Last Updated:
ಭಾರತ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಟಿ20 ಪಂದ್ಯ ಇಂದು ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಬಿಗ್ ಸ್ಕೋರ್ ಕಲೆ ಹಾಕಿದೆ.
ಭಾರತ (India) ಮತ್ತು ಜಿಂಬಾಬ್ವೆ (Zimbabwe) ನಡುವಿನ ಎರಡನೇ ಟಿ20 ಪಂದ್ಯ ಇಂದು ಜಿಂಬಾಬ್ವೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆಯುತ್ತಿದೆ. ಜಿಂಬಾಬ್ವೆ ನಾಯಕ ಸಿಕಂದರ್ ರಜಾ (Sikandar Raza) ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿತು. ಇಶಾನ್ ಕಿಶನ್ (Ishan Kishan) ಮತ್ತು ತಿಲಕ್ ವರ್ಮಾ (Tilak Varma) ಗಳಿಸಿದ ಅಬ್ಬರದ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಬೃಹತ್ ಸ್ಕೋರ್ ಕಲೆ ಹಾಕಿತು. ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿತು.
ಟಾಸ್ ಸೋತಿದ್ದರಿಂದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಆರಂಭಿಸಿದರು. ಆದರೆ ನಿರೀಕ್ಷೆಯಂತೆ ಟೀಮ್ ಇಂಡಿಯಾಗೆ ಉತ್ತಮ ಆರಂಭ ಸಿಗಲಿಲ್ಲ.
ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ 8 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಔಟಾದರು. ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದ ಸೂರ್ಯವಂಶಿ ಕೂಡ 9 ಎಸೆತಗಳಲ್ಲಿ 20 ರನ್ ಹೊಡೆದು ವಿಕೆಟ್ ಕಳೆದುಕೊಂಡರು. ಇನ್ನೂ ನಾಯಕ ಶ್ರೇಯಸ್ ಅಯ್ಯರ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಂತು ಆಡಲು ಸಾಧ್ಯವಾಗಲಿಲ್ಲ. ಅಯ್ಯರ್ 25 ರನ್ ಗಳಿಗೆ ಔಟಾದರು.
ಈ ಸಂದರ್ಭದಲ್ಲಿ ಅಯ್ಯರ್ ಜೊತೆಗೆ ಇಶಾನ್ ಕಿಶನ್ ಅದ್ಭುತ ಜೊತೆಯಾಟವಾಡಿದರು. ಈ ಜೋಡಿ 42 ಎಸೆತಗಳಲ್ಲಿ 66 ರನ್ ಕಲೆ ಹಾಕುವ ಮೂಲಕ ತಂಡದ ಇನ್ನಿಂಗ್ಸ್ಗೆ ಜೀವ ಕೊಟ್ಟರು. ಅಯ್ಯರ್ ಔಟಾದ ಬಳಿಕ, ಇಶಾನ್ ಕಿಶನ್ 31 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 50 ರನ್ ಗಳಿಸಿ ಮಿಂಚಿದರು. ಟೀಮ್ ಇಂಡಿಯಾ ಪರ ಇಶಾನ್ ಕಿಶನ್ ಅದ್ಭುತ ಇನ್ನಿಂಗ್ಸ್ ಆಡಿದರು. ಈ ಮೂಲಕ ಟೀಮ್ ಇಂಡಿಯಾ ಬಿಗ್ ಸ್ಕೋರ್ ಕಲೆ ಹಾಕಲು ಸಾಧ್ಯವಾಯಿತು.
ಇಶಾನ್ ಜೊತೆಗೆ ತಿಲಕ್ ವರ್ಮಾ ಕೂಡ ತಮ್ಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ತಿಲಕ್ ವರ್ಮಾ ಕೂಡ ಅರ್ಧಶತಕ ಬಾರಿಸಿ ಮಿಂಚಿದರು. ಮತ್ತೊಂದೆಡೆ ಇಶಾನ್ 44 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿ ಔಟಾದರು.
ತಿಲಕ್ ವರ್ಮಾ ಕೂಡ ಬಿರುಸಿನ ಬ್ಯಾಟಿಂಗ್ ಮಾಡುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು. ತಿಲಕ್ ವರ್ಮಾ 29 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ ಅಜೇಯ 60 ರನ್ ಗಳಿಸಿದರು. ರಿಂಕು ಸಿಂಗ್ 12 ರನ್ ಗಳಿಸಿ ಔಟಾದರೆ, ಶಿವಂ ದುಬೆ ಅಜೇಯ 6 ರನ್ ಗಳಿಸಿದರು.














