Last Updated:
ಮಧ್ಯ ಪ್ರಾಚ್ಯದಲ್ಲಿ ಮತ್ತೆ ಯುದ್ಧ ಆರಂಭವಾಗಿರೋದು ಇಡೀ ಜಗತ್ತನ್ನ ಕಂಗೆಡೆಸಿದೆ. ಕಷ್ಟದ ದಿನಗಳು ಮುಗಿಯಿತು ಅನ್ನೋವಾಗ್ಲೇ ಯುದ್ಧ ಆರಂಭವಾಗಿರೋದು ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ.
ಇರಾನ್ ಮತ್ತು ಅಮೆರಿಕ (US-Iran War) ಮಧ್ಯೆ ಜಾರಿಯಾಗಿದ್ದ ಕದನ ವಿರಾಮ (Ceasefire) ಮುರಿದು ಬಿದ್ದಿದೆ. ಇರಾನ್ನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ (Ayatollah Ali Khamenei) ಅಂತ್ಯಕ್ರಿಯೆ ಮುಗಿಯುತ್ತಿದ್ದಂತೆ ಮತ್ತೆ ದಾಳಿ, ಪ್ರತಿದಾಳಿ ಆರಂಭವಾಗಿದ್ದು, ಇಡೀ ಜಗತ್ತಿಗೆ ಮತ್ತೆ ಕಂಟಕ ಎದುರಾಗಿದೆ. ಎಲ್ಲಾ ಮುಗೀತು ಅನ್ನೋವಾಗ್ಲೇ ಮತ್ತೆ ಯುದ್ಧದ (War) ಕಾರ್ಮೋಡ ಆರಂಭವಾಗಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಣಾಯಕವಾದ ಹಾರ್ಮುಜ್ ಜಲಸಂಧಿಯಲ್ಲಿ ಓಮನ್ ಕಾರಿಡಾರ್ ಮೂಲಕ ಪ್ರಯಾಣಿಸುತ್ತಿದ್ದ ಭಾರತದ ಹಡಗನ್ನು ಇರಾನ್ನ ಪ್ರಬಲ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (ಐಆರ್ಜಿಸಿ) ಪಡೆಗಳು ತಡೆದು ವಾಪಸ್ ಕಳುಹಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ. ಅಮೆರಿಕ ಗೊತ್ತುಪಡಿಸಿದ ಅಥವಾ ಸೂಚಿಸಿದ ಸಮುದ್ರ ಕಾರಿಡಾರ್ಗಳ ಮೂಲಕ ಹಡಗುಗಳು ಪ್ರಯಾಣಿಸಲು ಅವಕಾಶವಿಲ್ಲ ಎಂದು ಇರಾನ್ ಎಚ್ಚರಿಕೆ ನೀಡಿದೆ. ಈ ಬೆಳವಣಿಗೆಯೊಂದಿಗೆ, ವಿಶ್ವದ ಅತಿದೊಡ್ಡ ತೈಲ ಪೂರೈಕೆ ಮಾರ್ಗದಲ್ಲಿ ಉದ್ವಿಗ್ನತೆ ಇದ್ದಕ್ಕಿದ್ದಂತೆ ಉತ್ತುಂಗಕ್ಕೇರಿದೆ.
ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಹಾರ್ಮುಜ್ ದಾಳಿಗೆ ಪ್ರತೀಕಾರವಾಗಿ ಇರಾನ್ ಮೇಲೆ ಅಮೆರಿಕ ಭೀಕರ ಏರ್ಸ್ಟ್ರೈಕ್ ನಡೆಸಿದೆ. ಈ ಬಾರಿ ಇರಾನ್ ಒಳಗಿರುವ ಕನಿಷ್ಠ 80ಕ್ಕೂ ಹೆಚ್ಚು ಆಯಕಟ್ಟಿನ ಮಿಲಿಟರಿ ತಾಣಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಇದು ಕಳೆದ ಜೂನ್ನಲ್ಲಿ ನಡೆದ ದಾಳಿಗಿಂತ 8 ಪಟ್ಟು ಹೆಚ್ಚು ತೀವ್ರ ಮತ್ತು ದೊಡ್ಡದಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಎರಡು ದೇಶಗಳ ನಡುವಿನ ಕಾದಾಟದಿಂದ ಭಾರತದ ಇಂಧನ ಭದ್ರತೆಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ಭಾರತವು ತನ್ನ ಹೆಚ್ಚಿನ ಕಚ್ಚಾ ತೈಲವನ್ನು ಗಲ್ಫ್ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ ಮತ್ತು ಹಾರ್ಮುಜ್ ಜಲಸಂಧಿಯು ಇದೆಲ್ಲದಕ್ಕೂ ಮುಖ್ಯ ಮಾರ್ಗವಾಗಿದೆ. ಇರಾನ್ನ ಎಚ್ಚರಿಕೆಗಳ ಹಿನ್ನೆಲೆಯಲ್ಲಿ, ತೈಲ ಸಾಗಣೆ ವಿಳಂಬವಾಗುವ ಅಥವಾ ಪರ್ಯಾಯ ಮಾರ್ಗಗಳಿಗೆ ತಿರುಗಿಸಲ್ಪಡುವ ಅಪಾಯವಿದೆ, ಇದು ಸಾರಿಗೆ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ಭಾರತದಲ್ಲಿ ಇಂಧನ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಟರ್ಕಿ ರಾಜಧಾನಿ ಅಂಕಾರದಲ್ಲಿ ನಡೆಯುತ್ತಿರೋ ಶೃಂಗಸಭೆಯಲ್ಲಿ ಭಾಗಿಯಾಗುವ ಮುನ್ನ ಟ್ರಂಪ್ ಕದನ ವಿರಾಮ ಉಲ್ಲಂಘನೆ ಬಗ್ಗೆ ಮಾತನಾಡಿದ್ದಾರೆ. ಇರಾನ್ ಜೊತೆಗಿನ ಶಾಂತಿ ಒಪ್ಪಂದ ಮುಗಿದ ಅಧ್ಯಾಯ. ಇಲ್ಲದೆ ಇಂದು ರಾತ್ರಿಯೇ ಇರಾನ್ ಮೇಲೆ ಭೀಕರ ದಾಳಿ ನಡೆಸ್ತೀವಿ ಅಂತ ಗುಡುಗಿದ್ದಾರೆ.
Jul 08, 2026 10:16 PM IST













