Last Updated:
Viral Video: ಒಬ್ಬ ತಂದೆ ಮಗನಿಗೆ ಕೊಟ್ಟ ಕೊನೆಯ ಮಾತು, “ನನ್ನ 10 ಹೆಣ್ಮಕ್ಕಳ ಜವಾಬ್ದಾರಿ ನಿನ್ನದು”. ಆ ಮಾತೇ ಒಂದು ಜೀವನದ ಶಪಥವಾಯಿತು. 3 ಮಕ್ಕಳ ಮದುವೆ ಮಾಡಿದ ಆ ಮಗ, ಈಗ 35 ಲಕ್ಷ ಸಾಲದ ಹೊರೆಯಲ್ಲಿ ಮುಳುಗಿದ್ದಾನೆ. ಇನ್ನೂ 7 ಸಹೋದರಿಯರ ಮದುವೆ ಬಾಕಿ. ತನ್ನ ಮದುವೆ, ತನ್ನ ಕನಸು, ತನ್ನ ಯೌವನ ಎಲ್ಲವನ್ನೂ ತ್ಯಾಗ ಮಾಡಿ, ತಮ್ಮ ಎಂಬ ಪಾತ್ರವನ್ನೇ ದೊಡ್ಡದಾಗಿಸಿಕೊಂಡವನ ಕಣ್ಣೀರಿನ ಕಥೆ ಇದು.
Viral Video: ಹೆತ್ತವರ ಆಸೆಗಳನ್ನು (Parents’ Wishes) ಈಡೇರಿಸುವುದು ಪ್ರತಿಯೊಬ್ಬ ಮಗ ಮತ್ತು ಮಗಳ ಕರ್ತವ್ಯ ಹಾಗೂ ಕನಸಾಗಿರುತ್ತದೆ (Dream). ಆದರೆ ಕೆಲವೊಮ್ಮೆ ಕುಟುಂಬದ (Family) ಮೇಲಿನ ಈ ಪ್ರೀತಿ (Love) ಮತ್ತು ಜವಾಬ್ದಾರಿಗಳು ಎಷ್ಟೊಂದು ಭಾರವಾಗುತ್ತವೆ ಎಂದರೆ, ಅದು ವ್ಯಕ್ತಿಯೊಬ್ಬನ ಇಡೀ ಜೀವನವನ್ನೇ (Life) ಬಲಿಪಡೆಯುವ ಹಂತಕ್ಕೆ ತಲುಪುತ್ತದೆ. ಅದಕ್ಕೆ ಈ ಘಟನೆಯೇ ಸಾಕ್ಷಿ!
ಹೌದು, ತಂದೆ ಸಾಯುವ ಮುನ್ನ ನೀಡಿದ್ದ ಒಂದೇ ಒಂದು ಮಾತನ್ನು ಉಳಿಸಿಕೊಳ್ಳಲು ಹೋಗಿ ತನ್ನ ಸ್ವಂತ ಭವಿಷ್ಯ, ಯೌವನ ಹಾಗೂ ನೆಮ್ಮದಿಯನ್ನೇ ಪಣಕ್ಕಿಟ್ಟ ಯುವಕನೊಬ್ಬನ ಕರುಣಾಜನಕ ಕಥೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಇದು ಕೇವಲ ಒಂದು ಕುಟುಂಬದ ಕಥೆಯಲ್ಲ, ಬದಲಾಗಿ ಕೌಟುಂಬಿಕ ಜವಾಬ್ದಾರಿಗಳಿಗಾಗಿ ತಮ್ಮ ಕನಸುಗಳನ್ನು ಸಾಯಿಸಿಕೊಳ್ಳುವ ಅಸಂಖ್ಯಾತ ಯುವಕರ ವಾಸ್ತವದ ಕನ್ನಡಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಜೀವನದ ಕಟು ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಆತನ ಕುಟುಂಬದಲ್ಲಿ ಒಟ್ಟು 10 ಜನ ಸಹೋದರಿಯರಿದ್ದಾರೆ. ಬಹಳ ವರ್ಷಗಳಿಂದ ಗಂಡು ಮಗನಿಗಾಗಿ ಹಂಬಲಿಸುತ್ತಿದ್ದ ತಂದೆಗೆ ಕೊನೆಗೂ ಈತ ಜನಿಸಿದ್ದ. ಮಗ ಹುಟ್ಟಿದನೆಂಬ ಕುಟುಂಬದ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಯಾಕಂದ್ರೆ, ಮಗನಿಗೆ ಸ್ವಲ್ಪ ವಯಸ್ಸಾಗುತ್ತಿದ್ದಂತೆಯೇ ತಂದೆಗೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆ ಆವರಿಸಿತು. ತನ್ನ ಅಂತ್ಯ ಹತ್ತಿರವಾಗಿದೆ ಎಂದು ಅರಿತ ತಂದೆ, ಸಾವಿಗೂ ಮುನ್ನ ಮಗನನ್ನು ಬಳಿ ಕರೆದು ಭಾಷೆಯೊಂದನ್ನು ತೆಗೆದುಕೊಂಡರು.
ಅದುವೇ, “ನಿನ್ನ 10 ಜನ ಸಹೋದರಿಯರ ಮದುವೆಯ ಸಂಪೂರ್ಣ ಜವಾಬ್ದಾರಿ ನಿನ್ನದೇ, ಸಂಬಂಧಿಕರ ಮುಂದೆ ಕೈಯೊಡ್ಡದೆ ನೀನೇ ಅವರ ಮದುವೆ ಮಾಡಬೇಕು” ಎಂದು ತಂದೆ ಕೇಳಿಕೊಂಡರು. ತಂದೆಯ ಮೇಲಿನ ಭಕ್ತಿಯಿಂದ ಮಗ ಕೂಡ ಮರುಯೋಚಿಸದೆ ಮಾತು ಕೊಟ್ಟುಬಿಟ್ಟ.
ತಂದೆಗೆ ಕೊಟ್ಟ ಮಾತಿನಂತೆ ಈ ಯುವಕ ಈಗಾಗಲೇ ತನ್ನ ಮೂವರು ಸಹೋದರಿಯರ ವಿವಾಹವನ್ನು ಅದ್ಧೂರಿಯಾಗಿಯೇ ನೆರವೇರಿಸಿದ್ದಾನೆ. ಆದರೆ ಈ ಜವಾಬ್ದಾರಿ ಆತನನ್ನು ಆರ್ಥಿಕವಾಗಿ ಸಂಪೂರ್ಣ ಹೈರಾಣಾಗಿಸಿದೆ. ಮೂರು ಮದುವೆಗಳ ಸಮಾರಂಭ, ಉಡುಗೊರೆ ಹಾಗೂ ಇತರ ಖರ್ಚುಗಳಿಂದಾಗಿ ಆತ ಈಗಾಗಲೇ ಬರೋಬ್ಬರಿ 35 ಲಕ್ಷ ರೂಪಾಯಿ ಸಾಲದ ಸುಳಿಯಲ್ಲಿ ಸಿಲುಕಿದ್ದಾನೆ. ಇದಕ್ಕಿಂತ ಆತಂಕದ ವಿಚಾರವೆಂದರೆ, ಇನ್ನೂ ಏಳು ಜನ ಸಹೋದರಿಯರ ಮದುವೆ ಬಾಕಿ ಇದೆ. ಮುಂಬರುವ ವರ್ಷಗಳಲ್ಲಿ ಈ ಎಲ್ಲಾ ಮದುವೆಗಳನ್ನು ಮುಗಿಸಲು ಆತನಿಗೆ ಇನ್ನೂ 20 ರಿಂದ 30 ಲಕ್ಷ ರೂಪಾಯಿಗಳ ಅಗತ್ಯವಿದೆ. ತಂದೆಯ ಮಾತನ್ನು ಈಡೇರಿಸುವ ಛಲದಲ್ಲಿ ಆತನ ಸಾಲದ ಹೊರೆ ಬೆಟ್ಟದಷ್ಟು ಬೆಳೆಯುತ್ತಲೇ ಇದೆ.
ವಿಡಿಯೋದಲ್ಲಿ ನಗುತ್ತಲೇ ತನ್ನ ಕಷ್ಟಗಳನ್ನು ಹೇಳಿಕೊಳ್ಳುವ ಈ ಯುವಕ, ಸಹೋದರಿಯರ ಮದುವೆ ಮುಗಿದ ಬಳಿಕ ನನ್ನ ಮದುವೆಯ ಬಗ್ಗೆ ಯೋಚಿಸುತ್ತೇನೆ ಎಂದಿದ್ದಾನೆ. ಅಷ್ಟೆಲ್ಲಾ ಸಾಲ ತೀರಿಸಿ ನಾನು ಮದುವೆಯಾಗುವಷ್ಟರಲ್ಲಿ ನನಗೆ 60 ರಿಂದ 70 ವರ್ಷ ವಯಸ್ಸಾಗಿರುತ್ತದೆ ಎಂದು ಆತ ತಮಾಷೆಯಾಗಿ ಹೇಳಿದರೂ, ಆ ನಗುವಿನ ಹಿಂದೆ ಅಡಗಿರುವ ನೋವು ನೋಡುಗರ ಕಣ್ಣಂಚು ಒದ್ದೆಯಾಗುವಂತೆ ಮಾಡುತ್ತದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಆತನ ಜವಾಬ್ದಾರಿಯನ್ನು ಕೊಂಡಾಡಿದರೆ, ಇನ್ನು ಕೆಲವರು ಕುಟುಂಬಕ್ಕಾಗಿ ಸ್ವಂತ ಜೀವನವನ್ನೇ ಹಾಳುಮಾಡಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸುತ್ತಿದ್ದಾರೆ.
ಒಟ್ಟಾರೆಯಾಗಿ, ಜವಾಬ್ದಾರಿ ಮತ್ತು ಸ್ವಂತ ಜೀವನದ ನಡುವಿನ ಈ ಸಂಘರ್ಷ ನಿಜಕ್ಕೂ ಮನಕಲಕುವಂತಿದೆ. ಕುಟುಂಬದ ಮೇಲಿನ ಪ್ರೀತಿ ಹಾಗೂ ಕರ್ತವ್ಯದ ಜೊತೆಗೆ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಂತ ಭವಿಷ್ಯ ಮತ್ತು ಆರ್ಥಿಕ ಭದ್ರತೆಯ ಬಗ್ಗೆಯೂ ಯೋಚಿಸುವುದು ಇಂದಿನ ಕಾಲಘಟ್ಟದಲ್ಲಿ ಅತ್ಯಂತ ಅನಿವಾರ್ಯವಾಗಿದೆ ಎಂಬುದನ್ನು ಈ ಘಟನೆ ನಮಗೆ ಎಚ್ಚರಿಸುತ್ತದೆ.













