Last Updated:
Surendranath College: ಗೆದ್ದಲು ತಿಂದ ನೋಟು, ಲೋಡ್ ಆದ ಗನ್! ಕಾಲೇಜಿನ ಸೀಕ್ರೆಟ್ ಬೆಡ್‌ರೂಮ್‌ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಸುರೇಂದ್ರನಾಥ್ ಕಾಲೇಜಿನ ರಹಸ್ಯ ಕೋಣೆಯಿಲ್ಲಿ ಪತ್ತೆಯಾಯ್ತು ಬೆಚ್ಚಿಬೀಳಿಸುವ ವಸ್ತುಗಳ ರಾಶಿ!
ಕೋಲ್ಕತ್ತಾ (ಪಶ್ಚಿಮ ಬಂಗಾಳ): ಶಿಕ್ಷಣದ (Education) ದೇವಸ್ಥಾನ ಅಂದ್ರೆ ಶಾಲಾ-ಕಾಲೇಜು. ಆದರೆ ಕೋಲ್ಕತ್ತಾದ (Kolkata) ಪ್ರತಿಷ್ಠಿತ ಕಾಲೇಜೊಂದರಲ್ಲಿ ಪೊಲೀಸರು ನಡೆಸಿದ ದಾಳಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಯಾಕಂದ್ರೆ, ಕಾಲೇಜು ಆವರಣದಲ್ಲೇ ರಹಸ್ಯ ಬೆಡ್‌ರೂಮ್ (Secret Bedroom). ಅದರೊಳಗೆ ಗೆದ್ದಲು ತಿಂದು ಹಾಳಾಗ್ತಿದ್ದ 1 ಕೋಟಿ ರೂಪಾಯಿ ಹಣ, ಲೋಡ್ ಮಾಡಿದ ರಿವಾಲ್ವರ್, ಮತ್ತು ಇನ್ನೂ ಹಲವು ವಸ್ತುಗಳು ಪತ್ತೆಯಾಗಿವೆ. ಹಾಗಾಗಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಜಾಗದಲ್ಲೇ ಇಷ್ಟೊಂದು ಹಣ, ಅಕ್ರಮ ಶಸ್ತ್ರಾಸ್ತ್ರ ಏನು ಮಾಡ್ತಿತ್ತು? ಈ ಪ್ರಕರಣದ ಹಿಂದೆ ಇರೋ ಕರಾಳ ಸತ್ಯ ಏನು? ಆ ಕುರಿತ ವರದಿ ಇಲ್ಲಿದೆ.
ಕೊಲ್ಕತ್ತಾದ ಪ್ರತಿಷ್ಠಿತ ಸುರೇಂದ್ರನಾಥ್ ಕಾಲೇಜಿನಲ್ಲಿ (Surendranath College) ನಡೆದ ಘಟನೆ ಇಡೀ ದೇಶದ ಗಮನ ಸೆಳೆದಿದೆ. ಅದುವೇ, ಮುಂಗಾರು ಪೂರ್ವ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ವರ್ಷಗಳಿಂದ ಬೀಗ ಹಾಕಲಾಗಿದ್ದ ವಿದ್ಯಾರ್ಥಿ ಸಂಘದ ಕೊಠಡಿಯನ್ನು ಓಪನ್ ಮಾಡಿದಾಗ ದೇಶವೇ ಬೆಚ್ಚಿಬೀಳುವಂತಹ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಅದರಂತೆ, ವಿದ್ಯಾದೇಗುಲವಾಗಬೇಕಿದ್ದ ಕಾಲೇಜು ಆವರಣವು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವುದು ಶಿಕ್ಷಣ ಕ್ಷೇತ್ರದ ವ್ಯವಸ್ಥೆಯನ್ನು ಅಣಕಿಸುವಂತಿದೆ.
ನ್ಯೂಸ್ 18 ಹಿಂದಿ ವರದಿ ಮಾಡಿರುವಂತೆ, ಕಾಲೇಜಿನ ವಿದ್ಯಾರ್ಥಿ ಸಂಘದ ಕೊಠಡಿಯಲ್ಲಿದ್ದ ಹಳೆಯ ಕಪಾಟೊಂದನ್ನು ತೆರೆದಾಗ ಅಲ್ಲಿ ಎರಡು ಹಳೆಯ ಸೂಟ್‌ಕೇಸ್‌ಗಳು ಪತ್ತೆಯಾಗಿವೆ. ಅವುಗಳನ್ನು ಪರಿಶೀಲಿಸಿದಾಗ ಒಳಗೆ ₹100 ಮತ್ತು ₹500 ಮುಖಬೆಲೆಯ ನೋಟುಗಳ ಕಂತೆಗಳು ಪತ್ತೆಯಾಗಿವೆ. ಈ ನೋಟುಗಳನ್ನು ದೀರ್ಘಕಾಲದವರೆಗೆ ಯಾರಿಗೂ ತಿಳಿಯದಂತೆ ಬಚ್ಚಿಟ್ಟಿದ್ದರಿಂದ, ಅವುಗಳಿಗೆ ಗೆದ್ದಲು ಹಿಡಿದು ಸಂಪೂರ್ಣವಾಗಿ ನಾಶವಾಗಿವೆ ಎನ್ನಲಾಗಿದೆ. ಇನ್ನೂ, ಒಂದು ಅಂದಾಜಿನ ಪ್ರಕಾರ ಈ ನಗದು ಮೊತ್ತ ₹1 ಕೋಟಿಗೂ ಅಧಿಕ ಇರಬಹುದು ಎಂದು ಶಂಕಿಸಲಾಗಿದೆ. ಕೇವಲ ನಗದು ಮಾತ್ರವಲ್ಲದೆ, ಅದೇ ಕೊಠಡಿಯಲ್ಲಿ ಕಪ್ಪು ಕವರ್‌ನಲ್ಲಿ ಸುತ್ತಿಡಲಾಗಿದ್ದ ಒಂದು ಪಿಸ್ತೂಲ್ ಮತ್ತು ತೋಪುಗಳು ಕೂಡ ಪತ್ತೆಯಾಗಿದೆ.!

ಇನ್ನೂ, ತನಿಖೆ ಮುಂದುವರಿದಂತೆ ಕಾಲೇಜಿನ ಐದನೇ ಮಹಡಿಯಲ್ಲಿ ಟೆರೇಸ್ ಸೌಲಭ್ಯದ ಹೆಸರಿನಲ್ಲಿ ಎರಡು ಐಷಾರಾಮಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಸುಸಜ್ಜಿತವಾದ ಹಾಸಿಗೆ, AC, ರೆಫ್ರಿಜರೇಟರ್ ಮತ್ತು ಮಸಾಜ್ ಸೌಲಭ್ಯಗಳನ್ನು ಹೊಂದಿದ್ದ ಎರಡು ರಹಸ್ಯ ರೂಮ್ಗಳು ಪತ್ತೆಯಾಗಿವೆ. ಅಲ್ಲಿ ದೊಡ್ಡ ಪ್ರಮಾಣದಲ್ಲಿ ಎಣ್ಣೆ ಬಾಟಲ್ಗಳು ಮತ್ತು ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿರುವುದು ಕಾಲೇಜು ಆಡಳಿತ ಮಂಡಳಿಯ ಮೂಗಿನ ನೇರಕ್ಕೆ ನಡೆದ ಅಕ್ರಮಗಳನ್ನು ಎತ್ತಿ ತೋರಿಸುತ್ತದೆ. ಏತನ್ಮಧ್ಯೆ, ಈ ಹಿಂದೆ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 2025 ರಿಂದ ಈ ಕೊಠಡಿಗಳಿಗೆ ಬೀಗ ಹಾಕಲಾಗಿತ್ತು ಎನ್ನಲಾಗಿದೆ.
ಈ ಸಂಪೂರ್ಣ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ದೇಬಾಶಿಸ್ ಬಂಡೋಪಾಧ್ಯಾಯ ಅಲಿಯಾಸ್ ಕಂಕಟ ದೇಬು ಮತ್ತು ಅವರ ಪುತ್ರ ಶಿವಶಿಶ್ ಬಂಡೋಪಾಧ್ಯಾಯ ಅವರ ಹೆಸರು ಮುಂಚೂಣಿಯಲ್ಲಿದೆ. ಇವರ ಮೇಲ್ವಿಚಾರಣೆಯಲ್ಲೇ ಈ ಐಷಾರಾಮಿ ಕೊಠಡಿಗಳ ಬಳಕೆ ಆಗುತ್ತಿತ್ತು ಎಂದು ಆರೋಪಿಸಲಾಗಿದೆ. ಆದರೆ ಈ ಎಲ್ಲಾ ಆರೋಪಗಳನ್ನು ದೇಬಾಶಿಸ್ ತೀವ್ರವಾಗಿ ನಿರಾಕರಿಸಿದ್ದು, “ಇದು ತಮ್ಮನ್ನು ಗುರಿಯಾಗಿಸಿಕೊಂಡು ಹೆಣೆದ ಪೂರ್ವ ಯೋಜಿತ ಪಿತೂರಿ” ಎಂದು ಹೇಳಿದ್ದಾರೆ.
ಮುಂದುವರೆದು, ಈ ಕೊಠಡಿಯನ್ನು ಈ ಹಿಂದೆ ತೃಣಮೂಲ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ಟಿಎಂಸಿಪಿ (TMCP) ತನ್ನ ಕಚೇರಿಯನ್ನಾಗಿ ಬಳಸಿಕೊಳ್ಳುತ್ತಿತ್ತು ಎಂದು ವರದಿಯಾಗಿದೆ. ಘಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೊಲ್ಕತ್ತಾದ ಮುಚಿಪಾರಾ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಇನ್ನೂ, ಅಕ್ರಮಗಳ ಹಿನ್ನೆಲೆಯಲ್ಲಿ ಟಿಎಂಸಿ ಮುಖಂಡ ಮತ್ತು ಕಾಲೇಜಿನ ಮಾಜಿ ಆಡಳಿತ ಮಂಡಳಿ ಸದಸ್ಯರಾದ ದೇಬಾಶಿಶ್ ಬ್ಯಾನರ್ಜಿ ಹಾಗೂ ಕಾಲೇಜಿನ ವೆಂಡರ್ ಪರಿತೋಷ್ ದತ್ತಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಸುರೇಂದ್ರನಾಥ ಕಾಲೇಜು ಸಾಮಾನ್ಯ ಸಂಸ್ಥೆಯಲ್ಲ. ಸುಮಾರು 140 ವರ್ಷಗಳಷ್ಟು ಹಳೆಯದಾದ ಈ ಕಾಲೇಜು ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್, ಸಾಹಿತಿ ಬಿಭೂತಿಭೂಷಣ್ ಬಂಡೋಪಾಧ್ಯಾಯ, ಲೇಖಕಿ ಸುನಿಲ್ ಗಂಗೋಪಾಧ್ಯಾಯ ಮತ್ತು ಬಾಂಗ್ಲಾದೇಶದ ಮಾಜಿ ಪ್ರಧಾನಿ ಬೇಗಂ ಖಲೀದಾ ಜಿಯಾ ಅವರಂತಹ ಗಣ್ಯವ್ಯಕ್ತಿಗಳು ಓದಿದ ಸ್ಥಳವಾಗಿದೆ ಎಂಬುದು ಗಮನಾರ್ಹ ಸಂಗತಿ.
Kolkata,West Bengal
Jun 03, 2026 10:58 PM IST
Surendranath College: ಕಾಲೇಜಿನ ಸೀಕ್ರೆಟ್ ಬೆಡ್‌ರೂಮ್‌ನಲ್ಲಿ 1 ಕೋಟಿ ನಗದು, ರಿವಾಲ್ವರ್ ಪತ್ತೆ; ಪ್ರತಿಷ್ಠಿತ ಕಾಲೇಜಿನಿಂದಲೇ ಅಕ್ರಮ ದಂಧೆ ನಡೆಸುತ್ತಿತ್ತಾ ಟಿಎಂಸಿ?













