Last Updated:
ಕಾರ್ ವರ್ಕ್ಶಾಪ್ ಬಳಿ ನಿಲ್ಲಿಸಿದ್ದ ಕಾರ್ಗೆ ಹುಡುಗಿಯರು ನುಗ್ಗಿದ್ದು, ಒಳಗಿನಿಂದ ಲಾಕ್ ಮಾಡಿದ ನಂತರ ಅವರಿಗೆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ, ಅವರ ತಂದೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ವಾರ್: ಆಟವಾಡುತ್ತಿದ್ದಾಗ ನಿಲ್ಲಿಸಿದ್ದ ಕಾರಿನೊಳಗೆ ಆಕಸ್ಮಿಕವಾಗಿ ಸಿಲುಕಿ ಇಬ್ಬರು ಸಹೋದರಿಯರು ಉಸಿರುಗಟ್ಟಿ (Sad News) ಸಾವನ್ನಪ್ಪಿದ ಘಟನೆ ಅಲ್ವಾರ್ನ ವೈಶಾಲಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖುದುನ್ಪುರಿ ಗ್ರಾಮದಲ್ಲಿ ನಡೆದಿದೆ.
ಕಾರ್ ವರ್ಕ್ಶಾಪ್ ಬಳಿ ನಿಲ್ಲಿಸಿದ್ದ ಕಾರ್ಗೆ ಹುಡುಗಿಯರು ನುಗ್ಗಿದ್ದು, ಒಳಗಿನಿಂದ ಲಾಕ್ ಮಾಡಿದ ನಂತರ ಅವರಿಗೆ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ, ಅವರ ತಂದೆ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿನೋದ್ ಕುಮಾರ್ ಮೋಟಾರ್ಸ್ ಗ್ಯಾರೇಜ್ನಲ್ಲಿ ರಿಪೇರಿಗಾಗಿ ಕಾರನ್ನು ನಿಲ್ಲಿಸಲಾಗಿತ್ತು ಎಂದು ವೈಶಾಲಿ ನಗರ ಸ್ಟೇಷನ್ ಹೌಸ್ ಅಧಿಕಾರಿ (SHO) ಗುರುದತ್ ಸೈನಿ ಹೇಳಿದ್ದಾರೆ. ಸಮೀಪದಲ್ಲಿ ಆಟವಾಡುತ್ತಿದ್ದಾಗ, ಇಬ್ಬರು ಸಹೋದರಿಯರು ವಾಹನವನ್ನು ಪ್ರವೇಶಿಸಿದರು, ಮತ್ತು ಬಾಗಿಲುಗಳು ಆಕಸ್ಮಿಕವಾಗಿ ಮುಚ್ಚಿಕೊಂಡವು, ಪರಿಣಾಮ ಮಕ್ಕಳು ಕಾರಿನ ಬಾಗಿಲು ತೆರೆಯಲು ಸಾಧ್ಯವಾಗದೆ ವಾಹನದೊಳಗೆ ಉಸಿರುಗಟ್ಟಿ ಸಾವನ್ನಪ್ಪಿದರು’ ಎಂದು ಅಧಿಕಾರಿ ಹೇಳಿದರು.
ಮೃತ ಬಾಲಕಿಯರನ್ನು 8 ವರ್ಷದ ಟೀನಾ ಮತ್ತು 5 ವರ್ಷದ ಲಕ್ಷ್ಮಿ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಬಾಲಕಿಯರ ತಂದೆ ರಮೇಶ್ ಕುಮಾರ್ ಸೆಲೂನ್ನಲ್ಲಿ ಕೆಲಸ ಮಾಡುತ್ರಿದ್ದಾರೆ. ಕೆಲಸ ಮುಗಿಸಿ ಮನೆಗೆ ಬಂದಾಗ ತನ್ನ ಹೆಣ್ಣುಮಕ್ಕಳು ಕಾಣಲಿಲ್ಲ. ಆದ್ದರಿಂದ ಅವರು ಹುಡುಕಲು ಪ್ರಾರಂಭಿಸಿದರು. ಪಕ್ಕದ ಮನೆಯವರಲ್ಲಿ ಕೇಳಿದಾಗ ನಿಂತಿದ್ದ ಕಾರಿನ ಬಳಿ ಹುಡುಗಿಯರು ಆಟವಾಡುತ್ತಿರುವುದು ಕಂಡುಬಂದಿದೆ ಎಂದು ಸ್ಥಳೀಯ ನಿವಾಸಿಗಳು ಅವರಿಗೆ ಮಾಹಿತಿ ನೀಡಿದರು.
ಅವರು ವಾಹನವನ್ನು ಪರಿಶೀಲಿಸಿದಾಗ, ಒಳಗೆ ಇಬ್ಬರೂ ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು. ಅವರನ್ನು ಹೊರಗೆಳೆಯುವ ಹೊತ್ತಿಗೆ ಅವರು ಆಗಲೇ ಸಾವನ್ನಪ್ಪಿದ್ದರು. ರಮೇಶ್ ಕುಮಾರ್ ಕುಟುಂಬವು ದೀಗ್ ಜಿಲ್ಲೆಯ ಬೆಧಾಮ್ ಪ್ರದೇಶಕ್ಕೆ ಸೇರಿದ್ದು, ಪ್ರಸ್ತುತ ಅಲ್ವಾರ್ನ ಖುದುನ್ಪುರಿ ಗ್ರಾಮದಲ್ಲಿ ವಾಸಿಸುತ್ತಿದೆ ಎಂದು ಹೇಳಿದರು ಎಂದು ಈಟಿವಿ ಭಾರತ್ ವರದಿ ಮಾಡಿದೆ.
ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮೊದಲು ಹುಡುಗಿಯರಿಗೆ ಊಟ ಕೊಟ್ಟು ಹೋಗಿದ್ದೆ ಎಂದು ಅವರು ಹೇಳಿದರು. ಮಧ್ಯಾಹ್ನ ಹಿಂದಿರುಗಿದಾಗ ಅವರು ಆಗಲೇ ಸಾವನ್ನಪ್ಪಿದ್ದರು. ‘ಮಕ್ಕಳು ಕಾರಿನಿಂದ ಹೊರಬರಲು ಸಹ ಪ್ರಯತ್ನಿಸಿದ್ದರು’ ಎಂದು ತಂದೆ ಹೇಳಿದರು.
ಬಾಲಕಿಯರ ತಾಯಿ ಸುಮಾರು ನಾಲ್ಕು ವರ್ಷಗಳ ಹಿಂದೆ ಹೃದಯಾಘಾತದಿಂದ ನಿಧನರಾದರು, ಈಗ ಇಬ್ಬರು ಹೆಣ್ಮಕ್ಕಳನ್ನು ಅವರೇ ಸಾಕುತ್ತಿದ್ದರು, ಮಕ್ಕಳಿಗೋಸ್ಕರ ಮದುವೆಯೂ ಆಗಿರಲಿಲ್ಲ ಎಂದು ತಿಳಿದು ಬಂದಿದೆ.
ಘಟನೆಯ ನಂತರ, ಪ್ರದೇಶದ ಸಿಸಿಟಿವಿ ದೃಶ್ಯಗಳು ಸಹ ಪರಿಶೀಲಿಸಲಾಗಿದೆ. ವೀಡಿಯೊದಲ್ಲಿ ಇಬ್ಬರು ಹುಡುಗಿಯರು ರಸ್ತೆಬದಿಯ ಬಳಿ ಆಟವಾಡುತ್ತಾ ನಿಲ್ಲಿಸಿದ್ದ ಕಾರನ್ನು ತೆರೆದು ಮುಂಭಾಗದ ಬಾಗಿಲಿನಿಂದ ಒಳಗೆ ಹತ್ತುತ್ತಿರುವುದನ್ನು ತೋರಿಸಲಾಗಿದೆ ಎಂದು ವರದಿಯಾಗಿದೆ.
ಪೊಲೀಸರು ಮರಣೋತ್ತರ ಪರೀಕ್ಷೆಯನ್ನು ನಡೆಸಿ ನಂತರ ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ, ಈ ಸಂಬಂಧ ಪ್ರಕರಣ ದಾಖಲಾಗಿದೆ.














