ಕಿಡ್ನಿಗೆ ಸಂಬಂಧಿಸಿದಂತೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶ್ಯಾಮ್ ಬೆನಗಲ್ ಅವರು ಚಿಕಿತ್ಸೆ ಫಲಿಸದೇ ನಿನ್ನೆ ಅಂದರೆ ಡಿಸೆಂಬರ್ 23, ಸೋಮವಾರ ಸಂಜೆ 6:38ಕ್ಕೆ ಮುಂಬೈ ಸೆಂಟ್ರಲ್ನ ವೊಕಾರ್ಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಅಂಕುರ್, ದಿ ಸೀಡ್ಲಿಂಗ್, ಮಂಥನ್, ಮಂಡಿ, ಜುನೂನ್ನಂತಹ ಮಹತ್ವದ ಸಿನಿಮಾ ಕೊಟ್ಟ ಶ್ಯಾಮ್ ಬೆನಗಲ್ ನಿಧನಕ್ಕೆ ರಾಜಕೀಯ ಗಣ್ಯರಿಂದ ಹಿಡಿದು ಸಿನಿಮಾ ದಿಗ್ಗಜರು, ಅಭಿಮಾನಿಗಳು ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ದ್ರೌಪದಿ ಮುರ್ಮು ಕೂಡ ಶ್ಯಾಮ್ ಬೆನಗಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Deeply saddened by the passing of Shri Shyam Benegal Ji, whose storytelling had a profound impact on Indian cinema. His works will continue to be admired by people from different walks of life. Condolences to his family and admirers. Om Shanti.
— Narendra Modi (@narendramodi) December 23, 2024
ಪೋಸ್ಟ್ನಲ್ಲಿ, ಪ್ರಧಾನಮಂತ್ರಿಯವರು, “ಶ್ರೀ ಶ್ಯಾಮ್ ಬೆನಗಲ್ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ, ಅವರ ಕಥೆ ಹೇಳುವಿಕೆಯು ಭಾರತೀಯ ಚಿತ್ರರಂಗದ ಮೇಲೆ ಆಳವಾದ ಪ್ರಭಾವವನ್ನು ಬೀರಿತ್ತು. ಅವರ ಕಥೆಗಳು ಜೀವನದ ವಿವಿಧ ಹಂತಗಳ ಜನರ ಮೆಚ್ಚುಗೆ ಪಡೆದಿದ್ದವು. ಇದು ಭರಿಸಲಾಗದ ನಷ್ಟ” ಎಂದು ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ, ಶ್ರೀ ಶ್ಯಾಮ್ ಬೆನಗಲ್ ಅವರ ನಿಧನವು ಭಾರತೀಯ ಚಿತ್ರರಂಗ ಮತ್ತು ದೂರದರ್ಶನದ ಅದ್ಭುತ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ. ಅವರು ಹೊಸ ರೀತಿಯ ಸಿನಿಮಾವನ್ನು ಪ್ರಾರಂಭಿಸಿದ್ದರು ಮತ್ತು ಹಲವಾರು ಶ್ರೇಷ್ಠತೆಯನ್ನು ರಚಿಸಿದರು. ದೇವರು ಕುಟುಂಬಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪೋಸ್ಟ್ ಮಾಡಿದ್ದಾರೆ.
ಭಾರತೀಯ ಚಿತ್ರರಂಗಕ್ಕೆ ರಿಯಲಿಸ್ಟ್ ಚಿತ್ರ ನಿರ್ಮಾಣದ ಸಮಾನಾಂತರ ಯುಗವನ್ನು ತಂದ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರು ಅಮರರಾಗಿ ಉಳಿಯುತ್ತಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಶ್ರದ್ಧಾಂಜಲಿ ಸಲ್ಲಿಸಿದರು.
ಕರ್ನಾಟಕ ಕೊಂಕಣಿ ಕುಟುಂಬದಿಂದ ಬಂದ ಇವರು ಕೇವಲ; 12ನೇ ವಯಸ್ಸಿನಲ್ಲಿ ತಂದೆಯವರು ಉಡುಗೊರೆಯಾಗಿ ನೀಡಿದ ಕ್ಯಾಮೆರಾ ಹಿಡಿದು ಸಿನಿಮಾ ಮಾಡಲು ಆರಂಭಿಸಿದರು. ಇವರ ಸಿನಿಮಾಗಳು ಭಾರತೀಯರಿಗೆ ನೈಜ ನಿರ್ಮಾಣದ ಯುಗವನ್ನು ನೀಡಿವೆ” ಎಂದು ಸಿಎಂ ಫಡ್ನವೀಸ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶ್ಯಾಮ್ ಬೆನಗಲ್ ಅವರ ಕುಟುಂಬ, ಸ್ನೇಹಿತರು ಮತ್ತು ಅನುಯಾಯಿಗಳಿಗೆ ಸಾಂತ್ವನ ಹೇಳಿದರು. ತಮ್ಮ X ಹ್ಯಾಂಡಲ್ನಲ್ಲಿ ಮಮತಾ “ನಮ್ಮ ಅಪ್ರತಿಮ ಚಿತ್ರನಿರ್ಮಾಪಕ ಶ್ಯಾಮ್ ಬೆನಗಲ್ ಅವರ ನಿಧನದಿಂದ ದುಃಖವಾಗಿದೆ. ಭಾರತೀಯ ಸಮಾನಾಂತರ ಸಿನೆಮಾದ ಆಧಾರಸ್ತಂಭವಾಗಿದ್ದರು. ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ” ಎಂದು ಪೋಸ್ಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಭಾರತೀಯ ಚಲನಚಿತ್ರ ರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದ ಹಿರಿಯ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ನಿಧನದಿಂದ ನಿಜಕ್ಕೂ ಚಿತ್ರರಂಗ ಬಡವಾಗಿದೆ.












