Last Updated:
ಮಾರ್ಕಪುರಂ ಜಿಲ್ಲೆಯ ಲೀಲಮ್ಮ ಮಗುವಿಗೆ ಜನ್ಮ ನೀಡಿದ ನಂತರ ನಿಧನರಾದರು. ಹೃದಯ ಕಾಯಿಲೆ ಇದ್ದರೂ ಮಗುವನ್ನು ಉಳಿಸಲು ನಿರ್ಧರಿಸಿದ್ದರು. ಕುಟುಂಬ ಶೋಕದಲ್ಲಿ ಮುಳುಗಿದೆ.
ತಾಯ್ತನಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದ ಮಹಿಳೆ (Women) ಕೊನೆಗೂ ಮಗುವಿಗೆ (Baby) ಜನ್ಮ ನೀಡಿದಳು. ಆದರೆ ಈ ಸಂತೋಷವನ್ನು ನೋಡುವ ಮೊದಲೇ ಆಕೆ ಕೊನೆಯುಸಿರೆಳೆದಿದ್ದಾಳೆ. ವೈದ್ಯರು (Doctor) ಮೊದಲೇ ಪ್ರಾಣಾಪಾಯ ಎದುರಾಗುವ ಬಗ್ಗೆ ಎಚ್ಚರಿಕೆ ನೀಡಿದರೂ, ತನ್ನ ಜೀವಕ್ಕಿಂತ ಮಗುವೇ ಮುಖ್ಯ ಎಂದು ಮಹಿಳೆ ನಿರ್ಧಾರ ತೆಗೆದುಕೊಂಡಿದ್ದರು, ಆದರೆ ಈಗ ಇಡೀ ಕುಟುಂಬ (Family) ಶೋಕದಲ್ಲಿ ಮುಳುಗಿದೆ.
ಆಂಧ್ರ ಪ್ರದೇಶದ ಮಾರ್ಕಪುರಂ ಜಿಲ್ಲೆಯ ಅರ್ಧವೀಡು ಮಂಡಲದ ಕಾಕರ್ಲಾ ಗ್ರಾಮದ ಗುಂಟು ಲೀಲಮ್ಮ (40) ಆಶಾ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೌಟುಂಬಿಕ ಕಾರಣಗಳಿಂದ ಇವರಿಗೆ ಬಹಳ ತಡವಾಗಿ ಮದುವೆಯಾಗಿತ್ತು. ಮದುವೆಯ ಬಳಿಕ ಹಲವು ವರ್ಷ ಮಕ್ಕಳಾಗದ ಕಾರಣ ದಂಪತಿ ತೀವ್ರ ದುಃಖ ಅನುಭವಿಸಿದ್ದರು. ಆದರೆ ಕೆಲ ತಿಂಗಳ ಹಿಂದೆ ಲೀಲಮ್ಮ ಗರ್ಭಿಣಿಯಾಗಿದ್ದು ಖಚಿತವಾಗಿತ್ತು. ಇದರೊಂದಿಗೆ ಕುಟುಂಬದಲ್ಲಿ ಸಂತೋಷ ಡಬಲ್ ಆಗಿತ್ತು.
ಆದರೆ ಗರ್ಭಿಣಿಯಾದ ಕೆಲವು ತಿಂಗಳಿಗೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದ ಲೀಲಮ್ಮ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರೋದು ತಿಳಿದು ಬಂದಿತ್ತು. ಇಂತಹ ಸಂದರ್ಭದಲ್ಲಿ ಗರ್ಭಿಣಿಯಾದರೆ ಜೀವಕ್ಕೆ ಅಪಾಯವಾಗುವ ಎಚ್ಚರಿಕೆಯನ್ನು ವೈದ್ಯರು ನೀಡಿದ್ದರಂತೆ. ಆದರೆ ಆ ಬಳಿಕ ಹೃದಯಕ್ಕೆ ಸ್ಟಂಟ್ ಹಾಕಿಸಿಕೊಂಡ ಕಾರಣ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದಂತೆ. ಆದರೆ ತಿಂಗಳುಗಳು ಹೆಚ್ಚಾದಂತೆ ಆರೋಗ್ಯ ಸಮಸ್ಯೆ ಮತ್ತೆ ಹೆಚ್ಚಾಗಿತ್ತಂತೆ.
ಈ ಸಂದರ್ಭದಲ್ಲಿ ತಿರುಪತಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರಂತೆ, ಈ ವೇಳೆ ವೈದ್ಯರು ಡೆಲಿವರಿ ಸಮಯದಲ್ಲಿ ತಾಯಿ ಅಥವಾ ಮಗು ಇಬ್ಬರು ಮಾತ್ರ ಬದುಕುತ್ತಾರೆ ಅಂತ ಕುಟುಂಬ ಸದಸ್ಯರಿಗೆ ವಿವರಿಸಿದ್ದರಂತೆ. ಆದರೆ ಲೀಲಮ್ಮ ಮಾತ್ರ ಮಗುವಿಗೆ ಜನ್ಮ ನೀಡಲು ಪಟ್ಟುಹಿಡಿದಿದ್ದರಂತೆ. ಇದರೊಂದಿಗೆ ಕುಟುಂಬ ಸದಸ್ಯರೊಂದಿಗೆ ವೈದ್ಯರು, ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಮಗುವಿಗೆ ಜನ್ಮ ನೀಡಿದ್ದರು.
ಮಗುವಿಗೆ ಜನ್ಮ ನೀಡಿದ ಬಳಿಕ ಲೀಲಮ್ಮ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿತ್ತಂತೆ. ಮಗುವನ್ನು ಒಮ್ಮೆ ಕೂಡ ನೋಡಲು ಆಗದೆ ಲೀಲಮ್ಮ ಸಾವನ್ನಪ್ಪಿದ್ದರು, ಇದರೊಂದಿಗೆ ಕುಟುಂಬ ಸದಸ್ಯರು ಶೋಕದಲ್ಲಿ ಮುಳುಗಿದ್ದಾರೆ. ಪಾರ್ಥಿವ ಶರೀರವನ್ನು ಅವರ ಊರಿಗೆ ತರುತ್ತಿದ್ದಂತೆ ಇಡೀ ಗ್ರಾಮವೇ ದುಃಖದಲ್ಲಿ ಮುಳುಗಿತ್ತು. ಆಶಾ ಕಾರ್ಯಕರ್ತೆಯಾಗಿ ಜನಸೇವೆ ಮಾಡುತ್ತಿದ್ದ ಲೀಲಮ್ಮ ಅವರಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಹ ವೈದ್ಯಕೀಯ ಸಿಬ್ಬಂದಿ ಶ್ರದ್ಧಾಂಜಲಿ ಸಲ್ಲಿಸಿ, ಅವರ ಸೇವೆಗಳನ್ನು ಸ್ಮರಿಸಿದ್ದಾರೆ ಎಂದು ಟಿವಿ9 ತೆಲುಗು ವರದಿ ಮಾಡಿದೆ.














