Last Updated:
ಏಳು ಪ್ರಯಾಣಿಕರು ಈಜಿಕೊಂಡು ಸುರಕ್ಷಿತವಾಗಿದ್ದಾರೆ, ಅವರನ್ನು ಸ್ಥಳೀಯ ಜನರು ರಕ್ಷಿಸಿದ್ದಾರೆ, ಆದರೆ ನಂತರ ಮೂವರ ಶವಗಳನ್ನು ಹೊರತೆಗೆಯಲಾಗಿದೆ. ಉಳಿದವರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಟ್ನಾ: ಬಿಹಾರದ ಸಮಷ್ಟಿಪುರ ಜಿಲ್ಲೆಯ ಸುಲ್ತಾನ್ಪುರ ದಿಯಾರಾ ಬಳಿ ಗುರುವಾರ ಗಂಗಾ ನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಮೂವರು ಜಲಸಮಾಧಿಯಾಗಿದ್ದು, ಇತರ ನಾಲ್ವರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗಿನ ಜಾವ ಈ ದುರಂತ ಸಂಭವಿಸಿದೆ. ಪಾಟ್ನಾ ಜಿಲ್ಲೆಯ ಬರ್ಹ್ ಉಪವಿಭಾಗದ ಉಮಾನಾಥ್ ಘಾಟ್ ಬಳಿಯ ಬಿಂದ್ ಟೋಲಿಯಿಂದ ನದಿಗೆ ಅಡ್ಡಲಾಗಿ ಮೊಹಿಯುದ್ದೀನ್ ನಗರದ ದಿಯಾರಾ ಪ್ರದೇಶದಲ್ಲಿರುವ ಕೃಷಿ ತೋಟಗಳಿಗೆ ದೋಣಿಯೊಂದು ಸುಮಾರು 14 ಪ್ರಯಾಣಿಕರನ್ನು ಹೊತ್ತೊಯ್ದಿತ್ತು.
ಏಳು ಪ್ರಯಾಣಿಕರು ಈಜಿಕೊಂಡು ಸುರಕ್ಷಿತವಾಗಿದ್ದಾರೆ, ಅವರನ್ನು ಸ್ಥಳೀಯ ಜನರು ರಕ್ಷಿಸಿದ್ದಾರೆ, ಆದರೆ ನಂತರ ಮೂವರ ಶವಗಳನ್ನು ಹೊರತೆಗೆಯಲಾಗಿದೆ. ಉಳಿದವರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ದೋಣಿ ಮಗುಚಿದ ನಂತರ ಪಾಟ್ನಾ ಮತ್ತು ಸಮಷ್ಟಿಪುರ ಜಿಲ್ಲೆಗಳ ಆಡಳಿತವು ಸಮನ್ವಯದಿಂದ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡಗಳು ಕಾಣೆಯಾದ ವ್ಯಕ್ತಿಗಳನ್ನು ಹುಡುಕುತ್ತಿವೆ’ ಎಂದು ಅಪಘಾತದ ಸ್ಥಳಕ್ಕೆ ತೆರಳಿದ ತ್ಯಾಗರಾಜನ್ ಸುದ್ದಿಗಾರರಿಗೆ ತಿಳಿಸಿದರು.
ಕಾಣೆಯಾದವರ ಕುಟುಂಬ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ರಕ್ಷಣಾ ಕಾರ್ಯಾಚರಣೆಯನ್ನು ವೀಕ್ಷಿಸಲು ಗಂಗಾ ನದಿಯ ದಡದಲ್ಲಿ ಜಮಾಯಿಸಿದ್ದರು. ರಕ್ಷಿಸಲಾದ ಪ್ರಯಾಣಿಕರನ್ನು ಚಿಕಿತ್ಸೆಗಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಇದಕ್ಕೂ ಮುನ್ನ ಮಂಗಳವಾರ ರಾಜ್ಯ ರಾಜಧಾನಿಯ ಗಾಂಧಿ ಘಾಟ್ ಬಳಿ ಗಂಗಾ ನದಿಯಲ್ಲಿ ಮೂವರು ಹದಿಹರೆಯದವರು ಮತ್ತು ಒಬ್ಬ ಯುವಕ ಮುಳುಗಿ ಸಾವನ್ನಪ್ಪಿದ್ದರು.













