Last Updated:
YouTuber Chandi Masood: 30 ವರ್ಷದ ಫೇಮಸ್ ಯೂಟ್ಯೂಬರ್ ಮತ್ತು ಎಲೆಕ್ಟ್ರಿಷಿಯನ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಖ್ಯಾತ ಯೂಟ್ಯೂಬರ್ ಚಾಂಡಿ ಮಸೂದ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ದುಷ್ಕರ್ಮಿಗಳು ಅವರ ಮನೆಯೊಳಗ್ಗೆ ನುಗ್ಗಿ ಕೊಲೆ ಮಾಡಿದ್ದಾರೆ.
ಹೈದರಾಬಾದ್, ತೆಲಂಗಾಣ: ಗೋಲ್ಕೊಂಡ (Golconda) ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ 30 ವರ್ಷದ ಫೇಮಸ್ ಯೂಟ್ಯೂಬರ್ (YouTuber) ಮತ್ತು ಎಲೆಕ್ಟ್ರಿಷಿಯನ್ ಒಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಖ್ಯಾತ ಯೂಟ್ಯೂಬರ್ ಚಾಂಡಿ ಮಸೂದ್ (Chandi Masood) ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದ್ದು, ದುಷ್ಕರ್ಮಿಗಳು ಅವರ ಮನೆಯೊಳಗ್ಗೆ ನುಗ್ಗಿ ಕೊಲೆ ಮಾಡಿದ್ದಾರೆ. ಈ ಹತ್ಯೆಯಲ್ಲಿ ದೀರ್ಘಕಾಲದ ಕೌಟುಂಬಿಕ ಕಲಹ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಗೋಲ್ಕೊಂಡ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಕುಮಾರ್ವಾಡಿಯಲ್ಲಿರುವ ಅವರ ಮನೆಯಲ್ಲಿ ಚಾಂಡಿ ಮಸೂದ್ ಕೊಲೆ ನಡೆದಿದೆ. ಚಾಂಡಿ ಮಸೂದ್ ಎಂದೇ ಜನಪ್ರಿಯರಾಗಿರುವ ಈ ಯೂಟ್ಯೂಬರ್ ಮೂಲ ಹೆಸರು ಶೇಕ್ ಮಹಬೂಬ್. ಈ ಘಟನೆ ನಿನ್ನೆ ಮಧ್ಯಾಹ್ನ 3:20 ರ ಸುಮಾರಿಗೆ ನಡೆದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ವರದಿಗಳ ಪ್ರಕಾರ, ಚಾಂಡಿ ಮಸೂದ್ ನಿನ್ನೆ ಶುಕ್ರವಾರದ ಪ್ರಾರ್ಥನೆ ಮುಗಿಸಿ ಮನೆಗೆ ಮರಳಿದ್ದಾಗ ಹಲವಾರು ವ್ಯಕ್ತಿಗಳು ಆತನನ್ನು ಫಾಲೋ ಮಾಡಿಕೊಂಡು ಬಂದಿದ್ದಾರಂತೆ. ಇದನ್ನು ಗಮನಿಸಿದ ಚಾಂಡಿ ಮಸೂದ್, ತನ್ನ ಸುರಕ್ಷತೆಯ ಭಯದಿಂದ ವೇಗವಾಗಿ ಬಂದು ತನ್ನ ಮನೆಗೆ ನುಗ್ಗಿದ್ದಾನೆ. ಅಷ್ಟರಲ್ಲಿ ಅವನನ್ನು ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ಗುಂಪು, ಬಲವಂತವಾಗಿ ಒಳಗೆ ನುಗ್ಗಿ ಅವನ ಮೇಲೆ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ಮಸೂದ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮೊದಲೇ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ದಾಳಿಕೋರರು ಹಲ್ಲೆಯ ಸಮಯದಲ್ಲಿ ಹರಿತವಾದ ಮತ್ತು ಮೊಂಡಾದ ಆಯುಧಗಳನ್ನು ಬಳಸಿದ್ದರಿಂದ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯಲ್ಲಿ ಕಬ್ಬಿಣದ ಸರಳುಗಳು ಮತ್ತು ಜಿಮ್ ಉಪಕರಣಗಳನ್ನು ಹಲ್ಲೆಗಾಗಿ ಬಳಸಲಾಗಿದೆ ಎಂದು ಹೇಳಲಾಗಿದ್ದು, ಚಾಂಡಿ ಮಸೂದ್ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಪ್ರಮುಖ ಆರೋಪಿಯನ್ನು ಚಾಂಡಿ ಮಸೂದ್ ಪತ್ನಿಯ ಸಹೋದರ ಶೇಖ್ ಸೊಹೈಲ್ ಎಂದು ಗುರುತಿಸಲಾಗಿದೆ. ದಾಳಿಯ ಸಮಯದಲ್ಲಿ ಸೊಹೈಲ್ ಜೊತೆ ಅಫು ಮತ್ತು ಜಬೀರ್ ಎಂದು ಗುರುತಿಸಲಾದ ಇಬ್ಬರು ಸಹಚರರು ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಕೊಲೆಗೆ ದೀರ್ಘಕಾಲದ ಕೌಟುಂಬಿಕ ಕಲಹವೇ ಕಾರಣ ಎಂದು ಶಂಕಿಸಿದ್ದಾರೆ.
ಮಸೂದ್ ತನ್ನ ಪತ್ನಿಯ ಕುಟುಂಬದ ಕೆಲವು ಸದಸ್ಯರ ವಿರೋಧದ ನಡುವೆಯೂ ಸುಮಾರು 18 ತಿಂಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಎಂದು ವರದಿಯಾಗಿದೆ. ದಂಪತಿಗೆ ನಂತರ ಮಗು ಜನಿಸಿದರೂ, ಮಸೂದ್ ಮತ್ತು ಅವರ ಅತ್ತೆ, ಮಾವನ ನಡುವೆ ಸಂಘರ್ಷ ಮುಂದುವರಿದಿತ್ತು ಎನ್ನಲಾಗಿದೆ. ಇತ್ತೀಚೆಗೆ ಕೆಲವು ಜಗಳದ ಹಿನ್ನೆಲೆಯಲ್ಲಿ ಚಾಂಡಿ ಮಸೂದ್ ತನ್ನ ಹೆಂಡತಿ ಮತ್ತು ಮಗುವನ್ನು ತನ್ನ ಪೋಷಕರ ಮನೆಗೆ ಕಳುಹಿಸಿದ್ದ ಎನ್ನಲಾಗಿದೆ.
ಚಾಂಡಿ ಮಸೂದ್ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಅಲ್ಲಿ ಅವರು ಫಿಟ್ನೆಸ್ ಸಂಬಂಧಿತ ವೀಡಿಯೊಗಳನ್ನು ಹಂಚಿಕೊಂಡರು ಮತ್ತು ಸುಮಾರು 2.75 ಸಾವಿರ ಚಂದಾದಾರರನ್ನು ಹೊಂದಿದ್ದರು. ಅವರು ತಮ್ಮ ಚಾನೆಲ್ನಲ್ಲಿ 746 ವೀಡಿಯೊಗಳನ್ನು ಹಂಚಿಕೊಂಡಿದ್ದರು. ಅವರ ಬಹುತೇಕ ವೀಡಿಯೊಗಳಲ್ಲಿ ಅವರು ಬೆಳ್ಳಿ ಆಭರಣಗಳನ್ನು ಧರಿಸಿ ಮಿನುಗುತ್ತಾ ಇರುತ್ತಿದ್ದುದು ವಿಶೇಷ!
Hyderabad,Telangana














