Last Updated:
ಈ ಘಟನೆಯ ನಂತರ, ಇಟಲಿಯ ಹಿರಿಯ ಸರ್ಕಾರಿ ಸಚಿವರು ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಈ ವಾರಾಂತ್ಯದಲ್ಲಿ ಅಮೆರಿಕಕ್ಕೆ ಭೇಟಿ ನೀಡಬೇಕಿತ್ತು, ಆದರೆ ಟ್ರಂಪ್ ಹೇಳಿಕೆಗಳ ನಂತರ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದರು.
ರೋಮ್: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಆಕ್ಷೇಪಾರ್ಹ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೆಲೋನಿ, ಡೊನಾಲ್ಡ್ ಟ್ರಂಪ್‌ಗೆ (Donald Trump) ತಿರುಗೇಟು ನೀಡಿದ್ದಾರೆ.
ಇತ್ತೀಚಿಗೆ ನಡೆದ G7 ಶೃಂಗಸಭೆಯ ಸಮಯದಲ್ಲಿ ನನ್ನ ಜೊತೆ ಫೋಟೋ ತೆಗೆಯಲು ಅವಕಾಶಕ್ಕಾಗಿ ಮೆಲೋನಿ ‘ಬೇಡಿಕೊಂಡಿದ್ದರು’ ಡೊನಾಲ್ಡ್ ಟ್ರಂಪ್ ವ್ಯಂಗ್ಯವಾಗಿ ಹೇಳಿದ್ದರು. ಈ ಬಾಲಿಶ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಮೆಲೋನಿ, ಇದೊಂದು ಸಂಪೂರ್ಣ ಕಟ್ಟುಕಥೆ ಎಂದು ಹೇಳಿದ್ದಾರಲ್ಲದೇ, ಮಿತ್ರರಾಷ್ಟ್ರಗಳ ಬಗ್ಗೆ ಟ್ರಂಪ್ ತೋರುವ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಟ್ರಂಪ್ ಮತ್ತು ಜಾರ್ಜಿಯಾ ಮೆಲೋನಿ ನಡುವಿನ ಈ ಸಾರ್ವಜನಿಕ ಜಗಳವು ಅವರ ನಡುವಿನ ಸ್ನೇಹದಲ್ಲಿ ಗಮನಾರ್ಹ ಬಿಕ್ಕಟ್ಟು ಇರುವುದನ್ನು ಬಹಿರಂಗಪಡಿಸಿದೆ. ಈ ವರ್ಷದ ಆರಂಭದಲ್ಲಿ ಇರಾನ್ ಯುದ್ಧದ ಬಗ್ಗೆ ಇಟಲಿ ಅಮೆರಿಕಾ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ನಂತರ ಫ್ರಾನ್ಸ್‌ನಲ್ಲಿ ನಡೆದ G7 ಶೃಂಗಸಭೆಯ ಸಮಯದಲ್ಲಿ ಇದು ಸುಧಾರಿಸಿದಂತೆ ಕಂಡುಬಂದಿತ್ತು. ಆದರೆ ಟ್ರಂಪ್ ಬಾಲಿಶ ಹೇಳಿಕೆಯ ನಂತರ ಮತ್ತೆ ಸಂಬಂಧ ಹದಗೆಡುವ ಲಕ್ಷಣ ಕಂಡು ಬಂದಿದೆ.
ಮುಂದುವರಿದು ಮೆಲೋನಿ ಬಗ್ಗೆ ಮಾತನಾಡಿರುವ ಟ್ರಂಪ್, ‘ಅವಳು ನನ್ನೊಂದಿಗೆ ಫೋಟೋ ತೆಗೆಯಲು ಬೇಡಿಕೊಂಡಳು. ಅವಳು ನನ್ನೊಂದಿಗೆ ಫೋಟೋ ತೆಗೆಯಲು ತುಂಬಾ ಉತ್ಸುಕಳಾಗಿದ್ದಳು. ನನಗೆ ಆಸಕ್ತಿ ಇರಲಿಲ್ಲ, ಕೊನೆಗೆ ಅವಳು ಅಷ್ಟೊಂದು ಬೇಡಿಕೊಂಡಿದ್ದಕ್ಕೆ ಒಪ್ಪಿಕೊಂಡೆ. ’ ಎಂದು ಹೇಳಿದ್ದರು. ಇಟಾಲಿಯನ್ ಟಿವಿ ಚಾನೆಲ್ La7 ಚಾನೆಲ್ ಸಂದರ್ಶನದ ಡಬ್ಬಿಂಗ್ ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಲೋನಿ, ಟ್ರಂಪ್ ನೀಡಿರುವ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕರಿಸಿದರು, ಮತ್ತು ಅವರು ಕಟ್ಟುಕಥೆಯನ್ನು ಹೆಣೆದಿದ್ದಾರೆ ಎಂದು ಆರೋಪಿಸಿದರು. . ‘ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು ಸಂಪೂರ್ಣವಾಗಿ ಕಟ್ಟುಕಥೆ. ನನಗೆ ನಿಜಕ್ಕೂ ಆಘಾತವಾಗಿದೆ. ಅಮೆರಿಕದ ಅಧ್ಯಕ್ಷರು ತಮ್ಮ ಮಿತ್ರರಾಷ್ಟ್ರಗಳನ್ನು ಏಕೆ ಈ ರೀತಿ ನಡೆಸಿಕೊಳ್ಳುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ, ಇದು ಮೊದಲ ಬಾರಿಗೆ ಸಂಭವಿಸ್ತಿರೋದು ಅಲ್ಲ’ ಎಂದು ಮೆಲೋನಿ ಕಿಡಿಕಾರಿದರು.
‘ಅವರು ತಮ್ಮ ನಾಯಕರನ್ನು ಹೆಚ್ಚು ಮೃದುವಾಗಿ ನಡೆಸಿಕೊಳ್ಳುತ್ತಿದ್ದರೂ, ಪಶ್ಚಿಮ ಮತ್ತು ಅಮೆರಿಕದ ಶತ್ರುಗಳ ಕಡೆಗೆ ಅದೇ ದೃಢತೆಯನ್ನು ತೋರಿಸದಿರುವುದು ನಿರಾಶಾದಾಯಕವಾಗಿದೆ ಎಂದು ನಾನು ಹೇಳಬಲ್ಲೆ’ ಎಂದು ಹೇಳಿರುವ ಮೆಲೋನಿ, ‘ಅವರು ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ನಾನು ಅಥವಾ ಇಟಲಿ ಎಂದಿಗೂ ಯಾರ ಮುಂದೆಯೂ ಬೇಡಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ.
ಈ ಘಟನೆಯ ನಂತರ, ಇಟಲಿಯ ಹಿರಿಯ ಸರ್ಕಾರಿ ಸಚಿವರು ಅಮೆರಿಕ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಇಟಲಿಯ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಈ ವಾರಾಂತ್ಯದಲ್ಲಿ ಅಮೆರಿಕಕ್ಕೆ ಭೇಟಿ ನೀಡಬೇಕಿತ್ತು, ಆದರೆ ಟ್ರಂಪ್ ಹೇಳಿಕೆಗಳ ನಂತರ ಅವರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದರು. ಟ್ರಂಪ್ ಅವರ ಹೇಳಿಕೆಗಳು ಮೆಲೋನಿ ಮತ್ತು ಇಡೀ ಇಟಲಿಗೆ ‘ಗಂಭೀರ ಮತ್ತು ಅವಮಾನಕರ’ ಎಂದು ಅವರು ಕರೆದರು.
G7 ಶೃಂಗಸಭೆಯ ವೀಡಿಯೊ ತುಣುಕಿನಲ್ಲಿ ಮೆಲೋನಿ ಮತ್ತು ಟ್ರಂಪ್ ದೀರ್ಘ ಸಂಭಾಷಣೆ ನಡೆಸುತ್ತಿರುವುದನ್ನು ತೋರಿಸಲಾಗಿದೆ.
Jun 20, 2026 10:35 AM IST













