Last Updated:
ಬಿಸಿಸಿಐ ಕೇಂದ್ರ ಒಪ್ಪಂದ ಹೊಂದಿರುವ ಅಗ್ರ ಆಟಗಾರರಿಗೆ ಶಾರೀರಿಕ ಮತ್ತು ಮಾನಸಿಕ ದಣಿವಾರಿಸಿಕೊಳ್ಳಲು ವರ್ಷದಲ್ಲಿ ಕನಿಷ್ಠ ಒಂದು ತಿಂಗಳ ಸಂಪೂರ್ಣ ವಿಶ್ರಾಂತಿಯನ್ನು ವೇಳಾಪಟ್ಟಿಯಲ್ಲಿ ಕಾಯ್ದಿರಿಸಬೇಕು ಎಂದು ಗವಾಸ್ಕರ್ ಬಿಸಿಸಿಐಗೆ ಆಗ್ರಹಿಸಿದ್ದಾರೆ.
ಭಾರತೀಯ ಆಟಗಾರರ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿ ಮತ್ತು ಅತಿಯಾದ ರೊಟೇಷನ್ ಪದ್ಧತಿಯ ಬಗ್ಗೆ ಟೀಮ್ ಇಂಡಿಯಾ ಮಾಜಿ ನಾಯಕ, ಲೆಜೆಂಡರಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಬಿಸಿಸಿಐ (BCCI) ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಟಗಾರರಿಗೆ ಮತ್ತು ಕ್ರಿಕೆಟ್ ನೋಡುವ ಅಭಿಮಾನಿಗಳಿಗೆ ವರ್ಷದಲ್ಲಿ ಕನಿಷ್ಠ ಒಂದು ತಿಂಗಳಾದರೂ ಕಡ್ಡಾಯ ವಿಶ್ರಾಂತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಅಫ್ಘಾನಿಸ್ತಾನ ವಿರುದ್ಧದ ಸರಣಿಯ ನಂತರ ಮಿಡ್-ಡೇ (Mid-Day) ಪತ್ರಿಕೆಯ ತಮ್ಮ ಅಂಕಣದಲ್ಲಿ ಗವಾಸ್ಕರ್ ಈ ವಿಷಯದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.
ಬಿಸಿಸಿಐ ಕೇಂದ್ರ ಒಪ್ಪಂದ ಹೊಂದಿರುವ ಅಗ್ರ ಆಟಗಾರರಿಗೆ ಶಾರೀರಿಕ ಮತ್ತು ಮಾನಸಿಕ ದಣಿವಾರಿಸಿಕೊಳ್ಳಲು ವರ್ಷದಲ್ಲಿ ಕನಿಷ್ಠ ಒಂದು ತಿಂಗಳ ಸಂಪೂರ್ಣ ವಿಶ್ರಾಂತಿಯನ್ನು ವೇಳಾಪಟ್ಟಿಯಲ್ಲಿ ಕಾಯ್ದಿರಿಸಬೇಕು. ಇದರಿಂದ ಆಟಗಾರರಲ್ಲಿ ಹೊಸತನ ಮತ್ತು ಮಾನಸಿಕ ದಣಿವು ಕಡಿಮೆಯಾಗುತ್ತದೆ. ಅಲ್ಲದೆ ಕ್ರಿಕೆಟ್ ಮೇಲಿನ ಆಸಕ್ತಿ ಕೂಡ ಅಭಿಮಾನಿಗಳಲ್ಲಿ ಹೆಚ್ಚಾಗುತ್ತದೆ. ಬಿಡುವಿಲ್ಲದೆ ನಡೆಯುವ ಕ್ರಿಕೆಟ್ನಿಂದ ಜನರಲ್ಲೂ ಆಸಕ್ತಿ ಕುಂದುತ್ತದೆ ಎಂದು ಗವಾಸ್ಕರ್ ವಾದಿಸಿದ್ದಾರೆ.
ಐಪಿಎಲ್ 2026 ಮುಕ್ತಾಯಗೊಂಡ ಕೇವಲ ಆರು ದಿನಗಳಲ್ಲೇ ಭಾರತ ತಂಡವು ಅಫ್ಘಾನಿಸ್ತಾನ ವಿರುದ್ಧ ಏಕೈಕ ಟೆಸ್ಟ್ ಪಂದ್ಯವನ್ನು ಆಡಬೇಕಾಯಿತು. ಈ ರೀತಿಯ ಸತತ ಕ್ರಿಕೆಟ್ನಿಂದ ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ತೀವ್ರ ದಣಿವಿಗೆ ಒಳಗಾಗುತ್ತಿದ್ದಾರೆ ಎಂಬುದು ಗವಾಸ್ಕರ್ ಕಳವಳಕ್ಕೆ ಕಾರಣವಾಗಿದೆ.
ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಹೆಸರಿನಲ್ಲಿ ಪದೇ ಪದೇ ಹೊಸ ಆಟಗಾರರನ್ನು ರೊಟೇಷನ್ ಮಾಡಿ ಭಾರತ ತಂಡಕ್ಕೆ ಕರೆತರಲಾಗುತ್ತಿದೆ. ಇದರಿಂದ ಭಾರತ ತಂಡವನ್ನು ಪ್ರತಿನಿಧಿಸುವ ಗೌರವ ಮತ್ತು ಮೌಲ್ಯ ಕಡಿಮೆ ಆಗುತ್ತಿದೆ. ಯಾರೋ ಒಬ್ಬರು ವಿಶ್ರಾಂತಿ ಪಡೆದಿದ್ದಾರೆ ಎಂಬ ಕಾರಣಕ್ಕೆ ಸುಲಭವಾಗಿ ಭಾರತದ ಕ್ಯಾಪ್ ಸಿಗಬಾರದು, ಅದನ್ನು ಆಟಗಾರರು ಕಷ್ಟಪಟ್ಟು ಗಳಿಸಬೇಕು ಎಂದು ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡವು ಪ್ರತಿ ತಿಂಗಳೂ ಎಲ್ಲೋ ಒಂದು ಕಡೆ ಸತತವಾಗಿ ಪಂದ್ಯಗಳನ್ನು ಆಡುತ್ತಲೇ ಇರುತ್ತದೆ. ಇದರಿಂದಾಗಿ ಕ್ರಿಕೆಟ್ ಅಭಿಮಾನಿಗಳೂ ಕೂಡ ದಣಿದಿದ್ದಾರೆ. ಇದಕ್ಕ ಸ್ಪಷ್ಟ ನಿದರ್ಶನವೆಂದರೆ ಇತ್ತೀಚಿನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕ್ರೀಡಾಂಗಣಗಳು ಅರ್ಧದಷ್ಟು ಖಾಲಿ ಇದ್ದವು ಎಂದಿದ್ದಾರೆ. ಆದ್ದರಿಂದ ಅಭಿಮಾನಿಗಳ ಆಸಕ್ತಿ ಉಳಿಸಿಕೊಳ್ಳಲು ಅವರಿಗೂ ವಿರಾಮ ಬೇಕು ಎಂದಿದ್ದಾರೆ.
ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದನ್ನು ತಾನು ಬೆಂಬಲಿಸುವುದಾಗಿ ಹೇಳಿರುವ ಗವಾಸ್ಕರ್, ಅದಕ್ಕಾಗಿ ‘ಭಾರತ ಎ’ ತಂಡ ಹಾಗೂ ಅಂಡರ್-19 ಪಂದ್ಯಗಳನ್ನು ಹೆಚ್ಚಾಗಿ ಆಯೋಜಿಸಬೇಕೇ ಹೊರತು, ಹಿರಿಯ ಆಟಗಾರರ ಸರಣಿಗಳಲ್ಲಿ ಪದೇ ಪದೇ ಇಡೀ ತಂಡವನ್ನೇ ಬದಲಾಯಿಸಬಾರದು ಎಂದು ಸಲಹೆ ನೀಡಿದ್ದಾರೆ. ಹೀಗೆ ಮಾಡುವುದರಿಂದ ಅವಕಾಶ ಸಿಕ್ಕಾಗ ಉತ್ತಮವಾಗಿ ಆಡಿದರೂ ಮುಂದಿನ ಸರಣಿಯಲ್ಲಿ ಹಿರಿಯ ಆಟಗಾರರು ಮರಳಿದಾಗ ಯುವ ಆಟಗಾರರನ್ನ ತಂಡದಿಂದ ಕೈಬಿಡುವುದು ಅವರ ಮನಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಕೊಹ್ಲಿ ಅನುಪಸ್ಥಿತಿಯಲ್ಲಿ ಜೈಸ್ವಾಲ್ ಅಫ್ಘಾನ್ ಸರಣಿಯಲ್ಲಿ ಅವಕಾಶ ಪಡೆದು ಶತಕ ಸಿಡಿಸಿದ್ದರು. ಆದರೆ ಕೊಹ್ಲಿ ಮರಳುತ್ತಿದ್ದಂತೆ ಅವರನ್ನ ಇಂಗ್ಲೆಂಡ್ ಪ್ರವಾಸದಿಂದ ಕೈಬಿಡಲಾಯಿತು. ಜೈಸ್ವಾಲ್ಗೆ ಅನ್ಯಾಯವಾಗಿದೆ ಎಂದು ಹೇಳುವಂತಾಗಿದೆ. ಹಾಗಾಗಿ ಗವಾಸ್ಕರ್ ಅಭಿಪ್ರಾಯ ಸರಿಯಾಗಿದೆ ಎಂದು ಕ್ರಿಕೆಟ್ ಅಭಿಮಾನಿಗಳು ಕೂಡ ಸಮ್ಮತಿಸಿದ್ದಾರೆ.
ಮುಂದಿನ ವರ್ಷದ ಐಪಿಎಲ್ ವೇಳಾಪಟ್ಟಿಯನ್ನು ಯೋಜಿಸುವಾಗ ಬಿಸಿಸಿಐ ಈ ಒಂದು ತಿಂಗಳ ವಿಶ್ರಾಂತಿ ಅವಧಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗವಾಸ್ಕರ್ ತಮ್ಮ ಲೇಖನದ ಮೂಲಕ ಆಗ್ರಹಿಸಿದ್ದಾರೆ.
Jun 24, 2026 11:28 PM IST
Sunil Gavaskar: ಕ್ರಿಕೆಟ್ ಅಭಿಮಾನಿಗಳಿಗೂ ಒಂದು ತಿಂಗಳ ರಜೆ ನೀಡಿ! ಇಲ್ಲವಾದರೆ ಕ್ರಿಕೆಟ್ ಆಸಕ್ತಿ ಕಳೆದುಕೊಳ್ಳುತ್ತದೆ! ಭಾರತದ ಮಾಜಿ ನಾಯಕ ಆಗ್ರಹ













