Last Updated:
ಟಿ20 ವಿಶ್ವಕಪ್ 2026ರಲ್ಲಿ ಸ್ಕಾಟ್ಲೆಂಡ್ ಮಹಿಳಾ ತಂಡವು ತನ್ನ ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದೆ. ಜೂನ್ 13, 2026ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಸ್ಕಾಟ್ಲೆಂಡ್ ಐರ್ಲೆಂಡ್ ತಂಡವನ್ನ (Scotland women vs Ireland women) 40 ರನ್‌ಗಳ ಅಂತರದಿಂದ ಸೋಲಿಸಿದೆ
ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಸ್ಕಾಟ್ಲೆಂಡ್ ತಂಡವು ತನ್ನ ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಸಿದೆ. ಜೂನ್ 13, 2026ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಸ್ಕಾಟ್ಲೆಂಡ್ ಐರ್ಲೆಂಡ್ ತಂಡವನ್ನ (Scotland women vs Ireland women) 40 ರನ್‌ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ (Women’s T20 World Cup) ತನ್ನ ಮೊದಲ ಜಯ ಸಾಧಿಸಿದೆ. ಸ್ಕಾಟ್ಲೆಂಡ್ ತಂಡಕ್ಕೆ ಇದು ಮೂರನೇ ವಿಶ್ವಕಪ್ ಆಗಿದೆ. ಕಳೆದ ಎರಡೂ ವಿಶ್ವಕಪ್‌ಗಳಲ್ಲಿ ಒಂದೂ ಜಯ ಸಾಧಿಸಿರಲಿಲ್ಲ. ಇದೀಗ ಬ್ರೈಸ್ ಸಹೋದರಿಯರ ಸಾಹಸದಿಂದ ಚೊಚ್ಚಲ ಗೆಲುವು ಪಡೆದುಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ನಾಯಕಿ ಕ್ಯಾಥರಿನ್ ಬ್ರೈಸ್ 39 ಬಾಲ್‌ಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 60 ರನ್ ಹಾಗೂ ಅವರ ಸಹೋದರಿ ಸಾರಾ ಬ್ರೈಸ್ 35 ಬಾಲ್‌ಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 49 ರನ್ ಸಿಡಿಸಿದರು. ಈ ಜೋಡಿ 6ನೇ ಓವರ್‌ನಿಂದ ಒಟ್ಟುಗೂಡಿ 17ನೇ ಓವರ್‌ತನಕ ಬ್ಯಾಟಿಂಗ್ ಮಾಡಿ 106 ರನ್‌ಗಳ ದೊಡ್ಡ ಜೊತೆಯಾಟ ನೀಡಿ ತಂಡವನ್ನು 36/2 ಸ್ಥಿತಿಯಿಂದ ಚೇತರಿಸಿಕೊಳ್ಳುವಂತೆ ಮಾಡಿದರು.
11 ಮತ್ತು 12ನೇ ಓವರ್‌ಗಳಲ್ಲಿ ಒಟ್ಟು 36 ರನ್ ಗಳಿಸುವ ಮೂಲಕ ತಂಡವು 180ಕ್ಕೂ ಹೆಚ್ಚು ರನ್ ಗಳಿಸುವ ಸಾಧ್ಯತೆಯನ್ನ ಮೂಡಿಸಿದ್ದರು. ಆದರೆ ಇವರಿಬ್ಬರ ಪತನದ ನಂತರ ಕೊನೆಯ 4 ಓವರ್‌ಗಳಲ್ಲಿ ಕೇವಲ 19 ರನ್ ಮಾತ್ರ ಬಂದವು. ಐರ್ಲೆಂಡ್ ಪರ ಅವಾ ಕ್ಯಾನಿಂಗ್ 3 ವಿಕೆಟ್ ಪಡೆದು ಮಿಂಚಿದರು.
ಐರ್ಲೆಂಡ್ ಕಳಪೆ ಬ್ಯಾಟಿಂಗ್
162 ರನ್ ಗಳ ಗುರಿ ಬೆನ್ನಟ್ಟಿದ ಐರ್ಲೆಂಡ್ ಮಹಿಳಾ ತಂಡ 19.2 ಓವರ್‌ಗಳಲ್ಲಿ 121 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ 40 ರನ್‌ಗಳ ಸೋಲೊಪ್ಪಿಕೊಂಡಿತು. ಆ್ಯಮಿ ಹಂಟರ್ 39 ಹಾಗೂ ಓರ್ಲಾ ಪ್ರೆಂಡರ್‌ಗ್ಯಾಸ್ಟ್ 33 ರನ್ ಗಳಿಸುವುದರೊಂದಿಗೆ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಸ್ಕಾಟ್ಲೆಂಡ್ ಪರ ಕಿರ್ಸ್ಟಿ ಗಾರ್ಡನ್ (ಮುಂಚಿನ ಇಂಗ್ಲೆಂಡ್ ಸ್ಪಿನ್ನರ್) ಅದ್ಭುತ ಬೌಲಿಂಗ್ ಮಾಡಿದರು. ಕೇವಲ 16 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. 13ನೇ ಓವರ್‌ನಲ್ಲಿ 4 ಬಾಲ್‌ಗಳಲ್ಲಿ 3 ವಿಕೆಟ್ ಕಬಳಿಸಿ ಐರ್ಲೆಂಡ್‌ನ ಮಧ್ಯಕ್ರಮವನ್ನು ಧ್ವಂಸಗೊಳಿಸಿದರು. ನಾಯಕಿ ಕ್ಯಾಥರಿನ್ ಬ್ರೈಸ್ 2 ವಿಕೆಟ್ ಪಡೆದರೆ, ಕ್ಯಾಥರೀನ್ ಫ್ರೇಸರ್ 3 ವಿಕೆಟ್ ಪಡೆದರು.
ಈ ಭರ್ಜರಿ ವಿಜಯದೊಂದಿಗೆ ಸ್ಕಾಟ್ಲೆಂಡ್ ಅಭಿಮಾನಿಗಳಲ್ಲಿ ಭಾರೀ ಖುಷಿ ತಂದಿದೆ. ಈ ಗೆಲುವು ಟೂರ್ನಿಯಲ್ಲಿ ಸ್ಕಾಟ್ಲೆಂಡ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಮಹಿಳಾ ಟಿ20 ವಿಶ್ವಕಪ್ 2026ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಹೊಸ ತಂಡಗಳಾದ ಸ್ಕಾಟ್ಲೆಂಡ್ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿವೆ.













