Last Updated:
World’s Smallest School: ನಮ್ಮ ಶಾಲೆ ದೊಡ್ಡದು, 2000 ಮಕ್ಕಳು, 50 ಕ್ಲಾಸ್ ರೂಮ್ ಅಂತ ಹೆಮ್ಮೆಯಿಂದ ಹೇಳ್ಕೊಳ್ತೀವಿ. ಆದರೆ ಇಡೀ ಶಾಲೆಯಲ್ಲಿ ಓದೋದೇ ಒಬ್ಬನೇ ಒಬ್ಬ ಅಂದ್ರೆ ನಂಬ್ತೀರಾ? ಹೌದು! ಈ ಜಗತ್ತಿನಲ್ಲಿ ಅಂತಹ ಒಂದು ಅಪರೂಪದ ಶಾಲೆಯ ಕುರಿತ ಮಾಹಿತಿ ಇಲ್ಲಿದೆ.
World’s Smallest School: ಶಾಲೆ (School) ಎಂದರೆ ನೂರಾರು ಮಕ್ಕಳು, ಗದ್ದಲ, ಆಟ, ಪಾಠ ಎಂದು ನಾವು ಊಹಿಸುತ್ತೇವೆ. ಆದರೆ ಈ ದೇಶದ ಆ ಶಾಲೆಯ ಕಥೆ ಮಾತ್ರ ಇದಕ್ಕೆ ಸಂಪೂರ್ಣ ವಿಭಿನ್ನ. ಯಾಕೆಂದರೆ ಈ ಶಾಲೆಯಲ್ಲಿ ಓದುತ್ತಿದ್ದದ್ದು ಒಬ್ಬಳೇ ಒಬ್ಬ ವಿದ್ಯಾರ್ಥಿನಿ.! ಹೌದು, ಸೋಫಿಯಾ ವಿವೋಲಾ (Sofia Vivola) ಎಂಬ ಬಾಲಕಿಗಾಗಿ ಇಡೀ ಶಾಲೆಯನ್ನು ನಡೆಸಲಾಗುತ್ತಿತ್ತು. ಹೀಗಾಗಿ ಇದನ್ನು ವಿಶ್ವದ ಅತ್ಯಂತ ಚಿಕ್ಕ ಶಾಲೆ (World’s Smallest School) ಎಂದು ಕರೆಯಲಾಗುತ್ತದೆ. ಆ ಕುರಿತ ವರದಿ ಇಲ್ಲಿದೆ.
ಈ ಅಪರೂಪದ ಶಾಲೆ ಇಟಲಿಯ ಸುಂದರ ನಗರ ಟುರಿನ್ ಬಳಿ ಇದೆ. ಹಸಿರು ಪರ್ವತಗಳ ಮಧ್ಯೆ ಈ ಶಾಲೆಯಿದೆ. ಗಾತ್ರದಲ್ಲಿ ತೀರಾ ಚಿಕ್ಕದಾಗಿದ್ದರೂ ಇದರ ಹಿಂದಿನ ಕಥೆ ಮಾತ್ರ ವಿಶ್ವವಿಖ್ಯಾತ. 2014 ರಲ್ಲಿ ಈ ಶಾಲೆಯ ವಿಷಯ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಆಗ ಮೂರನೇ ತರಗತಿಯಲ್ಲಿದ್ದ ಸೋಫಿಯಾ ವಿವೋಲಾ ಎಂಬಾಕೆಯೇ ಈ ಶಾಲೆಯ ಏಕೈಕ ವಿದ್ಯಾರ್ಥಿನಿ. ಇಡೀ ಶಾಲೆಗೆ ಇಸಾಬೆಲ್ಲೆ ಎಂಬ ಒಬ್ಬರೇ ಶಿಕ್ಷಕಿ ಇದ್ದರು.
ಸಾಮಾನ್ಯವಾಗಿ ಶಾಲೆಗಳಲ್ಲಿ ಸ್ನೇಹಿತರ ಜೊತೆ ಮಾತನಾಡುವುದು, ಆಟವಾಡುವುದು ಎಲ್ಲ ಮಕ್ಕಳಿಗೆ ಖುಷಿ ನೀಡುತ್ತದೆ. ಆದರೆ ಸೋಫಿಯಾಳಿಗೆ ಆ ಭಾಗ್ಯ ಇರಲಿಲ್ಲ. ಇಡೀ ತರಗತಿಯಲ್ಲಿ ಅವಳು ಒಬ್ಬಳೇ ಕುಳಿತು ಪಾಠ ಕೇಳಬೇಕಿತ್ತು. ಖಾಲಿ ಕುರ್ಚಿಗಳನ್ನು ನೋಡಿ ಕೆಲವೊಮ್ಮೆ ಅವಳಿಗೆ ಮುಜುಗರವಾಗುತ್ತಿತ್ತು ಎನ್ನಲಾಗಿದೆ. ಇನ್ನೂ, ಒಂಟಿತನವನ್ನು ಹೋಗಲಾಡಿಸಲು ಅವಳು ತನ್ನ ಜಾಕೆಟ್ ಅನ್ನು ಪಕ್ಕದ ಸೀಟಿನ ಮೇಲೆ ಇಡುತ್ತಿದ್ದಳು. ಅದುವೇ, ಯಾರೋ ತನ್ನ ಜೊತೆ ಕುಳಿತಿದ್ದಾರೆ ಎಂಬ ಭಾವನೆಗಾಗಿ ಅವಳು ಹೀಗೆ ಮಾಡುತ್ತಿದ್ದಳು.

ಇನ್ನೂ, ಈ ಶಾಲೆಯ ಅತ್ಯಂತ ವಿಶೇಷ ಅಂಶವೆಂದರೆ ಅದರ ಪರಿಸರ. ಸುತ್ತಲೂ ದೊಡ್ಡ ಪರ್ವತಗಳು, ಹಸಿರು ಕಣಿವೆಗಳು ಈ ಸ್ಥಳವನ್ನು ಅತ್ಯಂತ ಸುಂದರವಾಗಿಸಿದ್ದವು. ಶಾಲೆ ಮುಗಿದ ನಂತರ ಸೋಫಿಯಾ ತನ್ನ ಶಿಕ್ಷಕಿ ಅಥವಾ ಕುಟುಂಬದವರೊಂದಿಗೆ ಸುತ್ತಮುತ್ತಲಿನ ಬೆಟ್ಟಗಳಲ್ಲಿ ವಾಕಿಂಗ್ ಹೋಗುತ್ತಿದ್ದಳು. ಹೀಗಾಗಿ ಇದು ಕೇವಲ ಶಿಕ್ಷಣದ ಕೇಂದ್ರವಾಗಿರದೆ ಶಾಂತಿ ಮತ್ತು ಸ್ಫೂರ್ತಿ ನೀಡುವ ತಾಣವಾಗಿತ್ತು. ಪ್ರಕೃತಿಯ ಮಧ್ಯೆ ಕಲಿಯುವ ಅವಕಾಶ ಸೋಫಿಯಾಗೆ ಸಿಕ್ಕಿತ್ತು.
ಸೋಫಿಯಾ ಮತ್ತು ಆಕೆಯ ಶಾಲೆಯ ಕಥೆ ಹೊರಬಿದ್ದ ತಕ್ಷಣ ಅದು ದೊಡ್ಡ ಚರ್ಚೆಗೆ ಗ್ರಾಸವಾಯಿತು. ಒಂದೇ ಮಗುವಿಗಾಗಿ ಇಡೀ ಶಾಲೆ ನಡೆಯುತ್ತಿದೆ ಎಂಬುದನ್ನು ಕೇಳಿ ಜನ ಅಚ್ಚರಿಪಟ್ಟರು. ಈ ವಿಶಿಷ್ಟ ಕಾರಣದಿಂದಾಗಿಯೇ ಆಲ್ಪೆಟ್ ಶಾಲೆಯನ್ನು ವಿಶ್ವದ ಅತ್ಯಂತ ಚಿಕ್ಕ ಶಾಲೆ ಎಂದು ಕರೆಯಲಾಯಿತು. ಇಂದಿಗೂ ಈ ಕಥೆ ಶಿಕ್ಷಣದ ಮಹತ್ವವನ್ನು ಸಾರುತ್ತದೆ. ಪ್ರಯತ್ನ ಎಷ್ಟೇ ಚಿಕ್ಕದಾಗಿರಲಿ, ಶಿಕ್ಷಣದ ಕಡೆಗೆ ಇಡುವ ಪ್ರತಿ ಹೆಜ್ಜೆಯೂ ದೊಡ್ಡದು ಎಂಬುದಕ್ಕೆ ಈ ಶಾಲೆಯೇ ಸಾಕ್ಷಿ.













