೆಳ್ಳಿ ಪಾತ್ರೆಗಳಲ್ಲಿ ನೀರು ಕುಡಿಯುವ ಪ್ರಾಚೀನ ಪದ್ಧತಿ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೇ ಮಾನಸಿಕ ಶಾಂತಿಗೂ ಪ್ರಯೋಜನಕಾರಿಯಾಗಿದೆ. ದೇಹದಲ್ಲಿ ಅತಿಯಾದ ಶಾಖ, ಆಮ್ಲೀಯತೆ, ಊತ ಮತ್ತು ಚರ್ಮದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದು ಉತ್ತಮ ಪರಿಹಾರವನ್ನು ನೀಡುತ್ತದೆ. ಇದರೊಂದಿಗೆ, ಬೆಳ್ಳಿ ಪಾತ್ರೆಯಲ್ಲಿರುವ ನೀರು ಕೇಂದ್ರ ನರಮಂಡಲವನ್ನು ಶಾಂತಗೊಳಿಸುತ್ತದೆ. ಮಾನಸಿಕ ಒತ್ತಡ, ಆತಂಕ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ನಮ್ಮನ್ನು ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ. ಬೆಳ್ಳಿ ಲೋಟದಲ್ಲಿ ನೀರು ಕುಡಿಯುವ ಅಭ್ಯಾಸವು ವಿಪರೀತ ಬಿಸಿಲಿನ ವಾತಾವರಣದಲ್ಲಿ ಕೆಲಸ ಮಾಡುವವರಿಗೆ, ವಿಶೇಷವಾಗಿ ಬೇಸಿಗೆಯಲ್ಲಿ, ದೇಹ-ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ತುಂಬಾ ಉಪಯುಕ್ತವಾಗಿದೆ.
ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳನ್ನು ಇಷ್ಟಪಡುವವರಿಗೆ ಬೆಳ್ಳಿ ಪಾತ್ರೆಗಳನ್ನು ಬಳಸುವುದು ಉತ್ತಮವೆಂಬಂತೆ ಕಾಣಿಸಬಹುದು. ಆದರೆ, ಬೆಳ್ಳಿಯಿಂದ ಪ್ರಯೋಜನಗಳು ಸಿಗುತ್ತದೆ ಎಂದು ಅದರ ಮೇಲೆ ಅವಲಂಬಿತವಾಗುವ ಬದಲು ಕೆಲ ಆರೋಗ್ಯಕರ ಜೀವನಶೈಲಿಯ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು.
ಅಂದರೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದು, ಸಮತೋಲಿತ ಆಹಾರವನ್ನು ಸೇವಿಸುವುದು, ಚೆನ್ನಾಗಿ ನಿದ್ರೆ ಮಾಡುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೀಗೆ ಮುಂತಾದ ದೈನಂದಿನ ಅಭ್ಯಾಸಗಳು ನಿಮ್ಮನ್ನು ಮತ್ತಷ್ಟು ಆರೋಗ್ಯದಿಂದಿರಲು ಮತ್ತು ಒಟ್ಟಾರೆ ನಿಮ್ಮ ಸಂಪೂರ್ಣ ಆರೋಗ್ಯವನ್ನು ಕಾಪಾಡುತ್ತದೆ ಎಂಬುವುದನ್ನು ಮರೆಯಬೇಡಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ)













