Shapoor Zadran Passes Away: ಕ್ರಿಕೆಟ್​ ಲೋಕಕ್ಕೆ ಆಘಾತಕಾರಿ ಸುದ್ದಿ! ಕೇವಲ 38 ವರ್ಷಕ್ಕೆ ಅಫ್ಘಾನ್ ಸ್ಟಾರ್​ ಕ್ರಿಕೆಟಿಗ ನಿಧನ | ಕ್ರೀಡಾ ಸುದ್ದಿ | ACTPnews

ಶಪೂರ್ ಝದ್ರಾನ್ ನಿಧನ


Last Updated:

ಶಪೂರ್ ಝದ್ರಾನ್ ಅವರು ಕಳೆದ ಕೆಲವು ತಿಂಗಳುಗಳಿಂದ ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (HLH) ಎಂಬ ಅಪರೂಪದ ಮತ್ತು ಅತ್ಯಂತ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದ್ದರು. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಹಾನಿ ಉಂಟುಮಾಡುವ ಖಾಯಿಲೆ.

ಶಪೂರ್ ಝದ್ರಾನ್ ನಿಧನ
ಶಪೂರ್ ಝದ್ರಾನ್ ನಿಧನ

ಅಫ್ಘಾನಿಸ್ತಾನದ ಮಾಜಿ ವೇಗದ ಬೌಲರ್ ಶಪೂರ್ ಝದ್ರಾನ್ (38) (Shapoor Zadran Passes Away) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಭಾರತದ ನವದೆಹಲಿಯ ಆಸ್ಪತ್ರೆಯಲ್ಲಿ ಜುಲೈ 7, 2026 ರಂದು ನಿಧನರಾಗಿದ್ದಾರೆ. ತಮ್ಮ 39ನೇ ಹುಟ್ಟುಹಬ್ಬಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ಅವರು ಕೊನೆಯುಸಿರೆಳೆದಿದ್ದು, ಇಡೀ ವಿಶ್ವ ಕ್ರಿಕೆಟ್ ಸಮುದಾಯ ತೀವ್ರ ಕಂಬನಿ ಮಿಡಿದಿದೆ.

ಅಪರೂಪದ ಕಾಯಿಲೆಯೊಂದಿಗೆ ಸುದೀರ್ಘ ಹೋರಾಟ

ಶಪೂರ್ ಝದ್ರಾನ್ ಅವರು ಕಳೆದ ಕೆಲವು ತಿಂಗಳುಗಳಿಂದ ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (HLH) ಎಂಬ ಅಪರೂಪದ ಮತ್ತು ಅತ್ಯಂತ ಅಪಾಯಕಾರಿ ಕಾಯಿಲೆಯಿಂದ ಬಳಲುತ್ತಿದ್ದರು. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಅತಿಯಾಗಿ ಸಕ್ರಿಯಗೊಳಿಸುವ ಕಾಯಿಲೆ. ಇದರಿಂದ ತೀವ್ರ ಉರಿಯೂತ ಉಂಟಾಗಿ, ಮೂಳೆ ಮಜ್ಜೆ, ಯಕೃತ್ತು, ಪ್ಲೀಹಾ, ಲಿಂಫ್ ನೋಡ್‌ಗಳು ಸೇರಿದಂತೆ ಹಲವು ಅಂಗಗಳಿಗೆ ಹಾನಿಯಾಗುತ್ತದೆ. ಈ ಕಾಯಿಲೆಯಲ್ಲಿ ಬಿಳಿ ರಕ್ತಕಣಗಳು ದೇಹದ ಸ್ವಂತ ಅಂಗಗಳ ಮೇಲೆಯೇ ದಾಳಿ ಮಾಡುತ್ತವೆ.

ನಾಲ್ಕನೇ ಹಂತ ತಲುಪಿದ್ದ ಕಾಯಿಲೆ

ಜನವರಿ 2026ರಲ್ಲಿ ಚಿಕಿತ್ಸೆಗಾಗಿ ದೆಹಲಿಗೆ ಬಂದಿದ್ದರು. ಕಳೆದ ಅಕ್ಟೋಬರ್‌ನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಅವರ ತಮ್ಮ ಘಮೈ ಝದ್ರಾನ್ ಹೇಳಿದ್ದಾರೆ. ಭಾರತದಲ್ಲಿ ಚಿಕಿತ್ಸೆಗೆ ವೀಸಾ ಪಡೆಯಲು ರಶೀದ್ ಖಾನ್ ಮತ್ತು ಮಿರ್ವೈಸ್ ಅಶ್ರಫ್ ಅವರು ಸಹಾಯ ಮಾಡಿದ್ದರು. ಜಯ್ ಶಾ ಅವರನ್ನು ಸಂಪರ್ಕಿಸಿ ವೀಸಾ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿತ್ತು.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಭಾರತದ ದೆಹಲಿ-ಎನ್‌ಸಿಆರ್ ಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ದೇಹದಲ್ಲಿ ಟಿಬಿ (ಕ್ಷಯರೋಗ) ಸೇರಿದಂತೆ ತೀವ್ರತರದ ಸೋಂಕುಗಳು ಕಾಣಿಸಿಕೊಂಡಿದ್ದವು ಹಾಗೂ ಇದು ಮೆದುಳಿಗೂ ಹರಡಿತ್ತು. ಮಧ್ಯದಲ್ಲಿ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಂಡಿದ್ದರೂ, ನಂತರ ಮತ್ತೆ ಸೋಂಕು ಉಲ್ಬಣಗೊಂಡು ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದರು.

ಅಫ್ಘಾನ್ ಕ್ರಿಕೆಟ್‌ನ ಅಡಿಪಾಯ ಹಾಕಿದ ಯೋಧ

ಆರಡಿಗಿಂತಲೂ ಎತ್ತರದ ದೇಹ, ಓಡಿಬರುವಾಗ ಅಲೆಅಲೆಯಾಗಿ ಹಾರುತ್ತಿದ್ದ ಕಪ್ಪು ಕೂದಲು ಮತ್ತು ಆಕ್ರಮಣಕಾರಿ ವೇಗದ ಬೌಲಿಂಗ್ ಶೈಲಿಯಿಂದ ಶಪೂರ್ ಅಫ್ಘಾನ್ ಕ್ರಿಕೆಟ್‌ನ ಅತ್ಯಂತ ಜನಪ್ರಿಯ ಮುಖವಾಗಿದ್ದರು. ಅಫ್ಘಾನಿಸ್ತಾನ ತಂಡವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶೂನ್ಯದಿಂದ ಎದ್ದುಬಂದು ಇಂದಿನ ಉನ್ನತ ಸ್ಥಾನಕ್ಕೇರಲು ಶಪೂರ್ ಅವರ ಶ್ರಮ ಮತ್ತು ಬದ್ಧತೆ ಅಪಾರವಾಗಿತ್ತು.

ಅಂತಾರಾಷ್ಟ್ರೀಯ ವೃತ್ತಿಜೀವನ (2009 – 2020)

ಶಪೂರ್ ಅಫ್ಘಾನಿಸ್ತಾನ ಪರ ಒಟ್ಟು 80 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 44 ಏಕದಿನ ಪಂದ್ಯಗಳಲ್ಲಿ (ODIs) 43 ವಿಕೆಟ್ ಹಾಗೂ 36 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 37 ವಿಕೆಟ್‌ಗಳನ್ನು ಪಡೆದಿದ್ದಾರೆ.

2015 ರ ವಿಶ್ವಕಪ್‌ನ ಐತಿಹಾಸಿಕ ಹೀರೋ

ಶಪೂರ್ ಝದ್ರಾನ್ ಅವರ ಕ್ರಿಕೆಟ್ ಬದುಕಿನ ಸುವರ್ಣ ಕ್ಷಣ ಎಂದರೆ 2015 ರ ಐಸಿಸಿ ಏಕದಿನ ವಿಶ್ವಕಪ್. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲಿ ನಡೆದ ಆ ಟೂರ್ನಿಯಲ್ಲಿ 10 ವಿಕೆಟ್‌ಗಳನ್ನು ಪಡೆಯುವ ಮೂಲಕ ಅವರು ಅಫ್ಘಾನಿಸ್ತಾನದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಅದಕ್ಕಿಂತ ಹೆಚ್ಚಾಗಿ, ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ತನ್ನ ಇತಿಹಾಸದ ಮೊದಲ ವಿಶ್ವಕಪ್ ಜಯ ದಾಖಲಿಸಲು ಶಪೂರ್ ಅವರೇ ಕಾರಣರಾಗಿದ್ದರು. ಕೊನೆಯ ವಿಕೆಟ್‌ಗೆ 11ನೇ ಬ್ಯಾಟರ್ ಆಗಿ ಕ್ರೀಸ್‌ಗೆ ಬಂದ ಅವರು ಪ್ರಮುಖ 12 ರನ್‌ಗಳನ್ನು ಗಳಿಸಿದ್ದಲ್ಲದೆ, ಅಂತಿಮವಾಗಿ ವಿನ್ನಿಂಗ್ ರನ್ ಬಾರಿಸಿ ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ್ದರು. ಮೈದಾನದಲ್ಲಿ ಮಂಡಿಯೂರಿ ಅವರು ಕೈಗಳನ್ನು ಚಾಚಿ ಸಂಭ್ರಮಿಸಿದ ಚಿತ್ರ ಕ್ರಿಕೆಟ್ ಇತಿಹಾಸದ ಅಮರ ಕ್ಷಣಗಳಲ್ಲಿ ಒಂದಾಗಿದೆ.

ಕಂಬನಿ ಮಿಡಿದ ಸಹ ಆಟಗಾರರು

ಶಪೂರ್ ಕೇವಲ ಆಟಗಾರನಾಗಿರದೆ, ತಂಡದ ಕಿರಿಯ ಆಟಗಾರರಿಗೆ ಉತ್ತಮ ಮಾರ್ಗದರ್ಶಕರಾಗಿದ್ದರು. ಅವರು ಆಸ್ಪತ್ರೆಯಲ್ಲಿದ್ದಾಗ ರಶೀದ್ ಖಾನ್, ಮಾಜಿ ನಾಯಕ ಅಸ್ಗರ್ ಅಫ್ಘಾನ್, ಮೊಹಮ್ಮದ್ ನಬಿ ಮತ್ತು ಪ್ರಸ್ತುತ ನಾಯಕ ಹಶ್ಮತುಲ್ಲಾ ಶಾಹಿದಿ ಸೇರಿದಂತೆ ಹಲವು ಆಟಗಾರರು ನಿರಂತರವಾಗಿ ಅವರ ಕುಟುಂಬದವರ ಜೊತೆ ಸಂಪರ್ಕದಲ್ಲಿದ್ದರು. “ಅಫ್ಘಾನ್ ಕ್ರಿಕೆಟ್ ಜಗತ್ತಿನ ಕತ್ತಲೆಯ ಹಾದಿಯಲ್ಲಿದ್ದಾಗ, ದೀಪ ಹಿಡಿದು ಮುನ್ನಡೆಸಿದ ನಿಜವಾದ ಹೋರಾಟಗಾರನನ್ನು ನಾವು ಕಳೆದುಕೊಂಡಿದ್ದೇವೆ” ಎಂದು ಕ್ರಿಕೆಟ್ ಮಂಡಳಿ ಮತ್ತು ಸಹ ಆಟಗಾರರು ಸಂತಾಪ ಸೂಚಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports