Last Updated:
ಮೂವರು ಹುಡುಗಿಯರು ಒಂದೇ ವ್ಯಕ್ತಿಯನ್ನು ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಮೂವರು ಸಹೋದರಿಯರು ಪರಸ್ಪರ ದೂರ ಆಗಲು ಬಯಸದೇ ಒಬ್ಬನೇ ವ್ಯಕ್ತಿಯನ್ನು ಮದುವೆಯಾಗಿದ್ದಾರೆ.
ಮೂವರು ಹುಡುಗಿಯರು ಒಬ್ಬನೇ ವ್ಯಕ್ತಿಯನ್ನು ಮದುವೆಯಾಗಿರುವ (Marriage) ವಿಚಿತ್ರ ಮತ್ತು ಆಶ್ಚರ್ಯಕರ ಘಟನೆ ನಡೆದಿದೆ. ಇವರು ಕೊಟ್ಟ ಕಾರಣ ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಿ. ಹೌದು, ಉತ್ತರ ಪ್ರದೇಶದ (Uttar Pradesh) ಅಮ್ರೋಹಾ ಜಿಲ್ಲೆಯಲ್ಲಿ ಈ ಒಂದು ಅಸಾಧಾರಣ ಮತ್ತು ವಿವಾದಾಸ್ಪದ ಘಟನೆ ಬೆಳಕಿಗೆ ಬಂದಿದೆ. ಮೂವರು ಸಹೋದರಿಯರು ಒಂದೇ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಈ ವಿವಾಹದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಅಮ್ರೋಹಾ ಜಿಲ್ಲೆಯ ಧೌರಿಯಾ ಗ್ರಾಮದವರಾದ ಸರೋಜಾ, ಸಾವಿತ್ರಿ ಮತ್ತು ಸಂತೋಷಾ ಎಂಬ ಮೂವರು ಸಹೋದರಿಯರು ಶ್ಯಾಮಪುರಿ ಗ್ರಾಮದ ವಿಕಾಸ್ (ವಿಕ್ಕಿ) ಎಂಬ ಯುವಕನನ್ನು ಮದುವೆಯಾಗಿದ್ದಾರೆ. ಇದಕ್ಕೆ ಉದಾಹರಣೆ ಸಮೇತ ಕಾರಣವನ್ನು ನೀಡಿದ್ದಾರೆ.
ಜುಲೈ 17ರಂದು ಚಾಮುಂಡಾ ಮಾತಾ ದೇವಸ್ಥಾನದಲ್ಲಿ ಇವರು ಪೂಜೆ ಸಲ್ಲಿಸಿ, ಬೆಂಕಿಯನ್ನು ಸಾಕ್ಷಿಯಾಗಿಟ್ಟುಕೊಂಡು ಏಳು ಪ್ರತಿಜ್ಞೆಗಳನ್ನು ಮಾಡಿ ವಿವಾಹವಾಗಿದ್ದಾರೆ. ಎರಡೂ ಕುಟುಂಬಗಳಿಂದ ಯಾರೂ ಈ ಮದುವೆಗೆ ಹಾಜರಾಗಿರಲಿಲ್ಲ. ಆದರೂ ಮೂವರು ಸಹೋದರಿಯರು ಮತ್ತು ವರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದು ಕೆಲ ವಿವಾದಕ್ಕೂ ಕಾರಣವಾಗಿದೆ.
ಮೂವರು ಸಹೋದರಿಯರು ಸಾಮಾಜಿಕ ಮಾಧ್ಯಮದಲ್ಲಿ ರೀಲ್ಸ್ ಮಾಡಿಕೊಂಡು ಫೇಮಸ್ ಆಗಿರುವವರು. ಇವರು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ವೀಡಿಯೊಗಳನ್ನು ರಚಿಸುತ್ತಿದ್ದು, ಗಣನೀಯ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಸರೋಜಾ ಎರಡನೇ ವರ್ಷದ ಬಿ.ಟೆಕ್ ವಿದ್ಯಾರ್ಥಿನಿ, ಸಾವಿತ್ರಿ ಮತ್ತು ಸಂತೋಷಾ 12ನೇ ತರಗತಿ ಪಾಸ್. ಅವರ ತಂದೆ ರಮೇಶ್ ರೈತರಾಗಿದ್ದಾರೆ. ವಿಕಾಸ್ ಈ ಮೂವರಿಗೂ ಕ್ಯಾಮೆರಾಮನ್ ಆಗಿ ಕೆಲಸ ಮಾಡುತ್ತಿದ್ದ. ಕಳೆದ ಆರು ತಿಂಗಳಿನಿಂದ ಇವರೊಂದಿಗೆ ತುಂಬಾ ಆತ್ಮೀಯತೆ ಬೆಳೆದಿತ್ತು. ವಿಕಾಸ್ ಈ ವರ್ಷ 12ನೇ ತರಗತಿ ಪಾಸ್ ಮಾಡಿದ್ದಾರೆ.
ಮೂವರು ಸಹೋದರಿಯರು ಬಾಲ್ಯದಿಂದಲೂ ಒಟ್ಟಿಗೆ ಇದ್ದಾರೆ. ಹೀಗಾಗಿ ಭವಿಷ್ಯದಲ್ಲೂ ಬೇರೆಯಾಗಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಕುಟುಂಬ ಅವರ ವಿವಾಹವನ್ನು ಬೇರೆ ಬೇರೆಯಾಗಿ ಏರ್ಪಡಿಸಲು ಪ್ರಯತ್ನಿಸಿದಾಗ, ಅವರು ಒಂದೇ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಿದ್ದಾರೆ. ವಿಕಾಸ್ , ‘ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಮೂವರನ್ನೂ ಮದುವೆಯಾದೆ’ ಎಂದು ಹೇಳಿದ್ದಾರೆ.
ಈ ಮದುವೆ ವಿವಾದ ನೋಡಿ ಮೂವರು ಸಹೋದರಿಯರು ಒಂದು ವೀಡಿಯೊ ಬಿಡುಗಡೆ ಮಾಡಿದ್ದಾರೆ. ಅವರು, ‘ಪ್ರಾಚೀನ ಕಾಲದಲ್ಲಿ ರಾಜ ದಶರಥನಿಗೆ ಮೂವರು ರಾಣಿಯರಿದ್ದರು. ಅದು ತಪ್ಪೇ? ನಾವು ಯಾವುದೇ ತಪ್ಪು ಮಾಡಿಲ್ಲ. ಇದು ಪ್ರೀತಿಯ ವಿಷಯ. ನಾವು ಮೂವರು ಒಟ್ಟಿಗೆ ಸಂತೋಷವಾಗಿರಬಹುದು. ನಾವೆಲ್ಲರೂ ವಯಸ್ಕರು. ನಮಗೆ ಸಂತೋಷವಿದ್ದರೆ ಯಾರಿಗೂ ಸಮಸ್ಯೆ ಏನು?’ ಎಂದು ಪ್ರಶ್ನಿಸಿದ್ದಾರೆ.
ಹಸನ್ಪುರ ಕೊತ್ವಾಲಿ ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ತಿವಾರಿ ಅವರು, ‘ಮೂವರು ಸಹೋದರಿಯರು ತಮ್ಮ ಸ್ವಂತ ಇಚ್ಛೆಯಿಂದ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ’ ಎಂದು ಹೇಳಿದ್ದಾರೆ. ಈ ಘಟನೆಯು ಸಮಾಜದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ವೈಯಕ್ತಿಕ ಸ್ವಾತಂತ್ರ್ಯ ಎಂದು ನೋಡುತ್ತಿದ್ದರೆ, ಇನ್ನು ಕೆಲವರು ಸಾಂಪ್ರದಾಯಿಕ ಮೌಲ್ಯಗಳಿಗೆ ವಿರುದ್ಧ ಎಂದು ಟೀಕಿಸುತ್ತಿದ್ದಾರೆ. ಮೂವರು ಸಹೋದರಿಯರು ಮತ್ತು ವಿಕಾಸ್ ಅವರ ಭವಿಷ್ಯ ಈಗ ಎಲ್ಲರ ಗಮನ ಸೆಳೆದಿದೆ.
Jul 23, 2026 12:39 PM IST














