Last Updated:
Tiktok Star Brooke George: ಬ್ರಿಟನ್ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್, ಟಿಕ್ ಟಾಕ್ ತಾರೆ ಬ್ರೂಕ್ ಜಾರ್ಜ್‌ಗೆ ಮರಣ ದಂಡನೆ ವಿಧಿಸುವ ಸಾಧ್ಯತೆ ಇದೆ. ದುಬೈನ ನ್ಯಾಯಾಲಯ ಇಂಥದ್ದೊಂದು ಶಿಕ್ಷೆ ಪ್ರಕಟಿಸಲಿದೆ. ಗುಂಡಿನ ದಾಳಿ ನಡೆಸಿ, ಆಕೆಗೆ ಮರಣ ದಂಡನೆ ವಿಧಿಸಲಾಗುತ್ತದೆ ಅಂತ ಮೂಲಗಳು ತಿಳಿಸಿವೆ.
ದುಬೈ: ಬ್ರಿಟನ್ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ (social media influencer), ಟಿಕ್ ಟಾಕ್ ತಾರೆ ಬ್ರೂಕ್ ಜಾರ್ಜ್‌ಗೆ (Brooke George) ಮರಣ ದಂಡನೆ (death sentence) ವಿಧಿಸುವ ಸಾಧ್ಯತೆ ಇದೆ. ದುಬೈನ ನ್ಯಾಯಾಲಯ ಇಂಥದ್ದೊಂದು ಶಿಕ್ಷೆ ಪ್ರಕಟಿಸಲಿದೆ. ಗುಂಡಿನ ದಾಳಿ ನಡೆಸಿ, ಆಕೆಗೆ ಮರಣ ದಂಡನೆ ವಿಧಿಸಲಾಗುತ್ತದೆ ಅಂತ ಮೂಲಗಳು ತಿಳಿಸಿವೆ. 23 ವರ್ಷದ ಬ್ರೂಕ್ ಜಾರ್ಜ್, ತನ್ನ ದುಬೈ ಮೂಲದ ಗೆಳೆಯನ್ನು ಇರಿದು, ಬರ್ಬರವಾಗಿ ಕೊಂದಿರುವ ಆರೋಪ ಎದುರಿಸುತ್ತಿದ್ದಾರೆ. ಆದರೆ ಆಕೆ ಪರ ವಾದಿಸುತ್ತಿರುವ ‘ಡಿಟೈನ್ಡ್ ಇನ್ ದುಬೈ’ ಸಂಸ್ಥೆ ಆಕೆ ಆತ್ಮರಕ್ಷಣೆಗಾಗಿ ಆಕಸ್ಮಿಕವಾಗಿ ಹತ್ಯೆ ಮಾಡಿದ್ದಾಳೆ ಅಂತ ಹೇಳುತ್ತಿದೆ.
23 ವರ್ಷದ ಬ್ರೂಕ್ ಜಾರ್ಜ್, ದುಬೈನಲ್ಲಿ ವಾಸಿಸುತ್ತಾ ಕೆಲಸ ಮಾಡುತ್ತಿದ್ದಳು. ಈ ವೇಳೆ 26 ವರ್ಷದ ಬ್ರಿಟಿಷ್ ವಲಸಿಗನನ್ನು ಆನ್‌ಲೈನ್‌ನಲ್ಲಿ ಭೇಟಿಯಾದಳು ಎಂದು ವರದಿಯಾಗಿದೆ. ಬ್ರೂಕ್ ಜಾರ್ಜ್ ಆ ಯುವಕನ ಜೊತೆ ಒಮ್ಮೆ ಪ್ರವಾಸ ಮಾಡಿದ್ದಳು. ಆಗ ಇದು ನನ್ನ ಜೀವನದ ಸಂತೋಷದ ಸಮಯ ಅಂತ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಹೇಳಿಕೊಂಡಿದ್ದರಂತೆ. ಆದರೆ 2ನೇ ಭೇಟಿಯಲ್ಲಿ ಆ ಯುವಕನನ್ನು ಇರುದು ಕೊಂದಿರೋ ಆರೋಪ ಬ್ರೂಕ್ ಜಾರ್ಜ್ ಮೇಲಿದೆ.
ಇನ್ನು ಈಕೆಯ ಪರ ಡಿಟೈನ್ಡ್ ಇನ್ ದುಬೈ ಎಂಬ ಖಾಸಗಿ ಸಂಸ್ಥೆ ವಕಾಲತ್ತು ವಹಿಸುತ್ತಿದೆ. ಇದು ಯುಎಇಯಲ್ಲಿ ಕಾನೂನು ತೊಂದರೆಯಲ್ಲಿರುವ ವಿದೇಶಿಯರಿಗೆ ಸಹಾಯ ಮಾಡುತ್ತದೆ ಮತ್ತು ಮಹಿಳೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿ ನ್ಯಾಯಯುತವಾಗಿ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿದೆ.
ಬ್ರೂಕ್ ಜಾರ್ಜ್ ತಮ್ಮ ಆತ್ಮರಕ್ಷಣೆಗಾಗಿ ಆ ಯುವಕನ್ನು ಕೊಂದಿದ್ದಾರೆ ಅಂತ ಡಿಟೈನ್ಡ್ ಇನ್ ದುಬೈ ಸಂಸ್ಥೆ ವಾದಿಸಿದೆ. ದುಬೈನಲ್ಲಿ ಬಂಧಿತಳಾದ ಬ್ರೂಕ್ ಜಾರ್ಜ್, ತನ್ನ ಗೆಳೆಯನ ಕೈಯಲ್ಲಿ ನಡೆದ ದಾಳಿಯ ಸಮಯದಲ್ಲಿ ಆತ್ಮರಕ್ಷಣೆಗಾಗಿ ಅಡುಗೆಮನೆಯ ಚಾಕುವನ್ನು ಕೈಗೆತ್ತಿಕೊಂಡಳು ಎಂದು ಆ ಸಂಸ್ಥೆ ಹೇಳುತ್ತಿದೆ.
ಗಾಯಗೊಂಡ ಮತ್ತು ಅಸ್ವಸ್ಥ ಸ್ಥಿತಿಯಲ್ಲಿದ್ದ ಬ್ರೂಕ್ ಜಾರ್ಜ್ ಅವರನ್ನು ಜೂನ್ 22, 2026 ರ ಮುಂಜಾನೆ ಬಂಧಿಸಲಾಯಿತು ಮತ್ತು ಸಂದರ್ಭಗಳನ್ನು ಕೂಲಂಕಷವಾಗಿ ತನಿಖೆ ಮಾಡದಿದ್ದರೂ ಆಕೆಯ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ ಎಂದು ಸಂಸ್ಥೆ ಆರೋಪಿಸಿದೆ. ಅವಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಮತ್ತು ಪ್ರಕರಣವನ್ನು ಕೌಟುಂಬಿಕ ಹಿಂಸಾಚಾರ ಎಂದು ಪರಿಗಣಿಸಬೇಕೆಂದು ಸಂಘಟನೆ ಒತ್ತಾಯಿಸಿತು.
ಬುರ್ ದುಬೈ ಪೊಲೀಸ್ ಠಾಣೆಯಲ್ಲಿ ಬಂಧನದಲ್ಲಿದ್ದಾಗ, ಮಹಿಳಾ ಅಧಿಕಾರಿ ಇಲ್ಲದೆ ಪುರುಷ ಅಧಿಕಾರಿಗಳ ಮುಂದೆ ತನ್ನನ್ನು ಬೆತ್ತಲೆಯಾಗಿಸಲು ಒತ್ತಾಯಿಸಲಾಗಿದೆ ಎಂದು ಬ್ರೂಕ್ ಜಾರ್ಜ್ ಆರೋಪಿಸಿದ್ದಾರೆ, ಇದು ತೀವ್ರ ಅವಮಾನಕರ ಮತ್ತು ದುಃಖಕರ ಎಂದು ಆಕೆ ಹೇಳಿದ್ದಾಳೆ.
ಅವನು ಅವಳನ್ನು ಹೊಡೆದು, ಅವಳ ಪಾಸ್‌ಪೋರ್ಟ್ ಅನ್ನು ತಡೆಹಿಡಿದು, ನಂತರ ಅವರ ಅಪಾರ್ಟ್‌ಮೆಂಟ್‌ನಲ್ಲಿ ಮತ್ತೆ ಅವಳ ಮೇಲೆ ಹಲ್ಲೆ ಮಾಡಿದ್ದಾನೆ. ಹೀಗಾಗಿ ಆಕೆ ಭಯದಿಂದ ದುಬೈ ತೊರೆಯಲು ಪ್ರಯತ್ನಿಸುತ್ತಿದ್ದಳು. “ತನ್ನ ಜೀವಕ್ಕೆ ಭಯಪಡುತ್ತಿದ್ದೆ ಮತ್ತು ತನ್ನ ಹಿಡಿತದಲ್ಲಿರುವ ಅಡಿಗೆ ಚಾಕುವನ್ನು ಕೈಗೆತ್ತಿಕೊಂಡು, ಆತ್ಮರಕ್ಷಣೆಗಾಗಿ ವರ್ತಿಸಿದೆ” ಅಂತ ಬ್ರೂಕ್ ಜಾರ್ಜ್ ಹೇಳಿದ್ದಾಗಿ ಆ ಸಂಸ್ಥೆ ಹೇಳುತ್ತಿದೆ. ಒಂದು ವೇಳೆ ಆಕೆ ಮೇಲಿನ ಆರೋಪ ಸಾಬೀತಾದರೆ ಆಕೆಗೆ ಗುಂಡು ಹೊಡೆದು ಸಾಯಿಸುವ ಆದೇಶ ಮಾಡಲಾಗುತ್ತದೆ.













