Last Updated:
2026ರ ಐಪಿಎಲ್ ಸೀಸನ್ನಲ್ಲಿ ವೈಭವ್ ಸೂರ್ಯವಂಶಿ ವಿಶ್ವದ ಅತ್ಯುತ್ತಮ ಬೌಲರ್ಗಳನ್ನು ಸಹ ಎದುರಿಸಿದರು. ಅವರು 16 ಇನ್ನಿಂಗ್ಸ್ಗಳಲ್ಲಿ 776 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಆದರೆ ಅದೇ ಪ್ರದರ್ಶನವನ್ನ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತೋರಲು ವಿಫಲರಾಗುತ್ತಿದ್ದಾರೆ.
ಕಳೆದ ಮೂರು ತಿಂಗಳಿನಿಂದ ವೈಭವ್ ಸೂರ್ಯವಂಶಿ (Vaibhav Sooryavanshi) ಹೆಸರು ಎಲ್ಲೆಲ್ಲೂ ಕೇಳಿಬರುತ್ತಿತ್ತು. ಆತನ ಅಬ್ಬರವನ್ನ ದೇಶ-ವಿದೇಶಗಳ ಕ್ರಿಕೆಟಿಗರು, ಅಭಿಮಾನಿಗಳು ಕಣ್ತುಂಬಿಕೊಂಡಿದ್ದರು. 2026ರ ಐಪಿಎಲ್ ಸೀಸನ್ನಲ್ಲಿ (IPL Season), ವೈಭವ್ ಸೂರ್ಯವಂಶಿ ವಿಶ್ವದ ಅತ್ಯುತ್ತಮ ಬೌಲರ್ಗಳನ್ನು ಸಹ ಎದುರಿಸಿದರು. ಅವರು 16 ಇನ್ನಿಂಗ್ಸ್ಗಳಲ್ಲಿ 776 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಜಸ್ಪ್ರೀತ್ ಬುಮ್ರಾ ಅವರಿಂದ ಹಿಡಿದು ಪ್ಯಾಟ್ ಕಮ್ಮಿನ್ಸ್ವರೆಗಿನ (Pat Cummins) ಬೌಲರ್ಗಳ ವಿರುದ್ಧ ಅವರು ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ಆ ಸೀಸನ್ನಲ್ಲಿ ಜೋಫ್ರಾ ಆರ್ಚರ್ (Jofra Archer) ಮತ್ತು ವೈಭವ್ ಸೂರ್ಯವಂಶಿ ಒಂದೇ ತಂಡದಲ್ಲಿದ್ದರಿಂದ, ಆರ್ಚರ್ ಯಾವುದೇ ಪಂದ್ಯದಲ್ಲಿ ಅವರ ವಿರುದ್ಧ ಬೌಲಿಂಗ್ ಮಾಡುವ ಅನುವಾರ್ಯತೆ ಇರಲಿಲ್ಲ.
ಆದರೆ ರಾಜಸ್ಥಾನ್ ರಾಯಲ್ಸ್ನ ಅಭ್ಯಾಸ ಅವಧಿಗಳಲ್ಲಿ ಆರ್ಚರ್ ವೈಭವ್ಗೆ ಬೌಲಿಂಗ್ ಮಾಡುವಾಗ ಅವರ ದೌರ್ಬಲ್ಯಗಳನ್ನು ಗುರುತಿಸಿದ್ದರು. ಇದೀಗ ಪರಸ್ಪರ ಆಡಿದ ಮೂರು ಇನ್ನಿಂಗ್ಸ್ಗಳಲ್ಲಿ ಎರಡರಲ್ಲಿ ಅವರನ್ನು ಔಟ್ ಮಾಡುವ ಮೂಲಕ ಅವರನ್ನು ಅಂತರರಾಷ್ಟ್ರೀಯ ಕ್ರಿಕೆಟ್ಗೆ ಸ್ವಾಗತಿಸಿದ್ದಾರೆ. ಗಮನಾರ್ಹವಾಗಿ, 2026 ರ ಐಪಿಎಲ್ ಸೀಸನ್ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಆರ್ಚರ್ ವೈಭವ್ರನ್ನ ಹೇಗೆ ಔಟ್ ಮಾಡಬೇಕೆಂಬುದು ನನಗೆ ತಿಳಿದಿದೆ ಎಂದು ಹೇಳಿದ್ದರು. ಇದೀಗ ಅದನ್ನ ಕಾರ್ಯರೂಪಕ್ಕೆ ತಂದಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ, ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಗಳಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ ಅವರ ವೇಗದ ಶತಕದ ದಾಖಲೆಯನ್ನು ಮುರಿಯದಿದ್ದರೂ, ರಾಜಸ್ಥಾನ್ ರಾಯಲ್ಸ್ ತಂಡವು 47 ರನ್ಗಳ ಅಂತರದಿಂದ ಜಯ ಸಾಧಿಸಲು ನೆರವಾಗಿದ್ದರು. ಪಂದ್ಯದ ನಂತರದ ಸಂದರ್ಶನದಲ್ಲಿ, ವೈಭವ್ ಸೂರ್ಯವಂಶಿಯನ್ನು ಎದುರಿಸಲು ಜೋಫ್ರಾ ಆರ್ಚರ್ ಅವರು ಎಲ್ಲಿ ಬೌಲಿಂಗ್ ಮಾಡುತ್ತೀರಿ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಆರ್ಚರ್, ಐಪಿಎಲ್ ಮುಗಿದ ನಂತರವೇ ಆ ಪ್ರಶ್ನೆಗೆ ಉತ್ತರಿಸುವುದಾಗಿ ಹೇಳಿದ್ದರು. ಆರ್ಚರ್ ತಮಾಷೆಯಾಗಿ ಹೀಗೆ ಹೇಳಿದಂತೆ ತೋರುತ್ತಿದ್ದರೂ, ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಅವರು ಸೂರ್ಯವಂಶಿಯನ್ನು ಎರಡು ಬಾರಿ ಔಟ್ ಮಾಡಿದ ರೀತಿ ಎರಡು ತಿಂಗಳ ಕಾಲ ನಡೆದ ಐಪಿಎಲ್ ಪಂದ್ಯಾವಳಿಯಲ್ಲಿ ಯುವಕನ ದೌರ್ಬಲ್ಯಗಳನ್ನು ಅವರು ಸಂಪೂರ್ಣವಾಗಿ ಗುರುತಿಸಿದ್ದಾರೆ ಎಂಬುದನ್ನ ಸ್ಪಷ್ಟಿಸಿದೆ.
ವೈಭವ್ ಸೂರ್ಯವಂಶಿ ಈ ಹಿಂದೆ ಐಪಿಎಲ್ನಲ್ಲಿ ಬುಮ್ರಾ, ಕಮಿನ್ಸ್ನಂತಹ ಬೌಲರ್ಗಳನ್ನು ಎದುರಿಸಿದ್ದರು. ಹಾಗಾದರೆ, ಅವರು ಈಗ ರನ್ಗಳಿಸಲು ಏಕೆ ಕಷ್ಟಪಡುತ್ತಿದ್ದಾರೆ? ಎಂಬ ಪ್ರಶ್ನೆ ಮೂಡುತ್ತಿದೆ. ಇಂಗ್ಲೆಂಡ್ ಮತ್ತು ಭಾರತದ ಪಿಚ್ಗಳ ನಡುವಿನ ವ್ಯತ್ಯಾಸವೇ ಇದಕ್ಕೆ ಪ್ರಮುಖ ಕಾರಣ. ಈ ಸರಣಿಯಲ್ಲಿ, ಸೂರ್ಯವಂಶಿ ಅವರನ್ನು ಇಲ್ಲಿಯವರೆಗೆ ಎರಡು ಬಾರಿ ಆರ್ಚರ್ ಔಟ್ ಮಾಡಿದ್ದಾರೆ. ಎರಡೂ ಸಂದರ್ಭಗಳಲ್ಲಿ, ಹೆಚ್ಚುವರಿ ಬೌನ್ಸ್ಗೆ ಅವರು ಹೆಣಗಾಡಿದರು. ಮೂರನೇ ಟಿ20 ಪಂದ್ಯದಲ್ಲಿ, ಅವರು ಶಾರ್ಟ್ ಬಾಲ್ ಅನ್ನ ಎಡ್ಜ್ ಮಾಡಿ ಕೀಪರ್ಗೆ ಕ್ಯಾಚ್ ನೀಡಿದ್ದರು. ನಾಲ್ಕನೇ ಟಿ20ಯಲ್ಲಿ, ಉತ್ತಮ ಲೆಂಗ್ತ್ನಲ್ಲಿ ಎಸೆತದ ವಿರುದ್ಧ ದೊಡ್ಡ ಶಾಟ್ ಹಾಕಲು ಪ್ರಯತ್ನಿಸುವಾಗ, 30 ಅಡಿ ವೃತ್ತದೊಳಗೆ ಕ್ಯಾಚ್ ಸಿಕ್ಕಿತು. ಇದೇ ಶಾಟ್ ಅನ್ನು ಭಾರತೀಯ ಪಿಚ್ಗಳಲ್ಲಿ ಆಡಿದ್ದರೆ ಸಿಕ್ಸರ್ ಹೋಗಿರುತ್ತಿತ್ತು.
ಇಂಗ್ಲೆಂಡ್ನಲ್ಲಿ ತಾವು ಕಲಿತ ಪಾಠದಿಂದ ವೈಭವ್ ಸೂರ್ಯವಂಶಿ ತಮ್ಮ ವೃತ್ತಿಜೀವನವನ್ನು ಹೊಸ ದಿಕ್ಕಿನಲ್ಲಿ ಸಾಗಿಸಬೇಕಿದೆ. ಈ ಸರಣಿಯಲ್ಲಿ, ಅವರು 14, 13 ಮತ್ತು 15 ರನ್ಗಳನ್ನು ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಇದರರ್ಥ ಉತ್ತಮ ಆರಂಭಗಳನ್ನು ಪಡೆದರೂ ಅವರು ಗಮನಾರ್ಹ ಪರಿಣಾಮ ಬೀರುವಲ್ಲಿ ವಿಫಲರಾಗುತ್ತಿದ್ದಾರೆ. ಪ್ರತಿ ಎಸೆತವನ್ನ ಬೌಂಡರಿ, ಸಿಕ್ಸರ್ ಹೊಡೆಯಬೇಕೆಂಬ ಅವರ ಹುಚ್ಚುತನ ಅವರನ್ನ ಅಲ್ಪಮೊತ್ತಕ್ಕೆ ಔಟ್ ಆಗುವಂತೆ ಮಾಡುತ್ತಿದೆ. ಮುಂದಿನ ಪಂದ್ಯಗಳಲ್ಲಿ ತಾಳ್ಮೆ ಆಡುವುದನ್ನ ಕಲಿಯಬೇಕು. ಕನಿಷ್ಠ 20-30 ಎಸೆತಗಳನ್ನ ಎದುರಿಸಲು ಪ್ರಯತ್ನಿಸಬೇಕು. ಇನ್ನೂ ವಯಸ್ಸು 15 ಆಗಿರುವುದರಿಂದ ವೈಭವ್ಗೆ ಸುಧಾರಿಸಿಕೊಳ್ಳುವುದಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ಅಭಿಮಾನಿಗಳು, ಕ್ರಿಕೆಟ್ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.














