Last Updated:
ಯೆಮೆನ್‌ನ ಕೆಂಪು ಸಮುದ್ರದ ಕರಾವಳಿ ಮತ್ತು ಬಾಬ್ ಅಲ್-ಮಂಡೇಬ್ ಜಲಸಂಧಿಯ ಹೆಚ್ಚಿನ ಭಾಗವನ್ನು ಹೌತಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಜಾಗತಿಕ ತೈಲ ರಪ್ತು ಮಾಡುವ ಮಾರ್ಗ ಬಂದ್ ಆಗುವ ಸಾಧ್ಯತೆ ಇದೆ.
ಮಧ್ಯಪ್ರಾಚ್ಯದಲ್ಲಿ ಅತ್ಯಂತ ಗಂಭೀರವಾದ ಭೌಗೋಳಿಕ-ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಯೆಮೆನ್‌ನ ಹೌತಿ ಬಂಡುಕೋರರ (Houthi militants) ನಿರಂತರ ದಾಳಿಗಳು ಸೌದಿ ಅರೇಬಿಯಾಗೆ (Saudi Arabia) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಯೆಮೆನ್‌ನ ಕೆಂಪು ಸಮುದ್ರದ ಕರಾವಳಿ ಮತ್ತು ಬಾಬ್ ಅಲ್-ಮಂಡೇಬ್ ಜಲಸಂಧಿಯ ಹೆಚ್ಚಿನ ಭಾಗವನ್ನು ಹೌತಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದರ ಬೆನ್ನಲ್ಲೇ, ಜಾಗತಿಕವಾಗಿ ಆಯಿಲ್ ಎಕ್ಸ್‌ಪೋರ್ಟ್ ಮಾಡಲು ಪ್ರಮುಖ ಮಾರ್ಗವಾಗಿದ್ದ ಕೆಂಪು ಸಮುದ್ರದ ಹಾದಿ ಸಂಪೂರ್ಣವಾಗಿ ಬಂದ್ ಆಗುವ ಆತಂಕ ಎದುರಾಗಿದೆ. ಈ ಆರ್ಥಿಕ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸೌದಿ ಅರೇಬಿಯಾ ಈಗ ತೀವ್ರ ಪರದಾಡುತ್ತಿದೆ.
ಯೆಮೆನ್‌ನಲ್ಲಿ ನೆಲೆಸಿರುವ ಅನ್ಸಾರ್ ಅಲ್ಲಾ (ಹೌತಿ) ಬಂಡುಕೋರರು ಸೌದಿ ಅರೇಬಿಯಾದ ಇಂಧನ ಮೂಲಸೌಕರ್ಯಗಳ ಮೇಲೆ ಶಕ್ತಿಶಾಲಿ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದ್ದಾರೆ. ಪ್ರಮುಖ ಕೆಂಪು ಸಮುದ್ರ ಕರಾವಳಿ ಪ್ರದೇಶಗಳನ್ನು ವಶಪಡಿಸಿಕೊಂಡಿರುವುದರಿಂದ ಸೌದಿಯ ತೈಲ ರಫ್ತು ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಆದರೆ, ಈ ಆಪತ್ತಿನ ಸಮಯದಲ್ಲಿ ನೆರವಿಗೆ ಬರಬೇಕಿದ್ದ ‘ಮಕ್ಕಾ ರಕ್ಷಣಾ ಒಪ್ಪಂದ’ದ ಭಾಗವಾಗಿರುವ ಪಾಕಿಸ್ತಾನ, ವಿದೇಶಿ ನೆಲದಲ್ಲಿ ತಾನು ಹೋರಾಟಕ್ಕಿಳಿಯುವುದಿಲ್ಲ ಎಂದು ಸ್ಪಷ್ಟವಾಗಿ ನಿರಾಕರಿಸಿದೆ. ಅತ್ತ ಅಮೆರಿಕ ಮತ್ತು ಬ್ರಿಟನ್ ಕೂಡ ಸೌದಿಗೆ ನೆರವಾಗಲು ನೇರ ಸೈನಿಕ ದಾಳಿಗಳನ್ನು ನಡೆಸುವುದಿಲ್ಲ ಎಂದು ಕೈಚೆಲ್ಲಿವೆ.
ನಂಬಿಕಸ್ಥ ಮಿತ್ರರಾಷ್ಟ್ರಗಳೇ ಕೈಕೊಟ್ಟ ಕಾರಣ, ಬೇರೆ ದಾರಿಯಿಲ್ಲದೆ ಸೌದಿ ಅರೇಬಿಯಾವು ತಾನು ಇಷ್ಟು ವರ್ಷ ಅಧಿಕೃತ ದೇಶವೆಂದೇ ಗುರುತಿಸದ ಇಸ್ರೇಲ್‌ನ ಸಹಾಯ ಕೋರಲು ಮುಂದಾಗಿದೆ. ಸೌದಿಯ ರಾಜಕುಮಾರ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಮೆರಿಕದ ಸೆಂಟ್ರಲ್ ಕಮಾಂಡ್ ಮೂಲಕ ಇಸ್ರೇಲ್‌ನಿಂದ ಇಂಟೆಲಿಜೆನ್ಸ್ ಹಾಗೂ ಗುಪ್ತಚರ ನೆರವು ಪಡೆಯಲು ಮಾತುಕತೆ ನಡೆಸುತ್ತಿದ್ದಾರೆ. ಇದುವರೆಗೂ ಯಾವುದೇ ರಾಜತಾಂತ್ರಿಕ ಸಂಬಂಧ ಹೊಂದಿರದ ಇಸ್ರೇಲ್ ಬಾಗಿಲು ತಟ್ಟುತ್ತಿರುವುದು, ಸೌದಿ ಅರೇಬಿಯಾವನ್ನು ಹೌತಿ ಪಡೆಗಳು ಎಷ್ಟರ ಮಟ್ಟಿಗೆ ಸಂಕಷ್ಟಕ್ಕೆ ಸಿಲುಕಿಸಿವೆ ಎಂಬುದನ್ನು ಎತ್ತಿ ತೋರಿಸುತ್ತದೆ.
ಹೌತಿ ಪಡೆಗಳು ಸೌದಿ ಶಿಪ್ಪಿಂಗ್‌ಗೆ ದಿಗ್ಬಂಧನ ಹೇರಿದ್ದು, ಬಾಬ್ ಅಲ್-ಮಂಡೇಬ್ ಜಲಸಂಧಿಯನ್ನು ಬಂದ್ ಮಾಡಿರುವುದರಿಂದ ಸೌದಿಯ ಪ್ರಮುಖ ತೈಲ ಸರಬರಾಜು ಜಾಲ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಇದೇ ವೇಳೆ ಇಸ್ರೇಲ್ ಕೂಡ ಹೌತಿಗಳ ರಾಕೆಟ್ ದಾಳಿ ಮತ್ತು ಆರ್ಥಿಕ ನಷ್ಟದ ಭೀತಿಯಲ್ಲಿದ್ದು, ಕೇವಲ ಗುಪ್ತಚರ ಮಾಹಿತಿ ಹಂಚಿಕೆಗೆ ಮಾತ್ರ ಸೀಮಿತವಾಗುವ ಸಾಧ್ಯತೆಯಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಲವಾದ ಸೇನಾ ಮೈತ್ರಿಕೂಟ ರಚನೆಯಾಗದ ಹೊರತು ಈ ಬಿಕ್ಕಟ್ಟು ಶಮನವಾಗುವುದು ಕಷ್ಟಕರವಾಗಿದೆ.
(ವರದಿ: ಚೈತ್ರಾ ಹರೀಶ್, ನ್ಯೂಸ್ 18 ಕನ್ನಡ, ಬೆಂಗಳೂರು)














