Last Updated:
Abhishek Banerjee: ಇಷ್ಟು ದಿನ ತನಿಖಾ ಸಂಸ್ಥೆಗಳ ಕಣ್ಗಾವಲ್ಲಿದ್ದ ಅಭಿಷೇಕ್, ಈಗ ಸಾರ್ವಜನಿಕವಾಗಿ ಆಕ್ರೋಶಕ್ಕೆ ತುತ್ತಾಗುತ್ತಿರುವುದು ತೃಣಮೂಲ ಕಾಂಗ್ರೆಸ್ನ ಭದ್ರಕೋಟೆ ಧೂಳೀಪಟವಾಗುತ್ತಿರುವ ಮುನ್ಸೂಚನೆಯೇ? ಸೋದರಳಿಯನಿಗೆ ಎದುರಾಗಿರುವ ಮತ್ತೊಂದು ಈ ದಿಢೀರ್ ಆಘಾತ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
ಬಂಗಾಳದ ರಾಜಕಾರಣದಲ್ಲಿ(Bengal Politics) ಸಿಡಿಲಬ್ಬರದ ನಾಯಕಿಯಾಗಿ ಗುರುತಿಸಿಕೊಂಡಿದ್ದ ಮಮತಾ ಬ್ಯಾನರ್ಜಿಗೆ (Mamata Banerjee) ಸದ್ಯ ಚೇತರಿಸಿಕೊಳ್ಳಲಾಗದ ಸ್ಥಿತಿ ಎದುರಾಗಿದೆಯೇ? ಸದಾ ವಿರೋಧಿಗಳ ವಿರುದ್ಧ ಗುಡುಗುತ್ತಿದ್ದ ದೀದಿಗೆ ಈಗ ಸ್ವತಃ ಸೋದರಳಿಯ ಅಭಿಷೇಕ್ ಬ್ಯಾನರ್ಜಿ (Abhishek Banerjee) ಮೇಲಿನ ಸರಣಿ ಪ್ರಹಾರಗಳು ನಡುಕ ಹುಟ್ಟಿಸಿವೆ. ಇಷ್ಟು ದಿನ ತನಿಖಾ (Investigate) ಸಂಸ್ಥೆಗಳ ಕಣ್ಗಾವಲ್ಲಿದ್ದ ಅಭಿಷೇಕ್, ಈಗ ಸಾರ್ವಜನಿಕವಾಗಿ ಆಕ್ರೋಶಕ್ಕೆ ತುತ್ತಾಗುತ್ತಿರುವುದು ತೃಣಮೂಲ ಕಾಂಗ್ರೆಸ್ನ ಭದ್ರಕೋಟೆ ಧೂಳೀಪಟವಾಗುತ್ತಿರುವ ಮುನ್ಸೂಚನೆಯೇ? ಸೋದರಳಿಯನಿಗೆ ಎದುರಾಗಿರುವ ಮತ್ತೊಂದು ಈ ದಿಢೀರ್ ಆಘಾತ ಏನು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.
ಪಶ್ಚಿಮ ಬಂಗಾಳದ ಬಹುಚರ್ಚಿತ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಕ್ಕೆ ಇದೀಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಮತ್ತೊಮ್ಮೆ ಕ್ರಮ ಕೈಗೊಂಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಜೂನ್ 15ರಂದು ಕೊಲ್ಕತ್ತಾದ ಇಡಿ ಕಚೇರಿಗೆ ಬಂದು ಹಾಜರಾಗುವಂತೆ ಸೂಚಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಹಲವು ವರ್ಷಗಳಿಂದ ಕೇಳಿಬರುತ್ತಿವೆ. ರಾಜ್ಯದ ಶಾಲಾ ಸೇವಾ ಆಯೋಗ (WBSSC) ಮೂಲಕ ನಡೆದ ನೇಮಕಾತಿಯಲ್ಲಿ ಅಂಕಪಟ್ಟಿ ತಿದ್ದುಪಡಿ, ಹಣ ಪಡೆದು ಉದ್ಯೋಗ ನೀಡುವುದು, ಅರ್ಹರ ಬದಲು ಅನರ್ಹರನ್ನು ಆಯ್ಕೆ ಮಾಡುವುದು ಸೇರಿದಂತೆ ಹಲವು ಗಂಭೀರ ಆರೋಪಗಳು ಹೊರಬಿದ್ದಿದ್ದವು. ಈ ಪ್ರಕರಣವನ್ನು ಸಿಬಿಐ ಹಾಗೂ ಇಡಿ ಸಂಯುಕ್ತವಾಗಿ ತನಿಖೆ ನಡೆಸುತ್ತಿವೆ.
ಈ ಹಗರಣದ ಸಂಬಂಧ ಈಗಾಗಲೇ ಹಲವಾರು ಟಿಎಂಸಿ ನಾಯಕರು ಹಾಗೂ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಬಂಧನಕ್ಕೊಳಗಾಗಿದ್ದು, ಅವರ ಆಪ್ತರ ಮನೆಗಳಲ್ಲಿ ಕೋಟ್ಯಂತರ ರೂಪಾಯಿ ನಗದು ಹಾಗೂ ಚಿನ್ನ ಪತ್ತೆಯಾಗಿದ್ದರಿಂದ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಬಳಿಕ ತನಿಖೆ ಹಂತ ಹಂತವಾಗಿ ವಿಸ್ತರಿಸಿಕೊಂಡು, ಟಿಎಂಸಿ ಪಕ್ಷದ ಪ್ರಮುಖ ನಾಯಕರತ್ತ ಸಾಗುತ್ತಿದೆ.
ಇದೀಗ ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಭಿಷೇಕ್ ಬ್ಯಾನರ್ಜಿ ಅವರಿಗೆ ಇಡಿ ಸಮನ್ಸ್ ನೀಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಇಡಿ ಅಧಿಕಾರಿಗಳ ಪ್ರಕಾರ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ಹಣದ ಹರಿವಿನ ಕುರಿತು ಕೆಲವು ಪ್ರಮುಖ ಮಾಹಿತಿ ಲಭ್ಯವಾಗಿದ್ದು, ಅದರ ಆಧಾರದ ಮೇಲೆ ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಈ ಹಿಂದೆ ಕೂಡ ಅಭಿಷೇಕ್ ಬ್ಯಾನರ್ಜಿ ಅವರನ್ನು ಇದೇ ಪ್ರಕರಣದಲ್ಲಿ ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ಇದರ ನಡುವೆ ಟಿಎಂಸಿ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿಯು ತನಿಖಾ ಸಂಸ್ಥೆಗಳನ್ನು ರಾಜಕೀಯ ಪ್ರತೀಕಾರಕ್ಕಾಗಿ ಬಳಸುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಚುನಾವಣೆಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿ ಇಡಿ ಮತ್ತು ಸಿಬಿಐ ಕ್ರಮ ಕೈಗೊಳ್ಳುತ್ತಿದೆ ಎಂಬ ಆರೋಪವನ್ನು ಪಕ್ಷ ಪುನರಾವರ್ತಿಸಿದೆ. ಅಭಿಷೇಕ್ ಬ್ಯಾನರ್ಜಿ ಕೂಡ ಹಿಂದೆ ತನಿಖಾ ಸಂಸ್ಥೆಗಳ ಕ್ರಮವನ್ನು “ರಾಜಕೀಯ ಪ್ರೇರಿತ” ಎಂದು ಟೀಕಿಸಿದ್ದರು.
ಇನ್ನೊಂದೆಡೆ ಬಿಜೆಪಿ ಪಕ್ಷ, ಶಿಕ್ಷಕರ ನೇಮಕಾತಿ ಹಗರಣದಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದ್ದು, ಪ್ರಕರಣದ ಸಂಪೂರ್ಣ ಸತ್ಯ ಹೊರಬರಬೇಕು ಎಂದು ಆಗ್ರಹಿಸಿದೆ. ಲಕ್ಷಾಂತರ ಉದ್ಯೋಗಾರ್ಥಿಗಳ ಭವಿಷ್ಯ ಹಾಳಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದ್ದು, ಪ್ರಕರಣದಲ್ಲಿ ಇನ್ನೂ ಹಲವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
Jun 03, 2026 11:13 PM IST













