Last Updated:
Viral News: ಡಿಗ್ರಿ ಬೇಡ, ಸ್ಕಿಲ್ ಇದ್ರೆ ಸಾಕು; 20 ನಿಮಿಷ ಕೆಲಸಕ್ಕೆ ₹9,500 ಚಾರ್ಜ್ ಮಾಡಿದ ಮೆಕ್ಯಾನಿಕ್! ಆತ ಮಾಡಿದ್ದಾದ್ರೂ ಏನು? ಈ ಘಟನೆ ನಡೆದಿದ್ದಾದರೂ ಎಲ್ಲಿ ಗೊತ್ತಾ?
Viral Video: ಡಿಗ್ರಿ (Degree) ಇಲ್ಲ ಅಂದ್ರೆ ಲೈಫಲ್ಲಿ ಏನೂ ಆಗಲ್ಲ ಅನ್ನೋ ಮಾತನ್ನು ಅಮೆರಿಕದಲ್ಲಿ (America) ವಾಸಿಸುವ ಭಾರತೀಯ ಮಹಿಳೆಯೊಬ್ಬರ ಅನುಭವ ಸುಳ್ಳು ಮಾಡಿದೆ. ಯಾಕಂದ್ರೆ, ಅವರ ಮನೆಯ ಗ್ಯಾರೇಜ್ (House Garage) ಬಾಗಿಲು ಕೆಟ್ಟು ನಿಂತಿತ್ತು. ಇನ್ನು, ಇದನ್ನ ಸರಿ ಮಾಡಲು ಕರೆದ ಮೆಕ್ಯಾನಿಕ್ (Mechanic) ಬಂದು ಕೇವಲ 20 ನಿಮಿಷದಲ್ಲಿ ಕೆಲಸ ಮುಗಿಸಿದ. ಆದರೆ, ಅದಕ್ಕೆ ಆತ ಮಾಡಿದ ಬಿಲ್ ಎಷ್ಟು ಗೊತ್ತಾ?
ಬರೋಬ್ಬರಿ 9,500 ರೂಪಾಯಿ. ಅಂದರೆ ಸುಮಾರು 115 ಡಾಲರ್.! ಹೌದು, ಒಂದು ಗಂಟೆಯೂ ಕೆಲಸ ಮಾಡದೆ, ಡಿಗ್ರಿ ಸರ್ಟಿಫಿಕೇಟ್ ತೋರಿಸದೆ, ಕೇವಲ ತನ್ನ ಕೈಚಳಕದಿಂದಲೇ ಅವನು ದುಡಿದ ಹಣ ಅದು. ಈ ಘಟನೆಯನ್ನು ಆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಂತೆ ವೈರಲ್ ಆಯ್ತು. ಅಮೆರಿಕದಲ್ಲಿ ಪ್ಲಂಬರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್ ಥರ ಕೌಶಲ್ಯ ಆಧಾರಿತ ಕೆಲಸಗಳಿಗೆ ಇರುವ ಬೆಲೆ, ಗೌರವ ಮತ್ತು ದುಡ್ಡು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಪದವಿ ದೊಡ್ಡದೋ, ಕೌಶಲ್ಯ ದೊಡ್ಡದೋ ಎಂಬ ಚರ್ಚೆ ಈಗ ಜೋರಾಗಿದೆ. ನೀವು ತಿಳಿದುಕೊಂಡಿರೋ ‘ವೈಟ್ ಕಾಲರ್’ ಕೆಲಸವೇ ಶ್ರೇಷ್ಠ ಅನ್ನೋ ಭ್ರಮೆಯನ್ನು ಈ ಒಂದು ಬಿಲ್ ಒಡೆದು ಹಾಕಿದೆ. ಆ ಕುರಿತ ವರದಿ ಇಲ್ಲಿದೆ.
ಅಮೆರಿಕದಲ್ಲಿ ನೆಲೆಸಿರುವ ಭಾರತೀಯೇ ಅಮೃತಾ ಸಿಂಗ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವಿಡಿಯೋ ಈಗ ವೈರಲ್ ಆಗಿದೆ. ಅವರ ಮನೆಯ ಗ್ಯಾರೇಜ್ ಬಾಗಿಲಿನ ಸಣ್ಣ ಸಮಸ್ಯೆಯನ್ನು ಸರಿಪಡಿಸಲು ಬಂದ ಮೆಕ್ಯಾನಿಕ್ ಕೇವಲ 20 ನಿಮಿಷಗಳಲ್ಲಿ ಕೆಲಸ ಮುಗಿಸಿ 100 ಡಾಲರ್ ಅಂದರೆ ಸುಮಾರು 9,500 ರೂಪಾಯಿ ಶುಲ್ಕ ಪಡೆದಿದ್ದಾರೆ. ವಿಡಿಯೋದಲ್ಲಿ ಅಮೃತಾ ಅವರು ಅಮೆರಿಕದಲ್ಲಿ ಪ್ಲಂಬರ್, ಎಲೆಕ್ಟ್ರಿಷಿಯನ್, ಗ್ಯಾರೇಜ್ ಡೋರ್ ತಜ್ಞರಂತಹ ಕೌಶಲ್ಯ ಆಧಾರಿತ ವೃತ್ತಿಪರರು ವರ್ಷಕ್ಕೆ 50,000 ದಿಂದ 1,00,000 ಡಾಲರ್ ವರೆಗೆ ಸಂಪಾದಿಸುತ್ತಾರೆ ಎಂದು ಹೇಳಿದ್ದಾರೆ. ಅದರಂತೆ, ಪದವಿ ಇಲ್ಲದಿದ್ದರೂ ಪ್ರಾಯೋಗಿಕ ಕೌಶಲ್ಯದಿಂದ ಉತ್ತಮ ಜೀವನ ನಡೆಸಬಹುದು ಎಂಬುದು ಅವರ ವಾದ.
ಮುಂದುವರೆದು, ಅಮೃತಾ ಸಿಂಗ್ ತಮ್ಮ ಪೋಸ್ಟ್‌ನಲ್ಲಿ ಅಮೆರಿಕದಲ್ಲಿ ಯಾವುದೇ ವೃತ್ತಿಯನ್ನು ಕೀಳಾಗಿ ಕಾಣುವುದಿಲ್ಲ ಎಂದು ಬರೆದಿದ್ದಾರೆ. ಮೆಕ್ಯಾನಿಕ್, ಪ್ಲಂಬರ್, ಎಲೆಕ್ಟ್ರಿಷಿಯನ್‌ಗಳು ದುಬಾರಿ ವಾಹನಗಳನ್ನು ಹೊಂದಿರುತ್ತಾರೆ, ತೆರಿಗೆ ಕಟ್ಟುತ್ತಾರೆ ಮತ್ತು ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಾರೆ. ಪರಿಣತಿ ಬೇಕಾದ ಕೆಲಸಕ್ಕೆ ಅಲ್ಲಿ ಹೆಚ್ಚಿನ ಸಂಭಾವನೆ ಸಿಗುತ್ತದೆ. ಅನೇಕ ಬಾರಿ ಕೇವಲ ಮನೆಗೆ ಬಂದು ನೋಡುವುದಕ್ಕೇ ಬೇಸ್ ಚಾರ್ಜ್ ಇರುತ್ತದೆ. ನಂತರ ಸಮಸ್ಯೆಯ ಸ್ವರೂಪಕ್ಕೆ ತಕ್ಕಂತೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಏತನ್ಮಧ್ಯೆ, ಈ ವಿಡಿಯೋ ನೋಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ಶುರುವಾಗಿದೆ. ಹಲವರು ಅಮೆರಿಕ ಮತ್ತು ದಕ್ಷಿಣ ಏಷ್ಯಾದ ಕೆಲಸದ ಸಂಸ್ಕೃತಿಯನ್ನು ಹೋಲಿಸಿದ್ದಾರೆ. ಒಬ್ಬ ಬಳಕೆದಾರರು ಅಮೆರಿಕದ ಮೆಕ್ಯಾನಿಕ್ ಎಲ್ಲಾ ಉಪಕರಣಗಳನ್ನು ತಾನೇ ತರುತ್ತಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ದಕ್ಷಿಣ ಏಷ್ಯಾದಲ್ಲಿ ಕೆಲವು ಟೆಕ್ನಿಷಿಯನ್‌ಗಳು ಗ್ರಾಹಕರಿಂದಲೇ ಸಾಮಗ್ರಿ ಕೇಳುತ್ತಾರೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಎಸಿ ರಿಪೇರಿಗೆ ಬಂದವರು ಎಕ್ಸ್‌ಟೆನ್ಷನ್ ಕಾರ್ಡ್ ತರದೇ ಮನೆ ಮಾಲೀಕರಿಂದಲೇ ಪಡೆದ ಪ್ರಸಂಗವನ್ನು ಅವರು ತಮಾಷೆಯಾಗಿ ಬರೆದಿದ್ದಾರೆ.
ಒಟ್ಟಾರೆಯಾಗಿ, ಈ ಘಟನೆಯು, ಡಿಗ್ರಿಗಿಂತ ಸ್ಕಿಲ್ ಮುಖ್ಯ ಎಂಬ ಚರ್ಚೆಯನ್ನ ಮತ್ತೆ ಮುನ್ನೆಲೆಗೆ ತಂದಿದೆ. ಭಾರತದಲ್ಲಿಯೂ ಸ್ಕಿಲ್ ಇಂಡಿಯಾದಂತಹ ಯೋಜನೆಗಳ ಮೂಲಕ ಕೌಶಲ್ಯ ತರಬೇತಿಗೆ ಒತ್ತು ನೀಡಲಾಗುತ್ತಿದೆ.
ಆದರೆ ವೃತ್ತಿ ಗೌರವ ಮತ್ತು ಸಂಭಾವನೆಯಲ್ಲಿ ಇನ್ನೂ ಬಹಳಷ್ಟು ಬದಲಾವಣೆ ಆಗಬೇಕಿದೆ ಎಂಬುದು ಹಲವರ ಅಭಿಪ್ರಾಯ. ಕೌಶಲ್ಯ ಇದ್ದರೆ ಎಲ್ಲಿ ಬೇಕಾದರೂ ಬದುಕಬಹುದು ಎಂಬುದಕ್ಕೆ ಅಮೆರಿಕದ ಮೆಕ್ಯಾನಿಕ್ ಉದಾಹರಣೆಯಾಗಿದ್ದಾರೆ.













