Last Updated:
ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್ಗಳ ಸೋಲನ್ನು ಅನುಭವಿಸಿದರೂ, ವೈಭವ್ ಸೂರ್ಯವಂಶಿ ಅವರ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವು ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ಅವರು ಭಾರತಕ್ಕಾಗಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನಾಗುವ ಮೂಲಕ ಇತಿಹಾಸ ನಿರ್ಮಿಸಿದರು.
ಶನಿವಾರ ಮ್ಯಾಂಚೆಸ್ಟರ್ನಲ್ಲಿ ಇಂಗ್ಲೆಂಡ್ ವಿರುದ್ಧದ (India vs England) ಎರಡನೇ ಟಿ20 ಪಂದ್ಯದಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಪಂದ್ಯದ ಬಳಿಕ ಬೇಬಿ ಬಾಸ್ ಖ್ಯಾತಿಯ ವೈಭವ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ. ಐಪಿಎಲ್ನಲ್ಲಿ ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಐರ್ಲೆಂಡ್ ವಿರುದ್ಧದ ಹಿಂದಿನ ಎರಡು ಟಿ20 ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಗಳಲ್ಲಿ ಅವರನ್ನು ಆಡುವ ಹನ್ನೊಂದರಿಂದ ಹೊರಗಿಟ್ಟಿದ್ದ ಬಗ್ಗೆ ಗಮನಾರ್ಹ ಚರ್ಚೆ ನಡೆದಿತ್ತು. ಅಂತಿಮವಾಗಿ ಮ್ಯಾಂಚೆಸ್ಟರ್ ಪಂದ್ಯದಲ್ಲಿ ಅವಕಾಶವನ್ನು ಪಡೆದುಕೊಂಡ ವೈಭವ್, ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಇನ್ನಿಂಗ್ಸ್ನಲ್ಲಿ 10 ಎಸೆತಗಳಲ್ಲಿ 14 ರನ್ ಗಳಿಸಿ ಔಟ್ ಆದರು.
ಈ ಪಂದ್ಯದಲ್ಲಿ ಭಾರತ ತಂಡ ನಾಲ್ಕು ವಿಕೆಟ್ಗಳ ಸೋಲನ್ನು ಅನುಭವಿಸಿದರೂ, ವೈಭವ್ ಸೂರ್ಯವಂಶಿ ಅವರ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವು ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ಅವರು ಭಾರತಕ್ಕಾಗಿ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರನಾಗುವ ಮೂಲಕ ಇತಿಹಾಸ ನಿರ್ಮಿಸಿದರು. ವೈಭವ್ ಮೊದಲ ಕ್ಯಾಪ್ ಪಡೆದು ಸಚಿನ್ ತೆಂಡೂಲ್ಕರ್ ಮತ್ತು ಶಫಾಲಿ ವರ್ಮಾ ಅವರ ದಾಖಲೆಗಳನ್ನು ಮುರಿದರು. ಪಂದ್ಯದ ನಂತರ, ವೈಭವ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಟೀಮ್ ಇಂಡಿಯಾ ಜೆರ್ಸಿಯಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡರು ಮತ್ತು ತಮ್ಮ ಪ್ರಯಾಣದುದ್ದಕ್ಕೂ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳು, ತಂಡದ ಸದಸ್ಯರು ಮತ್ತು ಹಿರಿಯ ಆಟಗಾರರಿಗೆ ವಿಶೇಷ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ದೇಶವನ್ನು ಪ್ರತಿನಿಧಿಸುವುದು ಅತ್ಯಂತ ಗೌರವದ ವಿಷಯ ಎಂದು ಅವರು ಹೇಳಿದ್ದಾರೆ.
ವೈಭವ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ “ಎಲ್ಲರಿಂದ ಸಂದೇಶಗಳು ಹರಿದು ಬರುತ್ತಿರುವುದನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನನ್ನ ಹಿತೈಷಿಗಳು, ಹಿರಿಯರು ಮತ್ತು ಯಾವಾಗಲೂ ನನ್ನನ್ನು ಪ್ರೀತಿಯಿಂದ ಸುರಿಸುತ್ತಿರುವ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ದೇಶವನ್ನು ಪ್ರತಿನಿಧಿಸುವ ಅದ್ಭುತ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ನನ್ನ ತಂಡಕ್ಕಾಗಿ ನಾನು ಯಾವಾಗಲೂ ಉತ್ತಮ ಪ್ರದರ್ಶನ ನೀಡಲು ಶ್ರಮಿಸುತ್ತೇನೆ. ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳು ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಿದ್ದಾರೆ.
ಪಂದ್ಯಕ್ಕೆ ಸಂಬಂಧಿಸಿದಂತೆ, ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 190 ರನ್ ಗಳಿಸಿತು. ಅಭಿಷೇಕ್ ಶರ್ಮಾ (43) ಮತ್ತು ಇಶಾನ್ ಕಿಶನ್ (49) ಭದ್ರ ಬುನಾದಿ ಹಾಕಿದರೆ, ನಾಯಕ ಶ್ರೇಯಸ್ ಅಯ್ಯರ್ 37 ರನ್ಗಳ ಕೊಡುಗೆ ನೀಡಿದ್ದಾರೆ. ಕೊನೆಯಲ್ಲಿ, ತಿಲಕ್ ವರ್ಮಾ ಕೇವಲ 11 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ ಅಮೋಘ ಆಟವಾಡಿದರು. ತಿಲಕ್ ವರ್ಮಾ ಅಂತಿಮ ಓವರ್ನಲ್ಲಿ ಮಾತ್ರ 17 ರನ್ ಗಳಿಸಿದ್ದರಿಂದ ಭಾರತ ಗೌರವಾನ್ವಿತ ಮೊತ್ತವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಒಂದು ಹಂತದಲ್ಲಿ ತಂಡ 200ರ ಗಡಿಯನ್ನ ಸುಲಭವಾಗಿ ದಾಟುತ್ತಿತ್ತು, ಆದರೆ ಇಂಗ್ಲೆಂಡ್ ಬೌಲರ್ ಸ್ಯಾಮ್ ಕರನ್ ಟೀಮ್ ಇಂಡಿಯಾದ ಸ್ಕೋರಿಂಗ್ ದರವನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.
191 ರನ್ಗಳ ಗುರಿಯನ್ನು ಬೆನ್ನಟ್ಟಲು ಇಂಗ್ಲೆಂಡ್ ತಂಡಕ್ಕೆ ಅರ್ಷದೀಪ್ ಭಾರೀ ಹೊಡೆತ ನೀಡಿದರು. ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಅವರನ್ನ ಶೂನ್ಯಕ್ಕೆ ಪೆವಿಲಿಯನ್ ಸೇರಿಸಿದರು. ಆದರೆ ಹ್ಯಾರಿ ಬ್ರೂಕ್ ಕೇವಲ 15 ಎಸೆತಗಳಲ್ಲಿ 39 ರನ್ ಗಳಿಸುವ ಮೂಲಕ ಪಂದ್ಯವನ್ನು ಇಂಗ್ಲೆಂಡ್ ಪರವಾಗಿ ತಿರುಗಿಸಿದರು. ಬ್ರೂಕ್ ನಿರ್ಗಮನದ ನಂತರ, ಜೇಕಬ್ ಬೆಥೆಲ್ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದರು, 46 ಎಸೆತಗಳಲ್ಲಿ ತಲಾ 5 ಬೌಂಡರಿ, 5 ಸಿಕ್ಸರ್ ಸಹಿತ್ 76 ರನ್ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಬೆಥೆಲ್ಗೆ ಸಾಥ್ ಕೊಟ್ಟ ಟಾಮ್ ಬ್ಯಾಂಟನ್ 67 ರನ್ಗಳ ಜೊತೆಯಾಟ ಹಂಚಿಕೊಂಡರು. ಈ ಪಂದ್ಯದಲ್ಲಿ 17ನೇ ಓವರ್ ವರೆಗೂ ಭಾರತ ಮೇಲುಗೈ ಸಾಧಿಸಿತ್ತು. ಆದರೆ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ 17ನೇ ಓವರ್ನಲ್ಲಿ ಎರಡು ನೋ-ಬಾಲ್ಗಳು ಸೇರಿದಂತೆ 29 ರನ್ಗಳನ್ನು ಬಿಟ್ಟುಕೊಟ್ಟರು. ಈ ಓವರ್ ಟೀಮ್ ಇಂಡಿಯಾ ಕೈಯಲ್ಲಿದ್ದ ಪಂದ್ಯವನ್ನ ಇಂಗ್ಲೆಂಡ್ ಕಡೆಗೆ ತಿರುಗಿಸಿತು. ಇಂಗ್ಲೆಂಡ್ ತಂಡ ಇನ್ನು ಒಂದು ಓವರ್ ಇರುವಂತೆ ಗೆಲುವು ತಂದುಕೊಟ್ಟಿತು.













